ಧಾರವಾಡ, ನವೆಂಬರ್ 30: ಇವತ್ತು ಜಗತ್ತು ಡಿಜಿಟಲ್ ಮಯ ಆಗಿದೆ. ಎಲ್ಲವೂ ಈಗ ಕೈ ಬೆರಳಿನಲ್ಲಿಯೇ ಸಿಕ್ಕಿಬಿಡುತ್ತದೆ. ಆದರೆ ಅನಾದಿ ಕಾಲದಲ್ಲಿ ತಮ್ಮ ಪೂರ್ವಜರು, ಯಾವುದೇ ಕಾಗದವೂ ಇಲ್ಲದಂತಹ ಸಮಯದಲ್ಲಿ ತಾಳೆ ಗರಿಗಳನ್ನೇ ಬಳಸಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದರು. ಆಗಿನ ಕಾಲಘಟ್ಟದ ಹಿರಿಯರು ನಮಗೆ ಬಿಟ್ಟು ಹೋಗಿರುವ ಅಮೂಲ್ಯವಾದ ಜ್ಞಾನ ಸಂಪತ್ತು ವರ್ಷಗಳುರುಳಿದಂತೆ ಹಾಳಾಗುತ್ತಿವೆ. ಹೀಗೆ ಹಾಳಾಗುತ್ತಿರುವ ತಾಳೆ ಗರಿಯಲ್ಲಿನ ಜ್ಞಾನಸಂಪತ್ತನ್ನು ಡಿಜಿಟಲೀಕರಣಗೊಳಿಸುವ ಕೆಲಸವೊಂದು ಸದ್ದಿಲ್ಲದೇ ನಡೆದಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದೊಡ್ಡ ಅಭಿಯಾನವೇ ನಡೆಯುತ್ತಿದೆ.
ಬಟ್ಟೆಯಲ್ಲಿ ಕಟ್ಟಿರುವ ಒಂದೊಂದೇ ಕಟ್ಟುಗಳನ್ನು ತುಂಬಾ ನಾಜೂಕಿನಿಂದ ಬಿಡಿಸಿ ಹೊರತೆಗೆಯುತ್ತಿರುವ ಸಿಬ್ಬಂದಿ, ಕಟ್ಟಿನಿಂದ ಒಂದೊಂದೇ ತಾಳೆ ಗರಿಯನ್ನು ಹೊರತೆಗೆದು, ಅದನ್ನು ಸ್ವಚ್ಛಗೊಳಿಸುತ್ತಿರೋ ಸೇವಾ ಕಾರ್ಯಕರ್ತರು. ಇನ್ನೊಂದೆಡೆ ಆ ಗರಿಗಳನ್ನು ಸ್ಕ್ಯಾನ್ ಮಾಡಿ ಸೇವ್ ಮಾಡಿಟ್ಟುಕೊಳ್ಳುತ್ತಿರುವ ಕೆಲಸ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಂಡುಬಂದಿದೆ. ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ನಡೆಯುತ್ತಿರುವ ಕೆಲಸವಿದು.
ನೂರಾರು ವರ್ಷಗಳ ಹಳೆಯ ತಾಳೆಗರಿಗಳ ಡಿಜಿಟಲೀಕರಣ ಕಾರ್ಯ ಇಲ್ಲಿ ನಡೆಯುತ್ತಿದೆ. ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸುಮಾರು 75 ವರ್ಷಗಳ ಹಿಂದಿನಿಂದಲೇ ತಾಳೆಗರಿ ಮತ್ತು ಕೋರಿ ಕಾಗದದಲ್ಲಿ ಹಸ್ತಪ್ರತಿಗಳನ್ನು ಸಂರಕ್ಷಿಸುತ್ತಾ ಬರಲಾಗಿದೆ. ಸುಮಾರು 7000ಕ್ಕೂ ಹೆಚ್ಚು ಹಸ್ತ್ರಪತಿಗಳ ಗ್ರಂಥಗಳು ಇಲ್ಲಿವೆ. ಈ ಗ್ರಂಥಗಳಲ್ಲಿ 7 ಲಕ್ಷಕ್ಕೂ ಅಧಿಕ ತಾಳೆ ಗರಿಗಳಿವೆ. ಸದ್ಯ ಅವೆಲ್ಲವೂ ನಶಿಸಿ ಹೋಗುವ ಸ್ಥಿತಿಗೆ ಬಂದಿರುವ ಕಾರಣಕ್ಕೆ ಶಾಶ್ವತವಾಗಿ ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಇವೆಲ್ಲವುಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ.
ಈ ಕಾರ್ಯಕ್ಕೆ ಬೆಂಗಳೂರಿನ ಇ-ಸಾಹಿತ್ಯ ದಾಖಲೀಕರಣ ಮತ್ತು ಸಂಶೋಧನಾ ಅಧ್ಯಯನ ಕೇಂದ್ರದವರು ಉಚಿತ ಸೇವೆ ನೀಡುತ್ತಿದ್ದಾರೆ. ಸುಮಾರು ಏಳೆಂಟು ತಿಂಗಳುಗಳ ಕಾಲ ಈ ಕೆಲಸ ನಿರಂತರವಾಗಿ ನಡೆಯಲಿದೆ ಎಂದು ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಕೃಷ್ಣ ನಾಯಕ ತಿಳಿಸಿದ್ದಾರೆ.
ತುಂಬ ಸೂಕ್ಷ್ಮವಾಗಿ ತಾಳೆ ಗರಿಗಳ ಡಿಜಿಟಲೀಕರಣ ಮಾಡಬೇಕಾಗುತ್ತದೆ. ಒಂದೊಂದೇ ತಾಳೆ ಗರಿಯನ್ನು ಹೊರತೆಗೆದು ಅದಕ್ಕೆ ಮೃದುವಾದ ಬಟ್ಟೆಯಿಂದ ಲೆಮನ್ ಗ್ರಾಸ್ ಎಣ್ಣೆಯಿಂದ ಒರೆಸಲಾಗುತ್ತದೆ. ಆಗ ಅದರಲ್ಲಿರುವ ಹಸ್ತಾಕ್ಷರಗಳು ಎದ್ದು ಕಾಣುತ್ತವೆ. ಬಳಿಕ ಅದನ್ನು ಸ್ಕ್ಯಾನ್ ಮಾಡಲಾಗುತ್ತದೆ.
ಇವುಗಳಲ್ಲಿ ಹನ್ನೆರಡನೇ ಶತಮಾನದಿಂದ ಹಿಡಿದು ಈಗಿನ ಶತಮಾನದವರೆಗೆ ರಚನೆಯಾದ ತಾಳೆಗರಿಗಳಿವೆ. ವಚನ ಸಾಹಿತ್ಯ, ಜೈನ ಸಾಹಿತ್ಯ, ಬ್ರಾಹ್ಮಣ ಸಾಹಿತ್ಯ, ಪುರಾಣ, ಪ್ರಾಚೀನ ಕಾವ್ಯ, ಆಯುರ್ವೇದ, ಶಾಸನ, ಭವಿಷ್ಯ, ತರ್ಕಶಾಸ್ತ್ರ, ವಿವಿಧ ಬಗೆಯ ಸಾಹಿತ್ಯ ಸೇರಿದಂತೆ ಎಲ್ಲ ಥರದ ಗ್ರಂಥಗಳಿವೆ. ಇನ್ನು ಈ ಕಾರ್ಯಕ್ಕಾಗಿಯೇ ಅನೇಕ ಶರಣ ಬಂಧುಗಳು ಹಾಗೂ ಶಿವಯೋಗ ಸಾಧಕರು ಸ್ವಯಂ ಪ್ರೇರಣೆಯಿಂದ ಆಗಮಿಸಿ ಸೇವಾ ಕಾರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ಗರ್ಭಿಣಿ ಅಂತ ನೋಡದೆ ಮನೆಯಿಂದ ಹೊರಹಾಕಿದ ಸಿಬ್ಬಂದಿ
ಡಾ. ಆರ್. ಸಿ. ಹಿರೇಮಠ, ಡಾ. ಎಂ. ಎಂ. ಕಲಬುರ್ಗಿ, ಡಾ. ವೀರಣ್ಣ ರಾಜೂರ ಸೇರಿದಂತೆ ವಿಭಾಗದ ಹಿರಿಯರು ಹಾಗೂ ಅವರ ಶಿಷ್ಯಂದಿರು ಸಂಗ್ರಹಿಸಿರುವ ಈ ತಾಳೆಗರಿಗಳ ಡಿಜಿಟಲೀಕರಣಕ್ಕಾಗಿ ಕಳೆದ 3 ವರ್ಷಗಳಿಂದ ಮನವಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಈ ಕೆಲಸಕ್ಕೆ ಅನುಮತಿ ಸಿಕ್ಕಿರೋದಲ್ಲದೇ ಅನುದಾನವೂ ಬಿಡುಗಡೆಯಾಗಿದೆ. ಇನ್ನು ಸ್ಕ್ಯಾನಿಂಗ್ ಮಾಡಿ ಡಿಜಿಲೀಕರಣ ಮಾಡುವುದರ ಜೊತೆಗೆ ಹೊಸಗನ್ನಡಕ್ಕೆ ಅನುವಾದ ಕಾರ್ಯವೂ ನಡೆಯುತ್ತಿದೆ. ಮುಂದಿನ ಪೀಳಿಗೆಗೆ ಹಿಂದಿನ ಸಾಹಿತ್ಯ ಸರಳವಾಗಿ ಸಿಗುವಂತಾಗಲು ಮ್ಯೂಸಿಯಂ ಕೂಡ ಯೋಜನೆ ಇದೆ. ಒಟ್ಟಿನಲ್ಲಿ ಗತಕಾಲದ ಅಮೂಲ್ಯ ಜ್ಞಾನ ಸಂಪತ್ತು ಕಳೆದುಹೋಗದಂತೆ ಕಾಯ್ದಿಟ್ಟುಕೊಳ್ಳುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ