ವಾದ್ಯಮೇಳದೊಂದಿಗೆ ಕೋಟೆನಾಡಿನಲ್ಲಿ ಕತ್ತೆಗಳ ಮದುವೆ; ಮದುವೆಯಾಗ್ತಿದ್ದಂತೆ ಜಿಟಿ ಜಿಟಿ ಮಳೆ ಶುರು, ರೈತರಲ್ಲಿ ಮಂದಹಾಸ!
ಕಾಕತಾಳೀಯ ಎಂಬಂತೆ ಕತ್ತೆಗಳ ಮದುವೆ ಆಚರಣೆ ಸಂದರ್ಭದಲ್ಲೇ ತುಂತುರು ಮಳೆ ಸುರಿದಿದೆ. ಮಳೆಯಿಂದಾಗಿ ಗ್ರಾಮದ ಜನರಲ್ಲಿ ಸಂಭ್ರಮ ಹೆಚ್ಚಿದ್ದು ಕೆಲವರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಚಿತ್ರದುರ್ಗ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿಗೂ ಅನೇಕ ವಿಭಿನ್ನ ಆಚರಣೆಗಳು ಜಾರಿಯಲ್ಲಿವೆ. ಬುಡಕಟ್ಟು ಸಮುದಾಯಗಳ ಜನರೇ ಹೆಚ್ಚಾಗಿ ವಾಸಿಸುವ ಜಿಲ್ಲೆಯಲ್ಲಿ ಕೃಷಿ ಮತ್ತು ಜಾನುವಾರು ಸಾಕಣೆ ಮುಖ್ಯ ಕಸುಬಾಗಿದೆ. ಸದ್ಯ ಪ್ರಸ್ತುತ ಕತ್ತೆಗಳ ಮದುವೆ ಮೂಲಕ ಮಳೆರಾಯನ ಕೃಪೆಗೆ ರೈತರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಈಚಲನಾಗೇನಹಳ್ಳಿ ಗ್ರಾಮದಲ್ಲಿ ಸಮೃದ್ಧ ಮಳೆ-ಬೆಳೆಗಾಗಿ ಸಾಂಪ್ರದಾಯಿಕವಾಗಿ ಕತ್ತೆಗಳ ಮದುವೆ ಆಚರಣೆ ಮಾಡಲಾಗಿದೆ. ಮೊದಲಿಗೆ ಗ್ರಾಮ ದೇವತೆಯ ಉತ್ಸವ ಮೂರ್ತಿಗೆ ಊರ ಬಾಗಿಲ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಯುವಕರು ಜೋಡಿ ಕತ್ತೆಗಳನ್ನು ಹಿಡಿದು ತಂದು ಅವುಗಳನ್ನು ತೊಳೆದು ಸ್ವಚ್ಛಗೊಳಿಸಿ ಮದುವೆ ಸಿಂಗಾರ ಮಾಡಿದ್ದಾರೆ. ಗ್ರಾಮದ ಜನರೆಲ್ಲ ಸೇರಿ ಪ್ರತ್ಯೇಕ ಗುಂಪುಗಳಾಗಿ ತಮ್ಮದೇ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಆ ಮೂಲಕ ವಿಶೇಷ ಆಚರಣೆಯಲ್ಲಿ ಪ್ರತಿ ಗ್ರಾಮಸ್ಥರು ಭಾಗಿಯಾಗಿದ್ದಾರೆ.

ಕತ್ತೆಗಳ ಮದುವೆ
ಎರಡು ಗುಂಪುಗಳಾಗಿ ವಿಂಗಡಣೆಯಾಗಿ ಹೆಣ್ಣಿನ ಕಡೆಗೊಂದು ಗುಂಪು, ಗಂಡಿನ ಕಡೆಗೊಂದು ಗುಂಪಾಗಿ ವಿಭಜನೆಗೊಂಡು ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿದ್ದಾರೆ. ಜೋಡಿ ಕತ್ತೆಗೆ ಹೂವು ಹಾಕಿ ಸಿಂಗಾರಗೊಳಿಸಲಾಯಿತು. ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಕತ್ತೆಗಳನ್ನು ಕರೆತರಲಾಯಿತು. ಕತ್ತೆಗಳಿಗೆ ಮಹಿಳೆಯರ ಗುಂಪು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕತ್ತೆಗಳ ಹಾರ ಬದಲಿಸಿ ಮದುವೆ ಮಾಡಿಸುವ ಮೂಲಕ ವರುಣ ದೇವನ ಕೃಪೆಗೆ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು. ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಈ ಆಚರಣೆಯಿಂದ ಮಳೆ ಬರುತ್ತದೆ. ಉತ್ತಮ ಮಳೆ-ಬೆಳೆ ಆಗುತ್ತದೆ ಎಂಬುದು ಜನರ ನಂಬಿಕೆ ಆಗಿದೆ.
ಮದುವೆಯಾಗುತ್ತಿದ್ದಂತೆ ತುಂತುರು ಮಳೆ ಕಾಕತಾಳೀಯ ಎಂಬಂತೆ ಕತ್ತೆಗಳ ಮದುವೆ ಆಚರಣೆ ಸಂದರ್ಭದಲ್ಲೇ ತುಂತುರು ಮಳೆ ಸುರಿದಿದೆ. ಮಳೆಯಿಂದಾಗಿ ಗ್ರಾಮದ ಜನರಲ್ಲಿ ಸಂಭ್ರಮ ಹೆಚ್ಚಿದ್ದು ಕೆಲವರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಭಕ್ತಿಯ ಆಚರಣೆಗೆ ವರುಣದೇವ ಸಂತೃಪ್ತನಾಗಿ ಕೃಪೆ ತೋರಿದ್ದಾನೆ ಎಂದು ಗ್ರಾಮದ ಹಿರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಪುರಾತನ ಕಾಲದಿಂದಲೂ ಈ ಭಾಗದಲ್ಲಿ ಕತ್ತೆ ಮದುವೆ ಆಚರಣೆ ಚಾಲ್ತಿಯಲ್ಲಿದೆ. ಭೀಕರ ಬರಗಾಲದ ಸಂದರ್ಭದಲ್ಲೂ ಕತ್ತೆಗಳ ಮದುವೆ ಆಚರಣೆ ಮಾಡಿದಾಗ ಮಳೆ ಸುರಿದ ಉದಾಹರಣೆಗಳಿವೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಈಗಲೂ ಕತ್ತೆಗಳ ಮದುವೆ ಆಚರಣೆ ವೇಳೆಯೇ ಮಳೆ ಸುರಿದಿದೆ ಎಂದು ಗ್ರಾಮದ ಲಕ್ಷ್ಮೀಕಾಂತ್ ಖುಷಿ ವ್ಯಕ್ತಪಡಿಸಿದರು.
ಕೆಲ ದಿನಗಳಿಂದ ರಾಜ್ಯದ ಎಲ್ಲೆಡೆ ಮಳೆ ಸುರಿಯುತ್ತಿದೆ. ನಮ್ಮ ಭಾಗದಲ್ಲಿ ಮಾತ್ರ ಉತ್ತಮ ಮಳೆ ಆಗಿಲ್ಲ. ತುಂತುರು ಮಳೆ ಸುರಿದಿದೆಯಾದರೂ ಉಪಯೋಗವಿಲ್ಲವಾಗಿದೆ. ಸಮೃದ್ಧ ಮಳೆ-ಬೆಳೆಗಾಗಿ ಪೂರ್ವಜರು ಆಚರಿಸುತ್ತಿದ್ದ ಆಚರಣೆಯನ್ನು ಪುನರಾವರ್ತಿಸಿದ್ದೇವೆ. ಫಲ ನೀಡುವ ಭರವಸೆ ಇದೆ ಎಂದು ಗ್ರಾಮಸ್ಥ ರಾಮಚಂದ್ರಪ್ಪ ಹೇಳಿದರು.

ಕತ್ತೆಗಳ ಮದುವೆ
ಇದನ್ನೂ ಓದಿ: ಮದುವೆಗೆ ಹೋದವರಿಗೆ ಫುಲ್ ಶಾಕ್ ಕೊಟ್ಟ ಪೊಲೀಸರು; ಕಪ್ಪೆಯಂತೆ ಜಿಗಿಯುತ್ತ ವಾಪಸ್ ಬಂದ ಅತಿಥಿಗಳು