ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ದಾಖಲೆಯ ಬಿತ್ತನೆ ಬೀಜ ಮಾರಾಟ; ಕೃಷಿ ಮೇಳ ನಡೆಸದೆಯೂ ಸಾಧನೆ
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಬಿತ್ತನೆ ಬೀಜ ತರಲೆಂದೇ ಕೊಪ್ಪಳ ಜಿಲ್ಲೆಯಿಂದ ಬಂದಿದ್ದೇವೆ. ಅಷ್ಟು ದೂರದಿಂದ ಖರೀದಿಗೆ ಬರಲು ಕಾರಣ ಕೃಷಿ ವಿವಿಯ ಬಿತ್ತನೆ ಬೀಜಗಳ ಮೇಲಿನ ನಂಬಿಕೆ ಅನ್ನುತ್ತಾರೆ ಕೊಪ್ಪಳದ ರೈತ ಶಂಕರ್ ಕಾಟ್ರಳ್ಳಿ.
ಧಾರವಾಡ: ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದಾಗಿ ಧಾರವಾಡ ಕೃಷಿ ಮೇಳ ನಡೆದಿಲ್ಲ. ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುತ್ತಿದ್ದ ಮೇಳಕ್ಕೆ ಲಕ್ಷಾಂತರ ರೈತರು ಆಗಮಿಸುತ್ತಿದ್ದರು. ಈ ವೇಳೆ ಕೃಷಿ ಯಂತ್ರೋಪಕರಣಗಳು, ಜಾನುವಾರುಗಳು ರೈತರ ಆಕರ್ಷಕ ಕೇಂದ್ರಗಳಾಗಿದ್ದವು. ಇದೆಲ್ಲಕ್ಕಿಂತ ಮುಖ್ಯವಾಗಿ ಅನೇಕರು ಕೃಷಿ ಮೇಳಕ್ಕೆ ಬರುತ್ತಿದ್ದುದು ಬಿತ್ತನೆ ಬೀಜ ಖರೀದಿಗೆ. ಧಾರವಾಡ ಕೃಷಿ ವಿವಿಯ ಬಿತ್ತನೆ ಬೀಜಗಳೆಂದರೆ ರೈತರಿಗೆ ಅಚ್ಚುಮೆಚ್ಚು. ಆದರೆ ಈ ಬಾರಿ ಕೃಷಿ ಮೇಳ ಇಲ್ಲದಿದ್ದರೂ ದೂರದ ಜಿಲ್ಲೆಗಳಿಂದ ರೈತರು ಆಗಮಿಸಿ, ದಾಖಲೆ ಪ್ರಮಾಣದಲ್ಲಿ ಬೀಜವನ್ನು ಖರೀದಿಸುತ್ತಿರುವುದು ಕೃಷಿ ವಿವಿಯ ಘನತೆಯನ್ನು ಹೆಚ್ಚಿಸಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಪ್ರತಿವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಪ್ರಮಾಣಿಕೃತ ಬಿತ್ತನೆ ಬೀಜ ಪೂರೈಸುವ ಮೂಲಕ ರೈತರ ಮೆಚ್ಚುಗೆ ಗಳಿಸಿದೆ. ಕೆಲ ದಿನಗಳಿಂದ ಹಿಂಗಾರು ಬಿತ್ತನೆ ಬೀಜ ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಮುಗಿಬಿದ್ದು ವಿವಿಧ ತಳಿಗಳ ಬೀಜಗಳನ್ನು ಖರೀದಿಸುತ್ತಿದ್ದಾರೆ. ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಿಗೆ ಕೃಷಿ ವಿವಿಯ ಪ್ರಮಾಣೀಕರಿಸಿದ ಬಿತ್ತನೆ ಬೀಜ ಪೂರೈಸುತ್ತದೆ. ಧಾರವಾಡ ಸುತ್ತಲಿನ ಜಿಲ್ಲೆಗಳಷ್ಟೇ ಅಲ್ಲದೆ, ಹಲವು ಜಿಲ್ಲೆಗಳ ರೈತರು ಇಲ್ಲಿಗೆ ಬಂದು ಬೀಜ ಖರೀದಿಸುತ್ತಾರೆ. ಈ ಬಾರಿ ಕೃಷಿ ವಿವಿ ಬೀಜ ಘಟಕ, ವಿವಿಧ ಬೀಜೋತ್ಪಾದನಾ ಕೇಂದ್ರಗಳು ಹಾಗೂ ಕೃಷಿ ಸಂಶೋಧನಾ ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಉತ್ಪಾದಿಸಿದ ಬೀಜಗಳನ್ನು ಮಾರಾಟಕ್ಕಿಡಲಾಗಿದೆ. ಕಡಲೆ ಜೆಜಿ- 11, ಜಾಕಿ 9218, ಬಿಜಿಡಿ 11 ತಳಿಗಳು ಮಾರಾಟಕ್ಕೆ ಲಭ್ಯ ಇವೆ. ಪ್ರತಿ ಕೆಜಿಗೆ 75 ರೂಪಾಯಿಗಳಂತೆ 25 ಕೆಜಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಕಡಲೆ ಪ್ರಧಾನ ಬೆಳೆಯಾಗಿದ್ದು, ಈ ಬಾರಿಯೂ ಕಡಲೆ ಬೀಜಕ್ಕೆ ಭಾರಿ ಬೇಡಿಕೆ ಇದೆ. ಬಹುತೇಕ ರೈತರು ಬಿಜಿಡಿ 11 ಮತ್ತು ಜಾಕಿ 9218 ತಳಿಗಳನ್ನು ಖರೀದಿಸಿದ್ದಾರೆ. ಬೀಜ ಘಟಕದಲ್ಲಿ ಇನ್ನೂ 100 ಕ್ವಿಂಟಾಲ್‌ನಷ್ಟು ಕಡಲೆ ಬೀಜ ಬಾಕಿ ಇದೆ. ಜೋಳ ಎಂ. 35-1, ಎಸ್‌ವಿಪಿ 2217 ಪ್ರಮಾಣಿಕೃತ ತಳಿಗಳು ಇನ್ನೂ 100 ಕ್ವಿಂಟಾಲ್ ದಾಸ್ತಾನು ಇದೆ. ಗೋಧಿ ಯುಎಎಸ್-375, ಯುಎಎಸ್ 304, ಕುಸುಬೆ ಎ-1, ಅಲಸಂದಿ ಡಿಸಿ-15 ತಳಿಗಳು ಮಾರಾಟಕ್ಕಿದ್ದು, ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಕೃಷಿ ಮೇಳ ಇರದಿದ್ದರೂ ರೈತರಿಂದ ಬೀಜ ಖರೀದಿ ಪ್ರತಿವರ್ಷ ಇದೇ ವೇಳೆಯಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿತ್ತು. ಕೊರೊನಾ ಹಾವಳಿಯಿಂದಾಗಿ ಎರಡು ವರ್ಷಗಳಿಂದ ಮೇಳ ಆಯೋಜಿಸಲಾಗುತ್ತಿಲ್ಲ. ಮೇಳಕ್ಕೆ ಬರುವ ಕೃಷಿಕರು ಬೀಜಗಳನ್ನು ಖರೀದಿಸುತ್ತಿದ್ದರು. 3 ದಿನಗಳ ಕಾಲ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿತ್ತು. ಈ ಮೇಳಕ್ಕೆ ಬರುತ್ತಿದ್ದ ಲಕ್ಷಾಂತರ ರೈತರು ವಿಶ್ವವಿದ್ಯಾಲಯದ ಪ್ರಮಾಣಿಕೃತ ಬಿತ್ತನೆ ಬೀಜ ಖರೀದಿಗೆ ಆದ್ಯತೆ ನೀಡುತ್ತಿದ್ದರು. ಮೇಳ ಆಯೋಜನೆಯಾಗದಿದ್ದರೂ ಹಲವು ಜಿಲ್ಲೆಗಳಿಂದ ರೈತರು ಆಗಮಿಸಿ ಬೀಜ ಖರೀದಿಸುತ್ತಿದ್ದಾರೆ.
10 ದಿನಗಳಲ್ಲಿ 65 ಲಕ್ಷ ರೂಪಾಯಿ ವಹಿವಾಟು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಮಾಣಿಕೃತ ಬೀಜದ ತಳಿಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಹತ್ತು ದಿನಗಳ ಅವಧಿಯಲ್ಲಿ ಅಂದಾಜು 65 ಲಕ್ಷ ರೂಪಾಯಿ ಮೊತ್ತದ ಬಿತ್ತನೆ ಬೀಜ ಮಾರಾಟವಾಗಿದೆ. ಇದು ಕೃಷಿ ವಿಜ್ಞಾನಿಗಳ ಶ್ರಮಕ್ಕೆ ಸಂದ ಶ್ರೇಯಸ್ಸು. ವಿಶ್ವವಿದ್ಯಾಲಯವು ನಿರಂತರವಾಗಿ ಸುಧಾರಿತ ತಳಿಗಳನ್ನು ಪೂರೈಸುತ್ತ ರೈತ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ.
ರೈತರು ನಮ್ಮ ಕೃಷಿ ವಿಶ್ವವಿದ್ಯಾಲಯದಿಂದ ಬಿತ್ತನೆ ಬೀಜ ಮಾರಾಟ ಮಾಡುವುದನ್ನೇ ಕಾದು ಕುಳಿತಿರುತ್ತಾರೆ. ಈ ಬಾರಿಯೂ ಕೆಲ ಸುಧಾರಿತ ಹಾಗೂ ಪ್ರಮಾಣಿಕೃತ ತಳಿಗಳನ್ನು ಪೂರೈಸಲಾಗುತ್ತಿದೆ. ಕಡಲೆ ಜಾಕಿ 9218, ಬಿಜಿಡಿ 111 ಹಾಗೂ ಗೋಧಿ ಸದಕ ತಳಿಗೆ ಉತ್ತಮ ಬೇಡಿಕೆ ಇದೆ. ರೈತರಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ದಾಸ್ತಾನಿದೆ. ರೈತರು ಕೂಡ ಉತ್ಸಾಹದಿಂದ ಬಿತ್ತನೆ ಬೀಜ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸಂದ ಗೌರವ ಅನ್ನುತ್ತಾರೆ. ವಿವಿಯ ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು.
ಕೃಷಿ ವಿವಿಯ ಬಿತ್ತನೆ ಬೀಜವೇ ಶ್ರೇಷ್ಠ, ಅದಕ್ಕೆ ದೂರದಿಂದ ಬಂದು ಖರೀದಿಸುತ್ತೇವೆ: ಶಂಕರ್ ಕಾಟ್ರಳ್ಳಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಿತ್ತನೆ ಬೀಜದ ಬಗ್ಗೆ ನಮಗೆ ಅಪಾರ ನಂಬಿಕೆ ಇದೆ. ಇಲ್ಲಿನ ಬೀಜಗಳು ಯಾವತ್ತೂ ಕೈ ಕೊಟ್ಟಿಲ್ಲ. ಪ್ರತಿವರ್ಷ ಕೃಷಿ ಮೇಳಕ್ಕೆ ಬಂದು, ಮರಳಿ ಹೋಗುವಾಗ ಬಿತ್ತನೆ ಬೀಜ ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಎರಡು ವರ್ಷಗಳಿಂದ ಮೇಳ ಆಯೋಜನೆ ಆಗಿಲ್ಲ. ಹೀಗಾಗಿ ಬಿತ್ತನೆ ಬೀಜ ತರಲೆಂದೇ ಕೊಪ್ಪಳ ಜಿಲ್ಲೆಯಿಂದ ಬಂದಿದ್ದೇವೆ. ಅಷ್ಟು ದೂರದಿಂದ ಖರೀದಿಗೆ ಬರಲು ಕಾರಣ ಕೃಷಿ ವಿವಿಯ ಬಿತ್ತನೆ ಬೀಜಗಳ ಮೇಲಿನ ನಂಬಿಕೆ ಅನ್ನುತ್ತಾರೆ ಕೊಪ್ಪಳದ ರೈತ ಶಂಕರ್ ಕಾಟ್ರಳ್ಳಿ.
ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ
ಇದನ್ನೂ ಓದಿ:
ಬೆಕ್ಕಿನ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಧಾರವಾಡದ ಪ್ರಾಣಿಪ್ರೇಮಿ ಸೋಮಶೇಖರ ಚೆನ್ನಶೆಟ್ಟಿ
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು