ಕಳೆದ ಎರಡು ವರ್ಷದಲ್ಲಿ ದಾಖಲೆ ಮಟ್ಟದಲ್ಲಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಳ, ಪೋಷಕರು ಕಂಗಾಲು
Engineering College Fees: ರಾಜ್ಯದಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಆರಂಭಕ್ಕೂ ಮೊದಲೆ ಸಂಕಷ್ಟ ಎದುರಾಗಿದೆ. ಇಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೆ ವಿದ್ಯಾರ್ಥಿಗಳಿಗೆ ಡಬ್ಬಲ್ ಶಾಕ್ ಸಿಕ್ಕಿದೆ. ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೆ ಇಂಜಿನಿಯರಿಂಗ್ ಶುಲ್ಕ ಏರಿಕೆಯ ಬಿಸಿ ಪೋಷಕರಿಗೆ ಎದುರಾಗಿದೆ.
ಬೆಂಗಳೂರು, ಜೂನ್.17: ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ (Engineering College Fees) ಹೆಚ್ಚಳಕ್ಕೆ ಅನುಮತಿ ನೀಡಿರುವ ರಾಜ್ಯ ಸರ್ಕಾರದ (Karnataka Government) ನಿರ್ಧಾರಕ್ಕೆ ಪೋಷಕರಿಂದ ತೀವ್ರ ವಿರೋಧ ಕೇಳಿ ಬರ್ತಿದೆ. ಸರ್ಕಾರ ಶುಲ್ಕ ಏರಿಕೆಗೆ ಅನುಮತಿ ನೀಡಿದ ಹಿನ್ನಲೆ ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದಲ್ಲಿ 96,574 ರೂ ಗಳಿದ್ದ ಶುಲ್ಕ 1,06,231 ರೂ.ಗಳ ವರೆಗೆ ಏರಿಕೆಯಾಗಿದೆ. ಟೈಪ್-1 ಕಾಲೇಜುಗಳಲ್ಲಿ 1.69 ಲಕ್ಷ ರೂ.ಗಳಿಂದ 1.86 ಲಕ್ಷ ರೂಗಳವರೆಗೆ ಹಾಗೂ ಟೈಪ್-2 ಕಾಲೇಜುಗಳಲ್ಲಿ 2.37 ಲಕ್ಷ ರೂಗಳಿಂದ 2.61 ಲಕ್ಷ ರೂ.ಗಳವರೆಗೆ ಶುಲ್ಕ ಏರಿಸಲಾಗಿದೆ.
ಪೆಟ್ರೋಲ್, ಡಿಸೇಲ್ ಸೇರಿದ್ದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪರದಾಡುವ ಸ್ಥಿತಿ ಇದೆ. ಇದರ ನಡುವೆ ಈಗ ವೃತ್ತಿಪರ ಕೋರ್ಸ್ ಪ್ರವೇಶ ಶುಲ್ಕ ಏರಿಕೆಯ ಟೆನ್ಷನ್ ಪೋಷಕರಿಗೆ ಎದುರಾಗಿದೆ. ಸಿಇಟಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಹಾಗೂ ಕಾಮೆಡ್-ಕೆ ಕೋಟಾ ಸೀಟುಗಳ ಪ್ರವೇಶ ಶುಲ್ಕ 10-15 % ಏರಿಕೆಗೆ ಖಾಸಗಿ ಕಾಲೇಜುಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದ್ವು. ಈ ಬಗ್ಗೆ ಸಭೆ ನಡೆಸಿದ ಸರ್ಕಾರ 10% ಶುಲ್ಕ ಏರಿಕೆಗೆ ಅವಕಾಶ ನೀಡಿದೆ ಈಗಾಗಲೇ ಯಾವುದೇ ಅಡೆ-ತಡೆ ಇಲ್ಲದೇ ಮ್ಯಾನೇಜ್ಮೆಂಟ್ ಕೋಟಾ ಅಡಿಯಲ್ಲಿ ಬರುವ ಶುಲ್ಕವನ್ನು ಮನಸೋ ಇಚ್ಛೆ ಖಾಸಗಿ ಕಾಲೇಜುಗಳು ಏರಿಸುತ್ತಿವೆ.
ಖಾಸಗಿ ಕಾಲೇಜುಗಳಲ್ಲಿ ಸೀಟ್ ಪಡೆಯಲು ಕನಿಷ್ಠ 10 ಲಕ್ಷ ಶುಲ್ಕ ನೀಡಬೇಕಾದ ಸ್ಥಿತಿ ಇದೆ. ಈ ಸಮಯದಲ್ಲಿ ಸರ್ಕಾರದ ನಿಯಂತ್ರಣದ ಕೆಳಗೆ ಬರುವ ಶುಲ್ಕವನ್ನಾದರೂ ಏರಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದ್ರೆ ಸರ್ಕಾರ ಈ ವರ್ಷವೂ ಶುಲ್ಕ ಏರಿಕೆಗೆ ಅವಕಾಶ ನೀಡಿದೆ. ಕಳೆದ ವರ್ಷ 7% ಅವಕಾಶ ನೀಡಿದ್ರೆ ಈ ವರ್ಷ 10% ಏರಿಕೆಗೆ ಅವಕಾಶ ನೀಡಿದೆ. ಇದರಿಂದ ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುವುದು ಬಡ ವರ್ಗದ ಕುಟುಂಬಗಳಿಗೆ ಮರೀಚಿಕೆಯಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯುವಂತೆ ಪೋಷಕರ ಒತ್ತಾಯ ಶುರುವಾಗಿದೆ.
ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್ನ ಆರೋಪಿ ದರ್ಶನ್ ಬಗ್ಗೆ ಸುದೀಪ್ ಮೊದಲ ಮಾತು
ಇನ್ನು ಶುಲ್ಕ ಏರಿಕೆ ಒಂದು ಕಡೆಯಾದ್ರೆ ಮತ್ತೊಂದೆಡೆ ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಸೀಟ್ ಬ್ಲಾಕಿಂಗ್ ಗೆ ಮುಂದಾಗಿವೆ. ಇದರಿಂದ ಲಕ್ಷ ಲಕ್ಷ ಹಣ ನೀಡಿದ್ರೂ ಖಾಸಗಿ ಕೋಟಾದಡಿ ಇಂಜನಿಯರ್ ಸೀಟ್ ಸಿಗದ್ದಂತಾ ಸ್ಥಿತಿ. ಆದ್ರೆ ಈ ಬಗ್ಗೆ ದೂರು ಬಂದ್ರೆ ಕ್ರಮವಹಿಸುತ್ತೇವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಒಟ್ನಲ್ಲಿ ರಾಜ್ಯದಲ್ಲಿ ಪಿಯುಸಿ ಬಳಿಕ ಉನ್ನತ್ತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಹೆಚ್ಚಾಗಿದೆ. ಇತಂಹ ಸ್ಥಿತಿಯಲ್ಲಿ ಉನ್ನತ್ತ ಶಿಕ್ಷಣ ಪಡೆಯುವ ಕೋರ್ಸ್ ಗಳಿಗೆ ಶುಲ್ಕ ಏರಿಸಿ ಗಗನ ಕುಸುಮ ಮಾಡಿದ್ರೆ ಉನ್ನತ್ತ ಶಿಕ್ಷಣ ಪಡೆಯವುದಕ್ಕೆ ಮತಷ್ಟು ಕೊಕ್ಕೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಎಚ್ಚೆತ್ತು ಶುಲ್ಕ ಏರಿಕೆಯ ಪ್ರಸ್ತಾವನೆಯನ್ನ ಕೈಬಿಡಬೇಕಿದೆ. ಖಾಸಗಿ ಕಾಲೇಜುಗಳಿಗೂ ಕಡಿವಾಣ ಹಾಕಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ