ಧಾರವಾಡದಲ್ಲಿ ಗಡ್ಡೆ ಗೆಣಸು ಮೇಳ: ಜನರಿಗೆ ಹೊಸ ಲೋಕ ಪರಿಚಯ

ಗಾಂಧಿ ಪ್ರತಿಷ್ಠಾನದ ಸಭಾಂಗಣದಲ್ಲಿ ಸಹಜ ಸಮೃದ್ಧ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ವತಿಯಿಂದ ಎರಡು ದಿನಗಳ ಕಾಲ ಗಡ್ಡೆ-ಗೆಣಸು ಮೇಳವನ್ನು ಆಯೋಜಿಸಲಾಗಿತ್ತು. ನಾಡಿನ ವಿವಿಧ ಕಡೆಗಳಲ್ಲಿ ಬೆಳೆಯುವ ಬಗೆ ಬಗೆಯ ಗಡ್ಡೆ-ಗೆಣಸುಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಯಿತು.

  • ನರಸಿಂಹಮೂರ್ತಿ ಪ್ಯಾಟಿ
  • Published On - 11:52 AM, 1 Mar 2021
ಧಾರವಾಡದಲ್ಲಿ ಗಡ್ಡೆ ಗೆಣಸು ಮೇಳ: ಜನರಿಗೆ ಹೊಸ ಲೋಕ ಪರಿಚಯ
ಗಡ್ಡೆ ಗೆಣಸು ಮೇಳ

ಧಾರವಾಡ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಅದರಲ್ಲೂ ಸಾಂಪ್ರದಾಯಿಕ ಊಟದ ಬಗ್ಗೆ ಹೆಚ್ಚಿನ ಒಲವು ಕಂಡು ಬರುತ್ತಿದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಯಾವ ಯಾವ ಆಹಾರ ಯಾವುದಕ್ಕೆ ಒಳ್ಳೆಯದು ಎನ್ನುವುದು ಜನರಿಗೆ ಗೊತ್ತೇ ಇರೋದಿಲ್ಲ. ಅದರಲ್ಲೂ ಗಡ್ಡೆ-ಗೆಣಸುಗಳ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ. ಆರೋಗ್ಯಕರ ಆಹಾರವಾಗಿ ಈ ಗಡ್ಡೆ-ಗೆಣಸುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವುಗಳ ಪ್ರದರ್ಶನವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು.

ಜಿಲ್ಲೆಯ ಕೋರ್ಟ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಷ್ಠಾನದ ಸಭಾಂಗಣದಲ್ಲಿ ಸಹಜ ಸಮೃದ್ಧ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ವತಿಯಿಂದ ಎರಡು ದಿನಗಳ ಕಾಲ ಗಡ್ಡೆ-ಗೆಣಸು ಮೇಳವನ್ನು ಆಯೋಜಿಸಲಾಗಿತ್ತು. ನಾಡಿನ ವಿವಿಧ ಕಡೆಗಳಲ್ಲಿ ಬೆಳೆಯುವ ಬಗೆ ಬಗೆಯ ಗಡ್ಡೆ-ಗೆಣಸುಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಯಿತು. ಅಷ್ಟೇ ಅಲ್ಲದೇ ಯಾವ ಯಾವ ಗಡ್ಡೆ-ಗೆಣಸು ಯಾವುದಕ್ಕೆ ಪ್ರಯೋಜನ ಎನ್ನುವ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.

ಇದುವರೆಗೂ ಗೆಣಸುಗಳಲ್ಲಿ ಇಷ್ಟೊಂದು ಬಗೆ ಇರುತ್ತವೆ ಎನ್ನುವುದು ಜನರಿಗೆ ಗೊತ್ತೇ ಇರಲಿಲ್ಲ ಮತ್ತು ಆರೋಗ್ಯಕ್ಕೆ ಉತ್ತಮವಾಗಿರುವ ಈ ಗಡ್ಡೆ-ಗೆಣಸುಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲ. ಇಂಥ ಮೇಳವನ್ನು ಕಳೆದ ಮೂರು ವರ್ಷಗಳಿಂದ ಮೈಸೂರಿನಲ್ಲಿ ಮಾಡಲಾಗುತ್ತಿದೆ. ಕಳೆದ ವರ್ಷದಿಂದ ರಾಜ್ಯದ ವಿವಿಧ ಕಡೆಗಳಲ್ಲಿ ಮೇಳವನ್ನು ಆಯೋಜಿಸಲಾಗುತ್ತಿದೆ.

ಈ ಪದಾರ್ಥಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿ ಎನ್ನುವ ಕಾರಣಕ್ಕೆ ಬೇರೆ ಬೇರೆ ಕಡೆಗಳಲ್ಲಿ ಮೇಳವನ್ನು ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಮಾವಿನ ಶುಂಠಿ, ಕೊವೆ ಗಡ್ಡೆ, ಉತ್ತರಿ ಗಡ್ಡೆ, ಪರ್ಪಲ್ ಯಾಮ್, ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಸಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗಡ್ಡೆ ಸೇರಿದಂತೆ ಬಗೆ ಬಗೆಯ ಗಡ್ಡೆಗಳು ಜನರನ್ನು ಆಕರ್ಷಿಸಿದವು.

ವಿವಿಧ ಗಡ್ಡೆ ಗೆಣಸು

ಗುಡ್ಡಗಾಡು ಹಾಗೂ ಆದಿವಾಸಿ ಜನಾಂಗದವರು ತಂದಿದ್ದ ಗಡ್ಡೆ-ಗೆಣಸುಗಳು ಹೆಚ್ಚಿನ ಗಮನ ಸೆಳೆದವು. ಇದೇ ವೇಳೆ ಈ ಗಡ್ಡೆ-ಗೆಣಸುಗಳ ಹಾಗೂ ಇತರೆ ಧಾನ್ಯಗಳ ಬೀಜಗಳ ಮಾರಾಟಕ್ಕೆ ಕೂಡ ಅವಕಾಶ ಕಲ್ಪಿಸಲಾಗಿತ್ತು. ಎರಡು ದಿನಗಳ ಕಾಲ ನಡೆದ ಈ ಮೇಳ ಜನರಿಗೆ ಗಡ್ಡೆ-ಗೆಣಸುಗಳ ಹೊಸ ಲೋಕದ ಪರಿಚಯ ಮಾಡಿಸಿಕೊಟ್ಟಿದೆ.

ಸುವರ್ಣ ಗೆಡ್ಡೆ

ಕೆಸುವಿನ ಗಡ್ಡೆ

ಇದನ್ನೂ ಓದಿ

ವಿದ್ಯಾಕಾಶಿಯಲ್ಲಿ ಮಾರ್ಚ್ 2 ರವರೆಗೆ ವಿಜ್ಞಾನ ಜಾತ್ರೆ; ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ..

ಅಂತರಘಟ್ಟೆಯ ದುರ್ಗಾಂಬಾ ದೇವಿ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ, ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆದು ಹರಕೆ ಸಲ್ಲಿಕೆ