ಹುಬ್ಬಳ್ಳಿ ಕಿಮ್ಸ್ ಕೆಲಸಗಳ್ಳ ವೈದ್ಯರ ಪ್ರಕರಣ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ತನಿಖೆ

ಕಳೆದ ಶನಿವಾರ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ 11 ಕೆಲಸಗಳ್ಳ ವೈದ್ಯರ ವಿಚಾರಣೆ ನಡೆದಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಡಾ.ಮಹೇಶ್ ನೇತೃತ್ವದಲ್ಲಿ ವೈದ್ಯರ ವಿಚಾರಣೆ ನಡೆದಿತ್ತು. ಇಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ಪ್ರಾಂಶುಪಾಲ ಡಾ.ಈಶ್ವರ್ ಹೊಸಮನಿ, ಸಿಇಒ ರಾಜಶ್ರೀ ಜೈನಾಪುರ್‌ರಿಂದ ಮಾಹಿತಿ ಸಂಗ್ರಹಿಸಲಾಗುತ್ತೆ.

ಹುಬ್ಬಳ್ಳಿ ಕಿಮ್ಸ್ ಕೆಲಸಗಳ್ಳ ವೈದ್ಯರ ಪ್ರಕರಣ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ತನಿಖೆ
ಕಿಮ್ಸ್ ಆಸ್ಪತ್ರೆ

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆ ವೈದ್ಯರ ಕೆಲಸಗಳ್ಳತನ ಬಯಲು ಕೇಸ್ಗೆ ಸಂಬಂಧಿಸಿ ತನಿಖೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದೆ. ಇಂದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ನಿರ್ದೇಶಕ, ಪ್ರಾಂಶುಪಾಲ, ಮುಖ್ಯ ಆಡಳಿತಾಧಿಕಾರಿಯಿಂದ ಇಲಾಖಾ ನಿರ್ದೇಶಕ ಗಿರೀಶ್ ಮಾಹಿತಿ ಪಡೆಯಲಿದ್ದಾರೆ.

ಕಳೆದ ಶನಿವಾರ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ 11 ಕೆಲಸಗಳ್ಳ ವೈದ್ಯರ ವಿಚಾರಣೆ ನಡೆದಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಡಾ.ಮಹೇಶ್ ನೇತೃತ್ವದಲ್ಲಿ ವೈದ್ಯರ ವಿಚಾರಣೆ ನಡೆದಿತ್ತು. ಇಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ಪ್ರಾಂಶುಪಾಲ ಡಾ.ಈಶ್ವರ್ ಹೊಸಮನಿ, ಸಿಇಒ ರಾಜಶ್ರೀ ಜೈನಾಪುರ್‌ರಿಂದ ಮಾಹಿತಿ ಸಂಗ್ರಹಿಸಲಾಗುತ್ತೆ.

ತಪ್ಪಿತಸ್ಥರ ರಕ್ಷಣೆಗೆ ಆಸ್ಪತ್ರೆ ನಿರ್ದೇಶಕ ಉಪಾಯ ಶಂಕೆ
ಕಿಮ್ಸ್‌ ಕೆಲಸಗಳ್ಳರ ಪ್ರಕರಣ ಮುಚ್ಚಿಹಾಕಲು ಸಂಸ್ಥೆಯ ನಿರ್ದೇಶಕರಿಂದಲೇ ಪ್ರಯತ್ನವಾಗಿದೆ ಎಂಬ ವಿಚಾರ ತಿಳಿದುಬಂದಿದೆ. 11 ವೈದ್ಯರ ಪೈಕಿ ಕೆಲವರ ವಿರುದ್ಧ ಮಾತ್ರ ಕ್ರಮ ಕೈಗೊಂಡು, ಉಳಿದ ತಪ್ಪಿತಸ್ಥರ ರಕ್ಷಣೆಗೆ ನಿರ್ದೇಶಕ ಪ್ಲ್ಯಾನ್ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಿಮ್ಸ್ ನಿರ್ದೇಶಕರು ನೀಡಿದ ವರದಿಯಲ್ಲಿ ತಪ್ಪಿತಸ್ಥರ ರಕ್ಷಣೆ ಮಾಡಲಾಗಿದೆ. ಕೇವಲ 3-4 ವೈದ್ಯರ ವಿರುದ್ಧ ಮಾತ್ರ ವರದಿ ಸಲ್ಲಿಕೆ. ಉಳಿದವರ ಬಗ್ಗೆ ಸಕಾರಾತ್ಮಕ ವರದಿ ನೀಡಿರುವ ನಿರ್ದೇಶಕ ಎಂದು ಅನುಮಾನ ಮೂಡಿದೆ.

3 ವಿಭಾಗಗಳ ಹೆಚ್ಒಡಿಗಳ ರಕ್ಷಣೆಗಾಗಿ ನಿರ್ದೇಶಕರು ಯತ್ನಿಸಿದ್ದಾರೆ. ಡಾ. ನರೇಂದ್ರ ಹಿರೇಗೌಡರ್, ಡಾ. ದತ್ತಾತ್ರೇಯ ಬಂಟ್ ಸೇರಿದಂತೆ ಕೆಲವು ವೈದ್ಯರ ಪರ ಕಿಮ್ಸ್ ನಿರ್ದೇಶಕರು ಇದ್ದಾರೆ. ವರದಿ ಕೊಡುವಲ್ಲೂ ತಾರತಮ್ಯ ಮಾಡಿದ್ದಾರೆ ಎಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಾಮಲಿಂಗಪ್ಪ ಮೇಲೆ ಅನುಮಾನ ಮೂಡಿದೆ.
ಈ ಬಗ್ಗೆ ಸಾಕ್ಷ್ಯ ಸಮೇತ ಟಿವಿ9 ವರದಿ ಮಾಡಿತ್ತು. ಕೆಲಸಗಳ್ಳರ ಬಗ್ಗೆ ಟಿವಿ9 1 ವಾರದ ಕಂಪ್ಲೀಟ್ ಮಾಹಿತಿ ನೀಡಿತ್ತು. ವಾರ ಪೂರ್ತಿ ಕೆಲಸಗಳ್ಳರನ್ನ ಫಾಲೋ ಮಾಡಿ ಮಾಹಿತಿ ಸಂಗ್ರಹ ಮಾಡಲಾಗಿತ್ತು. ಎಲ್ಲ ಸಾಕ್ಷ್ಯಗಳನ್ನು ಟಿವಿ9 ರಹಸ್ಯ ಕಾರ್ಯಾಚರಣೆ ಬಹಿರಂಗಪಡಿಸಿತ್ತು.

ಕೆಲಸಗಳ್ಳ ವೈದ್ಯರ ವಿರುದ್ಧ ನಾನು ವರದಿಯನ್ನು ನೀಡಿದ್ದೇನೆ. ವರದಿಯ ಬಗ್ಗೆ ಬಹಿರಂಗ ಪಡಿಸುವುದಕ್ಕೆ ಆಗುವುದಿಲ್ಲ ಎಂದು ಟಿವಿ9ಗೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಹೇಳಿಕೆ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ವೈದ್ಯರು ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನು ನಾವು ಪರಿಗಣಿಸಬೇಕಾದ ಅಗತ್ಯವಿದೆ. ಎಲ್ಲ ಮಾಹಿತಿ ಆಧರಿಸಿ ನಾನು ವರದಿಯನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಕೊರೊನಾ ಹಿನ್ನೆಲೆ ಹಾಜರಾತಿ ಬಗ್ಗೆ ನಾನು ನಿಗಾ ವಹಿಸಿಲ್ಲ. ವೈದ್ಯರ ಹಾಜರಾತಿಗೆ ನಾವು ಪ್ರಾಮುಖ್ಯತೆ ಕೊಡಲು ಆಗಲ್ಲ. ವೈದ್ಯರ ಕೆಲಸದ ಬಗ್ಗೆಯೂ ನಾವು ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರ ಕಳ್ಳಾಟ ಪ್ರಕರಣ; ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ