ಬೀದರ್: ಅರಣ್ಯ ಇಲಾಖೆಯಿಂದ ನೂತನ ಪ್ರಯೋಗ; ಹಸಿರೀಕರಣಕ್ಕಾಗಿ 45 ಸಾವಿರಕ್ಕೂ ಹೆಚ್ಚು ಇಂಗು ಗುಂಡಿ ನಿರ್ಮಾಣ
ಎಲ್ಲಿ ಇಂಗು ಗುಂಡಿಗಳನ್ನು ತೆಗೆಸಲಾಗಿದೆ, ಆ ಸುತ್ತಮುತ್ತಿನ ರೈತರ ಬಾವಿ, ಬೋರ್ವೆಲ್ನಲ್ಲಿಯೂ ಕೂಡಾ ನೀರು ಜಾಸ್ತಿಯಾಗಿದ್ದು, ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿಗಳನ್ನು ತೆಗಸುವುದರಿಂದ ಅರಣ್ಯದಲ್ಲಿ ತೆವಾಂಶ ಹೆಚ್ಚಾಗುತ್ತದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಶಿವಕುಮಾರ್ ರಾಥೋಡ್ ಹೇಳಿದ್ದಾರೆ.
ಬೀದರ್: ಕರ್ನಾಟಕ ಭಾಗದಲ್ಲಿ ಎರಡನೇ ಅತಿಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಎಂದರೆ ಅದು ಬೀದರ್. 55 ಸಾವಿರ ಹೆಕ್ಟರ್ ನಷ್ಟು ಅರಣ್ಯ ಪ್ರದೇಶ ಈ ಜಿಲ್ಲೆಯಲ್ಲಿದೆ. ಜಿಂಕೆ, ಕೃಷ್ಣಮೃಗ, ನಿಲಗಾಯ್ ನಂತಹ ಅಪರೂಪದ ಪ್ರಾಣಿಗಳು ಈ ಅರಣ್ಯದಲ್ಲಿವೆ. ಮಳೆಗಾಲ, ಚಳಿಗಾಲದಲ್ಲಿ ಹಚ್ಚ ಹಸುರಿನಿಂದ ಇಲ್ಲಿನ ಅರಣ್ಯ ಪ್ರದೇಶ ಕಂಗೊಳಿಸುತ್ತದೆ. ಆದರೆ ಬೇಸಿಗೆಯಲ್ಲಿ ಮಾತ್ರ ಕಾಡು ಒಣಗಿದಂತೆ ಕಂಡುಬರುತ್ತದೆ. ಹೀಗಾಗಿ ಬೆಸಿಗೆಯಲ್ಲಿಯೂ ಅರಣ್ಯ ಹಸಿರಿನಿಂದ ಕಾಣಬೇಕು ಎನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆ ಹೊಸ ಯೋಜನೆಯನ್ನು ಮಾಡಿದೆ. ಹಾಗಿದ್ದರೆ ಈ ನೂತನ ಯೋಜನೆ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬೀದರ್ ತಾಲೂಕಿನ ಕಮಠಾಣ ಗ್ರಾಮದ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಇಂಗು ಗುಂಡಿ ತೆಗೆಯುತ್ತಿದ್ದು, ಆ ಮೂಲಕ ಅರಣ್ಯ ಹಸಿರೀಕರಣಕ್ಕೆ ಕೈ ಜೋಡಿಸಿದ್ದಾರೆ. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಅಂದರೆ, ಚರಂಡಿ ರಿಪೇರಿ, ರಸ್ತೆ ದುರಸ್ತಿ, ಸೇತುವೆ ಕಟ್ಟುವಂತಹ ಚಟುವಟಿಕೆಗಳನ್ನು ನಡೆಸುವ ಯೋಜನೆಯೆಂದೇ ಜನಜನಿತ. ಇನ್ನು ಈ ಯೋಜನೆಯಡಿ ಕೆರೆ ಕಟ್ಟೆಗಳ ಹೂಳೆತ್ತುವಂತಹ ಸಮುದಾಯದ ಕೆಲಸಗಳು ಅಲ್ಲಲ್ಲಿ ನಡೆದಿವೆ. ಆದರೆ, ಬೀದರ್ ತಾಲೂಕಿನಲ್ಲಿರುವ ಅರಣ್ಯದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಇದೇ ನರೇಗಾ ಯೋಜನೆಯನ್ನು ಕಳೆದ ಎರಡು ವರ್ಷದಿಂದ ನೆಲ ಜಲ ಸಂರಕ್ಷಣೆ, ಅರಣ್ಯೀಕರಣದಂತಹ ಪರಿಸರ ಸಂರಕ್ಷಣೆಯ ಕಾಮಗಾರಿಗೆ ಬಳಸಿಕೊಂಡಿವೆ.
ಈ ಯೋಜನೆಯಡಿ ತಾಲ್ಲೂಕಿನ, ಚಿಟ್ಟಾ ಅರಣ್ಯ ಪ್ರದೇಶ, ಖಾನಾಪುರ ಅರಣ್ಯ ಪ್ರದೇಶ, ಹೀಗೆ ಬೀದರ್ ತಾಲೂಕು ಒಂದರಲ್ಲಿಯೇ ಇರುವ 260 ಎಕರೆ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ, ಮಳೆ ನೀರು ಇಂಗಿಸುವ 5 ಸಾವಿರ ಇಂಗು ಗುಂಡಿಗಳನ್ನು ತೆಗೆಯಲಾಗಿದೆ. ಕಳೆದ ವರ್ಷವೂ ಕೂಡಾ 5 ಸಾವಿರ ಇಂಗೂಗುಂಡಿಯನ್ನ ತೆಗೆಸಲಾಗಿದ್ದು, ಮಳೆಯಿಂದ ಬಿದ್ದಿರುವ ನೀರು ಇಂಗಬೇಕು ಎನ್ನುವ ಉದ್ದೇಶದಿಂದ 1 ಲಕ್ಷ ಮಾನವ ದಿನಗಳನ್ನು ಉಪಯೋಗಿಸಿಕೊಂಡು ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿ ತೆಗೆಯಲಾಗುತ್ತಿದೆ ಎಂದು ನರೇಗಾ ತಾಲೂಕು ಅಧಿಕಾರಿ ಶರತ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಜಂಟಿಯಾಗಿ ಬೀದರ್ ಜಿಲ್ಲೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿಯನ್ನು ತೆಗೆಸಲಾಗುತ್ತಿದೆ. ಜಿಲ್ಲೆಯಲ್ಲಿ 2020-21 ರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯದಲ್ಲಿ ಇಂಗು ಗುಂಡಿ ತೆಗೆಸುವ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಸಧ್ಯ ಕಳೆದರಡು ವರ್ಷದಲ್ಲಿ 45 ಸಾವಿರಕ್ಕೂ ಹೆಚ್ಚು ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿಯನ್ನು ತೆಗೆಸಲಾಗಿದೆ. ಈ ಇಂಗು ಗುಂಡಿಗಳು 15 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳದ್ದಾಗಿವೆ. ಒಂದು ಗುಂಡಿಯಲ್ಲಿ 1 ಸಾವಿರ ಲೀಟರ್ ನೀರು ಇಂಗುತ್ತದೆ ಇಂತಹ 45 ಸಾವಿರ ಇಂಗುಗುಂಡಿಗಳನ್ನು ಅರಣ್ಯ ಪ್ರದೇಶದಲ್ಲಿ ತೆಗೆಯಲಾಗಿದ್ದು, ಕೊಟ್ಯಾಂತರ ಲೀಟರ್ ನೀರು ಭೂಮಿಯಲ್ಲಿ ಇಂಗುತ್ತದೆ.
ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿಯನ್ನು ತೆಗೆಸುವುದರ ಲಾಭವೆಂದರೆ ನೂರಾರು ಮಂದಿ ಗ್ರಾಮಸ್ಥರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಕೋಟ್ಯಂತರ ಲೀಟರ್ ಮಳೆ ನೀರನ್ನು ಭೂಮಿಗೆ ಇಂಗಿಸಿದಂತಾಗುತ್ತದೆ. ಆ ಮೂಲಕ ಸಾವಿರಾರು ಗಿಡಗಳಿಗೆ, ಪ್ರಾಣಿಗಳಿಗೆ ನೀರಾಸರೆಯಾಗಿದೆ. ಕೆಲವು ಇಂಗು ಗುಂಡಿಗಳನ್ನು ತೆಗೆಯಿಸಿ ವರ್ಷಗಳು ಉರುಳಿದರೆ ಇನ್ನೂ ಕೆಲವು ಗುಂಡಿಗಳು ಎರಡು ತಿಂಗಳು ಕಳೆದಿವೆ, ಈ ನಡುವೆ ಹಿಂಗಾರು ಮತ್ತು ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದೆ ಇದರಿಂದದಾಗಿ ಗುಂಡಿಗಳಲ್ಲಿ ಕೋಟ್ಯಂತರ ಲೀಟರ್ ನೀರು ಇಂಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಶಿವಕುಮಾರ್ ರಾಥೋಡ್ ಮಾಹಿತಿ ನೀಡಿದ್ದಾರೆ.
ಅರಣ್ಯ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗುತ್ತಿದ್ದು, ನೆಟ್ಟಿದ್ದ ಗಿಡ ಮರಗಳು ಹಚ್ಚಹಸುರಿನಿಂದ ಕಂಗೊಳಿಸುತ್ತಿವೆ. ಜೊತೆಗೆ ಎಲ್ಲಿ ಇಂಗು ಗುಂಡಿಗಳನ್ನು ತೆಗೆಸಲಾಗಿದೆ, ಆ ಸುತ್ತಮುತ್ತಿನ ರೈತರ ಬಾವಿ, ಬೋರ್ವೆಲ್ನಲ್ಲಿಯೂ ಕೂಡಾ ನೀರು ಜಾಸ್ತಿಯಾಗಿದ್ದು, ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿಗಳನ್ನು ತೆಗಸುವುದರಿಂದ ಅರಣ್ಯದಲ್ಲಿ ತೆವಾಂಶ ಹೆಚ್ಚಾಗುತ್ತದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಶಿವಕುಮಾರ್ ರಾಥೋಡ್ ಹೇಳಿದ್ದಾರೆ.
ನರೇಗಾ ಯೋಜನೆ ಎಂದರೆ ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಹಳ್ಳ, ಕಾಲುವೆ ತೋಡುವುದಕ್ಕೆ ಸೀಮಿತವಾಗಬೇಕೆಂದೇನೂ ಇಲ್ಲ. ಬೀದರ್ ಅರಣ್ಯದಲ್ಲಿ ನಡೆದಂತಹ ಜಲಕಾಯಕವು ಅರಿವು ಮತ್ತು ಸ್ಫೂರ್ತಿಯನ್ನೂ ಪಸರಿಸುತ್ತದೆ. ಇದರಿಂದಾಗಿ ಅಂತರ್ಜಲ ಮಟ್ಟ ಜಾಸ್ತಿಯಾಗುವುದರ ಜತೆಗೆ ಪರಿಸರ ಕೂಡಾ ಹಸಿರಿನಿಂದ ಕಂಗೊಳಿಸುತ್ತಿದೆ.
ವರದಿ: ಸುರೇಶ್ ನಾಯಕ್