Dharwad road accident ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಾವಿನ ರಸ್ತೆಯ ಅಟ್ಟಹಾಸ; ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು?

Dharwad road accident ಅವಳಿ ನಗರಕ್ಕೆ ಕೊಡಬೇಕಾಗಿರೋ ಪ್ರಾಶಸ್ತ್ಯವನ್ನು ಯಾವ ಸರ್ಕಾರಗಳೂ ಕೊಡುತ್ತಿಲ್ಲ ಅನ್ನುವ ಅಸಮಾಧಾನ ಹುಬ್ಬಳ್ಳಿ-ಧಾರವಾಡ ನಗರಗಳ ಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಲ್ಲಿ ಸಣ್ಣ ಕೆಲಸವೂ ದೊಡ್ಡ ಗುಡ್ಡವಾಗಿ ಪರಿಣಮಿಸಿಬಿಡುತ್ತದೆ.

  • ನರಸಿಂಹಮೂರ್ತಿ ಪ್ಯಾಟಿ
  • Published On - 8:16 AM, 18 Jan 2021
Dharwad road accident ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಾವಿನ ರಸ್ತೆಯ ಅಟ್ಟಹಾಸ; ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು?
ಹುಬ್ಬಳ್ಳಿ-ಧಾರವಾಡ ನಡುವಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನ ದಟ್ಟಣೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಅಂದರೆ ಅದೇಕೋ ಸರ್ಕಾರಗಳಿಗೆ ಅಸಡ್ಡೆ ಎನ್ನುವ ಆರೋಪ ತುಂಬಾ ಹಳೆಯದ್ದು. ಇಂದಿಗೂ ಕೂಡ ಅನೇಕ ಪ್ರಕರಣಗಳಲ್ಲಿ ಈ ಆರೋಪಕ್ಕೆ ಪುಷ್ಟಿ ಸಿಗುತ್ತಲೇ ಇರುತ್ತವೆ. ಅವಳಿ ನಗರಕ್ಕೆ ಕೊಡಬೇಕಾಗಿರೋ ಪ್ರಾಶಸ್ತ್ಯವನ್ನು ಯಾವ ಸರ್ಕಾರಗಳೂ ಕೊಡುತ್ತಿಲ್ಲ ಅನ್ನುವ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಲ್ಲಿ ಸಣ್ಣ ಕೆಲಸವೂ ದೊಡ್ಡ ಗುಡ್ಡವಾಗಿ ಪರಿಣಮಿಸಿಬಿಡುತ್ತದೆ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ತವರು ಜಿಲ್ಲೆ ಧಾರವಾಡ ಆಗಿದ್ದರೂ ಇಂದಿಗೂ ಮಲತಾಯಿ ಧೋರಣೆಯಿಂದ ಬಳಲುತ್ತಲೇ ಇರುವುದು ಅನೇಕ ಬಾರಿ ಕಂಡು ಬಂದಿದೆ. ಇಂಥ ಆರೋಪಗಳ ಮಧ್ಯೆ ಅವಳಿ ನಗರದ ಹೊರಭಾಗದ ರಾಷ್ಟ್ರೀಯ ಹೆದ್ದಾರಿ 4 ರ ಟೋಲ್ ರಸ್ತೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. ಕಳೆದ ಹಲವಾರು ವರ್ಷಗಳಿಂದ ನೂರಾರು ಅಮಾಯಕರ ಜೀವವನ್ನು ನುಂಗಿ ಹಾಕಿರುವ ಈ ರಸ್ತೆಯ ವಿಸ್ತರಣೆಗೆ ಇದೀಗ ದೊಡ್ಡಮಟ್ಟದಲ್ಲಿ ದನಿ ಎದ್ದಿದೆ. ಇದಕ್ಕೆ ಕಾರಣ ಇತ್ತೀಚಿಗೆ ನಡೆದ ಭೀಕರ ಅಪಘಾತ.

1999ರಲ್ಲಿ ಆರಂಭವಾದ ರಸ್ತೆ; ಸಾವಿನ ರಸ್ತೆಯಾಗಿ ಬದಲಾಗಿ ಹೋಯಿತು
ಬೆಂಗಳೂರಿನಿಂದ ಪುಣಾದವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-4 ಬಹುತೇಕ ಕಡೆಗಳಲ್ಲಿ ಚತುಷ್ಪಥ ಹಾಗೂ ಕೆಲವು ಕಡೆಗಳಲ್ಲಿ ಷಟ್ಪಥದ ರಸ್ತೆಯಾಗಿದೆ. ಆದರೆ ಹುಬ್ಬಳ್ಳಿ-ಧಾರವಾಡ ನಡುವೆ ಮಾತ್ರ ದ್ವಿಪಥ ಇದೆ. ಇದೇ ಒಟ್ಟಾರೆ ಸಮಸ್ಯೆಯ ಮೂಲ. ಹುಬ್ಬಳ್ಳಿಯ ಗಬ್ಬೂರು ಕ್ರಾಸ್​ನಿಂದ ಧಾರವಾಡದ ನರೇಂದ್ರ ಬೈಪಾಸ್​ವರೆಗಿನ ಸುಮಾರು 26 ಕಿ.ಮೀ. ರಸ್ತೆ ಅತ್ಯಂತ ಕಿರಿದಾಗಿದ್ದು, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ. ವರ್ಷದಲ್ಲಿ ಹಲವಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಹಲವಾರು ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಹಾಗಂತ, ಈ ಬಗ್ಗೆ ರಸ್ತೆ ನಿರ್ಮಾಣ ಮಾಡಿ, ಇದೀಗ ನಿರ್ವಹಣೆಯ ಹೆಸರಿನಲ್ಲಿ ಟೋಲ್ ಸಂಗ್ರಹಿಸುತ್ತಿರುವ ಅಶೋಕ ಖೇಣಿ ಒಡೆತನದ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ಇಲ್ಲಿ ಎಷ್ಟೇ ಅಪಘಾತಗಳಾಗಲಿ, ಎಷ್ಟೇ ಪ್ರಾಣಹಾನಿಯಾಗಲಿ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಅನ್ನುವಂತೆ ವರ್ತಿಸುತ್ತಿರುವ ಈ ಸಂಸ್ಥೆಯ ಅಧಿಕಾರಿಗಳು, ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಲೇ ಇಲ್ಲ ಅನ್ನುವುದು ಸ್ಥಳೀಯರ ಆರೋಪ.

ಒಟ್ಟು 25 ವರ್ಷಗಳ ಒಪ್ಪಂದ; ಒಪ್ಪಂದ ಕೊನೆಗೊಳ್ಳುವುದು 2024ರ ಮೇ ತಿಂಗಳಲ್ಲಿ
1999 ರಲ್ಲಿ ಸಂಚಾರಕ್ಕೆ ಅಣಿಯಾಗಿರುವ ಈ ರಸ್ತೆಯಲ್ಲಿ, ಆರಂಭದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತಿರಲಿಲ್ಲ. ಆದರೆ ಸಂಚಾರ ಆರಂಭವಾಗಿ ಸುಮಾರು ಹತ್ತು ವರ್ಷಗಳ ನಂತರ ವಾಹನಗಳ ದಟ್ಟಣೆ ಹೆಚ್ಚಾಯಿತು. ಕಳೆದ ಹತ್ತು ವರ್ಷಗಳಿಂದಂತೂ ಈ ರಸ್ತೆಯಲ್ಲಿ ಪ್ರಯಾಣ ಮಾಡೋದೇ ದೊಡ್ಡ ಸರ್ಕಸ್ ಅನ್ನಿಸುತ್ತಿದೆ. ಏಕೆಂದರೆ ರಸ್ತೆ ಕಿರಿದಾಗಿರುವುದು ಒಂದು ಕಡೆಯಾದರೆ, ಏರಿಳಿತಗಳಿಂದ ಕೂಡಿರೋ ಪ್ರದೇಶದಲ್ಲಿ ಈ ರಸ್ತೆ ನಿರ್ಮಾಣವಾಗಿರುವುದರಿಂದ ಭಾರ ಹೊತ್ತ ಲಾರಿಗಳು ನಿಧಾನವಾಗಿ ಸಾಗುವ ಸಮಸ್ಯೆ ಮತ್ತೊಂದು ಕಡೆ. ಇಲ್ಲಿ ನಡೆದ ಬಹುತೇಕ ಅಪಘಾತಗಳು ವಾಹನಗಳನ್ನು ಹಿಂದಿಕ್ಕಿ ಮುಂದೆ ಸಾಗಲು ಹೋದಾಗ ಸಂಭವಿಸಿದವುಗಳು. ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್​ನ ಅವಧಿ ಮೇ-25, 2024 ಕ್ಕೆ ಮುಕ್ತಾಯವಾಗಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಭೀಕರ ಅಪಘಾತ ಹಾಗೂ ಸಾವಿನ ಪ್ರಮಾಣವನ್ನು ನೋಡಿದರೆ ಇನ್ನು ನಾಲ್ಕು ವರ್ಷಗಳ ಕಾಲ ಅದೇನು ಕಾದಿದೆಯೋ ಅನ್ನುವ ಆತಂಕ ಎದುರಾಗುತ್ತದೆ.

ಇದನ್ನೂ ಓದಿ: ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು

ಖೇಣಿಯೊಂದಿಗೆ ಹಲವು ಸಭೆ; ಯಾವುದೇ ತೀರ್ಮಾನಕ್ಕೆ ಬಾರದ ಸ್ಥಿತಿ
ಇತ್ತೀಚಿನ ದಿನಗಳಲ್ಲಿ ಅಪಘಾತ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ಈ ರಸ್ತೆಯ ಅಗಲೀಕರಣದ ಬಗ್ಗೆ ಸಾರ್ವಜನಿಕರಿಂದ ಒತ್ತಡ ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಅಶೋಕ ಖೇಣಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆದಿದೆಯಾದರೂ ಖೇಣಿ ಅವರ ಬೇಡಿಕೆಗೆ ಸರಕಾರ ಒಪ್ಪಿಕೊಳ್ಳುತ್ತಿಲ್ಲ ಮತ್ತು ಸರಕಾರದ ಷರತ್ತಿಗೆ ಖೇಣಿ ಒಪ್ಪುತ್ತಿಲ್ಲ ಅನ್ನುವಂತಾಗಿದೆ. ಇದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ಸಭೆಗಳು ನಡೆದರೂ ಪರಿಣಾಮ ಮಾತ್ರ ಶೂನ್ಯ. ಈ ರಸ್ತೆ ಅಗಲೀಕರಣ ಮಾಡಿ, ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಲು ಖೇಣಿ ಇಟ್ಟಿರುವ ಪ್ರಸ್ತಾಪಗಳನ್ನು ಸರಕಾರ ಒಪ್ಪಿಕೊಳ್ಳುತ್ತಿಲ್ಲ. ಒಪ್ಪಂದದ ಅಂತ್ಯಕ್ಕೆ ಇನ್ನು ಕೆಲವೇ ವರ್ಷಗಳು ಬಾಕಿ ಇವೆ. ಈ ವೇಳೆಯಲ್ಲಿ ಸರಕಾರ ಕೆಲವು ಲೆಕ್ಕಾಚಾರ ಹಾಕಿ, ಪ್ರಸ್ತಾಪವನ್ನು ಮುಂದಿಡುತ್ತಿದೆ. ಆದರೆ ಅದಕ್ಕೆ ಖೇಣಿ ಹಾಗೂ ಸಂಸ್ಥೆಯ ಅಧಿಕಾರಿಗಳು ಸುತಾರಾಂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಸರಕಾರ ಈ ಒಟ್ಟಾರೆ ರಸ್ತೆಯನ್ನು ಅಭಿವೃದ್ಧಿಗೊಳಿಸಿ, ನಿರ್ವಹಣೆಗೆ ತಮಗೆ ಒಪ್ಪಿಸಿದರೆ ಅದಕ್ಕೆ ಖೇಣಿ ಗ್ರೀನ್ ಸಿಗ್ನಲ್ ನೀಡಲು ಸಿದ್ಧರಿದ್ದಾರೆ. ಆದರೆ ಇದು ಆರ್ಥಿಕ ಹೊರೆಯಾಗುವುದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಿಂದೆ-ಮುಂದೆ ನೋಡುತ್ತಿವೆ.

ಹತ್ತು ವರ್ಷಗಳಲ್ಲಿ ನಡೆದ ಅಪಘಾತ, ಸಾವು, ನೋವಿನ ವಿವರ:
ಟಿವಿ-9 ಡಿಜಿಟಲ್ ಗೆ ಸಿಕ್ಕಿರೋ ಮಾಹಿತಿ ಪ್ರಕಾರ, 2010 ರಿಂದ 2020ರವರೆಗೆ ಇಲ್ಲಿ ಸಂಭವಿಸಿದ ಅಪಘಾತಗಳಿಂದಾಗಿ 184 ಜನರು ಮೃತಪಟ್ಟಿದ್ದರೆ, ಗಾಯಾಳುಗಳ ಸಂಖ್ಯೆ 360 ದಾಟಿದೆ. ಕಳೆದ ಹತ್ತು ವರ್ಷಗಳ ಅಪಘಾತಗಳ ಅಂಕಿ-ಅಂಶ ನೋಡಿದರೆ ಎಂಥವರೂ ಗಾಬರಿಯಾಗುತ್ತಾರೆ.

ವರ್ಷ      ಅಪಘಾತಗಳ ಸಂಖ್ಯೆ       ಮೃತರ ಸಂಖ್ಯೆ           ಗಾಯಾಳುಗಳ ಸಂಖ್ಯೆ
___________________________________________________________________

2010               40                                   19                           29

2011                43                                   10                           53

2012                64                                   25                          87

2013                65                                   25                         135

2014                35                                   12                           58

2015                36                                   21                           58

2016                43                                  18                            37

2017                34                                   09                          49

2018                19                                   17                            52

2019                10                                   13                            32

2020               39                                   15                            45
___________________________________________________________

ಒಟ್ಟು                428                       184                         360

ಇನ್ನು ಹೊಸ ವರ್ಷದ ಆರಂಭದಲ್ಲಿಯೇ ದೊಡ್ಡದೊಂದು ಅಪಘಾತ ಸಂಭವಿಸಿ ಅದರಲ್ಲಿ ದಾವಣಗೆರೆ ಮೂಲದ 11 ಜನರು ಮೃತಪಟ್ಟರೆ, ಅಂದೇ ಮತ್ತೊಂದು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜನವರಿ ತಿಂಗಳ ಅರ್ಧಕ್ಕೆ ಈ ರಸ್ತೆಯಲ್ಲಿ ಮೃತಪಟ್ಟವರ ಸಂಖ್ಯೆ 13.

ಟ್ರ್ಯಾಕ್ಟರ್, ಚಕ್ಕಡಿ, ಬೈಕ್ ಸಂಚರಿಸಲು ನಿರ್ಬಂಧ; ಆದರೆ ಅವುಗಳಿಗೆ ಬೇರೆ ದಾರಿಯೇ ಇಲ್ಲ
ಈ ರಸ್ತೆಯಲ್ಲಿ ಬೈಕ್​ಗಳ ಅಪಘಾತ ಹೆಚ್ಚು. ಅನೇಕ ಪ್ರಕರಣಗಳಲ್ಲಿ ಬೈಕ್ ಸವಾರರೇ ಮೃತಪಟ್ಟಿದ್ದಾರೆ. ಆದರೆ ಈ ರಸ್ತೆಯಲ್ಲಿ ಟ್ರ್ಯಾಕ್ಟರ್, ಚಕ್ಕಡಿ ಹಾಗೂ ಬೈಕ್​ಗಳು ಸಂಚರಿಸಲು ಅವಕಾಶವೇ ಇಲ್ಲ. ಸರಕಾರದೊಂದಿಗೆ ನಡೆದ ಒಪ್ಪಂದದ ಬೈಲಾ ಪ್ರಕಾರ ಇವುಗಳು ಇಲ್ಲಿ ಸಂಚರಿಸುವಂತಿಲ್ಲ. ಆದರೆ ಟ್ರ್ಯಾಕ್ಟರ್, ಬೈಕ್ ಹಾಗೂ ಚಕ್ಕಡಿ ಸಂಚರಿಸಲು ಬೇರೆ ವ್ಯವಸ್ಥೆಯೇ ಇಲ್ಲವಾಗಿದ್ದರಿಂದ ಅನಿವಾರ್ಯವಾಗಿ ಅವುಗಳೆಲ್ಲವೂ ಇಲ್ಲಿಂದಲೇ ಸಂಚರಿಸಬೇಕಿದೆ. ಒಪ್ಪಂದದ ಪ್ರಕಾರ ಇವುಗಳಿಗೆ ಪ್ರತ್ಯೇಕವಾಗಿ ಸರ್ವಿಸ್ ರಸ್ತೆ ನಿರ್ಮಿಸಬೇಕು ಅನ್ನುವ ಷರತ್ತು ಇತ್ತು ಎನ್ನಲಾಗಿದೆ. ಆದರೆ ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಎಷ್ಟೋ ಸಂದರ್ಭದಲ್ಲಿ ಟ್ರ್ಯಾಕ್ಟರ್, ಬೈಕ್ ಹಾಗೂ ಚಕ್ಕಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ದೊಡ್ಡ ದೊಡ್ಡ ಅಪಘಾತಗಳು ಸಂಭವಿಸಿದ್ದೂ ಉಂಟು. ಆದರೆ ಇದಕ್ಕೆ ಬೇರೆ ಪರಿಹಾರವನ್ನು ಮಾತ್ರ ಮಾಡಲಾಗಿಲ್ಲ.

ಇದನ್ನೂ ಓದಿ: ಟೆಂಪೋಗೆ ಟಿಪ್ಪರ್​ ಡಿಕ್ಕಿ: ಗೋವಾ ಪ್ರವಾಸಕ್ಕೆ ತೆರಳ್ತಿದ್ದ 11 ಮಂದಿ ಹಳೆ ವಿದ್ಯಾರ್ಥಿಗಳ ದುರ್ಮರಣ

ಅಶೋಕ ಖೇಣಿ ಅಹಂಕಾರವೇ ಇಷ್ಟೊಂದು ಸಾವಿಗೆ ಕಾರಣ; ಕೂಡಲೇ ಅವರನ್ನು ಬಂಧಿಸಿ – ದೀಪಕ್ ಚಿಂಚೋರೆ ಆಗ್ರಹ
ಜನವರಿ 15 ರಂದು ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟ ಟೆಂಪೋ ಟ್ರಾವೆಲರ್​ಗೆ ಮರಳಿನ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಪರಿಣಾಮ 11 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಯಾವಾಗ ಈ ಘಟನೆ ನಡೆಯಿತೋ ಆಗ ಜನರು ಆಕ್ರೋಶಗೊಂಡರು. ಮತ್ತೊಮ್ಮೆ ಈ ರಸ್ತೆಯ ಅಗಲೀಕರಣದ ಪ್ರಸ್ತಾಪಕ್ಕೆ ಜೀವ ಬಂತು. ಅದಾಗಲೇ ಹಲವಾರು ಬಾರಿ ಈ ರಸ್ತೆ ಅಗಲೀಕರಣದ ಸಭೆ ನಡೆದಿದ್ದರೂ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್​ನ ಮುಖ್ಯಸ್ಥ ಅಶೋಕ ಖೇಣಿ ಅಹಂಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಸಭೆಯಲ್ಲಿಯೂ ಅಶೋಕ ಖೇಣಿ ಮಾತ್ರ ಸರಕಾರದ ಯಾವುದೇ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸದೇ ಇದ್ದಿದ್ದೇ ಇಷ್ಟೊಂದು ಅನಾಹುತಗಳಾಗಲು ಕಾರಣ. ಖೇಣಿಯವರ ಅಹಂಕಾರದ ಪ್ರವೃತ್ತಿಯಿಂದಲೇ ರಸ್ತೆ ಅಗಲೀಕರಣ ಸಾಧ್ಯವಾಗದೇ ಇಷ್ಟೊಂದು ಪ್ರಮಾಣದ ಸಾವು-ನೋವುಗಳಾಗುತ್ತಿವೆ ಎಂದು ಧಾರವಾಡದ ಕಾಂಗ್ರೆಸ್ ಮುಖಂಡ ಮತ್ತು ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಹೇಳುತ್ತಾರೆ. ಜನರ ಪ್ರಾಣಕ್ಕಿಂತಲೂ ತಮ್ಮ ಅಹಂಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವ ಖೇಣಿ ಅವರನ್ನು ಸರಕಾರ ಕೂಡಲೇ ಬಂಧಿಸಿ, ಈ ರಸ್ತೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕು. ಬಳಿಕ ಅಗಲೀಕರಣ ಮಾಡಬೇಕು ಅನ್ನೋದು ದೀಪಕ್ ಅವರ ಆಗ್ರಹ.

ಇನ್ನು ಧಾರವಾಡದ ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಕೂಡ ಇದೀಗ ಈ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಹೋರಾಟವನ್ನು ಆರಂಭಿಸಿದ್ದಾರೆ. ಇಷ್ಟೊಂದು ಅಪಘಾತ ಹಾಗೂ ಸಾವು ಸಂಭವಿಸಿದರೂ ಈ ಬಗ್ಗೆ ಚಿಂತಿಸದ ಸರಕಾರ ಇದ್ದರೆಷ್ಟು, ಬಿಟ್ಟರೆಷ್ಟು ಅನ್ನುವುದು ಅವರ ಪ್ರಶ್ನೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ನಿತಿನ್ ಗಡ್ಕರಿ ಅಷ್ಟೊಂದು ಸಾಧನೆ ಮಾಡಿರೋದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಈ ರಸ್ತೆ ಕಾಣುತ್ತಿಲ್ಲವೇ ಅನ್ನುವುದು ಅವರ ಪ್ರಶ್ನೆ. ಈ ರಸ್ತೆಯಲ್ಲಿ ಎಲ್ಲ ವರ್ಗದ ಜನರು ಮೃತಪಟ್ಟಿದ್ದಾರೆ. ಈ ರಸ್ತೆ ನಿರ್ಮಾಣವಾಗಿರುವುದೇ ಪ್ರಯಾಣಿಕರ ಪ್ರಾಣವನ್ನು ತೆಗೆಯಲು ಅನ್ನುವಂತಾಗಿದೆ. ಹೀಗಾಗಿ ಈ ಸಮಸ್ಯೆ ಪರಿಹಾರಕ್ಕೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಅನ್ನುವುದು ಅವರ ಆಗ್ರಹ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆಗಳ ದುಸ್ಥಿತಿ ಬಿಟ್ಟುಬಿಡಿ, ಒಂದಾದರೂ ಸುಸಜ್ಜಿತ ಆಸ್ಪತ್ರೆ ಬೇಡವೇ?

ಜನವರಿ 15 ಘಟನೆಗೆ ಪ್ರಧಾನಿ ಮೋದಿ, ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ
ಜನವರಿ 15 ರ ಬೆಳಗಿನ ಜಾವ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಹನ್ನೊಂದು ಜನರು ಮೃತಪಟ್ಟಿದ್ದರು. ಅಂದೇ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ 298 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಫ್ಲೈ ಓವರ್ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನಡೆಯಿತು. ಈ ವೇಳೆ ದೆಹಲಿಯಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಕಾಮಗಾರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಅಲ್ಲಿಂದ ಕೆಲವೇ ಕಿ.ಮೀ. ದೂರದಲ್ಲಿ ನಡೆದಿದ್ದ ಘಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ, ಘಟನೆಗೆ ಸಂತಾಪ ವ್ಯಕ್ತಪಡಿಸಿದರು. ಮೃತ ಕುಟುಂಬದವರ ನೋವಿನಲ್ಲಿ ತಾವು ಕೂಡ ಭಾಗಿಯಾಗಿರೋದಾಗಿ ಟ್ವೀಟ್ ಮಾಡಿದರು. ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಘಟನೆಗೆ ಸಂತಾಪ ವ್ಯಕ್ತಪಡಿಸಿದರು. ಒಟ್ಟಾರೆ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದಲ್ಲದೇ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮಟ್ಟಕ್ಕೆ ತಲುಪಿತ್ತು ಅಂದರೆ ಅದರ ಪರಿಣಾಮ ಎಷ್ಟರಮಟ್ಟಿಗೆ ಆಗಿದೆ ಅನ್ನುವುದು ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಇದೀಗ ರಾಜ್ಯ ಸರಕಾರ, ಕೇಂದ್ರ ಸರಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಚಿಸಬಹುದು ಎನ್ನಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಜನವರಿ 15ರಂದು ಸಂಭವಿಸಿದ ಅಪಘಾತ

ಸಮಸ್ಯೆ ಪರಿಹಾರದ ಗಳಿಗೆ ಸಮೀಪಿಸಿದೆ: ಜನವರಿ 27 ಕ್ಕೆ ದೆಹಲಿಯಲ್ಲಿ ಸಭೆ ಆಯೋಜನೆ – ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಇನ್ನು ಈ ರಸ್ತೆ ಅಗಲೀಕರಣದ ಬಗ್ಗೆ ಧಾರವಾಡದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಕೇಳಿದರೆ, ಈ ಸಮಸ್ಯೆಯ ಪರಿಹಾರದ ಘಳಿಗೆ ಇದೀಗ ಸಮೀಪಿಸಿದೆ. ಈ ಮುಂಚಿನ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಸರಕಾರದಲ್ಲಿ ಈ ಬಗ್ಗೆ ನಿರ್ಲಕ್ಷ ವಹಿಸಲಾಗಿತ್ತು. ಅವರು ಈ ಕೆಲಸವನ್ನು ಕೇಂದ್ರ ಸರಕಾರಕ್ಕೆ ವಹಿಸಲು ಅದೇಕೋ ಇಷ್ಟಪಡಲಿಲ್ಲ. ಹೀಗಾಗಿ ಈ ಸಮಸ್ಯೆ ಹಾಗೆಯೇ ಉಳಿದಿತ್ತು. ಆದರೆ ಜನವರಿ 15 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ರಸ್ತೆ ಅಗಲೀಕರ ಯೋಜನೆಗೆ 1200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಅದನ್ನು ಅವತ್ತೇ ಘೋಷಿಸಲಾಗಿದೆ. ಅಲ್ಲದೇ ಅದಾಗಲೇ ಅಶೋಕ ಖೇಣಿಯೊಂದಿಗೆ ಸಭೆಯೂ ನಡೆದು, ಇದು ಕೊನೆಯ ಹಂತಕ್ಕೆ ಬಂದಿದೆ. ಜನವರಿ 27 ಕ್ಕೆ ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಾರಿಗೆ, ರಾಜ್ಯ ಸಾರಿಗೆ ಅಧಿಕಾರಿಗಳ ಹಾಗೂ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ. ಹೆದ್ದಾರಿ ಬದಿಯಲ್ಲಿನ ಜಮೀನು ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಇರುತ್ತದೆ. ಹೀಗಾಗಿ ರಾಜ್ಯ ಸರಕಾರ ಈ ಭೂಮಿಯನ್ನು ಕೇಂದ್ರ ಸರಕಾರದ ವಶಕ್ಕೆ ನೀಡಿದರೆ, ಕೇವಲ ಎರಡೇ ತಿಂಗಳಲ್ಲಿ ಕೆಲಸವನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಈ ಜನರಿಗೆ ರೋಗ ಕೊಡದೇ ಕಾಪಾಡೋ ದೇವ್ರೆ; ಉತ್ತರ ಕನ್ನಡ ಜಿಲ್ಲೆಗೆ ಒಂದಾದ್ರೂ ಒಳ್ಳೇ ಆಸ್ಪತ್ರೆ ಬೇಡ್ವಾ?

ಅದಾಗಲೇ ನೂರಾರು ಅಮಾಯಕ ಜೀವಗಳನ್ನು ಬಲಿ ಪಡೆದಿರೋ ಈ ರಸ್ತೆಗೆ ಇನ್ನು ಕೂಡ ಆಹುತಿ ದಾಹ ತೀರಿಲ್ಲ. ರಸ್ತೆ ಅಗಲೀಕರಣದಿಂದ ಮಾತ್ರವೇ ಈ ಆಹುತಿಯ ದಾಹ ನಿಲ್ಲಲಿದೆ. ಯಾವ್ಯಾವುದೋ ತಾಂತ್ರಿಕ ಕಾರಣಗಳಿಗಾಗಿ ಜನರು ಜೀವ ಕಳೆದುಕೊಳ್ಳಬಾರದು ಅನ್ನುವ ಸಣ್ಣ ಪರಿಜಾನವಿದ್ದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಟೋಲ್ ರಸ್ತೆಯನ್ನು ನಿರ್ವಹಿಸುತ್ತಿರೋರು ಇಷ್ಟು ದಿನ ಸುಮ್ಮನೇ ಕೂಡುತ್ತಿರಲಿಲ್ಲ. ಏನೇ ಆಗಲಿ ಇನ್ನು ಮುಂದಾದರೂ ಈ ರಸ್ತೆಗೆ ಕಾಯಕಲ್ಪ ದೊರೆತು, ಜನರು ನೆಮ್ಮದಿಯಿಂದ ಓಡಾಡುವಂತಾದರೆ ಸಾಕು.

ಬೆಂಗಳೂರಲ್ಲಿ ಹೊಂಡ ಬಿದ್ದ ರಸ್ತೆಗಳ ಫೋಟೋವನ್ನು ವಾಟ್ಸ್​ಆ್ಯಪ್​ ಮೂಲಕ ಕಳಿಸಿ; ಹೈಕೋರ್ಟ್​ ನಿಮ್ಮ ಸಹಾಯಕ್ಕೆ ಬರಲಿದೆ.. !