ಅನರ್ಹರ ವಿರುದ್ಧ ಮತ್ತೆ ಕಿಡಿಕಿಡಿ: ಮಾಜಿ ಸ್ಪೀಕರ್ ನೀಡಿರುವ ಪತ್ರ ಸಂದೇಶ ಏನು?
ಬೆಂಗಳೂರು: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕರನ್ನು ಅಂದಿನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಅದರ ಪರಿಣಾಮವೇ ಈಗ ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಾಗಿದೆ. ಈ ಮಧ್ಯೆ ರಮೇಶ್ ಕುಮಾರ್ ಕಾಂಗ್ರೆಸ್ ಅಧ್ಯಕ್ಷರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಮನವಿ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದು ಗಮನಾರ್ಹ ವಿಷಯ.ಸಹಜವಾಗಿಯೇ ಉಪಚುನಾವಣೆಗಳು ಸಂವಿಧಾನಾತ್ಮಕವಾಗಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತವೆ. ಆದರೆ ಇಂದಿನ […]
ಬೆಂಗಳೂರು: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕರನ್ನು ಅಂದಿನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಅದರ ಪರಿಣಾಮವೇ ಈಗ ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಾಗಿದೆ. ಈ ಮಧ್ಯೆ ರಮೇಶ್ ಕುಮಾರ್ ಕಾಂಗ್ರೆಸ್ ಅಧ್ಯಕ್ಷರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಮನವಿ:
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದು ಗಮನಾರ್ಹ ವಿಷಯ.ಸಹಜವಾಗಿಯೇ ಉಪಚುನಾವಣೆಗಳು ಸಂವಿಧಾನಾತ್ಮಕವಾಗಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತವೆ. ಆದರೆ ಇಂದಿನ ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಉಪಚುನಾವಣೆಗಳು ಸಂವಿಧಾನದ 10ನೇ ಷೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ)ಉಲ್ಲಂಘನೆಯ ಕಾರಣದಿಂದಾಗಿ ಶಾಸನಾತ್ಮಕವಾಗಿ ಶಾಸನ ಸಭೆಯ ಸದಸ್ಯರಾಗಿ ಮುಂದುವರೆಯಲು ಅನರ್ಹಗೊಂಡ ಶಾಸಕ ಸ್ಥಾನಗಳನ್ನು ತುಂಬುವ ಉದ್ದೇಶದಿಂದ ಸಂಭವಿಸಿವೆ.
ದೇಶದ ಸರ್ವೋಚ್ಛ ನ್ಯಾಯಾಲಯ ಅನರ್ಹತೆಗೆ ಒಳಪಟ್ಟ ಶಾಸಕರು ಸಲ್ಲಿಸಿದ ಮನವಿಯನ್ನು ಭಾಗಶ: ಗೌರವಿಸಿದೆ. ಇದರ ಪರಿಣಾಮವಾಗಿ, ಅನರ್ಹತೆಯನ್ನು ಸ್ಥಿರೀಕರಣ ಗೊಳಿಸಿ ಉಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅಂಶದ ಬಗ್ಗೆ ನಾನು ವ್ಯಾಖ್ಯಾನಿಸುವುದಿಲ್ಲ. ಆದರೆ, 15ನೇ ವಿಧಾನಸಭೆಗೆ ಆಯ್ಕೆಗೊಂಡ ಹಲವು ಶಾಸಕರು ಸಂವಿಧಾನ ವಿರೋಧಿ ಚಟುವಟಿಕೆಗಳ ಕಾರಣದಿಂದ ಅನರ್ಹಗೊಂಡ, ಅಂತಹ ಅನರ್ಹತೆಯಿಂದ ತೆರವುಗೊಂಡ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಪುನ: ಅವರು ಸ್ಪರ್ಧಿಸಲು ತಾಂತ್ರಿಕವಾಗಿ ಕಾನೂನಿನಲ್ಲಿ ಅವಕಾಶವಿದ್ದರೂ ನೈತಿಕವಾಗಿ ಇದು ಪ್ರಜಾಪ್ರಭುತ್ವಕ್ಕೆ ಆಗುವ ಘೋರ ಅಪಮಾನ.
ದೇಶದ ಸರ್ವೋಚ್ಛ ನ್ಯಾಯಾಲಯವು ಬಹುಶ:ಅತ್ಯಂತ ಗಂಭೀರವಾಗಿ, ಪ್ರೌಢಿಮೆಯಿಂದ ಈ ವಿಷಯವನ್ನು ಇತ್ಯರ್ಥಗೊಳಿಸಲು ಎರಡು ಭಾಗಗಳಾಗಿ ವಿಂಗಡಿಸಿದೆ :
1. ಅಂತಹ ಅನರ್ಹರಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನತೆ ಸೂಕ್ತವಾದ ಪಾಠ ಕಲಿಸಬೇಕೆಂದು ,ಅದರ ಮುಖೇನ ನಮ್ಮ ಮತದಾರರು ಅತ್ಯಂತ ಪ್ರಬುದ್ಧರು ಎಂದು ಜಗತ್ತಿಗೆ ತೋರಿಸಬೇಕಿದೆ. 2. ದೇಶದ ಚುಕ್ಕಾಣಿಯನ್ನು ಹಿಡಿದಿರುವ ಮಹಾನುಭಾವರು ಈ ದೇಶದಲ್ಲಿ ತ್ಯಾಗ ಬಲಿದಾನಗಳ ಹಿನ್ನೆಲೆಯಲ್ಲಿ ಗಳಿಸಿದ ಪ್ರಜಾಸತ್ತೆಯನ್ನು ಬಲಪಡಿಸಲು, ಸದೃಢಗೊಳಿಸಲು, ಈ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ಸಮಗ್ರ ತಿದ್ದುಪಡಿಗೆ ಒಳಪಡಿಸಿ ,ನೈಜ ಪ್ರಜಾಪ್ರಭುತ್ವ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ತಮ್ಮ ಬದ್ಧತೆಯನ್ನು ರುಜುವಾತು ಮಾಡಬೇಕಾಗಿದೆ.
ಇದರ ಜೊತೆಜೊತೆಗೆ ತೀವ್ರಸ್ವರೂಪದ, ಪರಿಣಾಮಕಾರಿಯಾದ, ಸಾಮಾನ್ಯ ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಚುನಾವಣೆಯ ಸುಧಾರಣೆಗಳನ್ನೂ ತರಬೇಕಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು, ಉಪಚುನಾವಣೆಗಳನ್ನು ಮೌಲ್ಯಾಧಾರಿತ ವಾಗಿ ಎದುರಿಸುತ್ತಿರೋ ಅಥವಾ ಕೇವಲ ಕ್ಷುಲ್ಲಕ ರಾಜಕೀಯ ಹೆಚ್ಚುಗಾರಿಕೆಗಾಗಿ ಮಾಡುವ ಮತ್ತೊಂದು ಅಪವಿತ್ರದ ಕದನವೋ ಎಂದು ಜನತೆಗೆ ತಿಳಿಸಬೇಕಾಗಿದೆ.
ಈ ಉಪಚುನಾವಣೆಗಳಲ್ಲಿ ಗೆಲುವು ಸೋಲುಗಳು, ಹೊಂದಾಣಿಕೆ, ಮರು ಹೊಂದಾಣಿಕೆಗಳು ಮುಖ್ಯವಲ್ಲ. ಪ್ರಜಾಸತ್ತೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನು ನಿರ್ಲಜ್ಜರಾಗಿ ಉಲ್ಲಂಘಿಸಿ ತಮ್ಮ ಸ್ವಾರ್ಥ ರಾಜಕಾರಣವನ್ನೇ ತ್ಯಾಗ ಎಂದು ಜನರಲ್ಲಿ ಭ್ರಮೆ ಹುಟ್ಟಿಸುವ ಅಪಾಯವೂ ನಮ್ಮನ್ನು ಕಾಡುತ್ತಿದೆ. ಜನತಾ ಪ್ರಾತಿನಿಧಿ ಕಾಯ್ದೆ ಅನ್ವಯಆಯ್ಕೆಗೊಂಡ ಪ್ರತಿನಿಧಿಗಳು ಜನರ ವಿಶ್ವಾಸವನ್ನೇ ಪಡೆಯದೆ, ಅಭಿಪ್ರಾಯವನ್ನು ಸಂಗ್ರಹಿಸದೆ ಕೆಲವು ಕೋಟಿ ರೂಪಾಯಿಗಳನ್ನು ಮತದಾರರ ಕಲ್ಯಾಣಕ್ಕೆಂದು ತರುವುದಾಗಿ ಘೋಷಿಸಿ, ಇದೊಂದು ತ್ಯಾಗದ ನಿರ್ಧಾರ ನಮಗೆ ಅನಿವಾರ್ಯವಾಯಿತು ಎಂದು ಹೇಳಲು ಹೊರಟಿರುವ ಇವರಿಗೆ, ಜನತೆಯಿಂದ ಸೂಕ್ತ ಉತ್ತರ ದೊರಕಿಸುವ ಪ್ರಯತ್ನ ಮಾಡಬೇಕಾಗಿದೆ.
ಈ ಉಪಚುನಾವಣೆಗಳ ಸೋಲು-ಗೆಲುವು ಯಾವುದೇ ಪಕ್ಷದ್ದಾಗಿರುವುದಿಲ್ಲ ಆದರೆ ಇದು ಪ್ರಜಾಸತ್ತೆಯ ಸೋಲು ಅಥವಾ ಗೆಲುವು ಆಗಿರುತ್ತದೆ. ಒಂದು ವೇಳೆ ಈ ಅನರ್ಹರು ಒಂದು ಕ್ಷೇತ್ರದಲ್ಲಿ ಜಯಗಳಿಸಿದರೂ ಅದು ತೋಳ್ಬಲಕ್ಕೆ, ಹಣದ ಬಲಕ್ಕೆ ಸಲ್ಲುವ ಜಯವೇ ಹೊರತು ಪ್ರಜಾಸತ್ತೆಗೆ ಸಂದ ಜಯವಲ್ಲ. ಅಂದಿನ ಸಂವಿಧಾನ ಸಭೆಯ ತೀರ್ಪಿನಂತೆ ಹೊಸದಾಗಿ ಸ್ವಾತಂತ್ರ್ಯ ಪಡೆದುಕೊಂಡ ಭಾರತ ದೇಶವನ್ನು ಸಮಗ್ರ ಗಣರಾಜ್ಯ ರಾಷ್ಟ್ರವನ್ನಾಗಿ ಮಾರ್ಪಡಿಸಿ ಎಲ್ಲಾ ಜಾತಿ, ಮತ, ಧರ್ಮ, ಕುಲ, ಲಿಂಗಬೇಧವಿಲ್ಲದ, ಸಮಾನತೆಯನ್ನು ಗೌರವಿಸುವ, ಕರಡು ಸಂವಿಧಾನವನ್ನು ರೂಪಿಸುವ ಹೊಣೆಗಾರಿಕೆಯನ್ನು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಮತ್ತು ಇನ್ನಿತರ 13 ಜನ ಸದಸ್ಯರಿಗೆ ವಹಿಸಲಾಯಿತು.
ಅಂದಿನ ಆ ಕರಡು ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರನ್ನಾಗಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಸೂಚಿಸಲಾಯಿತು. ಅಂದಿನ ಸಂವಿಧಾನ ಸಭೆಯಲ್ಲಿ ,ಜಗತ್ತಿನ ಎಲ್ಲಾ ದೇಶಗಳ ಸಂವಿಧಾನಗಳ ಆಳ ಅಧ್ಯಯನ ಮಾಡಿದ್ದವರೂ,ಕಾನೂನು ಶಾಸ್ತ್ರದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಪಾಂಡಿತ್ಯವನ್ನು ಗಳಿಸಿದ್ದವರೂ, ಅರ್ಥಶಾಸ್ತ್ರ ದಲ್ಲೂ ಪರಿಣಿತಿಯನ್ನು ಪಡೆದಿದ್ದವರು, ನೋವು,ನರಳುವಿಕೆ, ಹಸಿವು,ಆಕ್ರಂದನ ಗಳ ಮಧ್ಯೆಯೇ ಭುಗಿಲೆದ್ದಿದ್ದ ಒಂದು ಜ್ವಾಲಾಮುಖಿ, ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು.
ಅಂದಿನ ಭಾರತದ ಜಾತಿ ವ್ಯವಸ್ಥೆಯ ಕ್ರೌರ್ಯದ ಪೂರ್ಣ ಒಳನೋಟ ತಮಗಿದ್ದು, ಮನೋ ಶಾಸ್ತ್ರದಲ್ಲಿಯೂ ಸಹ ಅಪಾರ ಜ್ಞಾನ ಹೊಂದಿದ್ದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ತಮಗೆ ವೈಯುಕ್ತಿಕವಾಗಿ ಇಷ್ಟವಿಲ್ಲದಿದ್ದರೂ ದೂರದೃಷ್ಟಿಯಿಂದ ಸಮಗ್ರತೆಯನ್ನು ಎತ್ತಿಹಿಡಿಯುವ ಕಾರಣದಿಂದ, ಚಕ್ರವರ್ತಿಗಳು ಆಳಿದ ಈ ಭೂಮಿಯಲ್ಲಿ ಕತ್ತಿ, ಕಿರೀಟ, ಸಿಂಹಾಸನ ಗಳ ಬದಲಿಗೆ ಸಾಮಾನ್ಯ ಪ್ರಜೆಯ ಅಭಿಪ್ರಾಯ ಪ್ರಮುಖ ಆಗಬೇಕು ಎಂದು, ವಯಸ್ಕ ಮತದಾನ ಪದ್ಧತಿಗೆ ಒಬ್ಬ ವ್ಯಕ್ತಿಗೆ ಒಂದೇ ಮತ ಎಂಬ ಸಿದ್ಧಾಂತದ ಮೇಲೆ, ತಮಗಿಲ್ಲ ವಾದ ಸಮಾನತೆ ಮುಂದಿನ ಪೀಳಿಗೆಗಾದರೂ ಲಭ್ಯವಾಗಲಿ ಎಂದು ತನ್ನ ಸಮಿತಿಯೊಳಗಿದ್ದ ಇತರ ಗೌರವಾನ್ವಿತ ಸದಸ್ಯರ ಅಭಿಪ್ರಾಯವನ್ನು ಪಡೆದು ನಮ್ಮ ಇಂದಿನ ಸಂವಿಧಾನಕ್ಕೆ ಅಂತಿಮ ಸ್ವರೂಪವನ್ನು ನೀಡಿದರು.
ಈ ಹಿನ್ನೆಲೆಯಲ್ಲಿ ನಾವು ಇವತ್ತು ಎದುರಿಸುತ್ತಿರುವ ಉಪಚುನಾವಣೆಗಳು, ಸಂವಿಧಾನದ ಪಾವಿತ್ರ್ಯತೆಗೆ ಒದಗಿರುವ ಸವಾಲು. ಆಯ್ಕೆ ಮಾಡಿ ಕಳಿಸಿದ ಮತದಾರನ ಆತ್ಮಸಾಕ್ಷಿಗೆ ಒಂದು ಸವಾಲು. ತೋಳ್ಬಲ, ಹಣದ ಬಲದಿಂದ ಸಂವಿಧಾನವನ್ನೇ ಬುಡಮೇಲು ಮಾಡಬಲ್ಲೆವು ಎಂದು ಕೊಬ್ಬಿದ ಮದಗಜಗಳಿಗೆ ಅಂಕುಶವನ್ನು ಹಾಕ ಬೇಕಾಗುವ ಸವಾಲು. ಭಾವನಾತ್ಮಕ ವಿಷಯಗಳಿಂದ ಜನಗಳನ್ನು ಕ್ಷಣಮಾತ್ರಕ್ಕೆ ಪ್ರಚೋದಿಸಿ ಜನತೆಯ ಮುಗ್ಧ ಮನಸ್ಸನ್ನು ಮತ್ತೊಂದೆಡೆ ಸೆಳೆದು ವಾಮಮಾರ್ಗದಲ್ಲಿ ರಾಜಕೀಯ ಅಧಿಕಾರವನ್ನು ಪಡೆಯಲು ಹೊಂಚು ಹಾಕುವ ಅವಕಾಶವಾದಿಗಳಿಗೆ ಇದು ಒಂದು ಸವಾಲು.
ಕಾಂಗ್ರೆಸ್ ಪಕ್ಷದ ವತಿಯಿಂದ ,ಈ ಉಪಚುನಾವಣೆಗಳ ವೇದಿಕೆಗಳ ಮೇಲೆ ವೈಯುಕ್ತಿಕ ಆರೋಪಗಳು, ಚಾರಿತ್ರ್ಯ ವಧೆ ಮಾಡುವ ಚೇಷ್ಟೆಗಳು, ಅಸಂಬದ್ಧ ವಿಚಾರಗಳು ,ಜಾತಿ ಮತ್ತು ಹಣದ ಪ್ರಾಬಲ್ಯದ ಲೆಕ್ಕಾಚಾರ ಹೀಗೆ ಇವೆಲ್ಲವನ್ನೂಬದಿಗಿಟ್ಟು, ಸಂವಿಧಾನಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸಿ ವಿನಯ ವಿಧೇಯತೆ ಯಿಂದ ಜನರಲ್ಲಿಗೆ ಹೋಗಿ ಇದೊಂದು ಮೌಲ್ಯಾಧಾರಿತ ಹೋರಾಟ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯ.
ಸಾಮಾನ್ಯ ಜನ ಅಸಹ್ಯಪಡುವ, ಪದೇ ಪದೇ ನೋಡಿ ಬೇಸತ್ತು ಹೋಗಿರುವ ಭ್ರಷ್ಟರನ್ನೇ ಮುಖಂಡರು ಎಂಬ ಭ್ರಮೆಯಿಂದ ಇವರು ವೇದಿಕೆಗಳ ಮೇಲೆ ವಿಜೃಂಭಿಸಿದರೆ ಬಹುಶ: ದುಷ್ಪರಿಣಾಮಗಳನ್ನು ಎದುರಿಸಬೇಕಾದೀತು. ಸಾಮಾನ್ಯ ಜನರ ಮನೋಭಾವ, ಆಶೋತ್ತರಗಳನ್ನು ಗಮನಿಸಿ ಗೌರವಿಸಿದರೆ ಅದು ಸಹಜವಾಗಿಯೇ ಸಂವಿಧಾನಕ್ಕೆ ತೋರುವ ಗೌರವವಾಗುತ್ತದೆ. ಕಾರಣಾಂತರಗಳಿಂದ ಒಂದು ಸಾಂವೈಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವ ಸ್ಥಾನದಲ್ಲಿದ್ದಾಗ ಈ ಇಕ್ಕಟ್ಟನ್ನು ನಾನು ಎದುರಿಸಬೇಕಾಯಿತು. ಯಾವುದೇ ರೀತಿಯ ಮತ್ಸರ, ದ್ವೇಷ, ಅಸೂಯೆ, ಪೂರ್ವಗ್ರಹಪೀಡಿತ ನಾಗದೆ ನಿಷ್ಕಳಂಕ ಮನಸ್ಸಿನಿಂದ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ.
ಈ ಘಟನೆಯ ನಂತರ, ಅಂದಿನಿಂದ ಇಂದಿನವರೆವಿಗೂ ಸಾಕಷ್ಟು ಮನೋವ್ಯಾಕುಲತೆಯನ್ನು ಅನುಭವಿಸಿದ್ದೇನೆ. ಸದುದ್ದೇಶದಿಂದ ನಾನು ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ ಹಾಗೂ ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಒಟ್ಟಾರೆ ಉದ್ದೇಶ ಡಿಸೆಂಬರ್ 5 2019 ರಂದು ನಡೆಯುವ 15 ಉಪಚುನಾವಣೆಗಳು ಗುಣಾತ್ಮಕವಾಗಿ ಬೇರೆಯ ಸ್ವರೂಪ ಪಡೆಯುವಂತಾಗಲಿ ಹಾಗೂ ಮಾಮೂಲಿ ಚುನಾವಣೆಗಳಂತಾಗದಿರಲಿ ಎಂದು ನನ್ನ ಕಳಕಳಿ.ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವ ಸಂವಿಧಾನವನ್ನು ಜನರ ಧ್ವನಿಯಾಗಿಸುವ ಮಹತ್ತರ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ.
ಇಂತಿ ಕೆ.ಆರ್. ರಮೇಶ್ ಕುಮಾರ್
Published On - 6:47 am, Sat, 23 November 19