ಬೆಂಗಳೂರು, ಮಾರ್ಚ್ 1: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನೀರಿನ ಸಮಸ್ಯೆ (Water Problem) ಮತ್ತಷ್ಟು ಬಿಗಡಾಯಿಸುತ್ತಿದೆ. ಏರಿಯಾದಿಂದ ಏರಿಯಾಗೆ ಜಲದಾಹ (Water Scarcity) ಹೆಚ್ಚುತ್ತಿದೆ. ನೀರಿನ ಸಮಸ್ಯೆ ಬಗ್ಗೆ ಜನತಾದರ್ಶನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದರೂ, ಅಧಿಕಾರಿಗಳು ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲವಂತೆ. ಅತ್ತ ಕೋಲಾರ ಹಾಗೂ ಚಿಕ್ಕಮಗಳೂರಿನಲ್ಲೂ ಬೇಸಿಗೆ ಆರಂಭದಲ್ಲೇ ಕುಡಿಯೋ ನೀರಿಗಾಗಿ ಹಾಹಾಕಾರವೆದ್ದಿದೆ.
ಮಹಿಳೆಯರು ಖಾಲಿ ಕೊಡಗಳೊಂದಿಗೆ ನೀರು ಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ಯಶವಂತಪುರದ ಪುನೀತ್ ರಾಜ್‍ಕುಮಾರ್ ಲೇಔಟ್ನಲ್ಲಿ ಸಾಮಾನ್ಯವಾಗಿದೆ. ಇಲ್ಲಿ ನೀರು ಇಲ್ಲದ ಕಾರಣ ಬಾಡಿಗೆದಾರರು ಮನೆ ಖಾಲಿಮಾಡಿಕೊಂಡು ಹೋಗುತ್ತಿದ್ದಾರಂತೆ. ಇದರಿಂದ ಲೇಔಟ್ ತುಂಬಾ ಟು ಲೆಟ್ (TO LET) ಬೋರ್ಡ್ಗಳೇ ಕಣ್ಣಿಗೆ ಬೀಳುತ್ತಿವೆ. ಮೊದಲು 400 ರಿಂದ 500 ರೂಪಾಯಿಗೆ ಒಂದು ಟ್ಯಾಂಕರ್ ನೀರು ಕೊಡುತ್ತಿದ್ದ ಟ್ಯಾಂಕರ್ನವರು ಈಗ 1000 ದಿಂದ 1200 ರೂಪಾಯಿ ಕೇಳುತ್ತಿದ್ದಾರೆ. ಬೋರ್ ವೆಲ್ಗಳು ಬತ್ತಿ ಹೋಗಿವೆ. ಸರಿಯಾಗಿ ಕುಡಿಯಲು ನೀರು ಬರುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ದೊಡ್ಡ ಬಿದರಕಲ್ಲಿನ ಪುನೀತ್ ರಾಜ್‍ಕುಮಾರ್ ಬಡಾವಣೆ ನಿವಾಸಿಗಳಿಗೆ ಕುಡಿಯಲು ಕಾವೇರಿ ನೀರಿಲ್ಲ. ಬೋರ್ವೆಲ್ ನೀರಿನಿಂದಲೇ ತಮ್ಮ ದಾಹ ತೀರಿಸಿಕೊಳ್ಳಬೇಕು ಆದರೆ ಆ ಬೋರ್ವೆಲ್ಗಳಲ್ಲೂ ನೀರು ಬತ್ತಿ ಹೋಗಿದೆಯಂತೆ. ಬಿಬಿಎಂಪಿ ಈ ಏರಿಯಾಗೆ ಟ್ಯಾಂಕರ್ಗಳ ಮೂಲಕ ಉಚಿತವಾಗಿ ಪ್ರತಿದಿನ ನೀರು ಪೂರೈಕೆ ಮಾಡುತ್ತಿದೆ. ಆದರೆ ಅದು ಕೂಡ ನಿಂತು ತುಂಬಾ ತಿಂಗಳುಗಳೇ ಕಳೆದಿವೆ.
ಸಿಎಂ ಸಿದ್ದರಾಮಯ್ಯ ಅವರ ಜನತಾದರ್ಶನದಲ್ಲಿ ಮನವಿ ನೀಡಿದರೂ ಕುಡಿಯಲು ಮಾತ್ರ ನೀರಿಲ್ಲವಂತೆ. ಖುದ್ದಾಗಿ ಸಿಎಂ ಕುಡಿಯಲು ನೀರು ಕೊಡಲು ಹೇಳಿದ್ದರೂ ಅಧಿಕಾರಿಗಳು ಮಾತ್ರ ಪೂರೈಕೆ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೇಸಿಗೆ ಆರಂಭಕ್ಕೂ ಮುನ್ನವೇ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಅದರಲ್ಲೂ ಪ್ರತಿ ವರ್ಷ ಅತಿವೃಷ್ಟಿಗೆ ಒಳಗಾಗಿ ಸಂಕಷ್ಟತೆ ಒಳಗಾಗುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ನದಿ ಹಳ್ಳ ಕೊಳ್ಳ ಬಾವಿ ಸೇರಿದಂತಹ ಜಲ ಮೂಲಗಳು ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ತೋಟದೂರು ಗ್ರಾಮ ಪಂಚಾಯಿತಿಯ ತನೂಡಿ ಗ್ರಾಮದ ಆಳುಗೋಡಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ.
ಇದನ್ನೂ ಓದಿ: ರಾಯಚೂರು: ಕೃಷ್ಣಾ ನದಿ ಸಂಪೂರ್ಣ ಖಾಲಿ! ನದಿ ತೀರದ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ, ಜನ – ಜಾನುವಾರು ಕಂಗಾಲು
ಇತ್ತ ಕೋಲಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ಕೋಲಾರ ಜಿಲ್ಲೆಯ ಆರೂ ತಾಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ, ಈಗಾಗಲೇ ರೈತರಿಗೆ ಪರಿಹಾರ ಕೊಡುವ ಕೆಲಸ ನಡೆಯುತ್ತಿದೆ. ಹೀಗಿರುವಾಗಲೇ ಆರಂಭದಲ್ಲೇ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆರೆಗಳಲ್ಲಿ ಕೇವಲ 30 ರಿಂದ 40 ರಷ್ಟು ಮಾತ್ರ ನೀರಿದೆ.
(ವರದಿ: ಕೋಲಾರದಿಂದ ರಾಜೇಂದ್ರ, ಚಿಕ್ಕಮಗಳೂರಿನಿಂದ ಅಶ್ವಿತ್ ಜೊತೆ, ಕಿರಣ್ ಸೂರ್ಯ ಟಿವಿ9 ಬೆಂಗಳೂರು)
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ