ಧಾರವಾಡದಲ್ಲಿರೋ (Dharwad) ಕೆಐಎಡಿಬಿಯಲ್ಲಿ ( Karnataka Industrial Areas Development Board – KIADB) ನಡೆದಿರುವ ಹಗರಣ ಬಗೆದಷ್ಟು ಬಯಲಾಗುತ್ತಲೇ ಇದೆ. ಇತ್ತೀಚೆಗಷ್ಟೇ ಈ ಕೆಐಎಡಿಬಿಯಿಂದ ಅಂದಾಜು 20 ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಈ ಕುರಿತು ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೀಗ ಪ್ರಕರಣದ (Dharwad KIADB scam) ತನಿಖೆ ನಡೆಸಿರುವ ಸಿಐಡಿ (CID) ವೀಕ್ ಚಾರ್ಜ್‌ಶೀಟ್ (weak chargesheet ) ಸಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ ಕೆಐಎಡಿಬಿಯಲ್ಲಿನ ಕೆಲ ಅಧಿಕಾರಿಗಳು 20 ಕೋಟಿ ರೂಪಾಯಿ ಹಣವನ್ನು ಡಬಲ್ ಪೇಮೆಂಟ್ ಮಾಡಿಕೊಂಡಿದ್ದರು. ಈ ಸಂಬಂಧ ದಾಖಲೆಗಳನ್ನು ಸಹ ಧಾರವಾಡದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಬಿಡುಗಡೆ ಮಾಡಿದ್ದರು. ಬಹುಕೋಟಿ ಹಗರಣ ಇದಾಗಿದ್ದರಿಂದ ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು 9 ತಿಂಗಳು ತನಿಖೆ ಮಾಡಿದ್ದರು.
ಅಲ್ಲದೇ ಈ ಸಂಬಂಧ ತನಿಖಾಧಿಕಾರಿ ಎಲ್. ಆರ್. ಅಗ್ನಿ ಸುಮಾರು 2 ಸಾವಿರ ಪುಟಗಳುಳ್ಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ, ಅವರು ಸಲ್ಲಿಸಿರೋ ಚಾರ್ಜ್‌ಶೀಟ್ ವೀಕ್ ಆಗಿದ್ದು, ಹಲವರನ್ನು ಬಚಾವ್ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಆರೋಪಿಸಿದ್ದಾರೆ.
ಸದ್ಯ ಸಿಐಡಿ ಸಲ್ಲಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಅಧಿಕಾರಿಗಳ ಹೆಸರನ್ನು ಕೈಬಿಡಲಾಗಿದೆ. ಮೂರು ಜನ ಹಿರಿಯ ಅಧಿಕಾರಿಗಳ ಬಂಧನ ಆಗಬೇಕಿದ್ದು, ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರನ್ನೇ ಕೈಬಿಡಲಾಗಿದೆ. ಅಂದಿನ ಭೂಸ್ವಾಧೀನ ಅಧಿಕಾರಿಯಾಗಿದ್ದ ವಿ.ಡಿ. ಸಜ್ಜನ್ ಅವರ ನಿವೃತ್ತಿ ದಿನದಂದು ರೂ. 30 ಕೋಟಿಗೂ ಅಧಿಕ ಹಣ ಆರ್‌ಟಿಜಿಎಸ್ ಮಾಡಿದ್ದಾರೆ. ಎಲ್ಲವೂ ಕೇಂದ್ರ ಕಚೇರಿಯಿಂದ ಹಣ ಬಿಡುಗಡೆಯಾಗಿದೆ. ರೂ. 30 ಕೋಟಿಗೂ ಅಧಿಕ ಗೋಲ್ಮಾಲ್ ಈ ಕೆಐಎಡಿಬಿಯಿಂದ ನಡೆದಿದ್ದು, ಇದು ಉತ್ತರ ಕರ್ನಾಟಕದ ಬಿಳಿ ಆನೆಯಾದಂತಾಗಿದೆ. ಐಡಿಬಿಐ ಬ್ಯಾಂಕ್ ಮುಖಾಂತರ ಈ ಹಣ ಆರ್‌ಟಿಜಿಎಸ್ ಆಗಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿಕೊಂಡಿದ್ದರಿಂದ ಅಕ್ರಮ ಎಸಗಿದವರಿಗೆ ಶಿಕ್ಷೆಯಾಗುತ್ತೆ ಅನ್ನೋ ಆಶಾಭಾವನೆ ಮೂಡಿತ್ತು. ಆದರೆ ಇದೀಗ ಅದೇ ಸಿಐಡಿ ಅಧಿಕಾರಿಗಳು ಕೆಲವರನ್ನು ಬಚಾವ್ ಮಾಡಲು ಯತ್ನಿಸಿರೋದನ್ನು ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.
ಹೀಗಾಗಿ ಈ ತನಿಖಾ ಸಂಸ್ಥೆಯಿಂದ ನ್ಯಾಯ ಸಿಗುವುದಿಲ್ಲ ಅಂದಿರೋ ಹೋರಾಟಗಾರರು ಈ ಅಕ್ರಮದ ತನಿಖೆಯನ್ನು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ನಿಯೋಗ ರಚನೆ ಮಾಡಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಈಗಲಾದರೂ ಅಕ್ರಮ ಎಸಗಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾ ಅಥವಾ ಅವರ ಪರವೇ ನಿಲ್ಲುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ