‘ಜಂಗ್ಲಿ ಕುಲಪತಿಯ ಜಂಗೀಕಥೆ’- ಧಾರವಾಡದಲ್ಲಿ ಬಿಡುಗಡೆಯಾದ ವಿಭಿನ್ನ ಆತ್ಮಕಥೆ

ಮೂಲತಃ ಕೊಪ್ಪಳ ಜಿಲ್ಲೆಯವರಾದ ಪ್ರೊ.ತೇಜಸ್ವಿ ಕಟ್ಟಿಮನಿ ಅವರು ಮಧ್ಯಪ್ರದೇಶದ ಅಮರಕಂಟಕನಲ್ಲಿನ ಬುಡಕಟ್ಟು ಜನಾಂಗದ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಕೆಲಸ ಮಾಡಿ ಹೆಸರು ಪಡೆದುಕೊಂಡವರು.

‘ಜಂಗ್ಲಿ ಕುಲಪತಿಯ ಜಂಗೀಕಥೆ’- ಧಾರವಾಡದಲ್ಲಿ ಬಿಡುಗಡೆಯಾದ ವಿಭಿನ್ನ ಆತ್ಮಕಥೆ
ಜಂಗ್ಲಿ ಕುಲಪತಿಯ ಜಂಗೀಕಥೆ ಆತ್ಮಕಥೆ ಬಿಡುಗಡೆಯಾಗಿದೆ

ಆರು ವರ್ಷಗಳ ಕಾಲ ಮಧ್ಯಪ್ರದೇಶದ ಅಮರಕಂಟಕ್​ನಲ್ಲಿನ ಬುಡಕಟ್ಟು ಜನಾಂಗದ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿ, ಇದೀಗ ಆಂಧ್ರಪ್ರದೇಶದ ಬುಡಕಟ್ಟು ಜನಾಂಗದ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ.ತೇಜಸ್ವಿ ಕಟ್ಟಿಮನಿ ಅವರ ‘ಜಂಗ್ಲಿ ಕುಲಪತಿಯ ಜಂಗೀಕಥೆ’ ಹೆಸರಿನ ಆತ್ಮಕಥೆ ಬಿಡುಗಡೆಯಾಗಿದೆ. ಧಾರವಾಡದ ಮನೋಹರ ಗ್ರಂಥಮಾಲೆ ಈ ಪುಸ್ತಕವನ್ನು ಹೊರ ತಂದಿದೆ. ರಂಗಾಯಣ ಆವರಣದ ಸುವರ್ಣ ಸಮುಚ್ಚಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.

ಮೂಲತಃ ಕೊಪ್ಪಳ ಜಿಲ್ಲೆಯವರಾದ ಪ್ರೊ.ತೇಜಸ್ವಿ ಕಟ್ಟಿಮನಿ ಅವರು ಮಧ್ಯಪ್ರದೇಶದ ಅಮರಕಂಟಕನಲ್ಲಿನ ಬುಡಕಟ್ಟು ಜನಾಂಗದ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಕೆಲಸ ಮಾಡಿ ಹೆಸರು ಪಡೆದುಕೊಂಡವರು. ಈ ವೇಳೆಯಲ್ಲಿನ ತಮ್ಮ ಅನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸಿರುವ ಅವರು, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆರು ವರ್ಷಗಳ ತಮ್ಮ ಸೇವೆಯನ್ನು ಮಧ್ಯಪ್ರದೇಶದಲ್ಲಿ ಮುಗಿಸಿರುವ ಪ್ರೊ.ತೇಜಸ್ವಿ ಅವರನ್ನು ಇದೀಗ ಆಂಧ್ರಪ್ರದೇಶದ ಬುಡಕಟ್ಟು ಜನಾಂಗದ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಿಸಲಾಗಿದೆ.

ಈ ಪುಸ್ತಕವನ್ನು ಪ್ರತಿ ವಿಶ್ವವಿದ್ಯಾಲಯದ ಕುಲಪತಿ ಓದಬೇಕು; ರಾಘವೇಂದ್ರ ಪಾಟೀಲ್
ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಖ್ಯಾತ ಕಾದಂಬರಿಕಾರ ರಾಘವೇಂದ್ರ ಪಾಟೀಲ್, ಕುಲಪತಿಗಳಾಗಿ ಕಾರ್ಯ ನಿರ್ವಹಿಸುವವರು ಬರೀ ಆ ವಿಶ್ವವಿದ್ಯಾಲಯದ ಆಡಳಿತವನ್ನು ಸಂಭಾಳಿಸುವುದಲ್ಲ. ಆ ವಿಶ್ವವಿದ್ಯಾಲಯದ ಸುತ್ತ ಮುತ್ತಲಿನ ಪರಿಸರ, ಜನಸಮುದಾಯದಲ್ಲಿ ಇದ್ದ, ಇರುವ ಸಂಸ್ಕೃತಿಯನ್ನು ಅಭ್ಯಸಿಸಿ, ಉಳಿಸಿ ಬೆಳೆಸುವ ಬಗೆಯನ್ನು ಕಲಿಯಲು ಬರುವವರಿಗೆ ಕಲಿಸಿಕೊಡಬೇಕು. ಅಂತಹ ಅಸಾಧಾರಣ ಪ್ರಯತ್ನ ಮಾಡುವ ಶಿಕ್ಷಕ ವರ್ಗವನ್ನು ತಯಾರು ಮಾಡುವುದು ಕೂಡ ಕುಲಪತಿಯ ಜವಾಬ್ದಾರಿ ಆಗುತ್ತದೆ. ಇಂತಹ ಒಂದು ಪ್ರಯತ್ನ ಮಾಡಿ ಯಶಸ್ವಿಯಾಗಿರುವ ಡಾ.ತೇಜಸ್ವಿ ಕಟ್ಟಿಮನಿ ಅವರ ಆತ್ಮಕತೆ ‘ಜಂಗ್ಲಿ ಕುಲಪತಿಯ ಜಂಗೀಕಥೆ’ ಪ್ರತಿ ವಿಶ್ವವಿದ್ಯಾಲಯದ ಕುಲಪತಿ ಓದಬೇಕು. ಅಲ್ಲಿಯ ಪ್ರಾಧ್ಯಾಪಕ ವರ್ಗ ಓದಬೇಕು. ಸಂಶೋಧನೆ, ಪಾಠ ಮಾಡುವವರಿಗೆ ಇದೊಂದು ಅಪರೂಪದ ಮಾರ್ಗದರ್ಶಿ ಗ್ರಂಥ. ಕಟ್ಟಿಮನಿ ಅವರ ಈ ಆತ್ಮಕಥೆ ಅನ್ಯ ಭಾಷೆಗಳಲ್ಲಿ ಕೂಡ ಅನುವಾದವಾಗಬೇಕು ಅಂತ ಅಭಿಪ್ರಾಯಪಟ್ಟರು.

ಪ್ರತ್ಯಕ್ಷವಾಗಿ ನೋಡಿದ್ದೇನೆ; ಡಾ. ಬಸವರಾಜ ಡೋಣೂರ
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಡಾ.ಬಸವರಾಜ ಡೋಣೂರ ಕುಲಪತಿಗಳಾಗಿ ಕಟ್ಟಿಮನಿ ಅವರು ಎಷ್ಟೆಲ್ಲ ಜ್ವಲಂತ ಸಮಸ್ಯೆಗಳನ್ನು ಎದುರಿಸಿದರು. ಆ ಸಮಸ್ಯೆಗಳನ್ನು ಬಗೆಹರಿಸಲು ಏನೆಲ್ಲಾ ಉಪಾಯಗಳನ್ನು ಮಾಡಿದರು ಎನ್ನುವುದನ್ನು ಐದು ವರ್ಷಗಳ ಕಾಲ ಪ್ರತ್ಯಕ್ಷವಾಗಿ ನೋಡಿದ್ದೇನೆ. ಭ್ರಷ್ಟ ವ್ಯವಸ್ಥೆ ವಿರುದ್ಧ, ಪಟ್ಟ ಭದ್ರ ಹಿತಾಸಕ್ತಿಯ ಬಣಗಳ ಜತೆ ಹೋರಾಡಿ, ಸ್ಥಳೀಯ ಜನರ ಪ್ರೀತಿ ಗಳಿಸಿದರು. ಆ ಜನಾಂಗದ ಸಂಸ್ಕೃತಿ, ದುಡಿಮೆ, ಶ್ರಮ ಎತ್ತಿ ಹಿಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತೊಂದು ವಿಶ್ವವಿದ್ಯಾಲಯದ ಕುಲಪತಿ ಆದವರು ತೇಜಸ್ವಿ ಕಟ್ಟಿಮನಿ ಅವರು. ಹೀಗಾಗಿ ಅವರ ಅನುಭವ ಈ ಗ್ರಂಥದ ಉದ್ದಕ್ಕೂ ಸೃಜನಶೀಲವಾಗಿ ಮೂಡಿಬಂದಿದೆ. ಪ್ರತಿಯೊಬ್ಬರೂ ಓದಲೇಬೇಕಾದ ಅಪರೂಪದ ಆತ್ಮಕಥೆ ಇದಾಗಿದೆ ಅಂತ ಹೇಳಿದರು.

ಕೃತಿ ಪರಿಚಯ ಮಾಡಿಕೊಟ್ಟ ಲೇಖಕ ಡಾ. ವಿಟಿ ನಾಯಕ, ಕುಲಪತಿ ಆದವನು ಕೈಯಲ್ಲಿ ಕಸಬರಿಗೆ ಹಿಡಿದು ಸ್ವಚ್ಚತಾ ಪಾಠ ಹೇಳುತ್ತ ಒಂದು ಸಮೃದ್ಧ ವಿಶ್ವವಿದ್ಯಾಲಯ ಕಟ್ಟಲು ಏನೆಲ್ಲಾ ಶ್ರಮ ಬೇಕು. ಎಷ್ಟೊಂದು ಪ್ರಾಮಾಣಿಕತೆ ಇರಬೇಕು. ವಿದ್ಯಾರ್ಥಿ ಸಮುದಾಯ, ಶಿಕ್ಷಕರ ಜತೆ, ಶಿಕ್ಷಕೇತರರ ಸಂಗಡ, ಸ್ಥಳೀಯ ಜನರ, ಜನಪ್ರತಿನಿಧಿಗಳೊಡನೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಸಮಗ್ರವಾಗಿ ಈ ಗ್ರಂಥದಲ್ಲಿ ಚಿತ್ರಿತವಾಗಿದೆ. ಪ್ರತಿಯೊಬ್ಬ ಕುಲಪತಿ ಅವಶ್ಯವಾಗಿ ಓದಲೇಬೇಕಾದ ಆತ್ಮಕಥನವಿದು ಎಂದು ತಿಳಿಸಿದರು.

ನನ್ನ ಕೆಲಸ ಸರಳ ಮತ್ತು ಹೂವಿನ ಹಾಸಿಗೆಯಾಗಿರಲಿಲ್ಲ – ಪ್ರೊ.ತೇಜಸ್ವಿ ಕಟ್ಟಿಮನಿ
ಈ ಸಂದರ್ಭದಲ್ಲಿ ಮಾತನಾಡಿದ ಲೇಖಕರಾದ ಡಾ.ತೇಜಸ್ವಿ ಕಟ್ಟಿಮನಿ, ಪ್ರತಿಯೊಂದು ವಿಶ್ವವಿದ್ಯಾಲಯ ಕಟ್ಟುವ, ಬೆಳೆಸುವ ಕೆಲಸ ಒಂದು ಸವಾಲು. ಸಮಗ್ರ, ಸಂಪೂರ್ಣ ಸೃಷ್ಟಿ ಕಾರ್ಯ ಎನ್ನುವ ಎಚ್ಚರ ಭಾರ ಹೊರುವವನಿಗೆ ಇರಬೇಕು. ಒಂದು ಅಶಿಕ್ಷಿತ ಕುಟುಂಬದ, ಒಂದು ಕುಗ್ರಾಮದ, ಹೆಬ್ಬೊಟ್ಟೊತ್ತುವ ತಂದೆ-ತಾಯಿ ಮಗನಾದ ನಾನು ನಂಬಿದ್ದು ಮನಸ್ಸಿಟ್ಟು ಕೆಲಸ ಮಾಡುವುದು ಮತ್ತು ಪ್ರಾಮಾಣಿಕವಾಗಿ ದುಡಿಯುವುದು. ಇದು ನನಗೆ ಯಶಸ್ಸು ನೀಡಿತು. ನನ್ನ ಕೆಲಸ ಸರಳ ಮತ್ತು ಹೂವಿನ ಹಾಸಿಗೆಯಾಗಿರಲಿಲ್ಲ. ಮುಂದೆ ಸಾಗುವುದು ನನ್ನ ಅಭ್ಯಾಸ. ಗುರಿ ಮುಟ್ಟುವವರೆಗೆ ಹಿಂದೆ ಮುಂದೆ ನೋಡದೆ, ಪ್ರಾಮಾಣಿಕವಾಗಿ ದುಡಿಯುತ್ತ ಸಾಗುವುದು ನಾನು ಕಂಡುಕೊಂಡ ಹಾದಿ. ಒಂದು ದಿನ ಯಶಸ್ಸು ನಮ್ಮದಾಗುತ್ತದೆ. ಅಲ್ಲಿಯವರೆಗೆ ನಿರಾಶರಾಗದೇ ಕಾಯಬೇಕು ಎಂದು ಹೇಳಿದರು.

ಕೃಷಿಯತ್ತ ಒಲವು ತೋರಿರುವ ಪ್ರೊ.ತೇಜಸ್ವಿ
ಆಂಧ್ರಪ್ರದೇಶದ ಬುಡಕಟ್ಟು ಜನಾಂಗದ ವಿಶ್ವವಿದ್ಯಾಲಯದ ಕುಲಪತಿ ಕೆಲಸದ ಜೊತೆಗೆ ಪ್ರೊ.ಕಟ್ಟಿಮನಿ ಅವರು ಧಾರವಾಡದಲ್ಲಿ ಕೃಷಿಯನ್ನು ಕೂಡ ಆರಂಭಿಸಿದ್ದಾರೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಇವರದ್ದೇ ಐದೂವರೆ ಎಕರೆ ಹೊಲವಿದೆ. ಅವರ ಮಗ ಮೋಹನ್ ಕಟ್ಟಿಮನಿ ಕೃಷಿಯತ್ತ ಒಲವು ವ್ಯಕ್ತಪಡಿಸಿದಾಗ ತಾವು ಕೂಡ ಇದರ ಬಗ್ಗೆ ಗಮನ ಹರಿಸಲು ಪ್ರೊ. ತೇಜಸ್ವಿ ನಿರ್ಧರಿಸಿದರು. ಇದೀಗ ಕೃಷಿ ಹೊಂಡ, ಮಳೆ ನೀರು ಕೊಯ್ಲು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲಾಗಿದ್ದು, ಸಾವಯವ ಕೃಷಿಯನ್ನು ಆರಂಭಿಸಿದ್ದಾರೆ. ಇನ್ನು ಹೊಲದಲ್ಲಿ ನಾಟಿ ಆಕಳು ಸಾಕಿರೋ ತೇಜಸ್ವಿಯವರು, ತಮ್ಮಕೆಲಸದಲ್ಲಿ ಕೊಂಚ ಬಿಡುವು ಸಿಕ್ಕರೂ ಸಾಕು, ತೋಟದ ಮನೆಗೆ ಬಂದು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.

ಮಧ್ಯಪ್ರದೇಶದ ಬುಡಕಟ್ಟು ಜನರಿಗೆ ಆರ್ಥಿಕ ಶಕ್ತಿ ತುಂಬಿರುವ ತೇಜಸ್ವಿಯವರ ಕೆಲಸವನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ. ಇದೇ ಕಾರಣಕ್ಕೆ ಅವರನ್ನು ಆಂಧ್ರಪ್ರದೇಶದ ಬುಡಕಟ್ಟು ಜನಾಂಗದ ವಿವಿಯ ಕುಲಪತಿ ಅಂತಾ ನೇಮಕ ಮಾಡಲಾಗಿದೆ. ಇಷ್ಟೊಂದು ಕೆಲಸಗಳ ಮಧ್ಯೆಯೇ ತೇಜಸ್ವಿ ಕಟ್ಟಿಮನಿಯವರು ಆಗಾಗ ಬಂದು ಕೃಷಿ ಚಟುವಟಿಕೆ ಮಾಡಿ ಹೋಗುತ್ತಿದ್ದಾರೆ. ಆ ಮೂಲಕ ಸುತ್ತಮುತ್ತಲಿನ ಜನರಿಗೆ ಮಾದರಿಯಾಗಿದ್ದಾರೆ.

ಮಗನ ಜೊತೆ ಪ್ರೊ.ತೇಜಸ್ವಿ ಕಟ್ಟಿಮನಿ

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ

ಸ್ಕರ್ಟ್​, ಹೈ ಹೀಲ್ಸ್​ ಹಾಕ್ಕೊಂಡು ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ; ವಿಡಿಯೊ ವೈರಲ್​

Income Tax Returns: ಆದಾಯ ತೆರಿಗೆ ರಿಟರ್ನ್ಸ್​ ವೇಳೆ ಈ 4 ಕ್ಲೇಮ್​ಗಳ ಬಗ್ಗೆ ಗಮನ ನೀಡದಿದ್ದರೆ ನುಕ್ಸಾನ್ ಆದೀತು ಎಚ್ಚರ

Click on your DTH Provider to Add TV9 Kannada