ಏರುತ್ತಲೇ ಇದೆ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ವೆಚ್ಚ: ಕೇಂದ್ರದ ನಿರ್ಧಾರದತ್ತ ಎಲ್ಲರ ಚಿತ್ತ
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ನೈರುತ್ಯ ರೈಲ್ವೆಯು 17,147 ಕೋಟಿ ರೂ. ವೆಚ್ಚದ ಪರಿಷ್ಕೃತ ವಿಸ್ತ್ರತ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ. ಮೊದಲು ಅಂದಾಜಿಸಿದ್ದಕ್ಕಿಂತ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರ ಮತ್ತು ವನ್ಯಜೀವಿಗಳಿಗೆ ಅಪಾಯವಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಧಾರವಾಡ, ಏಪ್ರಿಲ್ 11: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ (Hubballi Ankola railway project) ತಗಲುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸಾಕಷ್ಟು ವಿವಾದ, ವಿರೋಧಗಳ ನಡುವೆಯೂ ಈ ಮಾರ್ಗವನ್ನು ಮಾಡಲೇ ಬೇಕು ಅನ್ನುತ್ತಿರುವ ಕೇಂದ್ರ ಸರಕಾರಕ್ಕೆ ಸಾಕಷ್ಟು ವಿಘ್ನಗಳು ಕೂಡ ಎದುರಾಗುತ್ತಿವೆ. ಸಾವಿರಾರು ಕೋಟಿ ರೂ. ಈ ಯೋಜನೆಯ ಪರಿಷ್ಕೃತ ವಿಸ್ತ್ರತ ವರದಿ (DPR) ಯನ್ನು ರೈಲ್ವೆ ಮಂಡಳಿಗೆ ನೈರುತ್ಯ ರೈಲ್ವೆ ಇದೀಗ ಸಲ್ಲಿಸಿದೆ. ಇದರ ಬೆನ್ನಲ್ಲೇ ಈ ಬೃಹತ್ ಮೊತ್ತದ ಯೋಜನೆಗೆ ಕೇಂದ್ರ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬಯಲುಸೀಮೆ ಹಾಗೂ ಕರಾವಳಿ ಸಂಪರ್ಕಿಸಿ ವಾಣಿಜ್ಯ ವಹಿವಾಟು ವೃದ್ಧಿಸುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ನೈರುತ್ಯ ರೈಲ್ವೆಯು 17,147 ಕೋಟಿ ರೂ. ವೆಚ್ಚದ ಪರಿಷ್ಕೃತ ವಿಸ್ತ್ರತ ವರದಿ(ಡಿಪಿಆರ್) ಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ. ಹಲವು ವಿರೋಧ, ವಿವಾದಗಳ ನಡುವೆಯೇ ಈ ಬೃಹತ್ ಮೊತ್ತದ ಯೋಜನೆಗೆ ಕೇಂದ್ರ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋ ಕುತೂಹಲ ಇದೀಗ ಗರಿಗೆದರಿದೆ.
ಇದನ್ನೂ ಓದಿ: ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ
ಈಗಿರುವ ಹೊಸಪೇಟೆ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 263 ರ ಪಕ್ಕದಲ್ಲೇ ಜೋಡಿ ಮಾರ್ಗ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಮೊದಲು 595 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ವರದಿಯಲ್ಲಿ 10 ಹೆಕ್ಟೇರ್‌ನಷ್ಟು ಕಡಿಮೆಗೊಳಿಸಲಾಗಿದೆ. 164.4 ಕಿ.ಮೀ ಅಂತರದ ಈ ಮಾರ್ಗದಲ್ಲಿ 97 ಕಿ.ಮೀ. ಮಾರ್ಗ ಅರಣ್ಯದಲ್ಲಿದೆ. ಅದರಲ್ಲಿಯೂ 46.57 ಕಿ.ಮೀ. ಅಂತರದಲ್ಲಿ 57 ಸುರಂಗ ನಿರ್ಮಿಸಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಸುರಂಗಕ್ಕಾಗಿ ಯಲ್ಲಾಪುರ- ಸುಂಕಸಾಳವರೆಗಿನ 55 ಕಿ.ಮೀ. ದೂರದ ಘಟ್ಟ ಪ್ರದೇಶದಲ್ಲಿ ಬೆಟ್ಟವನ್ನು ಕೊರೆಯಬೇಕಾಗುತ್ತದೆ. ಈ ವೇಳೆ ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶ ಹಾಗೂ ಹೊಂಡಗಳು ಬರುತ್ತಿದ್ದು, ಒಟ್ಟು 13.89 ಕಿ.ಮೀ ಮೇಲ್ಸೇತುವೆ ನಿರ್ಮಿಸಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಹುಬ್ಬಳ್ಳಿ-ಯಲ್ಲಾಪುರ ನಡುವೆ 75 ಕಿ.ಮೀ. ಬಯಲು ಪ್ರದೇಶ, ಸುಂಕಸಾಳದಿಂದ ಅಂಕೋಲಾವರೆಗೆ ಗುಡ್ಡಗಾಡು ಪ್ರದೇಶ ಇದೆ ಎಂದು ತಿಳಿಸಲಾಗಿದೆ.
ಹೋರಾಟಗಾರ ಲಕ್ಷ್ಮಣ ಬಕಾಯಿ ಹೇಳಿದ್ದಿಷ್ಟು
ಯೋಜನೆಗೆ ಒಟ್ಟು 995 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಇದರಲ್ಲಿ 585 ಹೆಕ್ಟೇರ್ ಅರಣ್ಯ, 184 ಹೆಕ್ಟೇರ್ ನೀರಾವರಿ ಭೂಮಿ ಹಾಗೂ 185 ಹೆಕ್ಟೇರ್ ಒಣಭೂಮಿ, 1.40 ಹೆಕ್ಟೇರ್ ನಗರ ಪ್ರದೇಶ ಒಳಗೊಳ್ಳಲಿದೆ. ಆದರೆ ಇದೀಗ ದೊಡ್ಡ ಪ್ರಶ್ನೆ ಎದುರಾಗಿದ್ದು ಅರಣ್ಯದ ನಡುವಿನಿಂದ ಈ ಮಾರ್ಗ ಹೋದರೆ, ಅಲ್ಲಿನ ಪ್ರಾಣಿ-ಪಕ್ಷಿ ಸಂಕುಲಕ್ಕೆ ದೊಡ್ಡ ಸಮಸ್ಯೆ ಎದುರಾಗುತ್ತೆ ಎಂದು ಹೋರಾಟಗಾರ ಲಕ್ಷ್ಮಣ ಬಕಾಯಿ ಹೇಳಿದ್ದಾರೆ.
ಒಂದು ವೇಳೆ ಈ ರೈಲ್ವೆ ಮಾರ್ಗ ಶುರುವಾದರೆ, ಇದರ ಮೂಲಕ ಕಲ್ಲಿದ್ದಲು, ಕಬ್ಬಿಣದ ಅದಿರು, ಆಹಾರ ಧಾನ್ಯ ಮೊದಲಾದ ಸರಕು ಸಾಗಿಸಬಹುದಾಗಿದೆ. ಕರಾವಳಿ ಬಂದರುಗಳಿಂದ ರಫ್ತು ವಹಿವಾಟು ಹೆಚ್ಚಿಸಲು ಹಾಗೂ ಪ್ರವಾಸೋದ್ಯಮಕ್ಕೆ ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಯೋಜನೆಯನ್ನು ಕರ್ನಾಟಕ ಸರಕಾರ ಹಾಗೂ ರೈಲ್ವೆ ಇಲಾಖೆಯಿಂದ 50:50 ಅನುಪಾತದಲ್ಲಿ ಅನುಷ್ಠಾನಗೊಳಿಸಬೇಕೋ ಅಥವಾ ರೈಲ್ವೆ ಸಚಿವಾಲಯವೇ ಕಾರ್ಯಗತಗೊಳಿಸಬೇಕೋ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಯೋಜನಾ ಪ್ರದೇಶದಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ಪರಿಸರವಾದಿಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ವನ್ಯಜೀವಿ ಮಂಡಳಿಯ ತಂಡ ಜನವರಿಯಲ್ಲಿ ಖುದ್ದು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿದೆ ಎಂದು ಹೇಳಲಾಗಿದೆ.
ಈ ಯೋಜನೆಗೆ 1999ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಆರಂಭವಾಗಿ ಈಗಾಗಲೇ ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಸುಮಾರು 34 ಕಿ.ಮೀ ಮಾರ್ಗವನ್ನು ಈಗಾಗಲೇ ನಿರ್ಮಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಆ ಕಾಲದಲ್ಲಿ ಈ ಯೋಜನೆಗೆ 494 ಕೋಟಿ ರೂ. ವೆಚ್ಚವಾಗುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ ಅದು ಇವತ್ತು 17 ಸಾವಿರ ಕೋಟಿಯನ್ನು ದಾಟುತ್ತಿದೆ.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗೆ ಸಂಬಂಧಿಸಿ ಪರಿಷ್ಕೃತ ಡಿಪಿಆರ್ ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಿದೆ. ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 595 ಹೆಕ್ಟೇರ್‌ನಲ್ಲಿ 10 ಹೆಕ್ಟೇರ್ ಅರಣ್ಯ ಕಡಿಮೆಗೊಳಿಸಲಾಗಿದ್ದು, ಜೋಡಿ ಮಾರ್ಗದ ಪ್ರಸ್ತಾಪವಿದೆ. ಡಿಪಿಆರ್‌ಗೆ ಮಂಡಳಿ ಅನುಮೋದನೆ ನೀಡಿದಲ್ಲಿ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.
ಇದನ್ನೂ ಓದಿ: ಅಕಾಲಿಕ ಮಳೆಯಿಂದ ಧಾರವಾಡದ ಮಾವು ಬೆಳೆಗಾರರಿಗೆ ಅಪಾರ ನಷ್ಟ; ಸಂಕಷ್ಟದಲ್ಲಿ ರೈತರು
ಸುಮಾರು ಮೂರು ದಶಕಗಳ ಕನಸಿಗೆ ಸಾಕಷ್ಟು ಪರ-ವಿರೋಧ ವ್ಯಕ್ತವಾಗುತ್ತಲೇ ಇದೆ. ಒಂದು ಕಡೆ ಪಶ್ಚಿಮಘಟ್ಟದ ಜೀವವೈವಿಧ್ಯ, ಮತ್ತೊಂದು ಕಡೆ ವನ್ಯಮೃಗಗಳ ರಕ್ಷಣೆಯ ಹೊಣೆಯ ಜೊತೆಗೆ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆಯೂ ಯೋಚಿಸಬೇಕಾದ ಅವಶ್ಯಕತೆ ಇದೆ. ಈ ಯೋಜನೆ ಜಾರಿಯಾದರೆ ಕರಾವಳಿ ಭಾಗದ ಜನರಿಗೆ ಸಾಕಷ್ಟು ಅನುಕೂಲವೇನೋ ಆಗುತ್ತೆ. ಆದರೆ ಅದರಿಂದ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳ ಬಗ್ಗೆಇರುವ ಆತಂಕವನ್ನು ಖಂಡಿತವಾಗಿಯೂ ತಳ್ಳಿ ಹಾಕುವಂತಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:02 pm, Sun, 13 April 25