ಕೊರೊನಾ ಕಾಲದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ, ಧಾರವಾಡ ಕೃಷಿ ವಿವಿ ಮಹಿಳೆಯರನ್ನ ಸಶಕ್ತರನ್ನಾಗಿಸಿದ್ದು ಹೇಗೆ?
Dharwad Agriculture university: ವಿಶ್ವವಿದ್ಯಾಲಯಗಳು ಬರೀ ಪಾಠ-ಪ್ರವಚನಕ್ಕೆ ಸೀಮಿತವಾಗಬಾರದು. ಅವು ಜನರಿಗೆ ಸ್ವಯಂ ಉದ್ಯೋಗವನ್ನು ಕಲಿಸುವ ಜತೆಗೆ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ಇಂಥ ವಿಚಾರದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಯಾವಾಗಲೂ ಒಂದು ಹೆಜ್ಜೆ ಮುಂದೆ ಇದೆ.
ವಿಶ್ವವಿದ್ಯಾಲಯಗಳು ಬರೀ ಪಾಠ-ಪ್ರವಚನಕ್ಕೆ ಸೀಮಿತವಾಗಬಾರದು. ಅವು ಜನರಿಗೆ ಸ್ವಯಂ ಉದ್ಯೋಗವನ್ನು ಕಲಿಸುವ ಜತೆಗೆ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ಇಂಥ ವಿಚಾರದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಯಾವಾಗಲೂ ಒಂದು ಹೆಜ್ಜೆ ಮುಂದೆ ಇದೆ. ಅದರಲ್ಲೂ ವಿವಿಯ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗ ಮಹಿಳೆಯರಿಗೆ ಅಂತಾನೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ಪಡೆಯೋದಲ್ಲದೇ ಆರ್ಥಿಕವಾಗಿ ಸದೃಢವಾಗುತ್ತಾರೆ.
ಎರಡು ತಂಡಗಳನ್ನು ಸಿದ್ಧಪಡಿಸಿ ಹೊಲಿಗೆ ತರಬೇತಿ
ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಹಾಗೂ ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಮಾಡುವ ಉದ್ದೇಶದಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗವು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳು ಸಾಕಷ್ಟು ಮಹಿಳೆಯರಿಗೆ ನೆರವಾಗಿವೆ. ಈ ವಿಭಾಗವು ಇದುವರೆಗೂ 15 ಮಹಿಳೆಯರ ಎರಡು ತಂಡಗಳನ್ನು ಸಿದ್ಧಗೊಳಿಸಿ ಅವರಿಗೆ ಹೊಲಿಗೆ ಮತ್ತು ತರಬೇತಿ ನೀಡಿದೆ. ವಸ್ತ್ರವಿನ್ಯಾಸ ಜೊತೆಗೆ ವಿಶ್ವವಿದ್ಯಾಲಯದ ಹಲವು ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಉದ್ಯೋಗದ ಸ್ವಯಂ ಮಾರ್ಗದರ್ಶನ ಮಾಡಿದೆ.
ಗಮನ ಸೆಳೆದ ಮಾಸ್ಕ್ ತಯಾರಿಕೆ
ಈ ಯೋಜನೆಯ ಪರಿಣಾಮವಾಗಿ ಮಹಿಳೆಯರು ಪ್ರಮುಖವಾಗಿ ಮಾಸ್ಕ್ ತಯಾರಿಕೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಹಿಳೆಯರು 35 ಸಾವಿರ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಎರಡು ಹಾಗೂ ಮೂರು ಪದರಗಳ ಮಾಸ್ಕ್ ಹಾಗೂ ಇನ್ನೂ ಹಲವು ಬಗೆಯ ವಿನ್ಯಾಸಗಳ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದಾರೆ. ಪ್ರತಿ ಮಾಸ್ಕ್‌ಗೆ ಇವರಿಗೆ 13 ರಂತೆ ವಿಶ್ವವಿದ್ಯಾಲಯ ದರ ನಿಗದಿಪಡಿಸಿ ನೀಡುತ್ತಿದೆ. ಮಾತ್ರವಲ್ಲ ವಿಶ್ವವಿದ್ಯಾಲಯದ ಕೃಷಿ ಬೀಜ ಘಟಕಕ್ಕೆ ಚೀಲಗಳನ್ನೂ ಕೂಡ ಸಿದ್ಧಪಡಿಸುತ್ತಿದ್ದಾರೆ. ಬೀಜಗಳನ್ನು ಹಾಕಲು ಈ ಚೀಲಗಳು ಅಗತ್ಯವಾಗಿವೆ. 200 ಗ್ರಾಂ ತೂಕದ ಬೀಜಗಳು ಹಿಡಿಸುವ ಚೀಲದಿಂದ 15 ಕೆ.ಜಿ ತೂಕದ ಚೀಲದವರೆಗೂ ಸಿದ್ಧಗೊಳಿಸುತ್ತಿದ್ದಾರೆ. ವಿಶ್ವವಿದ್ಯಾಲಯವೇ ಬಟ್ಟೆಯನ್ನು ಈ ಕೆಲಸಕ್ಕೆ ನೀಡುತ್ತದೆ. ಪ್ರಸಕ್ತ ವರ್ಷ ಸುಮಾರು 60 ಸಾವಿರ ಚೀಲಗಳನ್ನು ಮಹಿಳೆಯರು ಸಿದ್ಧಪಡಿಸಿದ್ದಾರೆ.
ಇದರೊಂದಿಗೆ ಕಣದ ಬಟ್ಟೆಯಿಂದ ಸಿದ್ಧಗೊಳಿಸಿದ ಫೈಲ್‌ಗಳು, ಮೊಬೈಲ್ ಪೌಚ್, ಪರ್ಸ್ ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ಮಹಿಳೆಯರು ಸಿದ್ಧಪಡಿಸುತ್ತಿದ್ದಾರೆ. ಹೀಗೆ ಸಿದ್ಧಪಡಿಸಿದ ವಸ್ತುಗಳಿಗೆ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿ ಮಾಡಲಾಗುತ್ತದೆ. ವಸ್ತ್ರ , ನೂಲು ಸೇರಿದಂತೆ ಹಲವು ಪರಿಕರಗಳನ್ನು ಮಹಿಳೆಯರಿಗೆ ವಿಭಾಗದಿಂದಲೇ ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಮಹಿಳೆಯರು ಇಲ್ಲಿರುವ ವಸ್ತುಗಳನ್ನು ಹಾಗೂ ಯಂತ್ರಗಳನ್ನೇ ಬಳಸಿ ಬಗೆ ಬಗೆಯ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇನ್ನು ಕೆಲವು ಮಹಿಳೆಯರು ತಮ್ಮ ಮನೆಗಳಿಗೆ ವಸ್ತುಗಳನ್ನು ತೆಗೆದುಕೊಂಡು ಹೋಗಿ ಸಿದ್ಧಪಡಿಸಿಕೊಂಡು ಬರುತ್ತಿದ್ದಾರೆ. ಆಯಾ ವಿನ್ಯಾಸಗಳಿಗೆ ತಕ್ಕಂತೆ ವಿಶ್ವವಿದ್ಯಾಲಯದ ದರ ನಿಗದಿಪಡಿಸುತ್ತದೆ.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವತ್ತ ಹೆಜ್ಜೆ ಹಾಕುತ್ತಿದ್ಧಾರೆ – ಡಾ . ಜ್ಯೋತಿ ವಸ್ತ್ರದ
ಇನ್ನು ಈ ಬಗ್ಗೆ ಟಿವಿ-9 ಗೆ ಪ್ರತಿಕ್ರಿಯೆ ನೀಡಿದ ವಸ್ತ್ರವಿನ್ಯಾಸ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ವಸ್ತ್ರದ, ಒಂದು ಫೈಲ್ ಸಿದ್ಧಪಡಿಸಿದರೆ 25 ರೂಪಾಯಿ ಪೌಚ್ ಸಿದ್ಧಪಡಿಸಿದರೆ 15 ರೂಪಾಯಿ ನೀಡಲಾಗುತ್ತಿದೆ. ಹೆಚ್ಚಾಗಿ ವಿಶ್ವವಿದ್ಯಾಲಯದ ಇತರ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮನೆಯ ಹೆಣ್ಣುಮಕ್ಕಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಆ ಮೂಲಕ ಮಾಸಿಕ 10 ಸಾವಿರದಿಂದ 16 ಸಾವಿರವರೆಗೂ ಗಳಿಸುತ್ತ ಅರ್ಥಿಕವಾಗಿ ಸ್ವಾವಲಂಬಿಯಾಗುವತ್ತ ಹೆಜ್ಜೆ ಹಾಕಿದ್ದಾರೆ ಎನ್ನುತ್ತಾರೆ. ಮಾಸ್ಕ್, ಪೌಚ್‌ಗಳ ಜೊತೆಗೆ ಕೃಷಿ ವಿಭಾಗದ ವಿದ್ಯಾರ್ಥಿಗಳ ಯೋಜನೆಗೆ ಅಗತ್ಯವಿರುವ ಬಲೆಗಳು ಹಾಗೂ ವಿವಿಧ ಬಗೆಯ ವಸ್ತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ಮಹಿಳೆಯರಿಗೆ ಒಂದಷ್ಟು ಗಳಿಕೆಗೆ ದಾರಿಯಾಗಿದೆ ಎಂದು ಅವರು ಹೇಳಿದರು.
– ನರಸಿಂಹಮೂರ್ತಿ ಪ್ಯಾಟಿ, ಹಿರಿಯ ವರದಿಗಾರ, ಟಿವಿ 9, ಧಾರವಾಡ