ಕಿಮ್ಸ್‌ನ ನಿರ್ದೇಶಕರ ಶೋಕಾಸ್ ನೋಟಿಸ್ಗೆ ಉತ್ತರಿಸಿದ್ದು 9 ವೈದ್ಯರು, ಇನ್ನು ಇಬ್ಬರು ಬಾಕಿ

ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ನೋಟಿಸ್‌ಗೆ ಉತ್ತರ ಬಂದಿದೆ. 11 ವೈದ್ಯರ ಪೈಕಿ 9 ವೈದ್ಯರಿಂದ ನೋಟಿಸ್‌ಗೆ ಉತ್ತರ ಬಂದಿದ್ದು ಡಾ.ದತ್ತಾತ್ರೇಯ ಬಂಟ್, ಡಾ.ಹಿರೇಗೌಡ ಸೇರಿ ಕಿಮ್ಸ್‌ನ ಇಬ್ಬರು ವೈದ್ಯರು ಉತ್ತರ ನೀಡಿಲ್ಲ.

ಕಿಮ್ಸ್‌ನ ನಿರ್ದೇಶಕರ ಶೋಕಾಸ್ ನೋಟಿಸ್ಗೆ ಉತ್ತರಿಸಿದ್ದು 9 ವೈದ್ಯರು, ಇನ್ನು ಇಬ್ಬರು ಬಾಕಿ

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ನ 11 ಜನ ವೈದ್ಯರು ಸರ್ಕಾರ ನೀಡೋ ಲಕ್ಷ ಲಕ್ಷ ಸಂಬಳ ಎಣಿಸಿ ಖಾಸಗಿ ಕ್ಲಿನಿಕ್ಗಳಲ್ಲಿ ಕಾರ್ಯ ನಿರ್ವಹಿಸುತ್ತಾ ತಮ್ಮ ವೃತ್ತಿಗೆ ದ್ರೋಹ ಬಗೆಯುತ್ತಿದ್ರು. ಈ ಬಗ್ಗೆ ಟಿವಿ9 ವರದಿ ಮಾಡಿದ್ದು ಎಚ್ಚೆತ್ತ ಕಿಮ್ಸ್ ನಿರ್ದೇಶಕರು 11 ವೈದ್ಯರಿಗೆ ನೋಟಿಸ್ ಜಾರಿಗೊಳಿಸಿ ತಕ್ಷಣವೇ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದ್ದರು. ಸದ್ಯ ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ನೋಟಿಸ್‌ಗೆ ಉತ್ತರ ಬಂದಿದೆ. 11 ವೈದ್ಯರ ಪೈಕಿ 9 ವೈದ್ಯರಿಂದ ನೋಟಿಸ್‌ಗೆ ಉತ್ತರ ಬಂದಿದ್ದು ಡಾ.ದತ್ತಾತ್ರೇಯ ಬಂಟ್, ಡಾ.ಹಿರೇಗೌಡ ಸೇರಿ ಕಿಮ್ಸ್‌ನ ಇಬ್ಬರು ವೈದ್ಯರು ಉತ್ತರ ನೀಡಿಲ್ಲ.

ನೋಟಿಸ್ಗೆ ವೈದ್ಯರು ನೀಡಿದ ಉತ್ತರ
ಮೇಲ್ಕಂಡ ವಿಷಯ ಹಾಗೂ ಉಲ್ಲೇಖ ಸಂಬಂಧಿಸಿದಂತೆ ದಿ-17-06-2021 ರಂದು ಮುಂಜಾನೆ 11 ಗಂಟೆಗೆ ಟಿವಿ9 ಮಾಧ್ಯಮದಲ್ಲಿ ಸಂಸ್ಥೆಯ ವೈದ್ಯರುಗಳ ರಹಸ್ಯ ಕಾರ್ಯಾಚರಣೆ ವರದಿ ಪ್ರಸಾರಗೊಂಡಿದ್ದು, ತಾವುಗಳು ಕಚೇರಿ ಅವಧಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಮಾಡಿದ ಕೂಡಲೇ ನಿಮ್ಮ ನಿಮ್ಮ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ತಮ್ಮ ಮನೆಗೆ ಹೋಗಿರುವುದು ಟಿವಿ9 ಮಾಧ್ಯಮದಲ್ಲಿ ಆರೋಪಿಸಿದ್ದರಿಂದ ಉಲ್ಲೇಖ 1ರನ್ವಯ ಕಾರಣ ಕೇಳುವ ನೋಟಿಸ್ ಜಾರಿಮಾಡಲಾಗಿದೆ ಆದರಂತೆ ವೈದ್ಯರುಗಳು ತಮ್ಮ ಲಿಖಿತ ಹೇಳಿಕೆಗಳನ್ನು ಈ ದಿನದಂದು ಸಲ್ಲಿಸಿರುತ್ತಾರೆ ಸದರಿ ವೈದ್ಯರುಗಳ ಲಿಖಿತ ವಿವರಣೆಯ ಸಾರಾಂಶ ಈ ಕೆಳಗಿನಂತಿದೆ.

1.ಡಾ.ಜಿ.ಸಿ ಪಾಟೀಲ, ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು, ಕ್ಷ- ಕಿರಣ ವಿಭಾಗ, ಕಿಮ್ಸ್ ಹುಬ್ಬಳ್ಳಿ
ಇವರು ತಮ್ಮ ಲಿಖಿತ ಹೇಳಿಕೆಯಲ್ಲಿ 01-06-2021ರಂದು ಮಧ್ಯಾಹ್ನ 2ರಿಂದ ರಾತ್ರಿ 8ಗಂಟೆಯವರೆಗೆ ಕೊವಿಡ್ ಕರ್ತವ್ಯ ನಿರ್ವಹಿಸಿ ಹಾಗೂ ಮುಂದಿನ ಅವಧಿಗೆ ಪ್ರಭಾರ ವಹಿಸಿ ಮನೆಗೆ ತೆರಳಿರುವುದಾಗಿ ತಿಳಿಸಿ, ಈ ಆರೋಪವು ತಮಗೆ ಸಂಬಂಧ ಪಟ್ಟಿರುವುದಿಲ್ಲ ಹಾಗೂ ಈ ಕುರಿತು ಸತ್ಯಾಸತ್ಯತೆಯನ್ನ ವಿಚಾರಿಸಲು ಅಭ್ಯಂತರವಿರುವುದಿಲ್ಲವೆಂದು ತಿಳಿಸಿರುತ್ತಾರೆ.

2. ಡಾ.ರವಿಂದ್ರ ಖಾಸನೀಸ್ , ಪ್ರಾಧ್ಯಾಪಕರು, ಶಿಶು ವೈದ್ಯ ವಿಭಾಗ, ಕಿಮ್ಸ್ ಹುಬ್ಬಳ್ಳಿ
ಇವರು ತಮ್ಮ ಲಿಖಿತ ಹೇಳಿಕೆಯಲ್ಲಿ ಸಂಸ್ಥೆಗೆ ಸೇರಿದಾಗಿನಿಂದಲೂ ತಾವು ನಿಷ್ಟೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿ ದಿನಾಂಕ 01-06-2021 ರಂದು ದಿನನಿತ್ಯದ ರೋಗಿಗಳನ್ನ ಉಪಚರಿಸಲು ಪರಿವೀಕ್ಷಣೆಗೆ ಹೋಗಿ ತದನಂತರ ಊಟದ ಸಮಯದಲ್ಲಿ ಖಾಸಗಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ತೆರಳಿ ಮರಳಿ ನಿಗದಿತ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಹಾಗೂ ಕೊವಿಡ್ ಮತ್ತು ತುರ್ತು ಚಿಕಿತ್ಸಾ ವಿಭಾಗದ ವೇಲ್ವಿಚಾರಣೆ ನಿರ್ವಹಿಸಿರುವುದಾಗಿ ತಿಳಿಸಿರುತ್ತಾರೆ.

3.ಡಾ.ಪಿ.ವಿ ಭಗವತ್ , ಪ್ರಾಧ್ಯಾಪಕರು , ಚರ್ಮ ಮತ್ತು ಲೈಗಿಂಕ ವಿಭಾಗದ ಕಿಮ್ಸ್ ಹುಬ್ಬಳ್ಳಿ
ಇವರು ತಮ್ಮ ಲಿಖಿತ ಹೇಳಿಕೆಯಲ್ಲಿ ಇವರು ಪ್ರತಿದಿನ ಸರಿಯಾಗಿ ಬೆಳ್ಳಗೆ 9 ಗಂಟೆಗೆ ಕಾರಿನಲ್ಲಿ ಕಾಲೇಜಿಗೆ ಬಂದು ಬೆರಳಚ್ಚು ಹಾಜರಾತಿಯನ್ನ ನೀಡಿ ತಮ್ಮ ಓಪಿಡಿಗೆ ಹೋಗಿ ಬರುತ್ತಿರುವುದು ತಮ್ಮ ದಿನಚರಿ ಆಗಿದ್ದು, ಮಾಧ್ಯಮದವರು ಕಾರಿನಲ್ಲಿ ಕುಳಿತಿರುವುದನ್ನ ಮಾತ್ರ ಪ್ರಸಾರ ಮಾಡಿರುತ್ತಾರೆ. ತಮ್ಮ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾಗಿದೆ ಹಾಗೂ ಈ ಸಂಸ್ಥೆಯಲ್ಲಿ ನಾನು ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತೇನೆ. ಮುಂದುವರೆದು ನನಗೆ ವಹಿಸಿದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದು ಹಾಗೂ ನನ್ನ ಮೇಲಿನ ಆರೋಪಗಳಲ್ಲಿ ಹುರುಳಿಲ್ಲವೆಂದು ತಿಳಿಸಿರುತ್ತಾರೆ.

4. ಡಾ. ಪ್ರಾಕಾಶ ವಾರಿ, ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು, ಚಿಕ್ಕ ಮಕ್ಕಳ ವಿಭಾಗ
30-05-2021 ರಿಂದ 3-06-2021 ದವರೆಗೆ 301 ರ ಸಾರಿ ವಾರ್ಡ್ಗೆ ನಿಯೋಜಿಸಿದ್ದು ದಿ 01-06-2021 ರಂದು ತಮ್ಮ ಕರ್ತವ್ಯದ ಅವಧಿ ಮಧ್ಯನ್ಹ 2 ರಿಂದ 8 ಗಂಟೆಯವರೆಗೆ ಇತ್ತು. ಮುಂಜಾನೆ 9.20 ರಿಂದ 12ಗಂಟೆವರಗೆ ವಿಭಾಗದ ಆಡಳಿತ ಕಾರ್ಯಗಳನ್ನು ನಿರ್ವಹಿಸಿರುವುದಾಗಿ ತಿಳಿಸಿರುತ್ತಾರೆ. ಮತ್ತು ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ದೈನಂದಿನ ಕರ್ತವ್ಯದ ಅವದಿ ಮುಗಿದ ನಂತರ ಹೋಗಿರುತ್ತನೆ. ನಾನು ಕರ್ತವ್ಯ ನಿರ್ವಹಿಸಿದ ಅವದಿಯನ್ನು ತಾವು ಸಿಸಿ ಕ್ಯಾಮರಾ ದೇಶ್ಯಗಳನ್ನು ಮತ್ತು ಹಾಜರಾತಿ ದಾಖಲಾತಿಗಳನ್ನು ಪರೀಶಿಲಿಸ ಬಹುದಾಗಿದೆಯೆಂದು ತಿಳಿಸಿರುತ್ತಾರೆ. ಹಾಗೂ 301 ವಾರ್ಡನಲ್ಲಿ ಶಿಶುಗಳನ್ನು ಮತ್ತು ಕೊವಿಡ್ ಸೋಂಕಿತ ತಾಯಂದಿರು ಗಳನ್ನು ನಿರಂತರವಾಗಿ ಉಪಚರಿಸಿರುತ್ತೆನೆ. ಹಾಗೂ ಕರ್ತವ್ಯದ ಅವಧಿಯಲ್ಲಿ ಸಿಎಮ್ ಇ/ ವರ್ಕಶಾಪ್ ಕಾರ್ಯಗಳನ್ನು ನಡೆಸಿರುತ್ತೆನೆ ಈ ಕಾರ್ಯಕ್ರಮಗಳಿಂದ ಸ್ನಾತಕೋತ್ತರ ವೈದ್ಯರುಗಳಿಗೆ ಉಪಯೋಗವಾಗಿರುತ್ತದೆ ಎಂದು ತಿಳಿಸಿರುತ್ತಾರೆ.

5. ಡಾ. ವೆಂಕಟೇಶ್ ಮೂಲಿಮನಿ, ಪ್ರಾಧ್ಯಾಪಕರು ಏಲುವು ಕೀಲು ವಿಭಾಗ ಹುಬ್ಬಳ್ಳಿ
ಇವರ ಲಿಖಿತ ಹೇಳಿಕೆಯಲ್ಲಿ ದಿನಾಂಕ 1-6 -2021 ರಂದು ಕಿಮ್ಸ್ ಆವರಣದಲ್ಲಿ ಹಾಗೂ ಓಪಿಡಿಯಲ್ಲಿ ಮುಂಜಾನೆ 12 ಗಂಟೆಯವರೆಗೂ ಹಾಗೂ ಮಧ್ಯಹ್ನ
2ಗಂಟೆಗೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸೆಮಿನಾರ್ ಹಾಲನಲ್ಲಿ ಆನ್ಲೈನ್ ಕ್ಲಾಸ್ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಸೆಮಿನರ್ ಹಾಲ್ ನಿಂದ ತಮ್ಮ ಮನೆಗೆ ಹೋಗುವಾಗ ಒಬ್ಬ ವ್ಯಕ್ತಿಯು ರೋಗಿಗೆ ತೋರಿಸಬೇಕಾಗಿದೆ ಎಂದು ಹೇಳಿದ್ದು, ತಮ್ಮ ಒಪಿಡಿ ಕರ್ತವ್ಯ ಈ ದಿನ ಇರುವುದಿಲ್ಲ ಬೇರೆ ವೈದ್ಯರಿಗೆ ತೋರಿಸುವಂತೆ ತಾವು ಹೇಳಿರುವುದಾಗಿ ತಿಳಿಸಿರುತ್ತಾರೆ. ನಂತರ ಮನೆಗೆ ಹೋಗಿ ಪ್ರೆಸೆಂಟೇಶನ್ ಪೇಪರ್ ಗಳನ್ನು ತೆಗೆದುಕೊಂಡು ಊಟ ಮುಗಿಸಿ 1:40ಕ್ಕೆ ಪುನಃ ಕರ್ತವ್ಯಕ್ಕೆ ಹಾಜರಾಗಿ 2ಗಂಟೆಗೆ ಆನ್ಲೈನ್ ತೆಗೆದುಕೊಂಡಿರುವುದಾಗಿ ತಿಳಿಸಿರುತ್ತಾರೆ.

6.ಡಾ. ಅಶೋಕ್ ಬಂಗಾರ್ ಶೆಟ್ಟರ್, ಸಹ ಪ್ರಾಧ್ಯಾಪಕರು, ಎಲುವು ಕೀಲು ವಿಭಾಗ ಹುಬ್ಬಳ್ಳಿ ಇವರು ತಮ್ಮ ನಿಖಿತ ಹೇಳಿಕೆಯಲ್ಲಿ ಮಾಧ್ಯಮದಲ್ಲಿ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಹಾಗೂ ಸಂಸ್ಥೆಯಲ್ಲಿ ಕರ್ತವ್ಯವನ್ನು ನಿರ್ಲಕ್ಷಿಸದೆ ಎಲ್ಲಾ ತರಹದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು ಮತ್ತು ಕೊವಿಡ್ ರೋಗಿಗಳಿಗೆ, ತುರ್ತು ಚಿಕಿತ್ಸಾ ಘಟಕಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತೇನೆ. ಹಾಗೂ ಕರ್ತವ್ಯ ನಿಗದಿತ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ

7. ಡಾ. ಎಸ್ ಎಮ್ ಚೌಕಿಮಠ, ಸಹಪ್ರಾಧ್ಯಾಪಕರು ಪೆಥಲಾಜಿ ವಿಭಾಗ, ಕಿಮ್ಸ್ ಹುಬ್ಬಳ್ಳಿ ಇವರು ತಮ್ಮ ಲಿಖಿತ ಹೇಳಿಕೆಯಲ್ಲಿ ಸಂಸ್ಥೆಯಲ್ಲಿ ಕೊವಿಡ್ ಮತ್ತು ವಿಭಾಗದ ಕರ್ತವ್ಯವನ್ನು ಸಮರ್ಪಕವಾಗಿ ಯಾವುದೇ ಲೋಪದೋಷ ವಿಲ್ಲದೆ ನಿಗದಿತ ಅವಧಿಯಲ್ಲಿ ಕರ್ತವ್ಯವನ್ನು ನಿರ್ವಹಿಸಿರುತ್ತೆನೆ. ಹಾಗೂ ಮಾಧ್ಯಮದಲ್ಲಿ ಪ್ರಸಾರವಾದ ದೃಶ್ಯದಲ್ಲಿ ತಮ್ಮ ಹೆಸರನ್ನು ಮಾತ್ರ ತೆಗೆದುಕೊಂಡಿದ್ದು ಈ ಆರೋಪವನ್ನು ಅಲ್ಲಗಳೆದಿರುತ್ತಾರೆ

8.ಡಾ.ಪಾರ್ವತಿ , ಪ್ರಧ್ಯಾಪಕರು , ಪೆಥಲಾಜಿ ವಿಭಾಗ, ಕಿಮ್ಸ್ ಹುಬ್ಬಳ್ಳಿ
ಇವರು ಲಿಖಿತ ಹೇಳಿಕೆಯಲ್ಲಿ ತಮ್ಮ ದಿನಂಪ್ರತಿ ಕರ್ತವ್ಯವನ್ನ ನಿಷ್ಠೆಯಿಂದ ಪೆಥಲಾಜಿ ವಿಭಾಗದಲ್ಲಿ ಕೋವಿಡ್ ಕರ್ತವ್ಯದೊಂದಿಗೆ ನಿರ್ವಹಿಸುತ್ತಿರುವುದಾಗಿ ತಿಳಿಸಿರುತ್ತಾರೆ ಹಾಗೂ ನಿಗದಿತ ಅವಧಿಯಲ್ಲಿ ಕರ್ತವ್ಯವನ್ನ ನಿರ್ವಹಿಸಿರುವುದಾಗಿ ತಿಳಿಸಿರುತ್ತಾರೆ.

9.ಡಾ.ವಿದ್ಯಾವತಿ ಮುರಗೋಡ, ಟ್ಯೂಟರ್ ಪೆಥಲಾಜಿ ವಿಭಾಗ , ಕಿಮ್ಸ್ ಹುಬ್ಬಳ್ಳಿ
ಇವರು ಲಿಖಿತ ಹೇಳಿಕೆಯಲ್ಲಿ ತಾವು ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು ಕರ್ತವ್ಯದ ಅವಧಿಯಲ್ಲಿ ಗೈರು ಹಾಜರಾಗಿರುವುದಿಲ್ಲ ಬಯೋಮೇಟ್ರಿಕ್ ಮಾಡಿದ ಕೂಡಲೇ ವಾಪಸ್ಸು ಹೋದುತ್ತಿಲ್ಲಾ. ಮುಂಜಾನೆ 9ರಿಂದ ಸಂಜೆ4ರವರೆಗೆ ತಾವು ಕಿಮ್ಸ್‌ನಲ್ಲಿಯೇ ಓಪಿಡಿ ಹಾಗೂ ಓಪಿಡಿ ಮುಗಿದ ನಂತರ ತಮ್ಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿರುತ್ತಾರೆ ಹಾಗೂ ಖಾಸಗಿ ಪ್ರಾಕ್ಟೀಸ್ ಮಾಡುತ್ತಿರುವುದಿಲ್ಲವೆಂದು ತಿಳಿಸಿರುತ್ತಾರೆ.

ಇಂದು ಸಂಜೆ ವೇಳೆಗೆ ನಾವು ವರದಿ ಸಲ್ಲಿಕೆ ಮಾಡುತ್ತೇವೆ ಎಂದು ಟಿವಿ9ಗೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಲ ವೈದ್ಯರು ನೋಟಿಸ್ಗೆ ಉತ್ತರ ನೀಡಿದ್ದಾರೆ. ಉಳಿದವರು ನೋಟಿಸ್ಗೆ ಉತ್ತರ ನೀಡುತ್ತೇವೆ ಎಂದಿದ್ದಾರೆ. ಎಲ್ಲರ ಉತ್ತರ ಬಂದ ಮೇಲೆ ವರದಿ ಸಿದ್ಧ ಪಡಿಸಲಾಗುವುದು‌. ಬಳಿಕ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆಗೆ ಸಲ್ಲಿಸುತ್ತೇವೆ. ಎಲ್ಲರೂ ಕೊರೊನಾ ಕೆಲಸ ಮಾಡಿದ್ದೇವೆಂದು ಉತ್ತರಿಸಿದ್ದಾರೆ. ಎಲ್ಲವನ್ನ ಪರಿಶೀಲನೆ ಮಾಡಿ ವರದಿ ಸಲ್ಲಿಸುತ್ತೇವೆ ಎಂದು ಟಿವಿ9ಗೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ.

ನೋಟಿಸ್ನಲ್ಲಿ ಏನಿತ್ತು?
ವಿಷಯ: ಕಿಮ್ಸ್ ಸಂಸ್ಥೆಯ 10 ಜನ ವೈದ್ಯರು ಕರ್ತವ್ಯದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದು ಹಾಗೂ ತಮ್ಮ ಮನೆಗೆ ಹೋಗುವುದನ್ನ ಟಿವಿ9 ಮಾಧ್ಯಮದಲ್ಲಿ ಪ್ರಸಾರವಾದ ವರದಿ ಕುರಿತು

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿ-17-06-2021 ರಂದು ಮುಂಜಾನೆ 11 ಗಂಟೆಗೆ ಟಿವಿ9 ಮಾಧ್ಯಮದಲ್ಲಿ ಸಂಸ್ಥೆಯ ವೈದ್ಯರುಗಳ ರಹಸ್ಯ ಕಾರ್ಯಾಚರಣೆ ವರದಿ ಪ್ರಸಾರಗೊಂಡಿದ್ದು , ತಾವುಗಳು ಕಚೇರಿ ಅವಧಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಮಾಡಿದ ಕೂಡಲೇ ನಿಮ್ಮ ನಿಮ್ಮ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ತಮ್ಮ ಮನೆಗೆ ಹೋಗಿರುವುದು ಟಿವಿ9 ಮಾಧ್ಯಮದಲ್ಲಿ ಆರೋಪಿಸಲಾಗಿದೆ.
ತಾವು ತಮ್ಮ ನಿಗದಿತ ಕರ್ತವ್ಯದ ಜೊತೆಗೆ ತಮ್ಮಗೆ ಓಪಿಡಿ ಕೋವಿಡ್ ಕರ್ತವ್ಯ ಹಾಗೂ ಇನ್ನಿತರೆ ಕೆಲಸಗಳು ಮುಗಿದರೂ ಕೂಡ ವಿಭಾಗಕ್ಕೆ ಸಂಬಂಧಪಟ್ಟ ಹಾಗೂ ಸಂಸ್ಥೆಗೆ ಸಂಬಂಧಪಟ್ಟ ಇನ್ನಿತರೆ ಕೆಲಸಗಳಾದ ರಿಸರ್ಚ್ ವರ್ಕ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಹಾಗೂ ಲಸಿಕಾಕರಣ, ತುರ್ತುಚಿಕಿತ್ಸಾ ಘಟಕದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮುಂತಾದವುಗಳ ನಿರ್ವಹಣೆ ತಮ್ಮ ದಿನನಿತ್ಯದ ಕರ್ತವ್ಯವಾಗಿರುತ್ತೆದ.ಆದುದರಿಂದ ಈ ನೋಟೀಸ್‌ ತಲುಪಿದ ತಕ್ಷಣವೇ ಲಿಖಿತ ಹೇಳಿಕೆ ನೀಡತಕ್ಕದ್ದು ತಪ್ಪಿದಲ್ಲಿ ಈ ಕುರಿತು ನಿಮ್ಮ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.

ನಿರ್ದೇಶಕರು
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ
ಹುಬ್ಬಳ್ಳಿ

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್‌ನ ಕೆಲಸಗಳ್ಳ ವೈದ್ಯರಿಗೆ ಕಿಮ್ಸ್‌ನ ನಿರ್ದೇಶಕರಿಂದ ಶೋಕಾಸ್ ನೋಟಿಸ್