ಬೇಸಿಗೆಗೆ ಮುನ್ನವೇ ಹುಬ್ಬಳ್ಳಿಯಲ್ಲಿ ಹನಿ ನೀರಿಗಾಗಿ ಹಾಹಾಕಾರ: ಶಾಸಕ, ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ

ಗ್ರಾಮದ ಪಕ್ಕದಲ್ಲಿ ಹಳ್ಳ ಹರಿಯುತ್ತಿದೆ. ಆದರೂ ಕುಡಿಯಲು ಒಂದು ಹನಿ ನೀರಿಲ್ಲ. ಬೇಸಿಗೆ ಶುರುವಾಗುವುದಕ್ಕಿಂತ ಮುಂಚೆಯೇ ಜಲಕ್ಷಾಮ ಎದುರಾಗುತ್ತಿದೆ. ಬೆಳಗಾದ ಕೂಡಲೆ ಪ್ರತಿಯೊಂದು ಮನೆಯಿಂದ ಮೋಟರ್ ಸೈಕಲ್, ಬೈಸಿಕಲ್, ಬಿಂದಿಗೆಗಳನ್ನು ಹಿಡಿದುಕೊಂಡು ನೀರಿಗಾಗಿ ಜರ್ನಿ ಶುರುವಾಗುತ್ತದೆ.

  • ರಹಮತ್ ಕಂಚಗಾರ್
  • Published On - 14:51 PM, 1 Mar 2021
ಬೇಸಿಗೆಗೆ ಮುನ್ನವೇ ಹುಬ್ಬಳ್ಳಿಯಲ್ಲಿ ಹನಿ ನೀರಿಗಾಗಿ ಹಾಹಾಕಾರ: ಶಾಸಕ, ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ
ಕುಡಿಯುವ ನೀರಿಗಾಗಿ ಜನರ ಪರದಾಟ

ಹುಬ್ಬಳ್ಳಿ: ದಿನ ಬೆಳಗಾದರೇ ಸಾಕು ಮನೆಯಲ್ಲೊಬ್ಬರನ್ನು ನೀರು ತರುವ ಕೆಲಸಕ್ಕಂತನೇ ಮೀಸಲಿಡಬೇಕಾಗುತ್ತದೆ. ಇಲ್ಲ ಎಂದರೆ ಇಡೀ ಕುಟುಂಬಕ್ಕೆ ವನವಾಸವೇ ಗತಿ. ಬೈಕ್, ಟ್ರಾಕ್ಟರ್ ಚಕ್ಕಡಿ, ಸೈಕಲ್ ತೆಗೆದುಕೊಂಡು ಸೂರ್ಯೋದಯಕ್ಕಿಂತ ಮುಂಚೆ ಹೊರಟರೆ ವಾಪಸ್ ಮನೆ ತಲಪುವುದು ಯಾವಾಗ ಅಂತಾ ಹೋದವರಿಗೆ ಗೊತ್ತಾಗುವುದಿಲ್ಲ. ಹೀಗೆ ನೀರಿಗಾಗಿ ಜನರು ಹರಸಾಹಸ ಪಡುವ ಪರಿಸ್ಥಿತಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಎದುರಾಗಿದೆ.

ಗ್ರಾಮದ ಪಕ್ಕದಲ್ಲಿ ಹಳ್ಳ ಹರಿಯುತ್ತಿದೆ. ಆದರೂ ಕುಡಿಯಲು ಒಂದು ಹನಿ ನೀರಿಲ್ಲ. ಬೇಸಿಗೆ ಶುರುವಾಗುವುದಕ್ಕಿಂತ ಮುಂಚೆಯೇ ಜಲಕ್ಷಾಮ ಎದುರಾಗುತ್ತಿದೆ. ಬೆಳಗಾದ ಕೂಡಲೆ ಪ್ರತಿಯೊಂದು ಮನೆಯಿಂದ ಮೋಟರ್ ಸೈಕಲ್, ಬೈಸಿಕಲ್, ಚಕ್ಕಡಿ, ಟ್ರಾಕ್ಟರ್, ಬಿಂದಿಗೆಗಳನ್ನು ಹಿಡಿದುಕೊಂಡು ನೀರಿಗಾಗಿ ಜರ್ನಿ ಶುರುವಾಗುತ್ತದೆ. ಸರಕಾರಗಳು ಮೂಲಭೂತ ಸೌಕರ್ಯಗಳಿಗಾಗಿ ಹಣವನ್ನು ನೀರಿನಂತೆ ವ್ಯಯ ಮಾಡಿದರೂ ಅಲ್ಲಾಪುರ ಗ್ರಾಮಕ್ಕೆ ಕುಡಿಯಲು ಹನಿ ನೀರು ಸಿಗುತ್ತಿಲ್ಲ. ಹಲವಾರು ವರ್ಷಗಳಿಂದ ನೀರಿನ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳಂತೂ ಕಣ್ಣಿದ್ದೂ ಕುರುಡರಾಗಿದ್ದಾರೆ. ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮಸ್ಥರು ಇದೀಗ ಜಲ ಸಂಕಟವನ್ನು ಅನುಭವಿಸುತ್ತಿದ್ದಾರೆ.

ಈ ಗ್ರಾಮಕ್ಕೆ ಹುಬ್ಬಳ್ಳಿಯಿಂದ ಮಲಪ್ರಭಾ ನೀರು ಬರುತ್ತದೆ. ಆದರೆ ಒಂದೇ ಒಂದು ಗಂಟೆ ಮಾತ್ರ. ಅದು ಕೆಲವೇ ಕೆಲವು ಜನರಿಗೆ ಮಾತ್ರ ಕುಡಿಯಲು ನೀರು ಸಿಗುತ್ತದೆ. ಉಳಿದ ಜನರಿಗೆ ಕೆರೆಯ ನೀರೇ ಗತಿ. ಆ ಕರೆಯ ನೀರೂ ಸಹ ಕುಡಿಯಲು ಯೋಗ್ಯವಾಗಿರದ ಹಿನ್ನೆಲೆಯಲ್ಲಿ ಕಿಲೋಮೀಟರ್ ಗಟ್ಟಲೇ ಹೋಗಿ ನೀರನ್ನು ತರಬೇಕಾದ ಪರಿಸ್ಥಿತಿ ಈ ಗ್ರಾಮದ ಜನತೆಗೆ ಬಂದೊದಗಿದೆ. ಹೀಗಿದ್ದರೂ ಕೂಡಾ ಸ್ಥಳೀಯ ಶಾಸಕರು, ಅಧಿಕಾರಿಗಳು ಕಣ್ಮರೆಯಾಗಿದ್ದಾರೆಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಬೈಕ್​ ಮೇಲೆ ನೀರನ್ನು ಸಾಗಿಸುತ್ತಿರುವ ಗ್ರಾಮಸ್ಥರು

 

ಕೆರೆಯಲ್ಲಿ ನೀರನ್ನು ತುಂಬಿಸುತ್ತಿರುವ ವ್ಯಕ್ತಿ

ಗ್ರಾಮಸ್ಥರ ಆಗ್ರಹ
ಅಲ್ಲಾಪುರ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಹಲವಾರು ವರ್ಷಗಳಿಂದ ಈ ಗ್ರಾಮದ ಜನಕ್ಕೆ ನೀರಿನ ಸಮಸ್ಯೆ ಇದೆ. ಚುನಾವಣೆಗಳು ಬಂದಾಗ ಮಾತ್ರ ಗ್ರಾಮದ ಜನರು ನೆನೆಪಾಗುವ ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆ ಕುರಿತು ಇಲ್ಲಿನ ಜನರು ಮನವಿ ಕೊಟ್ಟು ಕೊಟ್ಟು ಸಾಕಾಗಿದೆ. ಅಲ್ಲದೇ ಕೆಲವು ಚುನಾವಣೆಗಳಲ್ಲಿ ನೀರಿಗಾಗಿ ಮತದಾನವನ್ನು ಬಹಿಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬೇಸಿಗೆ ಬಂದಾಗ ನೀರು ನೀರು ಎನ್ನುವ ಜನರಿಗೆ ಸ್ಥಳೀಯ ಶಾಸಕರು ಅಧಿಕಾರಿಗಳೊಂದಿಗೆ ಅಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ತಕ್ಷಣ ನೀರು ಕೊಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ನೀರಿಗಾಗಿ ಸರತಿ ಸಾಲಿನಲ್ಲಿ ನಿಂತ ಗ್ರಾಮಸ್ಥರು

ಎತ್ತಿನಗಾಡಿಯಲ್ಲಿ ನೀರನ್ನು ಸಾಗಿಸುತ್ತಿರುವುದು

ಇದನ್ನೂ ಓದಿ

ಕೊರೊನಾ ಆತಂಕದ ನಡುವೆ ಗ್ರಾಮಸ್ಥರಿಗೆ ಎದುರಾಗಿದೆ ಕುಡಿಯುವ ನೀರಿನ ಸಮಸ್ಯೆ

ಪಾರ್ಶ್ವವಾಯು ಸಮಸ್ಯೆಗೆ ತುತ್ತಾದ ‘ಶಾಸ್ತ್ರಿ‘ ನಾಯಕಿ ಮಾನ್ಯಾ; ಚಿಕಿತ್ಸೆಯ ನಂತರ ಹೀಗಿದ್ದಾರೆ