ಧಾರವಾಡಲ್ಲಿವೆ ಪ್ಲಾಸ್ಟಿಕ್ ಮುಕ್ತ ಗ್ರಾಮಗಳು: ಕ್ಯಾನ್ಸರ್ ತಡೆಗೆ ಒಂದು ದಿಟ್ಟ ಹೆಜ್ಜೆ
ಧಾರವಾಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಮೂಲಕ ಕ್ಯಾನ್ಸರ್ ತಡೆಗಟ್ಟುವ ಪ್ರಯತ್ನ ಯಶಸ್ವಿಯಾಗಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮಗಳ ಅಭಿಯಾನದಿಂದ ಮಂಗಳಗಟ್ಟಿ ಮತ್ತು ಬೇಲೂರು ಗ್ರಾಮಗಳು ಮಾದರಿಯಾಗಿವೆ. ಸ್ವಸಹಾಯ ಸಂಘಗಳ ಮಹಿಳೆಯರು ಕಸ ಸಂಗ್ರಹ ಮತ್ತು ವಿಂಗಡನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮತ್ತು ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸಲಾಗುತ್ತಿದೆ.

ಧಾರವಾಡ, ಮಾರ್ಚ್ 13: ವೈದ್ಯಕೀಯ ಲೋಕ ಎಷ್ಟೇ ಪ್ರಯತ್ನಪಡುತ್ತಿದ್ದರೂ ಕ್ಯಾನ್ಸರ್ ರೋಗಕ್ಕೆ ಮದ್ದು ಸಿಗುತ್ತಿಲ್ಲ. ಇಂಥ ಕ್ಯಾನ್ಸರ್ ರೋಗಕ್ಕೆ ಪ್ಲಾಸ್ಟಿಕ್ (Plastic) ಕೂಡ ಒಂದು ಕಾರಣ. ಇತ್ತೀಚಿಗಂತೂ ಭಾರತದಲ್ಲಿ ಈ ಕ್ಯಾನ್ಸರ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ದೇಶದಲ್ಲಿ ಸದ್ಯಕ್ಕೆ 3 ಕೋಟಿ ಜನ ಕ್ಯಾನ್ಸರ್ ರೋಗಿಗಳಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಈ ಪ್ಲಾಸ್ಟಿಕ್ ಎಂಬ ಪೆಡಂಭೂತದ ವಿರುದ್ಧ ಅಭಿಯಾನಗಳು ಶುರುವಾಗಿವೆ. ಇದರಂಗವಾಗಿ ಕೇಂದ್ರ ಸರಕಾರ ಆರಂಭಿಸಿರೋ ಪ್ಲಾಸ್ಟಿಕ್ ಮುಕ್ತ ಗ್ರಾಮಗಳು ಧಾರವಾಡದಲ್ಲಿ (Dharwad) ಎಲ್ಲೆಡೆ ಕಾಣಸಿಗುತ್ತಿವೆ.
ನಮ್ಮ ನಿತ್ಯದ ಬದುಕಲ್ಲಿ ಹಾಸುಹೊಕ್ಕಾಗಿರೋ ಈ ಪ್ಲಾಸ್ಟಿಕ್ ಕ್ಯಾನ್ಸರ್ ಅನ್ನೋ ಭೀಕರ ರೋಗಕ್ಕೆ ಕಾರಣವೂ ಆಗುತ್ತಿದೆ. ಪ್ಲಾಸ್ಟಿಕ್ನ ಸಣ್ಣಸಣ್ಣ ಕಣಗಳು ದೇಹದೊಳಗೆ ಹೋಗಿ, ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರಕಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಈ ಪ್ಲಾಸ್ಟಿಕ್ನ ವಿರುದ್ಧ ಆಂದೋಲನ ಶುರು ಮಾಡಿತ್ತು. ಅದರ ಪರಿಣಾಮ ಇದೀಗ ನಿಧಾನವಾಗಿ ಗೋಚರವಾಗುತ್ತಿದೆ.
ಇದನ್ನೂ ಓದಿ: ಚಿಕನ್, ಮಟನ್ ಬಿಟ್ಟು ಮೀನು ತಿನ್ನುವವರಿಗೂ ಶಾಕ್: ಮೀನಿನ ಬೆಲೆ ಶೇ 30 ಏರಿಕೆ
ಸಾಮಾನ್ಯವಾಗಿ ಮಳೆಗಾಲ ಆರಂಭವಾದರೆ ಸಾಕು ಗ್ರಾಮೀಣ ಪ್ರದೇಶದ ಅನೇಕ ಕಡೆಗಳಲ್ಲಿ ಚರಂಡಿಗಳು ಕಟ್ಟಿಕೊಂಡು, ನೀರು ಗ್ರಾಮದ ಮನೆಗಳಿಗೆ ನುಗ್ಗುತ್ತೆ. ಇದಕ್ಕೆ ಕಾರಣವೇ ಈ ಪ್ಲಾಸ್ಟಿಕ್. ಒಂದು ಬಾರಿ ಬಳಸೋ ಪ್ಲಾಸ್ಟಿಕ್ನಿಂದ ಹಿಡಿದು ವಿವಿಧ ಥರದ ಪ್ಲಾಸ್ಟಿಕ್ ವಸ್ತುಗಳು ಚರಂಡಿಯಲ್ಲಿ ಸಿಕ್ಕು, ನೀರು ಸರಾಗವಾಗಿ ಹೋಗದಂತೆ ತಡೆಯುತ್ತವೆ. ಇದರ ಪರಿಣಾಮವೇ ಮನೆಗಳಿಗೆ ನೀರು ನುಗ್ಗೋದು. ಇಂಥ ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಕಡಿಮೆ ಮಾಡೋ ಉದ್ದೇಶದಿಂದ ಪ್ಲಾಸ್ಟಿಕ್ ಮುಕ್ತ ಗ್ರಾಮ ಅನ್ನೋ ಪರಿಕಲ್ಪನೆಯಲ್ಲಿ ಎಲ್ಲ ಗ್ರಾಮ ಪಂಚಾಯತಿಗಳ ಮೂಲಕ ಕೆಲಸವನ್ನು ಆರಂಭಿಸಲಾಗಿದೆ. ಇದರ ಪರಿಣಾಮ ಇದೀಗ ಧಾರವಾಡ ಜಿಲ್ಲೆಯಲ್ಲಿ ಅನೇಕ ಗ್ರಾಮಗಳು ಪ್ಲಾಸ್ಟಿಕ್ ಮುಕ್ತವಾಗಿವೆ.
ಕುರಬಗಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮ, ಇದೀಗ ನಾಡಿಗೆ ಮಾದರಿಯಾಗಿದೆ. ಇಲ್ಲಿನ ಬೇರೆ ಬೇರೆ ಜಿಲ್ಲೆಗಳಿಂದ ಬರೋ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು, ಇಲ್ಲಿ ನಿತ್ಯವೂ ನಡೆಯೋ ಸ್ವಚ್ಛತಾ ಅಭಿಯಾನದ ಬಗ್ಗೆ ತರಬೇತಿ ಪಡೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಈ ಗ್ರಾಮದಲ್ಲಿನ ಪ್ಲಾಸ್ಟಿಕ್ ನಿರ್ವಹಣಾ ವ್ಯವಸ್ಥೆ.
ಗ್ರಾಮದ ಹೊರಭಾಗದಲ್ಲಿ ನಿರ್ಮಿಸಲಾಗಿರೋ ಈ ಶೆಡ್ನಲ್ಲಿ ನಿತ್ಯವೂ ಸಂಗ್ರಹಿಸೋ ತ್ಯಾಜ್ಯವನ್ನು ತರಲಾಗುತ್ತೆ. ಗ್ರಾಮದ ಎಲ್ಲ ಮನೆಗಳಿಗೆ ಎರಡು ಬಕೆಟ್ ನೀಡಲಾಗಿದ್ದು, ಹಸಿರು ಬಕೆಟ್ನಲ್ಲಿ ಹಸಿ ಕಸ ಹಾಗೂ ನೀಲಿ ಬಕೆಟ್ನಲ್ಲಿ ಒಣ ಕಸವನ್ನು ಹಾಕಿಡುವಂತೆ ಸೂಚಿಸಲಾಗಿದೆ. ಬೆಳಿಗ್ಗೆ ಸ್ವಸಹಾಯ ಗುಂಪಿನ ಮಹಿಳೆಯರೇ ಆಟೋ ಟಿಪ್ಪರ್ ವಾಹನವನ್ನು ತೆಗೆದುಕೊಂಡು ಗ್ರಾಮದ ಮನೆ ಮನೆಗೆ ಹೋಗುತ್ತಾರೆ. ಅಲ್ಲಿ ಜನರು ನೀಡೋ ತ್ಯಾಜ್ಯವನ್ನು ಟಿಪ್ಪರ್ಗೆ ಹಾಕಿಕೊಳ್ಳುತ್ತಾರೆ. ಬಳಿಕ ತ್ಯಾಜ್ಯ ಸಂಗ್ರಹ ಘಟಕಕ್ಕೆ ಬರೋ ಮಹಿಳೆಯರು ಎಲ್ಲವನ್ನು ಪ್ರತ್ಯೇಕವಾಗಿಸುತ್ತಾರೆ.
ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ಪ್ರತ್ಯೇಕವಾಗಿ ತೆಗೆಯುತ್ತಾರೆ. ಹೀಗೆ ತೆಗೆದ ಪ್ಲಾಸ್ಟಿಕ್ ವಸ್ತುಗಳ ಪೈಕಿ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲ್, ಮದ್ಯದ ಸ್ಯಾಚೆಟ್ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ಪತ್ಯೇಕವಾಗಿಸಿ, ಅವುಗಳಿಗೆ ಮೀಸಲಾಗಿರೋ ಸಂಗ್ರಹದ ಡಬ್ಬಿಯಲ್ಲಿ ಹಾಕುತ್ತಾರೆ. ಸಂಗ್ರಹ ತನ್ನ ಗರಿಷ್ಠ ಪ್ರಮಾಣ ಮುಟ್ಟುತ್ತಿದ್ದಂತೆಯೇ ಹರಾಜು ಹಾಕೋ ಮೂಲಕ ಮಾರಾಟ ಮಾಡಲಾಗುತ್ತೆ. ಇನ್ನು ಈ ಹಂತಕ್ಕೆ ಈ ಗ್ರಾಮ ತಲುಪೋದರ ಹಿಂದೆ ರೋಚಕ ಕಥೆ ಇದೆ.
ಕೆಲ ವರ್ಷಗಳ ಹಿಂದೆ ಇಲ್ಲಿ ತ್ಯಾಜ್ಯ ಸಂಗ್ರಹ ಘಟಕ ತೆರೆಯಲು ಜಿಲ್ಲಾ ಪಂಚಾಯತ್ ಮೂಲಕ ಮಾಹಿತಿ ಬಂದಾಗ ಗ್ರಾಮಸ್ಥರೆಲ್ಲರೂ ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮದ ಹೊರಭಾಗದಲ್ಲಿ ಕಸದ ಗುಡ್ಡೆಯ ಪರಿಕಲ್ಪನೆ ಬಂದು ಯಾವುದೇ ಕಾರಣಕ್ಕೂ ತಮ್ಮೂರಿಗೆ ತ್ಯಾಜ್ಯ ಸಂಗ್ರಹ ಘಟಕವೇ ಬೇಡ ಅಂತಾ ವಿರೋಧಿಸಿದ್ದರು. ಆದರೆ ಅಧಿಕಾರಿಗಳು ಅವರ ತಲೆಯಲ್ಲಿನ ತಪ್ಪು ಕಲ್ಪನೆ ಅಳಿಸಿ ಹಾಕಿ, ನಿಜವಾದ ಪರಿಕಲ್ಪನೆಯನ್ನು ತಲೆಯಲ್ಲಿ ತುಂಬಿದ್ದರು. ಬಳಿಕ ಆರಂಭವಾಗಿದ್ದೇ ಈ ತ್ಯಾಜ್ಯ ವಿಲೇವಾರಿ ಘಟಕ.
ಇದೇ ವೇಳೆ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶಾಲೆಗಳಲ್ಲಿ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಲಾಗಿ, ಮಕ್ಕಳು ಮನೆಯಲ್ಲಿ ಪೋಷಕರಿಗೆ ಈ ಬಗ್ಗೆ ಅರಿವು ಮೂಡಿಸಿದರು. ಇನ್ನು ನಿತ್ಯವೂ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರೆಲ್ಲ ಸೇರಿ ಮನೆ ಮನೆಗೆ ತೆರಳಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ್ದಲ್ಲದೇ ಇದರಿಂದಾಗೋ ಲಾಭವನ್ನು ತಿಳಿ ಹೇಳಿದರು. ಅದರ ಫಲ ಕೆಲವೇ ದಿನಗಳಲ್ಲಿ ಕಂಡು ಬಂತು. ತ್ಯಾಜ್ಯ ಸಂಗ್ರಹ ಘಟಕ ನಿರ್ಮಾಣವಾಗಿ, ನಿತ್ಯವೂ ಕಸ ಸಂಗ್ರಹವಾಗಿ, ಗ್ರಾಮವೆಲ್ಲ ಸ್ವಚ್ಛವಾಗಿದ್ದರಿಂದ ಎಲ್ಲರಿಗೂ ಅಚ್ಚರಿಯಾಗತೊಡಗಿತು. ಇದರಿಂದಾಗಿ ಗ್ರಾಮಸ್ಥರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂತು. ಇದೇ ವೇಳೆ ಪ್ಲಾಸ್ಟಿಕ್ ಮುಕ್ತ ಗ್ರಾಮದ ಕನಸು ಕೂಡ ಚಿಗುರೊಡೆಯಿತು. ಅದರ ಅಂಗವಾಗಿ ಆರಂಭವಾದ ಅಭಿಯಾನ ಇಂದು ಈ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಬದಲಾಯಿಸಿದೆ.
ಈ ಮುಂಚೆ ಗ್ರಾಮಸ್ಥರು ಪ್ಲಾಸ್ಟಿಕ್ನನ್ನು ತ್ಯಾಜ್ಯ ಅಂತಾ ಪರಿಗಣಿಸದೇ ಇಂಧನವಾಗಿ ಬಳಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸೀಮೆ ಎಣ್ಣೆ ಸಿಗುತ್ತಿಲ್ಲ. ಹೀಗಾಗಿ ಒಲೆ ಹೊತ್ತಿಸಲು ಜನರು ಇದೇ ಪ್ಲಾಸ್ಟಿಕ್ನ್ನು ಬಳಸುತ್ತಿದ್ದರು. ಪ್ಲಾಸ್ಟಿಕ್ ಸುಡೋದ್ರಿಂದ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳು ಬರುತ್ತವೆ ಅನ್ನೋದರ ಅರಿವು ಮೂಡಿಸುವಲ್ಲಿ ಗ್ರಾಮ ಪಂಚಾಯತ್ ಸಫಲವಾಗಿದ್ದೇ ಇವತ್ತು ಈ ಗ್ರಾಮ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿ ಹೊರಹೊಮ್ಮಲು ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕದ ಹಲವೆಡೆ ಮಳೆ: ಮಂಗಳೂರಿನಲ್ಲಿ ಗಾಳಿ ಮಳೆಯಿಂದ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್
ಇದು ಕೇವಲ ಇದೊಂದೇ ಗ್ರಾಮದ ಕಥೆಯಲ್ಲ. ಧಾರವಾಡ ತಾಲೂಕಿನ ಬೇಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೇಲೂರು ಕೈಗಾರಿಕಾ ಪ್ರದೇಶ ಬರುತ್ತೆ. ಹೀಗಾಗಿ ಇಲ್ಲಿ ಸಾಕಷ್ಟು ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ರೂಪದಲ್ಲಿ ನಿತ್ಯವೂ ಹೊರಗೆ ಬರುತ್ತೆ. ಇದನ್ನು ನಿಯಂತ್ರಿಸೋದು ಕಷ್ಟಸಾಧ್ಯ. ಆದರೂ ಮನಸ್ಸಿದ್ದಲ್ಲಿ ಮಾರ್ಗವೂ ಇರುತ್ತೆ ಅನ್ನೋದನ್ನು ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಮಾಡಿ ತೋರಿಸಿದ್ದಾರೆ. ನಿತ್ಯವೂ ಆಟೋ, ಟಿಪ್ಪರ್ ಮೂಲಕ ಕಸ ಸಂಗ್ರಹಿಸೋ ಮಹಿಳಾ ಸಿಬ್ಬಂದಿ, ಅದರಲ್ಲಿನ ಪ್ಲಾಸ್ಟಿಕ್ ವಸ್ತುಗಳನ್ನು ಪತ್ಯೇಕಿಸುತ್ತಾರೆ. ಬಳಿಕ ತಿಂಗಳಿಗೊಮ್ಮೆ ಹರಾಜು ಹಾಕೋ ಮೂಲಕ ಆದಾಯವನ್ನು ಕೂಡ ಗಳಿಸುತ್ತಾರೆ. ಇದೀಗ ಈ ಬೇಲೂರು ಗ್ರಾಮದಲ್ಲಿ ಎಲ್ಲಿಯೇ ನೋಡಿದರೂ ಪ್ಲಾಸ್ಟಿಕ್ ಕಾಣಸಿಗೋದಿಲ್ಲ. ಆ ಮೂಲಕ ಇದು ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿ ಬದಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ವಿವರ
ಧಾರವಾಡ ಜಿಲ್ಲೆಯ 146 ಗ್ರಾಮ ಪಂಚಾಯತಿಗಳ ಪೈಕಿ 120 ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ಘಟಕಗಳು ನಿರ್ಮಾಣವಾಗಿವೆ. ಇವುಗಳಲ್ಲಿ ನಿತ್ಯವೂ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಇನ್ನು ಎರಡು ಗ್ರಾಮ ಪಂಚಾಯತ್ ಹೊರತುಪಡಿಸಿ ಇನ್ನುಳಿದ 24 ಗ್ರಾಮ ಪಂಚಾಯತಿಗಳಲ್ಲಿ ತಾತ್ಕಾಲಿಕ ಕಸ ಸಂಗ್ರಹಣಾ ವ್ಯವಸ್ಥೆ ಜಾರಿಯಲ್ಲಿದೆ. ಈ ಎಲ್ಲ ಕಡೆಗಳಲ್ಲಿಯೂ ಪ್ಲಾಸ್ಟಿಕ್ ಮುಕ್ತ ಗ್ರಾಮದ ಪರಿಕಲ್ಪನೆ ಜಾರಿಯಲ್ಲಿದೆ. ಎಲ್ಲ ಕಡೆಗಳಲ್ಲಿಯೂ ಈ ಬಗ್ಗೆ ಅರಿವು ಮೂಡಿಸಲಾಗಿದ್ದು, ಜನರು ಕೂಡ ಪ್ಲಾಸ್ಟಿಕ್ನಿಂದಾಗೋ ಅನಾಹುತಗಳ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ.
ಆಟೋ ಟಿಪ್ಪರ್ ವಾಹನ
ಧಾರವಾಡ ಜಿಲ್ಲೆಯ 146 ಗ್ರಾಮ ಪಂಚಾಯತಿಗಳಲ್ಲಿ 137 ಆಟೋ ಟಿಪ್ಪರ್ ವಾಹನ, 18 ಟ್ಯಾಕ್ಟರ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವಸಹಾಯ ಸಂಘದ ಮಹಿಳೆಯರಿಂದ ವಾಹನ ಚಾಲನೆ ಆಗುತ್ತಿದೆ. ಅವರೇ ವಾಹನ ಚಲಾಯಿಸೋದಲ್ಲದೇ ತ್ಯಾಜ್ಯವನ್ನು ಸಂಗ್ರಹಿಸಿ, ಘಟಕಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ತ್ಯಾಜ್ಯದ ವಿಲೇವಾರಿ ನಡೆಯುತ್ತೆ. ಈ ವೇಳೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಿ ಇಡುತ್ತಾರೆ. ಈರ್ಣಣೂ ಧಾರವಾಡ ಜಿಲ್ಲೆಯ 146 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಕುಟುಂಬಕ್ಕೆ 2 ಕಸದ ಬುಟ್ಟಿಗಳನ್ನು ಗ್ರಾಮ ಪಂಚಾಯಿತಿಯಿಂದಲೇ ನೀಡಲಾಗಿದೆ.
ಕಸ ಸಂಗ್ರಹಣೆ ಮತ್ತು ವಿಂಗಡಣೆ
ಪ್ರತಿ ಮನೆಯಿಂದ ಕಸ ಸಂಗ್ರಹಣೆ ಹಾಗೂ ವಿಂಗಡಣೆಗಾಗಿ ಗ್ರಾ.ಪಂ ಮಟ್ಟದ ಒಕ್ಕೂಟಗಳಿಂದ ಪ್ರತಿ ಗ್ರಾಮ ಪಂಚಾಯತಿಗೆ 2 ಅಥವಾ 3 ಜನ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಂದ ನಿರ್ವಹಿಸಲಾಗುತ್ತಿದೆ . ಗ್ರಾ.ಪಂಯಿಂದ ಈ ಸಿಬ್ಬಂದಿಗೆ ಸುರಕ್ಷಾ ಉಪಕರಣಗಳನ್ನು ನೀಡಲಾಗಿದೆ. ಇನ್ನು ಪ್ರತಿ ಗ್ರಾಮ ಪಂಚಾಯತಿಯಿಂದ ಕಸ ಸಂಗ್ರಹಣೆ ಮತ್ತು ವಿಂಗಡಣೆಯನ್ನು ಸ್ವ ಸಹಾಯ ಸಂಘದ ಮಹಿಳೆಯರೇ ನಿರ್ವಹಿಸುತ್ತಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಕಸ ಸಂಗ್ರಹಣಾ ಶುಲ್ಕ ಸಂಗ್ರಹಿಸಲಾಗುತ್ತಿದೆ. ಇನ್ನು ಈ ಸಿಬ್ಬಂದಿಗೆ ಗ್ರಾಮ ಪಂಚಾಯತಿ ವತಿಯಿಂದ 15 ನೇ ಹಣಕಾಸು ಮತ್ತು ಸ್ವಂತ ಸಂಪನ್ಮೂಲದಿಂದ ಗೌರವ ಧನ ಸಂದಾಯ ಮಾಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Thu, 13 March 25