ಗದಗ, ಡಿಸೆಂಬರ್ 29: ಕಲೆ, ಸಂಸ್ಕೃತಿಗೆ ಹೆಸರುವಾಸಿ ಮುದ್ರಣ ಕಾಶಿ ಗದಗ (Gadag) ಜಿಲ್ಲೆ. ಗದಗ ಜಿಲ್ಲೆಗೆ ಮತ್ತೊಂದು ಹಿರಿಮೆ ಒಲಿದು ಬಂದಿದೆ. ಹೌದು, ಈ ಭಾರಿಯ ಗಣರಾಜ್ಯೋತ್ಸವ ಪರೇಡ್‍ನಲ್ಲಿ (Republic day parade) ಗದಗ ಜಿಲ್ಲೆಯ ಲಕ್ಕುಂಡಿಯ ಬ್ರಹ್ಮ ಜಿನಾಲಯ ದೇವಸ್ಥಾನ ಐತಿಹಾಸಿಕ ದೇವಾಲಯ ಆಯ್ಕೆಯಾಗಿದೆ. ಈ ದೇವಾಲಯದ ಮಾದರಿಯ ಸ್ತಬ್ಧಚಿತ್ರ ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಕಂಗೊಳಿಸಲಿದೆ. ನಮ್ಮ ರಾಜ್ಯದ ಸಂಕೇತವಾಗಿ ಬ್ರಹ್ಮ ಜಿನಾಲಯ ಇಡೀ ದೇಶದಲ್ಲಿ ಸದ್ದು ಮಾಡಲಿದೆ.
101 ಬಾವಿ 101 ದೇವಸ್ಥಾನ ಹೊಂದಿರುವ ಅಪರೂಪದ ಗ್ರಾಮ ಅಂದ್ರೆ, ಅದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮ. ಲಕ್ಕುಂಡಿ ಗ್ರಾಮ ವಿವಿಧ ಶಿಲ್ಪಕಲೆ, ವಾಸ್ತುಶಿಲ್ಪ ದೇವಾಲಯಗಳನ್ನು ಒಳಗೊಂಡಿದೆ. ಸಾಂಸ್ಕೃತಿಕ, ಐತಿಹಾಸಿಕ, ಶಿಲ್ಪಕಲಾ ನೈಪುಣ್ಯತೆಗೆ ತನ್ನದೆಯಾದ ಛಾಪು ಮೂಡಿಸಿದೆ. ಈ ಬಾರಿಯ ದೆಹಲಿಯ ಗಣರಾಜ್ಯೋತ್ಸವ ಪರೇಡ್ಗೆ ಕರ್ನಾಟಕ ರಾಜ್ಯದಿಂದ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಸ್ತಬ್ಧಚಿತ್ರವು ಆಯ್ಕೆಯಾಗಿದೆ. ದೆಹಲಿಯಲ್ಲಿ ಕರ್ತವ್ಯಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಪಾಲ್ಗೊಳ್ಳುವ ಬ್ರಹ್ಮ ಜಿನಾಲಯ ದೇವಾಲಯ ಲಕ್ಕುಂಡಿಯ ಶಿಲ್ಪಕಲಾ ವೈಭವವನ್ನು ಮತ್ತೆ ನೆನಪಿಸುತ್ತದೆ.
ಇದನ್ನೂ ಓದಿ: ಅಮೃತ್ ಭಾರತ್ ಸ್ಟೇಷನ್ ಯೋಜನೆ; ಗದಗ್ ಜಂಕ್ಷನ್ ಕಾಮಗಾರಿ ಫೋಟೋ ಹಾಕಿದ ರೈಲ್ವೆ ಇಲಾಖೆ
ಲಕ್ಕುಂಡಿ ದೇವಾಲಯಗಳ ಶಿಲ್ಪಕಲೆಯು ಅಭೂತಪೂರ್ವ ಇತಿಹಾಸವನ್ನು ಹೊಂದಿದ್ದು, ಕಲಾಸಕ್ತರ ಕಣ್ಮನ ಸೆಳೆಯುತ್ತಿದೆ. ಲಕ್ಕುಂಡಿಯ ಬ್ರಹ್ಮ ಜಿನಾಲಯ ದೇವಸ್ಥಾನ ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆಯಾದ ವಿಚಾರ ಕೇಳಿ ಬಹಳ ಸಂತೋಷವಾಗಿದೆ ಎಂದ ಪ್ರವಾಸಿಗರಾದ ಛಾಯಾ, ಶೃತಿ ಸಂತಸ ವ್ಯಕ್ತಪಡಿಸಿದರು.
ಮಹಾವೀರನ ದೇವಾಲಯಗಳಲ್ಲಿ ಜಿನಾಲಯವು ಒಂದಾಗಿದೆ. ಬ್ರಹ್ಮ ಜಿನಾಲಯ ದೇವಸ್ಥಾನಕ್ಕೆ ಗ್ರೇಟ್ ಜೈನ್ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು 11ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದೆ. ಪಶ್ಚಿಮ ಚಾಲುಕ್ಯರ ಶೈಲಿಯ ಕೆತ್ತನೆಯಿಂದ ಕೂಡಿರುವ ಬ್ರಹ್ಮ ಜಿನಾಲಯವನ್ನು ಕ್ರಿ.ಶ.1007 ರಲ್ಲಿ ದಂಡನಾಯಕ ನಾಗದೇವನ ಪತ್ನಿ ದಾನ ಚಿಂತಾಮಣಿ ಎಂದೇ ಪ್ರಖ್ಯಾತಳಾದ ಅತ್ತಿಮಬ್ಬೆ ಕಟ್ಟಿಸಿದಳು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಈ ದೇವಾಲಯ ಶಿವ ದೇವಾಲಯದ ರೀತಿ ಪೂರ್ವಕ್ಕೆ ಮುಖ ಮಾಡಿ ಸ್ಥಾಪನೆಯಾಗಿದೆ. ಅಂತರಾಳ, ಗೂಢಮಂಟಪ, ಅಗ್ರಮಂಟಪ, ತಲವಿನ್ಯಾಸ, ಕಪ್ಪು ಶಿಲೆ ಹೊಂದಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ, 22ನೇಯ ನೇಮಿನಾಥ ತೀರ್ಥಂಕರ ಮೂರ್ತಿಯಿದೆ. ಗರ್ಭಗುಡಿಯ ಹೊರಭಾಗದಲ್ಲಿ, ಚತುರ್ಮುಖ ಬ್ರಹ್ಮ ಮತ್ತು ಸರಸ್ವತಿ ಮೂರ್ತಿಗಳಿವೆ. 32 ವಿವಿಧ ಆಕೃತಿಯ ಸುಂದರ ಕೆತ್ತನೆಯ ಕಂಬಗಳಿರುವ ವಿಶೇಷ ದೇವಾಲಯವಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಟ್ಯಾಟ್ಲೋ ನಿರ್ಮಾಣ ಕಾರ್ಯ ದೆಹಲಿಯಲ್ಲಿ ನಡೆಯುತ್ತಿದೆ. ನುರಿತ ಕಲಾವಿದರು ಪೈಬರ್ನಿಂದ ಬ್ರಹ್ಮ ಜಿನಾಲಯ ದೇವಸ್ಥಾನದ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ. ಲಕ್ಕುಂಡಿ ಗ್ರಾಮದ ಐತಿಹಾಸಿಕ ದೇವಸ್ಥಾನ ಆಯ್ಕೆಯಾಗಿದ್ದು ಬಹಳ ಸಂತಸ ತಂದಿದೆ ಅಂತ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಟಿವಿ9ಗೆ ತಿಳಿಸಿದ್ದಾರೆ.
ಇಡೀ ರಾಜ್ಯಾದ್ಯಂತ 12 ಪ್ರಖ್ಯಾತ ಸ್ಥಳಗಳು ಹಾಗೂ ದೇವಸ್ಥಾನಗಳನ್ನು ಆಯ್ಕೆಗೆ ಕಳಿಸಲಾಗಿತ್ತು. ಆದರೆ, ಲಕ್ಕುಂಡಿ ಗ್ರಾಮದ ಐತಿಹಾಸಿಕ ಬ್ರಹ್ಮ ಜಿನಾಲಯ ದೇವಸ್ಥಾನ ಆಯ್ಕೆಯಾಗಿದ್ದು, ಜಿಲ್ಲೆಗೆ ಜನರಿಗೆ ಹೆಮ್ಮೆ ತಂದಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದ ಯಾವುದೇ ಟ್ಯಾಬ್ಲೋ ಆಯ್ಕೆಯಾಗಿರಲ್ಲಿಲ್ಲ. ಈಗ ಲಕ್ಕುಂಡಿ ಬ್ರಹ್ಮ ಜಿನಾಲಯ ದೇವಸ್ಥಾನ ಆಯ್ಕೆಯಾಗಿದ್ದು, ಗದಗ ಜಿಲ್ಲೆಯ ಹಿರಿಮೆ ಹಾಗೂ ರಾಜ್ಯದ ಘನತೆ ಹೆಚ್ಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ