ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿಯಮ ಬಾಹಿರ ನೇಮಕಾತಿ: ಶುರುವಾಯ್ತು ಆತಂಕ
ತಮಗೆ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಅಂತಾ ಹಲವರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ವಿಚಾರಣೆ ಮುಗಿಸಿರುವ ಹೈಕೋರ್ಟ್ ಇಬ್ಬರು ಸಹಾಯಕ ಪ್ರಾಧ್ಯಾಪಕರ ನೇಮಕ ನಿಯಮ ಬಾಹಿರ ಅಂತಾ ತೀರ್ಪು ನೀಡಿದೆ.
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇದೀಗ ಸಹಾಯಕ ಪ್ರಾಧ್ಯಾಪಕರ ವಜಾಗೊಳಿಸುವ ಪರ್ವ ಆರಂಭವಾಗಿದೆ. ನೇಮಕಾತಿ ಸಂದರ್ಭದಲ್ಲಿ ನಿಯಮ ಬಾಹಿರವಾಗಿ ನೇಮಕಾತಿ ನಡೆದಿದೆ ಅಂತಾ ಅನೇಕರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಇದೀಗ ಕೋರ್ಟ್ ಈ ಬಗ್ಗೆ ಆದೇಶಗಳನ್ನು ನೀಡುತ್ತಿದೆ. ಇದರಿಂದ ಕೆಲವರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈ ಮಧ್ಯೆ ಕೋರ್ಟ್ ಆದೇಶದಿಂದ ವಜಾಗೊಳ್ಳುವ ಆತಂಕದಲ್ಲಿರುವ ಸಹಾಯಕ ಪ್ರಾಧ್ಯಾಪಕರು ವಿಭಾಗೀಯ ಪೀಠದಿಂದ ತಡೆ ತರುತ್ತಿದ್ದಾರೆ.
ಕಠಿಣ ಶಬ್ದಗಳಲ್ಲಿ ನಿಯಮ ಬಾಹಿರ ನೇಮಕಾತಿ ಬಗ್ಗೆ ಹೇಳಿದ ಧಾರವಾಡ ಹೈಕೋರ್ಟ್ ಕರ್ನಾಟಕ ವಿಶ್ವವಿದ್ಯಾಲಯ ರಾಜ್ಯದಲ್ಲಿನ ಪ್ರತಿಷ್ಠಿತ ವಿವಿಗಳ ಪೈಕಿ ಒಂದು. ಆದರೆ ಕೆಲ ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಅಕ್ರಮಗಳಿಂದಲೇ ಇದು ಕುಖ್ಯಾತಿ ಗಳಿಸುತ್ತಿದೆ. ಅದರಲ್ಲೂ ನಾಲ್ಕೈದು ವರ್ಷಗಳ ಹಿಂದೆ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು ಹೊರ ಬಂದು, ಅನೇಕರು ಇದೀಗ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ತಮಗೆ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಅಂತಾ ಹಲವರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ವಿಚಾರಣೆ ಮುಗಿಸಿರುವ ಹೈಕೋರ್ಟ್ ಇಬ್ಬರು ಸಹಾಯಕ ಪ್ರಾಧ್ಯಾಪಕರ ನೇಮಕ ನಿಯಮ ಬಾಹಿರ ಅಂತಾ ತೀರ್ಪು ನೀಡಿದೆ. ಈಗಾಗಲೇ ಅದರಲ್ಲಿ ಇಂಗ್ಲೀಷ್ ವಿಷಯದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ ಪಿ.ಜಿ. ಅವರ ನೇಮಕಾತಿ ನಿಯಮ ಬಾಹಿರ ಅಂತಾ ಮಂಜುನಾಥ ಎನ್ನುವವರು ಹೈಕೋರ್ಟ್ ಮೊರೆ ಹೋಗಿದ್ದರು. ಧಾರವಾಡ ಹೈಕೋರ್ಟ್ ಕೂಡಲೇ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸುವಂತೆ ಹೇಳಿತ್ತು. ಇದೇ ರೀತಿ ಡೆವಿಡ್ ಪ್ರಾಣಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕೂಡ ನಿಯಮ ಬಾಹಿರ ಅಂತಾನೂ ಆಕಾಂಕ್ಷಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಅವರ ನೇಮಕಾತಿಯೂ ಕೂಡ ನಿಯಮ ಬಾಹಿರ ಅಂತಾ ನೇಮಕಾತಿಯನ್ನು ಅನೂರ್ಜಿತಗೊಳಿಸಿತ್ತು.
ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ್ ಅವಧಿಯಲ್ಲಿ ನಡೆದಿದ್ದ ನೇಮಕಾತಿ ಈ ಎಲ್ಲ ನೇಮಕಾತಿಗಳು ಪ್ರೊ. ಎಚ್.ಬಿ.ವಾಲೀಕಾರ್ ಅವರು ಕುಲಪತಿಗಳಾಗಿದ್ದಾಗ ನಡೆದಿದ್ದವು. ಆಗ ಒಟ್ಟು 35 ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ವೇಳೆ ವಾಲೀಕಾರ್ ಪಕ್ಷಪಾತ ಮಾಡಿರುವ ಆರೋಪವೂ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಅನೇಕ ಆಕಾಂಕ್ಷಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ಬಳಿಕ ಇತ್ತೀಚಿಗೆ ಹೈಕೋರ್ಟ್ ಇಬ್ಬರ ನೇಮಕಾತಿಯನ್ನು ನಿಯಮ ಬಾಹಿರ ಅಂತಾ ಹೇಳಿ, ಕೂಡಲೇ ಅವರನ್ನು ಕೆಲಸದಿಂದ ಬಿಡುಗಡೆ ಮಾಡಬೇಕೆಂದು ಸೂಚಿಸಿತ್ತು. ಅಲ್ಲದೇ ಆಗ ಅರ್ಜಿ ಸಲ್ಲಿಸಿದ ಎಲ್ಲರನ್ನೂ ಮತ್ತೊಮ್ಮೆ ಪರಿಗಣಿಸಿ, ಅರ್ಹತೆ ಇದ್ದವರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ನೀಡಿತ್ತು. ಇದೀಗ ಈ ಎರಡು ಪ್ರಕರಣಗಳಿಂದಾಗಿ ಉಳಿದ ಆಕಾಂಕ್ಷಿಗಳು ಎಚ್ಚೆತ್ತಿದ್ದಾರೆ. ಅನೇಕರು ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.
ಅನುಮಾನ ಸೃಷ್ಟಿಸಿದ್ದ ಸಿಂಡಿಕೇಟ್ ಸದಸ್ಯರ ನಡೆ ಹೈಕೋರ್ಟ್ ಆದೇಶದ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಸಭೆ ನಡೆಸಿ, ಶ್ರೀದೇವಿ ಅವರಿಗೆ ಮೇಲ್ಮನವಿ ಸಲ್ಲಿಸಲು 90 ದಿನಗಳ ಕಾಲ ಅವಕಾಶ ನೀಡಿದ್ದರು. ಅಲ್ಲದೇ ಸೇವೆಯನ್ನು ಕೂಡ ಮುಂದುವರೆಸಲು ಅವಕಾಶ ನೀಡಿದ್ದರು. ನಂತರ ಡೆವಿಡ್ ಅವರ ನೇಮಕಾತಿಯನ್ನೂ ಹೈಕೋರ್ಟ್ ರದ್ದುಪಡಿಸಿತ್ತು. ಈ ವೇಳೆ ಕಾನೂನು ತಜರ ಸಲಹೆ ಪಡೆದ ಸಿಂಡಿಕೇಟ್ ಸದಸ್ಯರು, ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರು. ಶ್ರೀದೇವಿ ಅವರಿಗೆ ಕೆಲಸಕ್ಕೆ ಬಾರದಂತೆ ಸೂಚಿಸಿದ್ದರು. ಸದಸ್ಯರ ಈ ನಿರ್ಧಾರ ಅನೇಕ ಅನುಮಾನಗಳಿಗೆ ಕಾರಣವಾಗಿತ್ತು.
ನಿಯಮ ಬಾಹಿರ ನೇಮಕಾತಿ ದೃಢ – ಕೆ.ಎಸ್. ಜಯಂತ ನೇಮಕಾತಿ ನಡೆದಾಗಿನಿಂದಲೂ ಅನೇಕರು ಅಕ್ರಮದ ಬಗ್ಗೆ ಆರೋಪಿಸುತ್ತಲೇ ಇದ್ದರು. ಇದೀಗ ಹೈಕೋರ್ಟ್ ಆದೇಶದಿಂದಾಗಿ ಈ ಆರೋಪಗಳಿಗೆ ಪುಷ್ಠಿ ಸಿಕ್ಕಿದೆ. ಹಣ ಹಾಗೂ ಜಾತಿಯ ಪ್ರಭಾವ ಬಳಸಿ ಎಂಥವರೂ ದೊಡ್ಡ ದೊಡ್ಡ ಹುದ್ದೆ ಪಡೆಯಲು ಸಾಧ್ಯ ಎನ್ನುವಂತ ವಾತಾವರಣ ವಿವಿಗಳಲ್ಲಿ ನಿರ್ಮಾಣವಾಗಿದೆ. ಅರ್ಹತೆ ಇರದಿದ್ದರೂ ನೇಮಕವಾದವರಿಗೆ ಹೈಕೋರ್ಟ್ ಚಾಟಿ ಏಟು ನೀಡಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಪಾಠ ಅಂತ ಕವಿವಿ ಉಳಿಸಿ ಹೋರಾಟ ಸಮಿತಿ ಸದಸ್ಯ ಕೆ.ಎಸ್. ಜಯಂತ ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೊರೆ – ಮಧ್ಯಂತರ ತಡೆ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ ವಿಷಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 2014 ರಲ್ಲಿ ನೇಮಕಗೊಂಡಿದ್ದ ಶ್ರೀದೇವಿ ಪಿ.ಜಿ. ಎನ್ನುವವರ ನೇಮಕಾತಿಯನ್ನು ಅನೂರ್ಜಿತಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿದೆ. ನಿಯಮಾವಳಿಗಳಲ್ಲಿ ರಿಯಾಯತಿ ತೋರಿ ಅರ್ಹತೆ ಇಲ್ಲದಿರುವ ಅಭ್ಯರ್ಥಿಯನ್ನು ವಿಶ್ವವಿದ್ಯಾಲಯ ನೇಮಕಾತಿ ಮಾಡಿಕೊಂಡಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ, ಹೈಕೋರ್ಟ್ ಏಕ ಸದಸ್ಯ ಪೀಠ ನೇಮಕಾತಿ ಅನೂರ್ಜಿತಗೊಳಿತ್ತು. ಈ ಆದೇಶ ಪ್ರಶ್ನಿಸಿ ಶ್ರೀದೇವಿ ಪಿ.ಜಿ. ಸಲ್ಲಿಸಿದ್ದ ರಿಟ್ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಪೀಠ, ವಿಚಾರಣೆ ಪೂರ್ಣಗೊಳ್ಳುವವರೆಗೆ ಶ್ರೀದೇವಿ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ವಿಶ್ವವಿದ್ಯಾಲಯ ನೀಡಿದ ಆದೇಶ ಅನುಷ್ಠಾನಗೊಳಿಸದಂತೆ ಸೂಚಿಸಿದೆ. ಇದೇ ರೀತಿ ಡೆವಿಡ್ ಅವರ ವಿಚಾರವಾಗಿ ನೀಡಿದ್ದ ಆದೇಶಕ್ಕೂ ಕೂಡ ವಿಭಾಗೀಯ ಪೀಠ ತಡೆ ನೀಡಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ
ಆತ್ಮಹತ್ಯೆಗೂ ಮುನ್ನ ಅಪ್ಪನಿಂದ 1 ಲಕ್ಷ ರೂ. ಪಡೆದಿದ್ದ ನಟಿ ಸವಿ ಮಾದಪ್ಪ; ಸಾವಿನ ಸುತ್ತ ಹೆಚ್ಚಿತು ಅನುಮಾನ
ಬೆಂಗಳೂರು: ಮೆಕ್ಡೊನಾಲ್ಡ್ಸ್ನಲ್ಲಿ ಅಗ್ನಿ ಅವಘಡ; ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವ