ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಯಂತ್ರಣಕ್ಕೆ ತರುವಂತೆ ಧರ್ಮೇಂದ್ರ ಪ್ರಧಾನ್​ಗೆ ಎಫ್​ಕೆಸಿಸಿಐ ಪತ್ರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 22, 2021 | 12:54 AM

ಪೆಟ್ರೋಲ್ ಮೂಲಬೆಲೆ ಪ್ರತಿ ಲೀಟರ್​​ಗೆ ಕೇವಲ ರೂ. 32 ಮಾತ್ರ ಇದ್ದು ಭಾರತ ಸರ್ಕಾರ ಶೇಕಡಾ 35 ರಷ್ಟು ಮತ್ತು ರಾಜ್ಯ ಸರ್ಕಾರಗಳಿ ಶೇಕಡಾ 32 ತೆರಿಗೆಗಳನ್ನು ಅದರ ಮೇಲೆ ವಿಧಿಸುತ್ತಿರಿವುದರಿಂದ ನಮ್ಮ ದೇಶದಲ್ಲಿ ಅದರ ಬೆಲೆ ರೂ 100 ಕ್ಕಿಂತ ಜಾಸ್ತಿಯಾಗಿದೆ ಮತ್ತು ಡೀಸೆಲ್ ಬೆಲೆ ರೂ 92 ಇದೆ.

ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಯಂತ್ರಣಕ್ಕೆ ತರುವಂತೆ ಧರ್ಮೇಂದ್ರ ಪ್ರಧಾನ್​ಗೆ ಎಫ್​ಕೆಸಿಸಿಐ ಪತ್ರ
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ
Follow us on

ಬೆಂಗಳೂರು:  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು, ಕೇಂದ್ರ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾಗಿರುವ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರವೊಂದನ್ನು ಬರೆದು ಜನಸಾಮಾನ್ಯರಿಗೆ ದುಸ್ವಪ್ನವಾಗಿ ಕಾಡುತ್ತಿರುವ ಪೆಟ್ರೋಲಿಯಂ ತೈಲಗಳ ಬೆಲೆಯನ್ನು ರಾಜ್ಯ ಸರ್ಕಾರಗಳೊಡನೆ ಚರ್ಚಿಸಿ ನಿಯಂತ್ರಣಕ್ಕೆ ತರಬೇಕೆಂದು ಕೋರಿದೆ. ಪೆಟ್ರೋಲ್ ಮತ್ತು ಡೀಸೆಲ್​ಗಳ ಬೆಲೆ ಪ್ರತಿದಿನ ಹೆಚ್ಚುತ್ತಿರುವುದರಿಂದ ಅಗತ್ಯವಸ್ತುಗಳ ಬೆಲೆಗಳೂ ಮಿತಿಮೀರಿ ಹೆಚ್ಚುತ್ತಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪತ್ರದ ಸಾರಾಂಶ ಕೆಳಗಿನಂತಿದೆ.

ಭಾರತದಲ್ಲಿ ದಿನಂಪ್ರತಿ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ತೀವ್ರ ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಕುಸಿತ ಕಂಡುಬಂದಿದೆಯಾದರೂ, ಭಾರತದಲ್ಲಿ ಮಾತ್ರ ಪೆಟ್ರೋಲಿಯೊ ತೈಲಗಳ ಬೆಲೆಯನ್ನು ನಿಯಮಿತವಾಗಿ ಹೆಚ್ಚಿಸಲಾಗುತ್ತಿದ್ದು, ಜನ ಸಾಮಾನ್ಯ ತೀವ್ರ ಸ್ವರೂಪದ ಸಂಕಷ್ಟಕ್ಕೀಡಾಗಿ ಯಾತನೆ ಅನುಭವಿಸುತ್ತಿದ್ದಾರೆ.

ಕೃಷಿ ಸೇರಿದಂತೆ ಕೈಗಾರಿಕಾ, ಸೇವಾಕ್ಷೇತ್ರ ಹಾಗೂ ಇನ್ನುಳಿದ ಕ್ಷೇತ್ರಗಳು ಸತತವಾಗಿ ಅಪ್ಪಳಿಸಿರುವ ಎರಡು ಕೊವಿಡ್-19 ಪಿಡುಗಿನ ಅಲೆಗಳಿಂದ ಹೆಚ್ಚು ಕಡಿಮೆ ನಿಂತೇ ಹೋಗಿವೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ವ್ಯಾಪಾರೀ ಸಂಸ್ಥೆಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ ಮತ್ತು ಕಾನೂನಾತ್ಮಕ ತೆರಿಗೆಗಳು, ವಿದ್ಯುತ್ ಬಿಲ್‌, ವೇತನಗಳು, ಬ್ಯಾಂಕ್ ಮರುಪಾವತಿಗಳು ಮತ್ತು ಇತರ ನಿರ್ವಹಣಾ ಶುಲ್ಕಗಳಂತಹ ಅಗತ್ಯ ಪಾವತಿಗಳನ್ನು ಮಾಡಲು ಜನರಿಗೆ ಸಾಧ್ಯವಾಗುತ್ತಿಲ್ಲ.

ಪರಿಸ್ಥಿತಿ ಹೀಗಿರುವಾಗ, ಪೆಟ್ರೋಲ್ ಮತ್ತು ಡೀಸೆಲ್​ಗಳ ಬೆಲೆ ದಿನೇದಿನ ಹೆಚ್ಚುತ್ತಿರುವುದು ದೇಶದ ನಿವಾಸಿಗಳ ಮೇಲೆ ವೀಪರೀತ ಹೊರೆಯಾಗುತ್ತಿದೆ. ತಮ್ಮ ದೈನಂದಿನ ತಿರುಗಾಟಕ್ಕೆ ದ್ವಿಚಕ್ರ ವಾಹನಗಳು, ಆಟೋ ಮತ್ತು ಕ್ಯಾಬ್​ಗಳನ್ನು ಅವಲಂಬಿಸುವ ಜನ ಈ ಸ್ಥಿತಿಯೊಂದಿಗೆ ಏಗಲು ವ್ಯರ್ಥಪ್ರಯತ್ನ ಮಾಡುತ್ತಿದ್ದಾರೆ.

ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ಪೆಟ್ರೋಲ್ ಮೂಲಬೆಲೆ ಪ್ರತಿ ಲೀಟರ್​​ಗೆ ಕೇವಲ ರೂ. 32 ಮಾತ್ರ ಇದ್ದು ಭಾರತ ಸರ್ಕಾರ ಶೇಕಡಾ 35 ರಷ್ಟು ಮತ್ತು ರಾಜ್ಯ ಸರ್ಕಾರಗಳಿ ಶೇಕಡಾ 32 ತೆರಿಗೆಗಳನ್ನು ಅದರ ಮೇಲೆ ವಿಧಿಸುತ್ತಿರಿವುದರಿಂದ ನಮ್ಮ ದೇಶದಲ್ಲಿ ಅದರ ಬೆಲೆ ರೂ 100 ಕ್ಕಿಂತ ಜಾಸ್ತಿಯಾಗಿದೆ ಮತ್ತು ಡೀಸೆಲ್ ಬೆಲೆ ರೂ 92 ಇದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಅವು ವಿಧಿಸಸಿತ್ತಿರುವ ತೆರಿಗೆಗಳನ್ನು ಶೇಕಡಾ 15 ಕ್ಕೆ ಜಾಸ್ತಿಯಾಗದಂತೆ ವಿಧಿಸಿ ಪೆಟ್ರೋಲಿಯಂ ತೈಲಗಳ ಬೆಲೆಯನ್ನು ಶೇಕಡಾ 40 ರಷ್ಟು ಕಡಿಮೆಯಾಗುವ ಗಾಹೆ ಏರ್ಪಾಟು ಮಾಡಬೇಕೆಂದು ಮನವಿ ಮಾಡಿದೆ. ಹಾಗಾದಲ್ಲಿ ಮಾತ್ರ ಪೆಟ್ರೋಲ್ ಮತ್ತು ಡೀಸೆಲಗಳ ಬೆಲೆ ಜನಸಾಮಾನ್ಯ, ಉದ್ದಿಮೆ ಮತ್ತು ವಾಣಿಜ್ಯ ಸಂಸ್ಥೆಗಳ ಕೈಗೆಟುಕುವಂತಾಗುತ್ತದೆ ಎಂದು ಹೇಳಿದೆ.

ಪತ್ರದಲ್ಲಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಕಳೆದ 20 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಯಾವ ಪರಿ ಹೆಚ್ಚಿದೆ ಎನ್ನುವುದನ್ನು ವಿವರಿಸಿದೆ. 2003 ರಲ್ಲಿ ಪ್ರತಿ ಲೀಟರ್​ಗೆ ಕೇವಲ 33.49 ಇದ್ದ ಪೆಟ್ರೋಲ್ ಬೆಲೆ 2006 ರಲ್ಲಿ ರೂ. 43.50, 2009ರಲ್ಲಿ ರೂ. 44.70, 2012 ರಲ್ಲಿ ರೂ. 65.60. 2015ರಲ್ಲಿ ರೂ. 60.49. 2018ರಲ್ಲಿ ರೂ. 75.55 ಮತ್ತು 2021 ರಲ್ಲಿ ರೂ. 100 ಆಗಿದೆ ಎಂದು ಮಹಾಸಂಸ್ಥೆ ವಿವರಿಸಿದೆ.

ಹಾಗೆಯೇ ಡೀಸೆಲ್ ಬೆಲೆ 2003ರಲ್ಲಿ ರೂ. 22.12, 2006ರಲ್ಲಿ ರೂ. 30.45, 2009ರಲ್ಲಿ ರೂ. 30.86, 2012 ರಲ್ಲಿ ರೂ. 40.19, 2015ರಲ್ಲಿ ರೂ. 49.71, 2018ರಲ್ಲಿ 67.38 ಮತ್ತು 2021 ರಲ್ಲಿ ರೂ. 92,00 ಆಗಿದೆ ಎಂದು ಮಹಾಸಂಸ್ಥೆ ಪತ್ರದಲ್ಲಿ ತಿಳಿಸಿದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಪರವಾಗಿ ಪರಿಕಲ್ ಎಮ್ ಸುಂದರ್ ಹೆಸರಿನ ಪದಾಧಿಕಾರಿ ಪತ್ರಕ್ಕೆ ಸಹಿ ಮಾಡಿದ್ದಾರೆ.

ಇದನ್ನೂ ಓದಿ: Petrol Price Today: ಒಂದು ದಿನದ ವಿರಾಮದ ಬಳಿಕ ಮತ್ತೆ ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಳ; ಗರಿಷ್ಠ ಮಟ್ಟದಲ್ಲಿದೆ ಇಂಧನ ದರ!

Published On - 6:43 pm, Mon, 21 June 21