Panchakshari Gawai Birthday : ಪಂಡಿತರ ಪ್ರಶ್ನೆಗಳ ಸುರಿಮಳೆಗೆ ಮೂರುದಿನಗಳವರೆಗೆ ಉತ್ತರಿಸಿದರು ಗವಾಯಿಗಳು

| Updated By: ಶ್ರೀದೇವಿ ಕಳಸದ

Updated on: Feb 02, 2022 | 11:33 AM

Balagandharva : ಬಾಲಗಂಧರ್ವರು “ತೇ ಕೋಣ” (ಯಾರವರು) ಎಂದು ಕೇಳಿ ತಿಳಿದುಕೊಂಡರು. ಕ್ಯಾಂಪು ಕಿತ್ತುವ ಕೊನೆಯ ರಾತ್ರಿ ಪಂಚಾಕ್ಷರಿಗವಾಯಿಗಳನ್ನು ರಂಗಮಂಚದ ಮೇಲೆ ಬರಮಾಡಿಕೊಂಡು ಜರತಾರಿ ರೇಷ್ಮೆ ಮಡಿ ಆಹೇರ ಮಾಡಿ ಗೌರವಿಸಿದರು, ಪಂಚಾಕ್ಷರಿ ಗವಾಯಿಗಳಿಂದ ಕರ್ನಾಟಕ ಕೀರ್ತನೆಗಳನ್ನು ಹೇಳಿಸಿಕೊಂಡರು. ಅಲ್ಲದೆ, “ಮರುಗೇಲರು ಓ ರಾಘವಾ” ಕೃತಿಯನ್ನು ಮರಾಠಿಗೆ ಅನುವಾದಿಸಿಕೊಂಡರು.

Panchakshari Gawai Birthday : ಪಂಡಿತರ ಪ್ರಶ್ನೆಗಳ ಸುರಿಮಳೆಗೆ ಮೂರುದಿನಗಳವರೆಗೆ ಉತ್ತರಿಸಿದರು ಗವಾಯಿಗಳು
ಪಂಡಿತ್ ಪಂಚಾಕ್ಷರಿ ಗವಾಯಿ, ಪಂಡಿತ್ ಬಾಲಗಂಧರ್ವ, ಉಸ್ತಾದ್ ಅಬ್ದುಲ್ ಕರೀಂ ಖಾನ್​,
Follow us on

ಪಂಚಾಕ್ಷರಿ ಗವಾಯಿ | Panchakshari Gawai : ಪಂಚಾಕ್ಷರಿ ಗವಾಯಿಗಳು ಕೀರ್ತಿಗೆ ಹಾತೊರೆದವರಲ್ಲ. ಪ್ರಶಸ್ತಿಗಳು ಅವರನ್ನು ಅರಸಿಬಂದವು. ಅವರಿಗೇನು ಹಾಡಲು ಬರುತ್ತದೆ ಎನ್ನುವ ಅಸಡ್ಡೆಯ ಮಾತುಗಳು ಹಾನಗಲ್ಲ ಕುಮಾರಸ್ವಾಮಿಗಳ ಕಿವಿಗೆ ಬಿದ್ದವು. ಅದಕ್ಕವರು ರಾಯಚೂರು ಬಳಿಯ ರಾಮಗಡ್ಡಿಯಲ್ಲಿ (1915) ಒಂದು ವಿದ್ವತ್ಸಭೆ ಏರ್ಪಡಿಸಿ ಟೀಕೆ ವಿದ್ವಾಂಸರನ್ನೆಲ್ಲ ಆಮಂತ್ರಿಸಿದರು. ಪಂಚಾಕ್ಷರಿ ಗವಾಯಿಗಳ ಗಾಯನ ಕೇಳಿದ ಮೇಲೆ ಶೋತೃಗಳಿಗೆ ಇತರರ ಗಾಯನ ಹಿಡಿಸಲಿಲ್ಲ. ಶ್ರೀಗಳವರು ವಿದ್ವಾಂಸರನ್ನು ಉದ್ದೇಶಿಸಿ “ನಮ್ಮ ಗವಾಯಿಗಳನ್ನು ಶಾಸ್ತ್ರಜ್ಞಾನದಲ್ಲಿ ಪರೀಕ್ಷಿಸಬೇಕಿದ್ದರೆ ಪರೀಕ್ಷಿಸಬಹುದು ಎಂದರು. ಅಲ್ಲಿ ನೆರೆದಿದ್ದ ಪಂಡಿತರು ಮೂರು ದಿನ ಪ್ರಶ್ನೆಗಳ ಸುರಿ ಮಳೆಗೈದರು. ಅವೆಲ್ಲವುಗಳಿಗೂ ಪಂಚಾಕ್ಷರಿ ಗವಾಯಿಗಳು ಸಮರ್ಪಕ ಉತ್ತರ ನೀಡಿದರು. ವಿದ್ವಾಂಸರೆಲ್ಲರೂ ಕೂಡಿ ಪಂಚಾಕ್ಷರಿ ಗವಾಯಿಗಳಿಗೆ “ಪಂಡಿತ” ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪಂಚಾಕ್ಷರಿ ಗವಾಯಿಗಳಿಗೆ ಉಭಯ ಗಾಯನ ವಿಶಾರದ, ಸಂಗೀತ ರತ್ನ, ಸಂಗೀತ ಸಾಮ್ರಾಟ, ಲಲಿತಕಲಾ ಪಿತಾಮಹ, ಗಾನಯೋಗಿ, ಭೂಗಂಧರ್ವ ಚಂದ್ರ, ಗಾನ ಕಲಾನಿಧಿ, ಸಂಗೀತಸಾಗರ, ಸಂಗೀತ ಸುಧಾನಿಧಿ, ಗಾಯನಾಚಾರ್ಯ, ಉಭಯ ಗಾಯನಾಚಾರ್ಯ 9 ಮೊದಲಾದ ಬಿರುದುಗಳು ಬಂದವು.

ಸದಾನಂದ ಕನವಳ್ಳಿ, ಲೇಖಕ, ಅನುವಾದಕ

*

(ಭಾಗ- 3)

ಸ್ವದೇಶೇ ಪೂಜ್ಯತೇ ರಾಜಾ, ವಿದ್ವಾನ್ ಸರ್ವತ್ರ ಪೂಜ್ಯತೇ. ಪಂಚಾಕ್ಷರಿ ಗವಾಯಿಗಳ ವಿದ್ವತ್ತಿನ ಖ್ಯಾತಿ ಎಲ್ಲೆಡೆ ಪಸರಿಸಿತು. ನಾಡಿನಾದ್ಯಂತ ಅವರ ಸಂಗೀತ ಕಛೇರಿಗಳು ಏರ್ಪಟ್ಟವು. ಗಜೇಂದ್ರಗಡದ ರಾಜರಾದ ಭುಜಂಗರಾವ್ ಘೋರ್ಪಡೆ ಅವರ ಮನೆಯಲ್ಲಿ ಜರುಗಿದ ವಿವಾಹ ಸಮಾರಂಭದ ನಿಮಿತ್ತ ಸಂಗೀತ ಕಛೇರಿ ಏರ್ಪಡಿಸಿದ್ದರು. ಗಂಡಿನವರ ಪರವಾಗಿ ಪಂಚಾಕ್ಷರಿ ಗವಾಯಿಗಳನ್ನು, ಹೆಣ್ಣಿನವರ ಪರವಾಗಿ ಅಬ್ದುಲ್ ಕರೀಮಖಾನರನ್ನು ಆಮಂತ್ರಿಸಲಾಗಿತ್ತು. ಅಬ್ದುಲ್ ಕರೀಮ ಖಾನರು ಕರ್ನಾಟಕಿ ಸಂಗೀತವನ್ನೇನು ಕೇಳುವುದು ಎಂದು ತಮ್ಮ ಕೋಣೆಯಲ್ಲಿಯೇ ಕುಳಿತರು, ಪಂಚಾಕ್ಷರಿ ಗವಾಯಿಗಳ ಗಾಯನದಿಂದ ಆಕರ್ಷಿತರಾಗಿ ಬಂದು, ಆನಂದಿಸಿದರು,

1920, ಗೋಕಾಕದಲ್ಲಿರುವ ಕೊಣ್ಣೂರ ಮರಡಿ ಮಠದಲ್ಲಿ ಜಾತ್ರೆ. ಪಂಚಾಕ್ಷರಿ ಗವಾಯಿಗಳ ಗಾಯನ, ಮೈಸೂರಿನಿಂದ ವಿರ್ದ್ಯಾ ರಾಚಪ್ಪನವರನ್ನೂ ಆಮಂತ್ರಿಸಿದ್ದರು. ಅವರು “ನಮ್ಮ ಮೈಸೂರು ಆಸ್ಥಾನದಲ್ಲಿ ಕೂಡ ಪಂಚಾಕ್ಷರಿ ಗವಾಯಿಗಳಂತಹ ಗವಾಯಿಗಳಂತಹವರು ವಿರಳ” ಎಂದು ಉದ್ಗರಿಸಿದರು.

ಒಮ್ಮೆ ಹುಬ್ಬಳ್ಳಿಯ ಗಣೇಶ ಥಿಯೇಟರಿನಲ್ಲಿ ಬಾಲಗಂಧರ್ವ ನಾಟಕ ಕಂಪನಿ ಬಿಡಾರ ಹೂಡಿತ್ತು. ಪಂಚಾಕ್ಷರಿ ಗವಾಯಿಗಳ ವಾಸ್ತವ್ಯವೂ ಹುಬ್ಬಳ್ಳಿಯಲ್ಲಿತ್ತು, ಸರಿ, ಒಂದು ರಾತ್ರಿ ನಾಟಕ ನೋಡಲು ಹೋದರು. ನೋಡುವುದೇನು ಬಂತು? ಕೇಳುವುದು ತಾನೆ? ಸಂಗೀತನಾಟಕವೆಂದ ಮೇಲೆ ಕುಳಿತರೆ ಹಾಡು, ನಿಂತರೆ ಹಾಡು, ಬಾಲಗಂಧರ್ವರ ಮಧುರ ಗಾಯನಕ್ಕೆ ಪಂಚಾಕ್ಷರಿ ಗವಾಯಿಗಳು ಮಾರುಹೋದರು. ಪ್ರತಿ ರಾತ್ರಿಯ ಮೊದಲ ಸಾಲಿನ ನಡುವಿನ ಆಸನದಲ್ಲಿ ಹಾಜರ್. ವಾಹವಾ, ವಾಹವಾ ಎಂದು ಮೆಚ್ಚಿಗೆ ಸೂಸಬೇಕು. ಬಾಲಗಂಧರ್ವರು “ತೇ ಕೋಣ” (ಯಾರವರು) ಎಂದು ಕೇಳಿ ತಿಳಿದುಕೊಂಡರು. ಕ್ಯಾಂಪು ಕಿತ್ತುವ ಕೊನೆಯ ರಾತ್ರಿ ಪಂಚಾಕ್ಷರಿಗವಾಯಿಗಳನ್ನು ರಂಗಮಂಚದ ಮೇಲೆ ಬರಮಾಡಿಕೊಂಡು ಜರತಾರಿ ರೇಷ್ಮೆ ಮಡಿ ಆಹೇರ ಮಾಡಿ ಗೌರವಿಸಿದರು, ಪಂಚಾಕ್ಷರಿ ಗವಾಯಿಗಳಿಂದ ಕರ್ನಾಟಕ ಕೀರ್ತನೆಗಳನ್ನು ಹೇಳಿಸಿಕೊಂಡರು. ಅಲ್ಲದೆ, “ಮರುಗೇಲರು ಓ ರಾಘವಾ” ಕೃತಿಯನ್ನು ಮರಾಠಿಗೆ ಅನುವಾದಿಸಿಕೊಂಡರು.

12.3.1939 ರಂದು ವರಕವಿ ದ. ರಾ. ಬೇಂದ್ರೆ ಪತ್ರ ಬರೆದು ತಮ್ಮ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು : “ಪೂಜ್ಯ ಮತ್ತು ಸರ್ವವರಾನ್ಯರಾದ ಗವಾಯಿಗಳ ಹಾಗೂ ಶಿಷ್ಯವರ್ಗದ ಸಂಗೀತ ಸಾಹಿತ್ಯ ಕಚೇರಿಗಳನ್ನು ಅನೇಕ ಕಡೆ ಸಂದರ್ಶಿಸಿದ್ದೇನೆ. ಈ ಶ್ಲಾಘನೀಯವಾದ ಲೋಕೋಪಕಾರ ಕಕಾರ್ಯಕ್ಕೆ ಜಗದ್ರಕ್ಷನು… ಸದಾಕಾಲದಲ್ಲಿಯೂ ಹೆಚ್ಚು ಹೆಚ್ಚು ಪ್ರೋತ್ಸಾಹವನ್ನೀಯಲಿ,”

1939. ಸಂಗೀತ ಶಾಲೆಯ ರಜತೋತ್ಸವ. ವಚನಪಿತಾಮಹ ಫ. ಗು. ಹಳಕಟ್ಟಿ ಆ ಸಂದರ್ಭದಲ್ಲಿ ಅಭಿನಂದಿಸಿದ್ದು ಹೀಗೆ: “ಈ ಶಾಲೆಯನ್ನು ಗಾಯನವಿಶಾರದ ಪಂಚಾಕ್ಷರಿ ಗವಾಯಿಗಳು ಅವ್ಯಾಹತವಾಗಿ ಈವರೆಗೂ ನಡೆಸುತ್ತ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಬಗೆಯ ಕಾರ್ಯ ವರಾಡುವ ಸಂಸ್ಥೆಯೆಂದರೆ ಇದೊಂದೆಯಾಗಿರುತ್ತದೆ. ಕೇವಲ ಸಾರ್ವಜನಿಕ ಹಿತದೃಷ್ಟಿಯನ್ನು ಇಟ್ಟುಕೊಂಡು ಈ ಶಾಲೆಯನ್ನು ನಡೆಸುತ್ತಿರುವುದು ಅಭಿನಂದನೀಯವಾಗಿದೆ.”

5.4.1939 ರಂದು ಕೊಪ್ಪಳ ಮುಕ್ಕಾವಿನಿಂದ ಗರುಡ ಸದಾಶಿವರಾಯರು, ಪಂಚಾಕ್ಷರಿ ಗವಾಯಿಗಳಿಗೆ ಅಭಿನಂದನ ಪತ್ರ ಬರೆದಿದ್ದರು : “ತಮ್ಮ ಉತ್ಕಟವಾದ ಕಲಾಪ್ರೇಮಕ್ಕೆ ಮಹಾತಪಸ್ವಿಗಳಾದ ಹಾನಗಲ್ಲ ಕುಮಾರಸ್ವಾಮಿಗಳ ಆಶೀರ್ವಾದ ಬಲವಿರುವುದರಿಂದ ಭೌತಿಕ ನಯನವಿಹೀನರಾದ ತಾವು ದಿವ್ಯವಾದ ಜ್ಞಾನಚಕ್ಷುಗಳನ್ನು ಪಡೆದವರಾಗಿ ಅಖಂಡವಾಗಿ ಜನತಾ ಜನಾರ್ದನನ ಸೇವೆ ವರಾಡುತ್ತ ಧನ್ಯರೆಂದೆನಿಸಿರುವಿರಿ. ಇದೇ ಪದ್ಧತಿಯ ತಳಹದಿ. ತಮ್ಮ ಸಂಗೀತ ವಿದ್ಯಾಲಯದಲ್ಲಿ ಗವಾಯಿಗಳೂ, ಪುರಾಣಿಕರೂ, ಕೀರ್ತನಕಾರರೂ ತಯಾರಾಗುವಂತೆ ನಾಟ್ಯಕಲೆ ಸೇವೆಯನ್ನು ಮಾಡುವ ಸಂಗೀತಜ್ಞ, ಸುಶೀಲ, ಸುದೃಢ, ಸುಸ್ವರೂಪಿಗಳಾದ ಅಭಿನಯಕಲಾಪಟುಗಳಾದ ನಟರು ತಯಾರಾಗಿ ಲೋಕಸೇವೆಯನ್ನು ಮಾಡಲುದ್ಯುಕ್ತರಾದರೆ ನಾಟ್ಯಸಂಸ್ಥೆಗಳ ನೈರ್ಮಲ್ಯ ಹೆಚ್ಚಿ ಅವು ಲೋಕಾದರಕ್ಕೆ ಪಾತ್ರವಾಗಿ ಲೋಕ ಶಿಕ್ಷಣವು ಕ್ರಮಬದ್ದವಾಗಬಹುದು.”

(ಮುಂದಿನ ಭಾಗ ನಿರೀಕ್ಷಿಸಿ)

ಹಿಂದಿನ ಭಾಗ : Panchakshari Gawai Birthday : ‘ಕನ್ನಡದ ಚೀಜು ಹಾಡುತ್ತೇನೆ ಎಂದಾಗ ಎಚ್​ಎಂವಿ ಕಂಪೆನಿಯವರು ಗಾಬರಿಯಾದರು’