ಹತ್ತಿ ಸಂಸ್ಕರಣ ಘಟಕ ಸ್ಥಾಪಿಸದೇ ನಿರ್ಲಕ್ಷ್ಯ; ಸರ್ಕಾರಿ ಕಾಟನ್ ಮಿಲ್ಗಳಿಲ್ಲದೆ ಯಾದಗಿರಿ ಹತ್ತಿ ಬೆಳೆಗಾರರ ಪರದಾಟ
ಯಾದಗಿರಿ ಜಿಲ್ಲೆಯ ಅರ್ಧ ಭಾಗದಷ್ಟು ರೈತರು ಹತ್ತಿ ಬೆಳೆಯನ್ನೇ ಸಾಮಾನ್ಯವಾಗಿ ಬೆಳೆಯುತ್ತಾರೆ. ಭೀಮ ಮತ್ತು ಕೃಷ್ಣ ನದಿಗಳು ಇರುವ ಕಾರಣಕ್ಕೆ ಮತ್ತು ಈ ಜಮೀನುಗಳಲ್ಲಿ ಹತ್ತಿ ಬೆಳೆ ಹೆಚ್ಚು ಇಳುವರಿ ಬರುತ್ತದೆ ಎನ್ನುವ ಕಾರಣಕ್ಕೆ ಹತ್ತಿ ಬೆಳೆಯನ್ನ ಬೆಳೆಯುತ್ತಾರೆ.
ಯಾದಗಿರಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ 15,27,98 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದ್ದು, ನೀರಾವರಿ 54,666 ಮತ್ತು ಖುಷ್ಕಿ ಜಮೀನಿನಲ್ಲಿ 98,132 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ನಿಟ್ಟಿನಲ್ಲಿ ಹತ್ತಿ ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಹೆಚ್ಚಳವಾಗಿದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯುವ ಹತ್ತಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಸದ್ಯ ಸಮಸ್ಯೆಯಾಗಿದೆ.
ಯಾದಗಿರಿ ಜಿಲ್ಲೆಯ ಅರ್ಧ ಭಾಗದಷ್ಟು ರೈತರು ಹತ್ತಿ ಬೆಳೆಯನ್ನೇ ಸಾಮಾನ್ಯವಾಗಿ ಬೆಳೆಯುತ್ತಾರೆ. ಭೀಮಾ ಮತ್ತು ಕೃಷ್ಣಾ ನದಿಗಳು ಇರುವ ಕಾರಣಕ್ಕೆ ಮತ್ತು ಈ ಜಮೀನುಗಳಲ್ಲಿ ಹತ್ತಿ ಬೆಳೆ ಹೆಚ್ಚು ಇಳುವರಿ ಬರುತ್ತದೆ ಎನ್ನುವ ಕಾರಣಕ್ಕೆ ಹತ್ತಿ ಬೆಳೆಯನ್ನ ಬೆಳೆಯುತ್ತಾರೆ. ಆದರೆ ಹತ್ತಿ ಬೆಳೆದ ಜಿಲ್ಲೆಯ ರೈತರಿಗೆ ಹತ್ತಿ ಮಾರಾಟ ಮಾಡಲು ರಾಯಚೂರಿನಲ್ಲಿರುವ ಸರ್ಕಾರದ ಕಾಟನ್ ಮಿಲ್ಗೆ ಹೋಗಬೇಕಾಗಿದೆ.
ಹತ್ತಿ ಸಂಸ್ಕರಣ ಘಟಕ ಇಲ್ಲ: ಜಿಲ್ಲೆಯ ರೈತರು ಮುಂಗಾರು ಹಂಗಾಮಿನ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಹತ್ತಿಗೆ ಸೂಕ್ತ ಸಂಸ್ಕರಣ ಘಟಕ ಇಲ್ಲದ ಕಾರಣ ನಷ್ಟಕ್ಕೊಳಗಾಗುತ್ತಿದ್ದಾರೆ. ಸರ್ಕಾರ ಖರೀದಿ ಕೇಂದ್ರ ತೆಗೆಯುವ ಮುನ್ನ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ನಷ್ಟ ಉಂಟು ಮಾಡುತ್ತಿದೆ.
ಸರ್ಕಾರಕ್ಕೆ ನಷ್ಟ: ರಾಜ್ಯದ ಎಲ್ಲಾ ಭಾಗಗಳಲ್ಲಿ ಸರ್ಕಾರಿ ಕಾಟನ್ ಮಿಲ್ಗಳಿಲ್ಲ. ಹೀಗಾಗಿ ಸರ್ಕಾರಕ್ಕೆ ಇದರಿಂದ ವರ್ಷದಿಂದ ವರ್ಷಕ್ಕೆ ಸಾಕಷ್ಟು ನಷ್ಟವಾಗುತ್ತಿದೆ. ಸರ್ಕಾರದಿಂದಲೇ ಹತ್ತಿ ಸಂಸ್ಕರಣ ಘಟಕ ಆರಂಭಿಸಿದರೆ ರೈತರು ಯಾವಾಗ ಬೇಕು ಆವಾಗ ತಾವು ಬೆಳೆದ ಹತ್ತಿಯನ್ನ ಮಾರಾಟ ಮಾಡಬಹುದು. ಆದರೆ ಸರ್ಕಾರ ಈ ಗೋಜಿಗೆ ಹೋಗದೆ ರೈತರಿಗೂ ನಷ್ಟ ಅನುಭವಿಸುವಂತೆ ಮಾಡಿ ಖುದ್ದು ಸರ್ಕಾರವು ನಷ್ಟದಲ್ಲಿ ಮುಳುಗುತ್ತಿದೆ.
ನಮ್ಮ ಜಿಲ್ಲೆಯ ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯನ್ನ ಬೆಳೆಯುತ್ತಿದ್ದಾರೆ. ಇನ್ನು ಸರ್ಕಾರ ಕಾಟನ್ ಮಿಲ್ ಇಲ್ಲದ ಕಾರಣಕ್ಕೆ ರಾಯಚೂರಿಗೆ ಹೋಗಬೇಕಾಗಿದೆ. ಆದರೆ ದೂರದ ಊರಿಗೆ ಏಕೆ ಹೋಗಬೇಕು ಎಂದು ರೈತರು ಸಿಕ್ಕ ಬೆಲೆಗೆ ಇಲ್ಲೇ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಜಿಲ್ಲೆಯಲ್ಲಿ ಹತ್ತಿ ಸಂಸ್ಕರಣ ಘಟಕ ಆರಂಭಿಸಬೇಕು ಎಂದು ರೈತ ಮುಖಂಡ ಲಕ್ಷ್ಮೀಕಾಂತ ಪಾಟೀಲ್ ಆಗ್ರಹಿಸಿದ್ದಾರೆ.
ಸರ್ಕಾರದ ಹತ್ತಿ ಖರೀದಿ ಕೇಂದ್ರ ತಡವಾಗಿ ತೆಗೆಯುತ್ತದೆ. ಹೀಗಾಗಿ ರೈತರು ಪರ್ಯಾಯವಾಗಿ ಖಾಸಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಲಾಸ್ ಆಗುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಹತ್ತಿ ಜಿನ್ನಿಂಗ್ ಫ್ಯಾಕ್ಟರಿ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಅಧಿಕಾರಿ ಭೀಮರಾಯ ಮಸಲಿ ಹೇಳಿದ್ದಾರೆ.
ಇದನ್ನೂ ಓದಿ: ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್
Published On - 12:16 pm, Fri, 5 March 21