ಧಾರವಾಡದ ಕೆಐಎಡಿಬಿ ಕಚೇರಿಯಲ್ಲಿ (Dharwad KIADB – Karnataka Industrial Areas Development Board) ಬಗೆದಷ್ಟೂ ಅಕ್ರಮ ಪ್ರಕರಣಗಳು (fraud) ಬೆಳಕಿಗೆ ಬರುತ್ತಿವೆ. ಈಗಾಗಲೇ ಡಬಲ್ ಪೇಮೆಂಟ್ ಪ್ರಕರಣ ತನಿಖೆಯ ಹಂತದಲ್ಲಿ ಇರುವಾಗಲೇ ಮೃತಪಟ್ಟ ಜಮೀನ ಮಾಲೀಕನ ಹೆಸರಲ್ಲಿ ಇರೋ ಜಮೀನಿನ ಪರಿಹಾರದ ಹಣವನ್ನು ನಕಲಿ ಅಕೌಂಟ್ ಮಾಡಿ ಎತ್ತಿ ಹಾಕಲಾಗಿದೆ. ಜಮೀನು ವಶಪಡಿಸಿಕೊಂಡ ನೋಟಿಸ್ ಒಡೆದ ರೈತರು ಕಚೇರಿಗೆ ಬಂದು ಪರಿಹಾರ ಹಣ ಕೇಳಿದ್ರೆ ಕಚೇರಿಯ ಅಧಿಕಾರಿಗಳ ಮಾತು ಕೇಳಿ ಶಾಕ್ ಆಗಿತ್ತು. ಹಾಗಾದ್ರೆ ಅಲ್ಲಿನ ನಡೆದ ಅಕ್ರಮ ಏನು ಅಂತೀರಾ ಈ ಸ್ಟೋರಿ ನೋಡಿ.
ದಾಖಲೆಗಳನ್ನು ಕೈಯಲ್ಲಿ ಹಿಡಿದು ಆಕಾಶದತ್ತ ಮುಖ ಮಾಡಿರೋ ಈ ವ್ಯಕ್ತಿಗಳು ಧಾರವಾಡ ತಾಲೂಕಿನ ಕೋಟೂರು ಗ್ರಾಮಸ್ಥರು. ಈ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂಬರ್ 631 ರಲ್ಲಿನ 14 ಗುಂಟೆ ಜಮೀನನ್ನು ಧಾರವಾಡ ಕೆಐಎಡಿಬಿ ಸ್ವಾಧೀನ ಮಾಡಿಕೊಳ್ಳುವುದಾಗಿ ನೋಟಿಸ್ ನೀಡಲಾಗಿತ್ತು. ಭೂಸ್ವಾಧಿನವಾದ ಬಳಿಕ ರೈತರು ತಮ್ಮ ದಾಖಲೆಗಳನ್ನು ತೆಗೆದುಕೊಂಡು ಕೆಐಎಡಿಬಿ ಕಚೇರಿಗೆ ಹೋಗಿ ತಮ್ಮ ಜಮೀನನ್ನು ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿದೆ. ಅದರ ಪರಿಹಾರಾರ್ಥವಾಗಿ 10 ಲಕ್ಷ 50 ಸಾವಿರ ರೂ. ಹಣವನ್ನು ನೀಡುವಂತೆ ಕೇಳಿದ್ದಾರೆ.
ಆದರೆ ಕೆಐಎಡಿಬಿ ಅಧಿಕಾರಿಗಳಿಂದ ಬಂದ ಉತ್ತರ ಕೇಳಿ ರೈತರಿಗೆ ಶಾಕ್ ಆಗಿದೆ. ಹೌದು; ಮಕ್ತುಮ್ ಸಾಬ್ ಎಂಬ ರೈತನ ಮೊಮ್ಮಕ್ಕಳಿಗೆ ಕೆಐಎಡಿಬಿ ಯಿಂದ ನೋಟಿಸ್ ಬಂದಿತ್ತು. ಹಣವು ಕೂಡ ಮಕ್ತುಮ್ ಸಾಬ್‌ನ ಮೊಮ್ಮಕ್ಕಳಿಗೆ ಬರಬೇಕಿತ್ತು. ಹೋಗಿ ಕೇಳಿದರೆ ಅಧಿಕಾರಿಗಳು ಮೃತ ಮಕ್ತುಮ್ ಸಾಬ್ ನ ಅಕೌಂಟ್ ಹಣ ಹಾಕಲಾಗಿದೆ ಎಂದಿದ್ದಾರೆ. ಆದರೆ ಮಕ್ತುಮ್ ಸಾಬ್ 1992 ರಲ್ಲಿಯೇ ಮೃತಪಟ್ಟಿದ್ದಾರೆ. ಹಾಗಾದರೆ ಮೃತಪಟ್ಟ ಮಕ್ತುಮ್ ಸಾಬ್ ಹೆಸರಲ್ಲಿ ಅಕೌಂಟ್ ಮಾಡಿ ಹಣ ಡ್ರಾ ಕೂಡ ಮಾಡಲಾಗಿದೆ. ಇದು ಕೆಐಎಡಿಬಿ ಅಧಿಕಾರಿಗಳು ಶಾಮಿಲಾಗಿ, ಹಣವನ್ನು ಡ್ರಾ ಮಾಡಿದ್ದಾರೆ ಅನ್ನೋದು ಮಕ್ತುಮ್ ಸಾಬ್ ಮೊಮ್ಮಕ್ಕಳ ಆರೋಪ.
ಈಗಾಗಲೇ ಧಾರವಾಡ ಕೆಐಎಡಿಬಿ ಕಚೇರಿಯಲ್ಲಿನ ಅಧಿಕಾರಿಗಳು ಶಾಮಿಲಾಗಿ 20 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಡಬಲ್ ಪೇಮೆಂಟ್ ಮಾಡಿರೋ ಪ್ರಕರಣ ತನಿಖೆ ಹಂತದಲ್ಲಿದೆ. ಈ ಸಂಬಂಧ ಕೆಲವು ಅಧಿಕಾರಿಗಳನ್ನು ಅಮಾನತ್ತು ಕೂಡ ಮಾಡಲಾಗಿದೆ. ಈಗ ಮಕ್ತುಮ್ ಸಾಬ ಎಂಬುವರ ಮೊಮ್ಮಕ್ಕಳಿಗೆ ಸೇರಬೇಕಿದ್ದ ಹಣವನ್ನು ನಕಲಿ ಅಕೌಂಟ್ ಮಾಡಿ ಎತ್ತಿ ಹಾಕಲಾಗಿದೆ.
ತಮ್ಮ ಅಜ್ಜನ ಜಮೀನು ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿರೋ ಕಾರಣ ಪರಿಹಾರದ ಹಣ ಬಗ್ಗೆ ಕಚೇರಿಯಲ್ಲಿ ಅಧಿಕಾರಿಗಳನ್ನು ಕೇಳಿದಾಗ ಆರಂಭದಲ್ಲಿ ಸರಿಯಾಗಿ ಮಾಹಿತಿ ನೀಡದೆ ಸತಾಯಿಸಿದ್ದಾರೆ. ಬಳಿಕ ರೈತರು ಅಧಿಕಾರಿಗಳ ದುಂಬಾಲು ಬಿದ್ದಾಗ ನಿಮಗೆ ಹಣ ನೀಡಲಾಗಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆ ಕೇಳಿದರೆ ನಾಲ್ಕು ತಿಂಗಳು ಸತಾಯಿಸಿದ್ದಾರೆ. ಬಳಿಕ ದಾಖಲೆ ನೀಡಿದ್ದಾರೆ. ದಾಖಲೆ ನೋಡಿದಾಗಲೇ ಮೃತ ಮಕ್ತುಮ್ ಸಾಬ್ ಹೆಸರಿನಂತೆ ಇರುವ ವ್ಯಕ್ತಿ ಹೆಸರಲ್ಲಿ ಅಕೌಂಟ್ ಮಾಡಿ, ಹಣ ಡ್ರಾ ಮಾಡಲಾಗಿದೆ. ತಮಗೆ ಇದೀಗ ಅನ್ಯಾಯವಾಗಿದ್ದು, ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಅನ್ನೋದು ಮೊಮ್ಮಕ್ಕಳ ಆಗ್ರಹ.
ಇನ್ನು ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಕೇಳಿದರೆ, ಈಗಾಗಲೇ ಇಂಥ ಪ್ರಕರಣಗಳ ಕುರಿತು ತನಿಖೆ ನಡೆದಿದೆ. ಇದು ಪ್ರತ್ಯೇಕ ಮಂಡಳಿ ಆಗಿರೋದ್ರಿಂದ ನಾವು ಇದರಲ್ಲಿ ತಲೆ ಹಾಕಲು ಬರೋದಿಲ್ಲ. ಆದರೆ ಯಾರಾದರೂ ಸ್ಪಷ್ಟವಾದ ದೂರು ನೀಡಿದರೆ, ಈ ಕುರಿತಂತೆ ಕ್ರಮ ಕೈಗೊಳ್ಳಲು ಮಂಡಳಿಗೆ ಪತ್ರ ಬರೆಯೋದಾಗಿ ಹೇಳುತ್ತಾರೆ.
ಸರ್ಕಾರಕ್ಕೆ ಮಧ್ಯವರ್ತಿಯಾಗಿ ರೈತರಿಂದ ಜಮೀನು ಪಡೆದು ಕೈಗಾರಿಕೆಗಳಿಗೆ ನೀಡುತ್ತದೆ. ಇದರಿಂದ ಸರ್ಕಾರ ಕೋಟಿ ಕೋಟಿ ಹಣ ಲಾಭವಾಗುತ್ತದೆ. ಆದರೆ ಬದುಕಿಗೆ ಆಸರೆಯಾಗಿದ್ದ ಭೂಮಿಯನ್ನು ಕಳೆದುಕೊಂಡ ರೈತರಿಗೆ ಪರಿಹಾರಣ ಹಣ ಸಿಗದೇ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಕೆಐಎಡಿಬಿ ಅಧಿಕಾರಿಗಳು ಮಾಡಿರೊ ಮೋಸದ ಬಗ್ಗೆ ಸರ್ಕಾರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ