ಧಾರವಾಡ, ನ.05: ರಾಜ್ಯದಲ್ಲಿಯೇ ಮೇಲ್ದರ್ಜೆಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ(College Of Agriculture, Dharwad),ಕೃಷಿ ಸಂಶೋಧನೆಯ ಜೊತೆಗೆ ಕೃಷಿ ಉಪ ಕಸುಬುಗಳಲ್ಲಿಯೂ ತೊಡಗಿಸಿಕೊಂಡಿದೆ. ಅದರಲ್ಲಿ ಹೈನುಗಾರಿಕೆ ಘಟಕವೂ ಪ್ರಮುಖವಾಗಿದೆ. ಧಾರವಾಡಿ ಎಮ್ಮೆ ತಳಿಯಿಂದ ಹಿಡಿದು ವಿವಿಧ ತಳಿಯ ರಾಸು ಸೇರಿದಂತೆ ಎಲ್ಲ ಬಗೆಯ ನೂರಾರು ಜಾನುವಾರುಗಳು ಇಲ್ಲಿವೆ. ಆ ಪೈಕಿ ಈ ಹೈನುಗಾರಿಕೆ ಘಟಕದಲ್ಲಿ ಹೆಚ್ಚುವರಿಯಾಗಿರುವ 56 ಜಾನುವಾರುಗಳನ್ನು ಇದೇ ನವೆಂಬರ್ 6ರಂದು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ.
ಹೌದು, ಈ ಸಂಬಂಧ ಜಾಹೀರಾತು ಪ್ರಕಟಣೆ ಕೂಡ ನೀಡಲಾಗಿದೆ. ಆದರೆ, ಇಲ್ಲಿ ಗೋವುಗಳು ಸೇರಿದಂತೆ ಎಲ್ಲ ಜಾನುವಾರುಗಳು ಹರಾಜಿನ ಮೂಲಕ ಕಸಾಯಿ ಖಾನೆಯನ್ನೇ ಸೇರುತ್ತವೆ. ಹೀಗಾಗಿ ಈ ಹರಾಜು ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಬಜರಂಗದಳ ಆಗ್ರಹಿಸಿದೆ. ವಿವಿಗೆ ಈ ಜಾನುವಾರುಗಳು ಹೆಚ್ಚುವರಿ ಆಗಿದ್ದು, ಪಾಲನೆ ಮಾಡುವುದಕ್ಕೆ ಆಗದೇ ಹೋದಲ್ಲಿ ಸರ್ಕಾರಿ ಗೋ ಶಾಲೆಗಳಿಗೆ ನೀಡಲಿ. ಆದರೆ, ಹೀಗೆ ಮಾರಾಟ ಮಾಡುವ ಮೂಲಕ ಕಸಾಯಿ ಖಾನೆಗೆ ಸೇರಿಸುವುದು ಬೇಡ. ಈ ಕೂಡಲೇ ಹರಾಜು ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೃಷಿ ವಿವಿ ಕುಲಪತಿಗೆ ಬಜರಂಗದಳ ಮನವಿ ಸಲ್ಲಿಸಿದೆ.
ಇದನ್ನೂ ಓದಿ:ಉತ್ತರ ಕನ್ನಡ: ಪಶು ವೈದ್ಯರ ಕೊರತೆ; ಸೂಕ್ತ ಚಿಕಿತ್ಸೆಯಿಲ್ಲದೆ ಸಾವನ್ನಪ್ಪುತ್ತಿರುವ ಜಾನುವಾರುಗಳು
ಸದ್ಯ ನಡೆಯಲಿರುವ ಹರಾಜಿನಲ್ಲಿ ರೈತರು ಮತ್ತು ಹಾಲು ಉತ್ಪಾದಕರೇ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎನ್ನುವ ನಿಯಮವನ್ನು ಕೃಷಿ ವಿವಿ ಹಾಕಿದೆ. ರೈತರ ಕೃಷಿ ಜಮೀನಿನ ಪಹಣಿ ಪತ್ರ ಇಲ್ಲವೇ, ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯರಾಗಿದ್ದಲ್ಲಿ ಸದಸ್ಯತ್ವದ ಪ್ರಮಾಣ ಪತ್ರ ನೀಡಬೇಕು ಎಂದು ಷರತ್ತು ವಿಧಿಸಿದ್ದಾರೆ. ಆದರೆ, ರೈತರು ಎಂದು ಹೇಳಿಕೊಂಡು ಬಂದು ಹರಾಜಿನಲ್ಲಿ ಪಾಲ್ಗೊಳ್ಳುವ ಯಾರೂ ಕೂಡ ತಮ್ಮ ಮನೆಗೆ ಹಾಗೂ ಕೊಟ್ಟಿಗೆಗೆ ತೆಗೆದುಕೊಂಡು ಹೋಗುವುದಿಲ್ಲ. ಅಲ್ಲಿಂದ ಇವು ನೇರವಾಗಿ ಕಸಾಯಿಖಾನೆಗೆ ಸೇರುತ್ತವೆ. ಕಸಾಯಿಖಾನೆಯವರು ರೈತರನ್ನು ಮುಂದೆ ಬಿಟ್ಟು ಖರೀದಿ ಮಾಡಿಸುತ್ತಾರೆ ಎಂದು ಬಜರಂಗದಳದ ವಾದ ಮಾಡುತ್ತಿದೆ. ಹೀಗಾಗಿ ಈ ಹರಾಜು ರದ್ದು ಮಾಡಿ ಹೆಚ್ಚುವರಿ ಜಾನುವಾರುಗಳನ್ನು ಮಾರಾಟ ಮಾಡದೇ ಸರ್ಕಾರಿ ಗೋಶಾಲೆಗಳಿಗೆ ನೀಡಬೇಕು. ಒಂದು ವೇಳೆ ಹರಾಜು ಹಾಕಿದರೆ ನಾವು ಮುತ್ತಿಗೆ ಹಾಕಿ ತಡೆಯುತ್ತೇವೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕೃಷಿ ವಿವಿ ವಿಸಿ ಪ್ರೊ. ಪಿ. ಎಲ್. ಪಾಟೀಲ್ ಅವರನ್ನು ಈ ಬಗ್ಗೆ ಮಾಹಿತಿ ಕೇಳಲು ಪ್ರಯತ್ನಿಸಿದರೆ, ‘ಅವರು ಫೋನ್ ಸ್ವೀಕರಿಸುತ್ತಲೇ ಇಲ್ಲ. ಹೀಗಾಗಿ ಈ ಜಾನುವಾರು ಹರಾಜು ವಿವಾದ ಈಗ ತೀವ್ರ ಸ್ಬರೂಪ ಪಡೆದುಕೊಳ್ಳುವ ಲಕ್ಷಣಗಳಿವೆ. ಒಂದು ವೇಳೆ ಹರಾಜು ಪ್ರಕ್ರಿಯೆ ನಡೆದರೆ ಗಲಾಟೆ ಆಗುವ ಲಕ್ಷಣಗಳಿದ್ದು, ಪೊಲೀಸರು ಈಗಾಗಲೇ ಈ ಬಗ್ಗೆ ಅರ್ಲಟ್ ಕೂಡ ಆಗಿದ್ದಾರೆ. ಒಟ್ಟಿನಲ್ಲಿ ನವೆಂಬರ್ 6 ರಂದು ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ