ಖ್ಯಾತ ಸಂಶೋಧಕರನ್ನು ಮರೆತೇ ಹೋದ ಸರ್ಕಾರ; ಡಾ.ಎಂ.ಎಂ.ಕಲಬುರ್ಗಿ ಹೆಸರಿನ ಸಂಶೋಧನಾ ಕೇಂದ್ರ ಸ್ಥಾಪನೆಗೆ ನಿರ್ಲಕ್ಷ್ಯ

ಸರ್ಕಾರ ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಆರಂಭಿಸುವುದಾಗಿ ಘೋಷಣೆ ಮಾಡಿತು. ಸರ್ಕಾರ ಘೋಷಣೆಯನ್ನೂ ಮಾಡಿ, ಅದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದರೂ ಅನುದಾನ ಬಿಡುಗಡೆಗೆ ಮಾತ್ರ ವಿಳಂಬ ನೀತಿ ಅನುಸರಿಸುತ್ತಿದೆ.

  • ನರಸಿಂಹಮೂರ್ತಿ ಪ್ಯಾಟಿ
  • Published On - 15:05 PM, 13 Apr 2021
ಖ್ಯಾತ ಸಂಶೋಧಕರನ್ನು ಮರೆತೇ ಹೋದ ಸರ್ಕಾರ; ಡಾ.ಎಂ.ಎಂ.ಕಲಬುರ್ಗಿ ಹೆಸರಿನ ಸಂಶೋಧನಾ ಕೇಂದ್ರ ಸ್ಥಾಪನೆಗೆ ನಿರ್ಲಕ್ಷ್ಯ
ಕರ್ನಾಟಕ ವಿಶ್ವವಿದ್ಯಾಲಯ

ಧಾರವಾಡ: ಹಿರಿಯ ಸಂಶೋಧಕ ಹಾಗೂ ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ವರ್ಷಗಳೇ ಉರುಳಿವೆ. ಅವರ ಸಾವು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಇದೀಗ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯೂ ನಡೆದಿದೆ. ಆದರೆ ಹತ್ಯೆ ನಡೆದಾಗ ರಾಜ್ಯ ಸರ್ಕಾರ ಡಾ. ಎಂ.ಎಂ. ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸೋದಾಗಿ ಘೋಷಣೆ ಮಾಡಿತ್ತು. ಆದರೆ ಇದೀಗ ಸರ್ಕಾರ ಇದನ್ನು ಸಂಪೂರ್ಣವಾಗಿ ಮರೆತೇ ಹೋಗಿದೆ. ಏಕೆಂದರೆ ಘಟನೆ ನಡೆದು ಇಷ್ಟು ಕಾಲವಾದರೂ ರಾಜ್ಯ ಸರ್ಕಾರ ಈ ಬಗ್ಗೆ ಕೊಂಚವೂ ಆಸಕ್ತಿಯನ್ನು ತೋರಿಸುತ್ತಿಲ್ಲ.

ಸರ್ಕಾರ ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಘೋಷಣೆ ಮಾಡಿತು. ಸರ್ಕಾರ ಘೋಷಣೆಯನ್ನೂ ಮಾಡಿ, ಅದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದರೂ ಅನುದಾನ ಬಿಡುಗಡೆಗೆ ಮಾತ್ರ ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ ಇಷ್ಟೊತ್ತಿಗಾಗಲೇ ಸ್ಥಾಪನೆಯಾಗಬೇಕಿದ್ದ ಕೇಂದ್ರಕ್ಕೆ ಗ್ರಹಣ ಹಿಡಿದಂತಾಗಿದೆ.

ಕೇಂದ್ರ ಸ್ಥಾಪಿಸಲು 2 ಕೋಟಿ ರೂಪಾಯಿ ಅನುದಾನ ಮೀಸಲು
ಸಂಶೋಧನಾ ಕ್ಷೇತ್ರದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅಪಾರ ಸಾಧನೆ ಮಾಡಿದ್ದಾರೆ. ಅವರ ಹತ್ಯೆಯಾದ ಕೆಲ ದಿನಗಳ ಬಳಿಕ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಸಾಹಿತಿಗಳು, ಸ್ಥಳೀಯರು ಮನವಿ ಮಾಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ನೇ ಸಾಲಿನ ಆಯವ್ಯಯದಲ್ಲಿ ಧಾರವಾಡ ವಿಶ್ವ ವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು 2 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದರು. ಸರ್ಕಾರದ ಆದೇಶದಂತೆ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಲ್ಲಿಸಿದ ಸವಿವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಸಂಶೋಧನಾ ಕೇಂದ್ರ ಸ್ಥಾಪನೆಗೆ 2 ಕೋಟಿ ರೂಪಾಯಿ ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಿರುವುದಾಗಿಯೂ 2016ರ ಜೂನ್‌ನಲ್ಲಿಯೇ ಆದೇಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ಕೇಂದ್ರದ ಯೋಜನೆ, ರೂಪು-ರೇಷೆಗಳನ್ನೂ ಕರ್ನಾಟಕ ವಿಶ್ವವಿದ್ಯಾಲಯ ಕೆಲ ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಇದುವರೆಗೂ ಅನುದಾನ ಮಾತ್ರ ವಿಶ್ವವಿದ್ಯಾಲಯದ ಕೈ ಸೇರಿಲ್ಲ. ಇದರಿಂದ ಸಂಶೋಧನಾ ಕೇಂದ್ರ ಕೇವಲ ಪತ್ರ ವ್ಯವಹಾರಗಳಲ್ಲಿ ಮಾತ್ರವೇ ನಡೆದಿದೆ. ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟು ಐದು ವರ್ಷಗಳಾದರೂ ಬಜೆಟ್ ಕಾರ್ಯ ಯೋಜನೆಯಲ್ಲಿ ಇನ್ನು ಕೂಡ ಇದು ಅಸ್ತಿತ್ವಕ್ಕೆ ಬಂದಿಲ್ಲ.

ಸಂಶೋಧನಾ ಕೇಂದ್ರದ ಯೋಜನೆಗಳು ಏನೇನು?
ಕಲಬುರ್ಗಿಯವರ ವಿಚಾರಧಾರೆಗಳನ್ನು ಸಮಾಜದಲ್ಲಿ ಪ್ರಸಾರ ಮಾಡುವುದು, ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದು, ಅತ್ಯುತ್ತಮ ಸಂಶೋಧನಾ ಕೃತಿಯೊಂದಕ್ಕೆ ಪ್ರತಿ ವರ್ಷ ನಗದು ಸಹಿತ ಪ್ರಶಸ್ತಿ ನೀಡುವಂತಹ ಅನೇಕ ಯೋಜನೆಗಳನ್ನು ಈ ಕೇಂದ್ರದ ಮೂಲಕ ಮಾಡುವ ಯೋಜನೆ ಇದೆ. ಕೇಂದ್ರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಲಹಾ ಮಂಡಳಿ ನೇಮಕ, ಕಲಬುರ್ಗಿಯವರ ಸಮಗ್ರ ಸಾಹಿತ್ಯದ ಅಧ್ಯಯನ, ಪ್ರಸಾರ, ಪ್ರಕಟಣೆ ಕಾರ್ಯ, ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ಕಮ್ಮಟ, ವಿಚಾರ ಸಂಕಿರಣಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಇತರ ವಿಶ್ವವಿದ್ಯಾಲಯ, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸುವುದು ಸೇರಿ ಇನ್ನೂ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಕೇಂದ್ರ ಆರಂಭವಾಗದೇ ಈ ಎಲ್ಲಾ ಕೆಲಸಗಳಿಗೆ ಹಿನ್ನಡೆಯುಂಟಾಗಿದೆ.

MM Kalburgi

ಡಾ. ಎಂ.ಎಂ. ಕಲಬುರ್ಗಿ

ಗೊಂದಲದಲ್ಲಿದೆಯೇ ರಾಜ್ಯ ಸರ್ಕಾರ?
ಡಾ. ಎಂ.ಎಂ. ಕಲಬುರ್ಗಿ ಹೆಸರಲ್ಲಿ ಸಂಶೋಧನಾ ಕೇಂದ್ರ ಆರಂಭಿಸಿದರೆ ಅದು ಕೂಡ ಹತ್ತರಲ್ಲಿ ಹನ್ನೊಂದು ಆಗುತ್ತದೆ ಎನ್ನುವ ಅನುಮಾನ ಸರ್ಕಾರಕ್ಕೆ ಇದೆ ಎನ್ನಲಾಗುತ್ತಿದೆ. ಇದರಿಂದಾಗಿ ಸಮಾಜಕ್ಕೆ ಪೂರ್ಣ ಪ್ರಮಾಣದಲ್ಲಿ ಯಾವುದೇ ಅನುಕೂಲ ಆಗುವುದಿಲ್ಲ ಎನ್ನುವುದು ಕೂಡ ಸರ್ಕಾರದ ಭಾವನೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸರ್ಕಾರ ಕಲಬುರ್ಗಿ ಹೆಸರಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವುದರ ಬದಲಾಗಿ ಡಾ. ಎಂ.ಎಂ. ಕಲಬುರ್ಗಿ ಪ್ರತಿಷ್ಠಾನ ಸ್ಥಾಪಿಸಲಿ ಎಂದು ಕಲಬುರ್ಗಿಯವರ ಆಪ್ತರು ಸರ್ಕಾರಕ್ಕೆ ಮನವಿ ಸಹ ಮಾಡಿದ್ದರು. ಇದರಿಂದ ಸರ್ಕಾರ ಸಂಶೋಧನಾ ಕೇಂದ್ರಕ್ಕೆ ಅಧಿಕೃತ ಒಪ್ಪಿಗೆ ನೀಡಬೇಕೋ? ಅಥವಾ ಪ್ರತಿಷ್ಠಾನ ಸ್ಥಾಪಿಸಬೇಕೋ? ಎನ್ನುವ ಗೊಂದಲ ಸೃಷ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಲಬುರ್ಗಿ ಸಂಶೋಧನಾ ಕೇಂದ್ರಕ್ಕೆ 2016-17 ರ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟಿತ್ತು. ಆದರೆ ಇದುವರೆಗೂ ಹಣ ಮಾತ್ರ ಬಂದಿಲ್ಲ. ಈ ವಿಷಯವಾಗಿ ಸರ್ಕಾರಕ್ಕೆ ಪತ್ರವನ್ನು ಕೂಡ ಬರೆಯಲಾಗಿದೆ. ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ನಿರ್ದೇಶನ ಹಾಗೂ ಅನುದಾನ ಬಂದಿಲ್ಲ ಎಂದು ಟಿವಿ9 ಡಿಜಿಟಲ್​ಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಹೇಳಿದ್ದಾರೆ.

ಸರ್ಕಾರಗಳು ಬದಲಾದಾಗ ನೀತಿ, ಸಿದ್ಧಾಂತಗಳು ಕೂಡ ಬದಲಾಗುತ್ತವೆ ಎನ್ನುವ ಮಾತಿಗೆ ಈ ಪ್ರಕರಣವೊಂದು ಸಾಕ್ಷಿಯಾಗಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಡಾ. ಎಂ.ಎಂ. ಕಲಬುರ್ಗಿಯಂತಹ ಸಂಶೋಧಕರಿಗೆ ಗೌರವ ಸಲ್ಲಿಸುವುದಕ್ಕಾದರೂ ಸರ್ಕಾರ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕಿದೆ. ಆ ಮೂಲಕ ಹಿರಿಯ ಸಾಹಿತಿ, ಸಂಶೋಧಕನಿಗೆ ಗೌರವ ಸಲ್ಲಿಸಲಿ ಎನ್ನುವುದು ಕಲಬುರ್ಗಿ ಆಪ್ತರ ಆಶಯ.

ಇದನ್ನೂ ಓದಿ: ಗೌರಿ ಲಂಕೇಶ್, M.M.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ -ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ವಿರುದ್ಧ ಕೇಸ್‌ ದಾಖಲು

(Karnataka government has forgotten famous research center named after Dr. M.M. Kalaburgi)