ಧಾರವಾಡ: ರೈತರಿಗೆ ವರವಾಗಿದ್ದ ಗಂಗಾ ಕಲ್ಯಾಣ ಯೋಜನೆಗೂ ಗ್ಯಾರಂಟಿ ಕಂಟಕ

| Updated By: Ganapathi Sharma

Updated on: Jul 09, 2024 | 4:27 PM

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಉಳಿದೆಲ್ಲ ಯೋಜನೆಗಳ ಫಲಾನುಭವಿಗಳ ಅನುದಾನಕ್ಕೂ ಕೊಕ್ಕೆ ಹಾಕುತ್ತ ಸಾಗಿವೆ. ಧಾರವಾಡದಲ್ಲಿ ಬಡ ರೈತರ ಪಾಲಿಗೆ ವರದಾನವಾಗಿದ್ದ ಗಂಗಾ ಕಲ್ಯಾಣ ಯೋಜನೆಗೂ ಗ್ಯಾರಂಟಿಯಿಂದ ಕಂಟಕ ಎದುರಾಗಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಒತ್ತಡದಲ್ಲಿರುವ ರಾಜ್ಯ ಸರಕಾರ ಈ ಯೋಜನೆ ಮೂಲಕ ರೈತರ ಜಮೀನಿಗೆ ನೀರುಣಿಸಬೇಕಾಗಿರುವ ಗಂಗಾ ಕಲ್ಯಾಣ ಯೋಜನೆಯನ್ನೇ ಮರೆತು ಬಿಟ್ಟಿದೆ.

ಧಾರವಾಡ: ರೈತರಿಗೆ ವರವಾಗಿದ್ದ ಗಂಗಾ ಕಲ್ಯಾಣ ಯೋಜನೆಗೂ ಗ್ಯಾರಂಟಿ ಕಂಟಕ
ರೈತರಿಗೆ ವರವಾಗಿದ್ದ ಗಂಗಾ ಕಲ್ಯಾಣ ಯೋಜನೆಗೂ ಗ್ಯಾರಂಟಿ ಕಂಟಕ (ಸಾಂದರ್ಭಿಕ ಚಿತ್ರ)
Follow us on

ಧಾರವಾಡ, ಜುಲೈ 9: ಸಣ್ಣ ಮತ್ತು ಅತಿ ಸಣ್ಣ ರೈತರ ಕಲ್ಯಾಣಕ್ಕಾಗಿ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಧಾರವಾಡ ಜಿಲ್ಲೆಯ ರೈತರಿಗೆ ಈ ಯೋಜನೆ ಇದ್ದೂ ಇಲ್ಲದಂತಾಗಿದೆ. ಕಾಲಕಾಲಕ್ಕೆ ಸರಿಯಾಗಿ ಅನುದಾನ ಬರದೇ ಇರುವ ಕಾರಣಕ್ಕೆ ಯೋಜನೆಗೆ ಆಯ್ಕೆಯಾದ ರೈತರ ಜಮೀನಿನಲ್ಲಿ ಬೊರ್​ವೆಲ್ ಕೊರೆಸಲಾಗಿಲ್ಲ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿರೋ ಆದಿಜಾಂಬವ, ಅಂಬೇಡ್ಕರ್, ತಾಂಡಾ, ಭೋವಿ, ವಾಲ್ಮೀಕಿ, ವಿಶ್ವಕರ್ಮ, ದೇವರಾಜು ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಿಂದ ಸಹಾಯಧನದಲ್ಲಿ ಅರ್ಹ ಫಲಾನುಭವಿ ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಲಾಗುತ್ತದೆ. ಹಿಂದುಳಿದ ವರ್ಗ ಹಾಗೂ ಆಯಾ ಜಾತಿಗೆ ಅನುಗುಣವಾಗಿ ನಿಗಮಗಳಿಗೆ ರೈತರು ಅರ್ಜಿ ಸಲ್ಲಿಸಿರುತ್ತಾರೆ. ಹಾಗೆ ಅರ್ಜಿ ಸಲ್ಲಿಕೆಯ ಬಳಿಕ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ಸಮಿತಿಗಳಿಂದ ಫಲಾನುಭವಿಗಳ ಅಂತಿಮ ಪಟ್ಟಿ ಮಾಡಿ, ಟೆಂಡರ್ ಕರೆದು ಸಂಬಂಧಿಸಿದ ನಿಗಮದಿಂದ ತಲಾ 3 ಲಕ್ಷ ರೂಪಾಯಿ ಸಹಾಯಧನ ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಖರ್ಚಿಗಾಗಿ 50 ಸಾವಿರ ರೂಪಾಯಿ ಸಾಲ ನೀಡಲಾಗುತ್ತದೆ. ಆದರೆ ಕಳೆದ ವರ್ಷದ ಫಲಾನುವಿಗಳಿಗೆ ಇನ್ನೂ ಬೊರ್​ವೆಲ್ ಕೊರೆಸಿಲ್ಲ. ಈ ವರ್ಷದ ಅರ್ಜಿಗಳ ಅನುಮೋದನೆಗಳ ಮುಂದಿನ ಪ್ರಕ್ರಿಯೆಯೂ ನಡೆಯುತ್ತಿಲ್ಲ.

80 ಫಲಾನುಭವಿಗಳ ಪೈಕಿ 30 ಮಂದಿಗಷ್ಟೇ ಸಿಕ್ಕಿದ ಅನುದಾನ

ಧಾರವಾಡ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ 80 ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಿತ್ತು. ಅದರಲ್ಲಿ 30 ಕೊಳವೆ ಬಾವಿ ಮಾತ್ರ ಕೊರೆಯಲಾಗಿದೆ. 2023-24ನೇ ಸಾಲಿನಲ್ಲಿ ಲಿಂಗಾಯತ ಸಮಾಜಕ್ಕೆ 14 ಕೊಳವೆಬಾವಿಗಳ ಗುರಿ ಇತ್ತು. ಒಟ್ಟು 674 ರೈತರು ಅರ್ಜಿ ಸಲ್ಲಿಸಿದ್ದರು. ಮರಾಠಾ ಸಮಾಜಕ್ಕೆ 58 ಗುರಿ ಇತ್ತು. ಅದರಲ್ಲಿ 334 ಅರ್ಜಿ ಸಲ್ಲಿಕೆಯಾಗಿದೆ. ಹಿಂದುಳಿದ ವರ್ಗಗಳಿಗೆ 60 ಗುರಿ ಇತ್ತು. ಅದಕ್ಕಾಗಿ 315 ಅರ್ಜಿ ಸಲ್ಲಿಕೆಯಾಗಿದ್ದವು. ಈಗ ಶಾಸಕರ ಅಧ್ಯಕ್ಷತೆಯ ಸಮಿತಿಯಿಂದ ಫಲಾನುಭವಿಗಳ ಆಯ್ಕೆ ಮಾಡಿ, ಪಟ್ಟಿ ಕಳುಹಿಸಲಾಗಿದೆ. ಆದರೆ 4 ತಿಂಗಳಾದರೂ ಟೆಂಡರ್ ಆಗಿಲ್ಲ. ಇದಕ್ಕೆಲ್ಲ ಕಾರಣ ಇಲಾಖೆಗಳಲ್ಲಿ ಹಣ ಇಲ್ಲ. ಎಲ್ಲ ಗ್ಯಾರಂಟಿಗೆ ಹೋಗುತ್ತಿದೆ ಎಂಬುದು ರೈತರ ಆರೋಪ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಸೊಲ್ಲಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಈ ರೈಲುಗಳ ಸಮಯ ಬದಲಾವಣೆ

ರೈತರಿಗೆ ಸರ್ಕಾರಗಳು ಆಸರೆಯಾಗಿ ನಿಲ್ಲಬೇಕು. ಇದರಿಂದ ಕೃಷಿಯಲ್ಲಿ ಬೆಳವಣಿಗೆಯಾಗಬೇಕು. ಆ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರು ಮುಖ್ಯ ವಾಹಿನಿಗೆ ಬರಬೇಕು ಎಂಬ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಕುತ್ತು ಬಂದಂತಾಗಿದೆ. ಸರಕಾರ ಈ ಯೋಜನೆ ಬಗ್ಗೆ ಇನ್ನಾದರೂ ಗಂಭೀರವಾಗಿ ಗಮನ ಸರಿಸಿದರೆ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ