ಧಾರವಾಡ: ಕೊರೊನಾ ಸಂದರ್ಭದಲ್ಲಿ ಕೊರೊನಾ (Coronavirus) ಪೀಡಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದರಿಂದ ಹಿಡಿದು ಅವರು ಮನೆಯಿಂದ ಹೊರಗೆ ಬಂದರೆ ಮಾಹಿತಿ ನೀಡುವುದರ ತನಕ ಎಲ್ಲ ಕೆಲಸಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದು ಆಶಾ ಕಾರ್ಯಕರ್ತೆಯರು (Asha workers). ಕೊರೊನಾ ಒಂದು ಹಾಗೂ ಎರಡನೇ ಅಲೆಯಲ್ಲಿ ಜೀವದ ಹಂಗು ತೊರೆದು ಇವರೆಲ್ಲಾ ಕೆಲಸ ಮಾಡಿದ್ದರು. ಎಷ್ಟೋ ಕಡೆಗಳಲ್ಲಿ ಇವರ ಮೇಲೆ ಹಲ್ಲೆಗಳಾದವು. ಆದರೆ ಅದರ ಬಗ್ಗೆ ಭಯಪಡದೇ ತಮಗೆ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತೆಯರ ಕೆಲಸ ಎಲ್ಲರ ಗಮನ ಸೆಳೆದಿತ್ತು. ಇದಾದ ಬಳಿಕ ಕೊವಿಡ್ ಲಸಿಕೆ ಹಾಕುವ ವಿಚಾರದಲ್ಲಿಯೂ ಅವರೇ ಮುಂದೆ ನಿಂತು ಸಾಕಷ್ಟು ಕೆಲಸ ಮಾಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರ ಮನವೊಲಿಸುವುದರಲ್ಲಿ ಇವರದ್ದೇ ಪ್ರಮುಖ ಪಾತ್ರ. ನಿತ್ಯವೂ ಜನರೊಂದಿಗೆ ಸಂಪರ್ಕ ಇರುವ ಆಶಾ ಕಾರ್ಯಕರ್ತೆಯರಿಂದಲೇ ಗ್ರಾಮೀಣ ಪ್ರದೇಶದಲ್ಲಿ ಲಸಿಕಾ ಪ್ರಮಾಣ ಉತ್ತಮವಾಗಿ ಕಂಡು ಬಂದಿದೆ ಎಂದರೆ ತಪ್ಪಾಗಲಾರದು. ಇದೀಗ ಧಾರವಾಡ ಜಿಲ್ಲೆಯಲ್ಲಿ ಕೊವಿಡ್ ನಿಯಂತ್ರಣಕ್ಕೆ ಹಾಗೂ ಹೆಚ್ಚಿನ ಪ್ರಮಾಣದ ಲಸಿಕಾಕರಣಕ್ಕೆ ಆಶಾ ಕಾರ್ಯಕರ್ತೆಯರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ ಪರಿಣಾಮ ಜಿಲ್ಲೆಯ ವಿವಿಧ ತಾಲೂಕಿನ 58 ಗ್ರಾಮಗಳಲ್ಲಿ ಶೇ.100 ರಷ್ಟು ಮೊದಲನೇ ಡೋಸ್ ಲಸಿಕಾಕರಣವಾಗಿದೆ.
ಸಾಧನೆಗೆ ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಪುಡ್ ಕಿಟ್ ವಿತರಣೆ
ಆಶಾ ಕಾರ್ಯಕರ್ತೆಯರ ಸಾಧನೆಯನ್ನು ಧಾರವಾಡದ ಜಿಲ್ಲಾಡಳಿತ ಗುರುತಿಸಿದೆ. ವಿವಿಧ ತಾಲೂಕುಗಳ 58 ಗ್ರಾಮಗಳಲ್ಲಿ ಶೇ. 100 ಮೊದಲನೇ ಡೋಸ್ ಲಸಿಕೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದೇ ಆಶಾ ಕಾರ್ಯಕರ್ತೆಯರು. ಜನರ ಮನಸ್ಸು ಒಲಿಸಿ, ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿ ಹೇಳಿ, ಈ ಗ್ರಾಮಗಳಲ್ಲಿ ಶೇ. 100 ರಷ್ಟು ಜನರಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ. ಹೀಗಾಗಿ ಈ ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಭಿನಂದಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಅಭಿನಂದಿಸಲಾಯಿತು. ಇದೇ ವೇಳೆ ಈ ಸಾಧನೆ ಮಾಡಿರುವ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸಿದ್ದಾರೆ: ನಿತೇಶ ಪಾಟೀಲ್
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಜಿಲ್ಲೆಯಲ್ಲಿ ಕೊವಿಡ್ ಮಾರ್ಗಸೂಚಿಗಳ ಪಾಲನೆ ಹಾಗೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಹಗಲಿರಳು ಶ್ರಮಿಸಿದ್ದಾರೆ. ಅವರೊಂದಿಗೆ ಪ್ರತಿನಿತ್ಯ ಶ್ರಮಿಸಿದ ಆಶಾ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯವಾಗಿದೆ. ಕೊವಿಡ್ ಜಾಗೃತಿ ಮತ್ತು ಲಸಿಕಾರಣದಲ್ಲಿ ಆಶಾ ಕಾರ್ಯಕರ್ತೆಯರು ಬಹು ದೊಡ್ಡ ಜವಾಬ್ದಾರಿ ನಿರ್ವಹಿಸಿದ್ದಾರೆ. ಸ್ಥಾನಿಕವಾಗಿ ಗ್ರಾಮ ಪಂಚಾಯತಿ, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂವಹನ, ಸಮನ್ವಯತೆಯಿಂದ ಲಸಿಕಾಕರಣದ ಗುರಿ ಸಾಧನೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಜಿಲ್ಲಾಡಳಿತದಿಂದ ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಸುಮಾರು 20 ಲಕ್ಷ ಜನರಿಗೆ ಮೊದಲನೇ ಡೋಸ್ ಹಾಕಲಾಗಿದೆ. ನಿಗದಿತ ಗುರಿಯಂತೆ ಶೇ. 90 ರಷ್ಟು ಸಾಧನೆ ಆಗಿದೆ. ಶೇ.52 ರಷ್ಟು ಎರಡನೆಯ ಡೋಸ್ ಪೂರ್ಣಗೊಂಡಿದೆ. ಬಾಕಿ ಇರುವ ಲಸಿಕಾಕರಣದ ಗುರಿ ಸಾಧಿಸಲು ವಿವಿಧ ಜನಪ್ರತಿನಿಧಿಗಳ, ಧಾರ್ಮಿಕ ಮುಖಂಡರ ಹಾಗೂ ಅಧಿಕಾರಿಗಳೊಂದಿಗೆ ಈಗ ಮನೆಮನೆಗೆ ತೆರಳಿ ಲಸಿಕೆ ಪಡೆಯದೆ ಇರುವವರಿಗೆ ಜಾಗೃತಿ ಮೂಡಿಸಿ, ಲಸಿಕೆ ನೀಡಲು ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಜಿಲ್ಲಾಮಟ್ಟದಲ್ಲಿ ಸಿಗಬಹುದಾದ ಎಲ್ಲಾ ರೀತಿಯ ಸಹಾಯ, ನೆರವು ನೀಡಿ, ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ 58 ಗ್ರಾಮಗಳಲ್ಲಿ ಶೇ.100 ರಷ್ಟು ಮೊದಲ ಡೋಸ್ ಲಸಿಕಾಕರಣದ ಸಾಧನೆ ಮಾಡಿರುವ ಆಶಾ ಕಾರ್ಯಕರ್ತೆಯರಿಗೆ ಈ ಗೌರವ ನೀಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಶೇ.100 ಲಸಿಕಾಕರಣ ಸಾಧನೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ಪ್ರತಿ ಸೋಮವಾರ ಜಿಲ್ಲಾಡಳಿತದಿಂದ ಫುಡ್ ಕಿಟ್ ವಿತರಿಸಿ, ಅಭಿನಂದಿಸಲಾಗುವುದು. ಸಾಧನೆ ಮಾಡುವ ಸುಮಾರು 500 ಆಶಾಕಾರ್ಯಕರ್ತೆಯರನ್ನು ಗೌರವಿಸುವ ಗುರಿ ಹೊಂದಲಾಗಿದೆ ಎಂದು ನಿತೇಶ ಪಾಟೀಲ ತಿಳಿಸಿದ್ದಾರೆ.
ಕೊವಿಡ್ ಜಾಗೃತಿ, ಆರೋಗ್ಯ ಸೇವೆಗೆ ರೆಡ್ ಕ್ರಾಸ್ ಸಂಸ್ಥೆಯ ಕೊಡುಗೆ ಅಪಾರ
ಜಿಲ್ಲೆಯಲ್ಲಿ ಕೊವಿಡ್ ಜಾಗೃತಿ, ನಿಯಯಂತ್ರಣ ಮತ್ತು ವಿವಿಧ ಆರೋಗ್ಯ ಸೇವೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕ ಉತ್ತಮ ಸಹಕಾರ, ನೆರವು ನೀಡಿದೆ. ಸ್ವ್ಯಾಬ್ ಸಂಗ್ರಹಕ್ಕೆ ಲ್ಯಾಬ್ ಇರುವ ಸಂಚಾರಿ ವಾಹನ ನೀಡಿದೆ. ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ವಿವಿಧ ಸುರಕ್ಷಾ ಸಾಮಗ್ರಿಗಳನ್ನು ಪೂರೈಸಿದೆ. ಕೊವಿಡ್ನಿಂದ ನೊಂದ ಕುಟುಂಬಗಳಿಗೆ ಆಹಾರದ ಕಿಟ್ ನೀಡಿದೆ. ಕೊವಿಡ್ನಿಂದಾಗಿ ಸಾವಿಗೆ ಒಳಗಾದ ಬಡ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ಮೂಡಿಸಲು ಸುಮಾರು 30 ಹೊಲಿಗೆ ಯಂತ್ರಗಳನ್ನು ನೀಡಲು ರೆಡ್ ಕ್ರಾಸ್ ಸಂಸ್ಥೆ ನಿರ್ಧರಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಎಂದು ನಿತೇಶ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ಚೇರ್ಮೆನ್ ಡಾ. ಕವನ್ ದೇಶಪಾಂಡೆ, ಕೊವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಆಶಾ ಕಾರ್ಯಕರ್ತರು ಕೊವಿಡ್ ವಾರಿಯರ್ಸ್ ಆಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕೊವಿಡ್ ನಿಯಂತ್ರಣ ಮತ್ತು ಕೊವಿಡ್ ಮುಕ್ತ ಜಿಲ್ಲೆ ಮಾಡುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ಅವರೊಂದಿಗೆ ರೆಡ್ ಕ್ರಾಸ್ ಸಂಸ್ಥೆಯು ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ ಮಾತನಾಡಿ, ಸರಕಾರದಿಂದ ಸಿಗುವ ಎಲ್ಲ ಸೌಲಭ್ಯ ಹಾಗೂ ಸೌಕರ್ಯಗಳನ್ನು ಆಶಾ ಕಾರ್ಯಕರ್ತೆಯರಿಗೆ ಸಕಾಲದಲ್ಲಿ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯೊಂದಿಗೆ ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಆಶಾ ಕಾರ್ಯಕರ್ತೆಯರು ಮಾತನಾಡಿ, ಸಾಧನೆಯ ಬಗ್ಗೆ ತಮ್ಮ ಅನಿಸಿಕೆ, ಸಂತಸ ಹಂಚಿಕೊಂಡರು. ಒಟ್ಟು 58 ಗ್ರಾಮಗಳ 150 ಜನ ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ವಿತರಿಸಿ, ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಕಾರ್ಯದರ್ಶಿ ಡಾ. ಅಯ್ಯನಗೌಡ ಪಾಟೀಲ, ಸದಸ್ಯರಾದ ಡಾ. ಉಮೇಶ ಹಳ್ಳಿಕೇರಿ, ಧೀರಜ್ ವೀರನಗೌಡರ, ಮಹಾವೀರ ಉಪಾಧ್ಯಾಯ, ಮಾರ್ತಾಂಡಪ್ಪ ಕತ್ತಿ ಮತ್ತು ಮಹಾಂತೇಶ ವೀರಾಪುರ ಉಪಸ್ಥಿತರಿದ್ದರು.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ:
ಸೋಂಕಿತರ ಯೋಗಕ್ಷೇಮ ವಿಚಾರಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಮದ್ಯದ ನಶೆಯಲ್ಲಿದ್ದ ಯುವಕರಿಂದ ಹಲ್ಲೆಗೆ ಯತ್ನ
ಪೋಷಕರ ಕಾಡುತಿದೆ ಮೂರನೇ ಅಲೆ ಕೊರೊನಾ, ಒಮಿಕ್ರಾನ್ ಭೀತಿ; ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು