ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ

ವಿದ್ಯೆ ಇಲ್ಲದಿದ್ದರೂ ನಿತ್ಯ ಕಾಯಕದ ಕಲ್ಪನೆಯೊಂದಿಗೆ ಹೊಲದಲ್ಲಿರುವ ಕೊಳವೆ ಬಾವಿಯ ನೀರಿಗೆ ಅನುಗುಣವಾಗಿ ರೈತ ಸಿದ್ದಪ್ಪ 1 ಎಕರೆ 20 ಸೆಂಟ್ಸ್ ಭೂಮಿಯಲ್ಲಿ ಕೀರೆ, ದಂಟು, ಪಾಲಾಕ್, ಕೊತ್ತಂಬರಿ, ರಾಜನ ಸೊಪ್ಪು, ಸಪ್ಪಸೀಗೆ, ಬಸಳೆ, ಪುಂಡೇ ಹೀಗೆ ವಿವಿಧ ರೀತಿಯ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ.

ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ
1 ಎಕರೆ 20 ಸೆಂಟ್ಸ್ ಭೂಮಿಯಲ್ಲಿ ಸೊಪ್ಪನ್ನು ಬೆಳೆದಿದ್ದಾರೆ
Follow us
| Updated By: Lakshmi Hegde

Updated on: Apr 08, 2021 | 2:46 PM

ದಾವಣಗೆರೆ:  ಹರನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದ ರೈತ ಸಿದ್ದಪ್ಪ ಎಂಬುವರು ಬಿರುಬೇಸಿಗೆಯಲ್ಲಿ ಸೊಪ್ಪನ್ನು ಬೆಳೆದು ಯಶಸ್ವಿಯಾಗಿದ್ದಾರೆ. ನೀರಿಲ್ಲ, ಕೈಯಲ್ಲಿ ಕಾಸಿಲ್ಲ ಎಂದು ಬೇಸರಿಸುತ್ತ ಕುಳಿತುಕೊಳ್ಳುವ ರೈತರಿಗೆ ಸ್ಫೂರ್ತಿಯಾಗಿದ್ದಾರೆ.  ಇವರ ಕೆಲಸಕ್ಕೆ ಪುತ್ರ ಹಾಗೂ ಪತ್ನಿ ಜತೆಯಾಗಿದ್ದಾರೆ. ಕೃಷಿಗಾಗಿ ಕೊಳವೆ ಬಾವಿಯನ್ನು ಅವಲಂಬಿಸಿದ್ದು, 1 ಎಕರೆ 20 ಗುಂಟೆ ಭೂಮಿಯಲ್ಲಿ ಕೀರೆ, ದಂಟು, ಪಾಲಾಕ್​, ಕೊತ್ತಂಬರಿ, ರಾಜನಸೊಪ್ಪು, ಸಬ್ಬಸಿಗೆ, ಬಸಳೆ, ಪುಂಡೆ.. ಹೀಗೆ ವಿವಿಧ ರೀತಿಯ ಸೊಪ್ಪುಗಳನ್ನು ಬೆಳೆದಿದ್ದಾರೆ. 

ಇತರೆ ರೈತರಲ್ಲೂ ಉತ್ಸಾಹ ಹರಪನಹಳ್ಳಿ-ದಾವಣಗೆರೆ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಸಿದ್ದಪ್ಪ ವಿವಿಧ ಸೊಪ್ಪುಗಳನ್ನು ಬೆಳೆದಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುವ ಸೊಪ್ಪಿನ ಬೆಳೆಗೆ ದಾರಿಹೋಕರು ಮನಸೋತು ಸ್ಥಳೀಯವಾಗಿ ಖರೀದಿಗೆ ಮುಂದಾಗುತ್ತಾರೆ. ಸುತ್ತಮುತ್ತಲಿನ ಗ್ರಾಮದಲ್ಲಿ ಯಾವುದೇ ಧಾರ್ಮಿಕ, ಶುಭ ಸಮಾರಂಭಗಳನ್ನು ಹಮ್ಮಿಕೊಂಡರೂ ಹೊಲದಲ್ಲಿಯೇ ಬಂದು ತಾಜಾ ಸೊಪ್ಪುಗಳನ್ನು ಖರೀದಿಸುವುದರಿಂದ ಮಾರುಕಟ್ಟೆ ಸಾಗಾಣಿಕೆ ವೆಚ್ಚ ಉಳಿತಾಯ ಆಗಲಿದೆ. ಹಾಗಾಗಿ ಇತರೆ ರೈತರಲ್ಲೂ ಉತ್ಸಾಹ ತುಂಬಿದೆ. ದಶಕಗಳಿಂದ ಸಮರ್ಪಕ ಮಳೆಗಾಲ ಇಲ್ಲದೆ ತೇವಾಂಶ ಕೊರತೆ ನಡುವೆಯು ಬುದ್ಧಿವಂತಿಕೆ ತೋರಿದ ರೈತ ಸಿದ್ದಪ್ಪ ಕುಟುಂಬಸ್ಥರಿಗೆ ಸ್ವಂತ ಹೊಲದಲ್ಲಿಯೇ ಉದ್ಯೋಗ ಒದಗಿಸಿಕೊಟ್ಟಂತಾಗಿದೆ. ವಿದ್ಯುತ್ ಬರುವ ಸಮಯಕ್ಕೆ ಸರಿಯಾಗಿ ಹೊಲದಲ್ಲಿಯೇ ಇದ್ದು ಭೂಮಿಯ ತೇವಾಂಶ ಆರದಂತೆ ನೋಡಿಕೊಂಡರೆ, ಮಗ ಪ್ರಕಾಶ್ ಸೊಪ್ಪು ಕೊಯ್ಲು ಮಾಡಿ ಮನೆಗೆ ತರುತ್ತಾರೆ.

ರೈತ ಸಿದ್ದಪ್ಙನವರ ತಾಯಿ ಮತ್ತು ಹೆಂಡತಿ ಮನೆಯಲ್ಲಿ ಸೊಪ್ಪಿನ ಕಟ್ಟನ್ನು ತಯಾರಿಸುತ್ತಾರೆ

20,000 ಲಾಭ ಸಿದ್ದಪ್ಪ ಅವರ ತಾಯಿ ಹಾಗೂ ಪತ್ನಿಯ ಮನೆಯಲ್ಲಿಯೇ ಕುಳಿತು ಸೊಪ್ಪಿನ ಕಟ್ಟುಗಳನ್ನು ಕಟ್ಟಿ ಮಾರುಕಟ್ಟೆಗೆ ಸಾಗಿಸಲು ಸಹಕಾರಿಯಾಗಿದ್ದಾರೆ. ಇದರಿಂದ ನಿತ್ಯ ಮನೆ ಮಂದಿಯೇ ದುಡಿಯುವ ಅರೆಕಾಲಿಕ ಉದ್ಯೋಗವಾಗಿ ಸೊಪ್ಪು ಬೆಳೆ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ. ಕೆರೆ ಮಣ್ಣು, ಕೊಟ್ಟಿಗೆ ಗೊಬ್ಬರವನ್ನು ಹೊಲಕ್ಕೆ ಹಾಕಿಸಿದ ನಂತರ ಭೂಮಿಯನ್ನು ಹದಗೊಳಿಸಲಾಗುತ್ತದೆ. ಪ್ರತಿ ಒಂದು ಬಗೆಯ ಸೊಪ್ಪಿಗೆ ಪ್ರತ್ಯೇಕ ಮಡಿಗಳನ್ನು ನಿರ್ಮಿಸಿದ ಬಳಿಕ ಹದಗೊಳಿಸಿದ ಭೂಮಿಗೆ ಬೀಜ ಹಾಕಲಾಗುತ್ತದೆ. ನಾಲ್ಕು ತಿಂಗಳ ಅವಧಿಗೆ ಸೊಪ್ಪು ಬೆಳೆಯುತ್ತೇವೆ. ಬಿತ್ತನೆ ಮಾಡಿ ಒಂದು ತಿಂಗಳ ಅವಧಿಗೆ ಸೊಪ್ಪು ಮಾರಾಟಕ್ಕೆ ಸಿಗುತ್ತದೆ. ಎಕರೆಯೊಂದಕ್ಕೆ 15,000 ಬೀಜ ಹಾಗೂ ಆರೈಕೆಗೆ ಖರ್ಚು ತಗಲುತ್ತದೆ. ಉತ್ತಮ ದರ ಸಿಕ್ಕಲ್ಲಿ ತಿಂಗಳಿಗೆ ಖರ್ಚು ತೆಗೆದು 20,000 ಲಾಭ ಪಡೆಯಬಹುದು. ಭೂಮಿ ಉತ್ತಮ ಪೋಷಕಾಂಶಗಳನ್ನು ಹೊಂದಿದ್ದರೆ ಸೊಪ್ಪು ಬೆಳೆಗೆ ಔಷಧೋಪಚಾರದ ಅವಶ್ಯಕತೆ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಸಾವಯವ ಗೊಬ್ಬರ ಹಾಕಿದಲ್ಲಿ ಬೆಳೆಗೆ ಯಾವ ಬಾಧೆ ತಟ್ಟುವುದಿಲ್ಲ. ಇಳುವರಿಯೂ ಉತ್ತಮವಾಗಿ ಕೈ ಸೇರುತ್ತದೆ.

ರೈತ ಸಿದ್ದಪ್ಪ

ಸೊಪ್ಪನ್ನು ನೆರೆಯ ಹಿರೇಮೆಗಳಗೆರೆ, ಕಂಚಿಕೆರೆ, ಅರಸೀಕೆರೆ, ಉಚ್ಚಂಗಿದುರ್ಗ ಗ್ರಾಮಗಳಲ್ಲಿ ನಡೆಯುವ ಸಂತೆಗೆ  ಮಾರಾಟ ಮಾಡುತ್ತೇವೆ. ಆದರೆ ಕೂಲಿಕಾರರ ಸಮಸ್ಯೆಯಿಂದ ಈಚೆಗೆ ಸಮೀಪದ ದಾವಣಗೆರೆ ಮಾರುಕಟ್ಟೆ ಸಾಗಿಸುತ್ತೇವೆ ಎಂದು ರೈತ ಸಿದ್ದಪ್ಪ ಅವರ ಪುತ್ರ ಪ್ರಕಾಶ್ ಹೇಳಿದರು.

ಕೊತ್ತಂಬರಿ, ಮೆಂತೆ, ಕೆಲ ಸೊಪ್ಪು ಹೊರತುಪಡಿಸಿದರೆ ಉಳಿದ ಪಾಲಕ್, ರಾಜನಸೊಪ್ಪು, ಬಸಳೆ, ಕೀರೆ, ದಂಟು ಸೊಪ್ಪುಗಳು ಕೊಯ್ಲು ಮಾಡಿದ ಬಳಿಕ ಮರಳಿ ಚಿಗರೊಡೆಯುತ್ತದೆ. ಅವಗಳನ್ನು ಉತ್ತಮ ಆರೈಕೆ ಮಾಡಿದಲ್ಲಿ ಮಾರಾಟಕ್ಕೆ ಬರುತ್ತದೆ. ಚಿಗುರು ಸೊಪ್ಪಿಗೆ ರೋಗಗಳು ತಗಲುವ ಲಕ್ಷಣಗಳು ಹೆಚ್ಚು. ಆದರೆ ಅಗತ್ಯ ಮುಂಜಾಗ್ರತಾ ಕ್ರಮತೆಗೆದುಕೊಂಡಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಯುವ ರೈತ ಪ್ರಕಾಶ್ ತಿಳಿಸಿದರು.

(ವರದಿ: ಬಸವರಾಜ್ ದೊಡ್ಡಮನಿ- 9980510127)

ಇದನ್ನೂ ಓದಿ

ನಿವೃತ್ತಿ ಅಂಚಿನಲ್ಲಿದ್ದರೂ ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರು! ಮುಷ್ಕರದ ಮಧ್ಯೆ ಕರ್ತವ್ಯ ನಿಷ್ಠೆ ಮೆರೆದ ಇಬ್ಬರಿಗೆ ಸನ್ಮಾನ

ಚಡ್ಡಿ ಹಾಕಿಕೊಂಡೇ ತಾಳಿಕಟ್ಟಿದ ವರ; ತನ್ನ ಪತಿಯೇಕೆ ಬಟ್ಟೆ ಧರಿಸಿಲ್ಲ ಎಂಬುದಕ್ಕೆ ಕಾರಣ ಹೇಳಿದ ವಧು

(Farmer of Davanagere has grown in sunburn)