ಧಾರವಾಡ ಕೆಐಎಡಿಬಿಯ ಮತ್ತೊಂದು ಹಗರಣ ಆರೋಪ; ರೈತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕೊಟ್ಯಾಂತರ ರೂ. ಗುಳುಂ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 28, 2024 | 4:04 PM

ಧಾರವಾಡ ಕೆಐಎಡಿಬಿ ಕಚೇರಿಯ ಅಡಿಯಲ್ಲಿ ನಡೆದಿರೋ ನಕಲಿ ರೈತರ ಹೆಸರಿನ ನಕಲಿ ಭೂಸ್ವಾಧೀನ ಪ್ರಕರಣದ ಕೋಟ್ಯಾಂತರ ರೂಪಾಯಿ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಹೊರಟಿದೆ. ಸಿಐಡಿ ತನಿಖೆಯಲ್ಲಿ 20 ಕೋಟಿಯ ಅಕ್ರಮದ ತನಿಖೆ ನಡೆದಿರುವಾಗಲೇ,  ಸತ್ತವರ ಹೆಸರಿನ ಮೇಲೆ ನಕಲಿ ಖಾತೆ ಸೃಷ್ಟಿಸಿ ಹಣ ಹೊಡೆದಿರೋ ಅಕ್ರಮ ಈಗ ಬಯಲಾಗಿದೆ.

ಧಾರವಾಡ ಕೆಐಎಡಿಬಿಯ ಮತ್ತೊಂದು ಹಗರಣ ಆರೋಪ; ರೈತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕೊಟ್ಯಾಂತರ ರೂ. ಗುಳುಂ
ಧಾರವಾಡ ಕೆಐಎಡಿಬಿ ವಂಚನೆ
Follow us on

ಧಾರವಾಡ, ಜ.28: ಕೆಐಎಡಿಬಿ(KIADB)ಯಲ್ಲಿ ನಕಲಿ ರೈತರ ಖಾತೆಗಳನ್ನು ಸೃಷ್ಟಿಸಿ, ನಕಲಿ ಭೂಸ್ವಾಧೀನ ನಡೆಸಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿ, ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದಿದ್ದರು. ಈ ಪ್ರಕರಣದ ಬಗ್ಗೆ ಜನಜಾಗೃತಿ ಸಂಘ ಹೋರಾಟ ಮಾಡಿದ ಫಲವಾಗಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ಒಟ್ಟು 19 ಕೋಟಿ ರೂಪಾಯಿಗೂ ಅಧಿಕ ಹಣವನ್ನ ನಕಲಿ ಖಾತೆಗಳಿಗೆ ಹಾಕಿ ಲೂಟಿ ಮಾಡಿರುವುದನ್ನು ತನಿಖೆ ಮಾಡಿ, ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ನಿವೃತ್ತರಾಗಿದ್ದ ವ್ಹಿ. ಡಿ. ಸಜ್ಜನ್ ಸೇರಿ ಅನೇಕ ಅಧಿಕಾರಿಗಳನ್ನು ಜೈಲಿಗಟ್ಟಿದ್ದಾರೆ. ಈಗ ಇದೇ ಅಧಿಕಾರಿಗಳು ಸತ್ತವರ ಹೆಸರಿನ ಮೇಲೆಯೂ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಹೊಡೆದಿರೋದನ್ನು ಜನಜಾಗೃತಿ ಸಂಘ ಬಯಲು ಮಾಡಿದೆ.

ಹುಬ್ಬಳ್ಳಿಯಲ್ಲಿ ಕೆಲವರ ಜಮೀನು ವಿಮಾನ ನಿಲ್ದಾಣಕ್ಕೆ ಹೋಗಿತ್ತು. ಅದರಲ್ಲಿ 2010 ರಲ್ಲಿಯೇ ರೈತರಿಗೆ ಹಣ ಕೊಟ್ಟಿದ್ದರು. ಆದರೆ, ಈಗ 2020ರಲ್ಲಿ ಇಲ್ಲಿನ ಕೆಲ ರೈತರ ಹೆಸರಿನ ಮೇಲೆ ನಕಲಿ ಖಾತೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಡ್ರಾ, ಮಾಡಿಕೊಂಡಿದ್ದಾರೆ. ಜೊತೆಗೆ ಅದೇ ರೈತರ ಕೆಲ ಸಂಬಂಧಿಗಳು ನಿಧನರಾಗಿದ್ದರು. ಆದರೆ, ಅವರು ಜೀವಂತ ಇದ್ದಾರೆ ಎಂದು ತೋರಿಸಿ ಹಣ ಹೊಡೆದಿದ್ದು ಬಯಲಿಗೆ ಬಂದಿದೆ.

ಇದನ್ನೂ ಓದಿ:ಮತ್ತೆ ವಂಚನೆಯಲ್ಲಿ ಧಾರವಾಡ ಕೆಐಎಡಿಬಿ ಅಧಿಕಾರಿಗಳು, ಸಂತ್ರಸ್ತರಿಗೆ ಪರಿಹಾರ ನೀಡದೆ ಲಕ್ಷಾಂತರ ಹಣ ದೋಚಿದರಾ?

ಇನ್ನು ಯಾವುದೇ ಅಧಿಕಾರಿಯ ನಿವೃತ್ತಿಯ ದಿನಾಂಕ ಸಮೀಪಕ್ಕೆ ಬಂದಾಗ, ಮಹತ್ವದ ದಾಖಲೆಗಳನ್ನು ಮೂವ್ ಮಾಡುವುದಕ್ಕೆ ಬರುವುದಿಲ್ಲ. ಆದರೆ, ಇಲ್ಲಿ ಪ್ರಮುಖ ಆರೋಪಿಯಾಗಿರುವ ವಿ.ಡಿ. ಸಜ್ಜನ್ ನಿವೃತ್ತಿಯ ಕೊನೆಯ 6 ತಿಂಗಳ ಅವಧಿಯಲ್ಲಿ 506 ಕಡತಗಳಿಗೆ ಭೂ ಪರಿಹಾರ ಹಂಚಿಕೆ ಮಾಡಿ, ಬರೊಬ್ಬರಿ 138 ಕೋಟಿ ರೂಪಾಯಿ ಆರ್.ಟಿ.ಜಿ.ಎಸ್. ಮಾಡಿದ್ದಾರೆ. ಅದರಲ್ಲಿಯೂ ಈಗ 40 ಕೋಟಿ ರೂಪಾಯಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎನ್ನುವುದು ಹೋರಾಟಗಾರರು ಪತ್ತೆ ಮಾಡಿದ್ದಾರೆ.

ಆದರೆ ಇದನ್ನೆಲ್ಲ ಸರಿಯಾಗಿ ತನಿಖೆ ಮಾಡಬೇಕಿದ್ದ ಸಿಐಡಿ ಮಾತ್ರ ಕೆಲವರನ್ನು ಬಚಾವ್ ಮಾಡುವ ಕೆಲಸ ಮಾಡಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಸಿಐಡಿಗಿಂತ ಮೊದಲು ಇದೇ ಜನಜಾಗೃತಿ ಸಂಘದ ಹೋರಾಟದ ಮೇರೆಗೆ ಸರ್ಕಾರ ಇಲಾಖೆಯ ಹಿರಿಯ ಅಧಿಕಾರಿಗಳಿಂದಲೂ ತನಿಖೆ ಕೈಗೊಂಡಿತ್ತು. ಅಲ್ಲಿಯೂ ಸಹ ಪ್ರಮುಖ ಕಡತಗಳ ಹಾಗೂ ನಕಲಿ ಬ್ಯಾಂಕ್ ಖಾತೆಗಳ ಸಮರ್ಪಕ ತನಿಖೆಯೂ ಆಗಿಲ್ಲವಂತೆ. ಹೀಗಾಗಿ ಈ ಇಡೀ ಪ್ರಕರಣವನ್ನು ಎಸ್ ಐ ಟಿ ಇಲ್ಲವೇ ಸಿಬಿಐಗೆ ಒಪ್ಪಿಸಬೇಕು. ಇಲ್ಲದೇ ಹೋದಲ್ಲಿ ನಾವು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಇದೀಗ ಈ ಪ್ರಕರಣದಲ್ಲಿ ಸಿಐಡಿ ವರ್ತನೆ ಬೇಲಿಯೆ ಎದ್ದು ಹೊಲ ಮೇಯ್ದಂತೆ ಆಗಿದೆ. ಇಲ್ಲಿ ಸರ್ಕಾರದ ಹಣವನ್ನು ಸರ್ಕಾರಿ ಅಧಿಕಾರಿಗಳೇ ಭರ್ಜರಿ ಲೂಟಿ ಮಾಡಿದ್ದು, ಸಾರ್ವಜನಿಕ ಸಂಘಟನೆಗಳು ಹೋರಾಟ ಮಾಡಿದಾಗಲೇ ಬಹಿರಂಗಗೊಂಡಿದೆ. ಇಷ್ಟೆಲ್ಲ ಆದ ಬಳಿಕವೂ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದನ್ನೆಲ್ಲ ನೋಡಿದರೆ, ಇದರಲ್ಲಿರೋರ ಕೈಗಳು ಮೇಲ್ಮಟ್ಟದವರೆಗೂ ಇದ್ದೆ ಇರುತ್ತೆ ಅನ್ನೋ ಸಂಶಯ ಮೂಡೋಕೆ ಶುರುವಾಗಿದೆ. ಇದೀಗ ಹೋರಾಟಗಾರರು ಕಾನೂನು ಹೋರಾಟ ಆರಂಭಿಸೋಕೆ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ