ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ಅದ್ದೂರಿ ತೆರೆ: ಗದ್ದುಗೆ ಇಳಿದ ಮಾರೆಮ್ಮ
ಕರ್ನಾಟಕದ ಅತಿ ದೊಡ್ಡ ಜಾತ್ರೆ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. 9 ದಿನಗಳ ಕಾಲ ಗದ್ದುಗೆಯಲ್ಲಿ ವಿರಾಜಮಾನಳಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿ ಇಂದು ಊರ ಗಡಿಯ ಪೀಠದಿಂದ ತಾಯಿ ಮಾರಿಕಾಂಬೆ ತೆರಳಿದ್ದಾಳೆ.
ಕರ್ನಾಟಕದ ಅತಿ ದೊಡ್ಡ ಜಾತ್ರೆ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. 9 ದಿನಗಳ ಕಾಲ ಗದ್ದುಗೆಯಲ್ಲಿ ವಿರಾಜಮಾನಳಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿ ಇಂದು ಮಧ್ಯಾಹ್ನ ಊರ ಗಡಿಯ ಪೀಠದಿಂದ ತಾಯಿ ಮಾರಿಕಾಂಬೆ ತೆರಳಿದ್ದಾಳೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಮಾರ್ಚ್ 15 ರಿಂದ ಆರಂಭವಾದ ಜಾತ್ರಾ ಮಹೋತ್ಸವ ಇಂದು ಮುಕ್ತಾಯವಾಗಿದೆ. 9 ದಿನಗಳ ಕಾಲ ಭಕ್ತರು ಆರೋಗ್ಯ, ಉತ್ತಮ ಬದುಕಿಗಾಗಿ ವಿವಿಧ ರೀತಿಯ ಹರಕೆ ತೀರಿಸಿ ದೇವಿಯ ಆಶೀರ್ವಾದ ಪಡೆದರು. ದೇವಿಗೆ ವಿವಾಹ ಮಾಡುವ ಸಂಪ್ರದಾಯದೊಂದಿಗೆ ಆರಂಭವಾದ ಜಾತ್ರೆಯು ಇಂದು ಚಪ್ಪರಕ್ಕೆ ಬೆಂಕಿ ಹಚ್ಚುವುದರೊಂದಿಗೆ ಮುಕ್ತಾಯವಾಗಿದೆ. ಇಲ್ಲಿ ಬಲಿ ಕೊಡುವ ಕೋಣವು ಬ್ರಾಹ್ಮಣ ಮುಖವಾಡ ಧರಿಸಿ ಬ್ರಾಹ್ಮಣ ಯುವತಿಯನ್ನು ವಿವಾಹವಾದ ಯುವಕ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಆದರೆ ಈಗ ಕೋಣ ಬಲಿಯನ್ನು ಇಲ್ಲಿ ನಿಷೇಧಿಸಲಾಗಿದ್ದು, ಕೋಣವನ್ನು ಬಲಿ ಕೊಡುವ ಬದಲು ಬೂದುಕುಂಬಳಕಾಯಿಯನ್ನು ಒಡೆಯುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅದ್ದೂರಿ ಮೆರವಣಿಗೆ:
ಮಾರಿಕಾಂಬೆಯನ್ನು ಅದ್ದೂರಿ ಮೆರವಣಿಗೆಯ ಮೂಲಕ ಜಾತ್ರಾ ಗದ್ದುಗೆಯಿಂದ ಕರೆದೊಯ್ಯಲಾಗಿದೆ. 7 ಅಡಿ ಎತ್ತರದ ಭವ್ಯ ವಿಗ್ರಹದ ದೇವಿ ಸಕಲ ಜೀವರಾಶಿಗಳನ್ನು ಹರಸಿ ಹೊರಟಂತೆ ಭಾಸವಾಗಿದ್ದಂತೂ ಸುಳ್ಳಲ್ಲ. ಹೀಗೆ ಮೆರವಣಿಗೆಯಿಂದ ಹೊರಟ ದೇವಿಯನ್ನು ಸೂತಕ ಕಳೆಯುವವರೆಗೆ ನೀರಿನಲ್ಲಿ ಮುಳುಗಿಸಲಾಗುತ್ತದೆ. ಯುಗಾದಿಯ ದಿನ ದೇವಿಯನ್ನು ತೆಗೆದು ಮತ್ತೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆಗ ದೇವಿ ಮತ್ತೆ ಕನ್ಯೆಯಾಗುತ್ತಾಳೆ. ಶಿರಸಿ ಜಾತ್ರೆಯಲ್ಲಿ ಭಕ್ತರು ಉಡಿ ಸೇವೆ, ಬೆಳ್ಳಿ, ಬಂಗಾರದ ಕಣ್ಣಿನ ಸಮರ್ಪಣೆ ಸೇರಿದಂತೆ ಭಕ್ತರು ಕಷ್ಟ ಪರಿಹಾರಕ್ಕೆ, ಇಷ್ಟಾರ್ಥ ಸಿದ್ಧಿಗೆ ಹರಕೆಯನ್ನು ಹೇಳಿಕೊಂಡು ತೀರಿಸಿದ್ದಾರೆ.
ಜನಜಂಗುಳಿ:
ಪ್ರತೀ ವರ್ಷದಂತೆ ಈ ಬಾರಿ ಜಾತ್ರೆಯ 9 ದಿನವೂ ಜನಸ್ತೋಮವೇ ತುಂಬಿಕೊಂಡಿತ್ತು. ಕಣ್ಣು ಕುಕ್ಕುವ ಬಳೆ ಪೇಟಿ, ನಾನಾ ವಿಧದ ಗೇಮ್ಗಳು ಜನರನ್ನು ಆಕರ್ಷಿಸಿವೆ. ಒಂದು ವರದಿಯ ಪ್ರಕಾರ ಈ ವರ್ಷ ವಾರಾಂತ್ಯದಲ್ಲಿ ಬರೋಬ್ಬರಿ 6 ಲಕ್ಷ ಜನ ಭಕ್ತರು ಶಿರಸಿಗೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. ಕಣ್ಣು ಹಾಯಿಸಿದಷ್ಟು ದೂರ ಜನ, ಕಲರ್ ಕಲರ್ ಲೈಟ್ಗಳಿಂದ ಅಲಂಕೃತವಾದ ಗೇಮ್ಗಳು. ಜಾಯಿಂಟ್ ವೀಲ್, ಟೊರೋ ಟೊರೋ, ಬ್ರೆಕ್ ಡ್ಯಾನ್ಸ್, ಹ್ಯಾಮರ್, ಬೋಟಿಂಗ್ ಹೀಗೆ ನಾನಾ ಬಗೆಯ ಆಟಿಕೆಗಳನ್ನು ಆಡಿ ಜನ ಜಾತ್ರೆಯನ್ನು ಭರ್ಜರಿಯಾಗಿ ಎಂಜಾಯ್ ಮಾಡಿದ್ದಾರೆ.
ಮಳೆಕಾಟ:
ಈ ಬಾರಿ ಜಾತ್ರೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೀದಿ ಬದಿ ವ್ಯಾಪಾರಿಗಳಿ ಸಂಕಷ್ಟ ಪಡುವಂತಾಯುತು. ಜಾತ್ರಾ ಮಂಟಪಕ್ಕೆ ತುಸು ಹಾನಿಯಾಗಿದ್ದರೂ, ಅದನ್ನು ಸರಿಪಡಿಸಿ ಸಾಂಗವಾಗಿ ಜಾತ್ರೆ ನೆರವೇರಿಸಲಾಗಿದೆ. ಇನ್ನು ಶಿರಸಿ ಜಾತ್ರೆ ನೋಡಬೇಕೆಂದರೆ 2 ವರ್ಷ ಕಾಯಬೇಕು. ಮತ್ತೆ ತಾಯಿ ಮಾರೆಮ್ಮ ಭಕ್ತರಿಗೆ ನಿಕಟ ದರ್ಶನ ನೀಡುವುದು ಇನ್ನೊಂದು ಜಾತ್ರೆಯಲ್ಲಿಯೇ ಸರಿ. ಒಟ್ಟನಲ್ಲಿ, ಕರ್ನಾಟಕದ ಅತಿ ದೊಡ್ಡ ಜಾತ್ರೆಗೆ ಇಂದು ಅದ್ದೂರಿ ತೆರೆ ಬಿದ್ದಿದೆ. ಭಕ್ತರನ್ನು ಹರಸಿ ತಾಯಿ ಮಾರಿಕಾಂಬೆ ಸ್ಥಾನಕ್ಕೆ ಮರಳಿದ್ದಾಳೆ. ಸಕಲಿರಿಗೂ ಸನ್ಮಂಗಳವನ್ನೇ ಉಂಟು ಮಾಡುವ ಆಕೆಯ ದರ್ಶನ ಪಡೆದ ಭಕ್ತರು ಪುಳಕಿತರಾಗಿದ್ದಾರೆ,
ಇದನ್ನೂ ಓದಿ:
ಕಣ್ಸೆಳೆಯುವ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ: ಇತಿಹಾಸ, ಮಹತ್ವವೇನು? ಇಲ್ಲಿದೆ ಮಾಹಿತಿ
Published On - 4:43 pm, Wed, 23 March 22