ಉತ್ತರಾಖಂಡ್‌ನಲ್ಲಿ ಕನ್ನಡಿಗನನ್ನು ರಕ್ಷಿಸಿದ ಯೋಧರು! ಈತ ಬೆಟಗೇರಿಯಿಂದ 25 ವರ್ಷ ಹಿಂದೆ ಊರುಬಿಟ್ಟು ಹೋಗಿದ್ದ..

Soldiers Rescue Gadag Man | 25 ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ವ್ಯಕ್ತಿ ಉತ್ತರಾಖಂಡ್‌ನಲ್ಲಿ ಪತ್ತೆಯಾಗಿರುವ ಅಪರೂಪದ ಘಟನೆ ನಡೆದಿದೆ. ಗದಗದ ಬೆಟಗೇರಿಯ ಕೆಂಚಪ್ಪ, ಐಟಿಬಿಪಿಯಲ್ಲಿರುವ ರಾಜ್ಯದ ಯೋಧ ಶರಣಬಸವ ರಾಗಾಪೂರ ಕಣ್ಣಿಗೆ ಬಿದ್ದಿದ್ದು ಯೋಧ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

  • TV9 Web Team
  • Published On - 15:02 PM, 11 Feb 2021
ಉತ್ತರಾಖಂಡ್‌ನಲ್ಲಿ ಕನ್ನಡಿಗನನ್ನು ರಕ್ಷಿಸಿದ ಯೋಧರು! ಈತ ಬೆಟಗೇರಿಯಿಂದ 25 ವರ್ಷ ಹಿಂದೆ ಊರುಬಿಟ್ಟು ಹೋಗಿದ್ದ..
ಯೋಧ ರಿಯಾಜ್ ಮತ್ತು ಕೆಂಚಪ್ಪ

ಗದಗ: 25 ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ವ್ಯಕ್ತಿ (Missing) ಉತ್ತರಾಖಂಡ್‌ನಲ್ಲಿ (Uttarakhand) ಪತ್ತೆಯಾಗಿರುವ ಅಪರೂಪದ ಘಟನೆ ನಡೆದಿದೆ. ಗದಗದ ಬೆಟಗೇರಿಯ ಕೆಂಚಪ್ಪ, ಐಟಿಬಿಪಿಯಲ್ಲಿರುವ ರಾಜ್ಯದ ಯೋಧ ಶರಣಬಸವ ರಾಗಾಪೂರ ಕಣ್ಣಿಗೆ ಬಿದ್ದಿದ್ದು ಯೋಧ, ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸದ್ಯ ಈಗ ಯೋಧ ರಾಗಾಪೂರ ಗದಗದ ತಮ್ಮ ಮನೆಗೆ ಕೆಂಚಪ್ಪರನ್ನು ಕರೆದುಕೊಂಡು ಹೋಗಿದ್ದು ಕೆಂಚಪ್ಪನನ್ನು ನೋಡಿ ಕುಟುಂಬಸ್ಥರು ಭಾವುಕರಾಗಿದ್ದಾರೆ. ಅಲ್ಲದೆ ಯೋಧ ರಾಗಾಪೂರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶರಣಬಸವ ರಾಗಾಪೂರ ಮತ್ತು ಯೋಧ ರಿಯಾಜ್ ಉತ್ತರಾಖಂಡ್‌ನಲ್ಲಿ  ITBP ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಮ್ಮೆ ಚಹಾ ಕುಡಿಯಲು ಯೋಧ ರಿಯಾಜ್, ಚಹಾ ಅಂಗಡಿಗೆ ಹೋದಾಗ ಅಲ್ಲಿ ಕನ್ನಡಿಗ ಬೆಟಗೇರಿಯ ಕೆಂಚಪ್ಪ ಇರೋದು ಹಾಗೂ ಹೋಟೆಲ್ ಮಾಲೀಕನ ಕ್ರೌರ್ಯ ಬಯಲಾಗಿದೆ. ಜನವರಿ 16 ರಂದು ಯೋಧ ರಿಯಾಜ್ ರಜೆಗೆ ತವರಿಗೆ ಬರುವಾಗ ಕೆಂಚಪ್ಪರಿಗೆ ಊರಿಗೆ ಬರ್ತಿಯಾ ಅಂತ ಕೇಳಿದ್ದಾರೆ.

ನಾನು ITBP ಯೋಧ. ಈತ ಕನ್ನಡಿಗ, ಕರ್ನಾಟಕಕ್ಕೆ ಕರೆದ್ಯೊಯ್ಯುವೆ..

ಈ ವೇಳೆ ಕೆಂಚಪ್ಪ, ಮಾಲೀಕನ ಭಯಕ್ಕೆ ಒಲ್ಲೇ ಸರ್, ಆಮೇಲೆ ಬರ್ತೀನಿ ಅಂದಿದ್ರಂತೆ. ಬಳಿಕ ಫೆಬ್ರವರಿ 6 ರಂದು ಗದಗನ ಬೆಟಗೇರಿಯ ಯೋಧ ಶರಣಬಸವ ಕೂಡ ರಜೆಗೆ ಊರಿಗೆ ಹೊರಟ್ಟಿದ್ದರು. ಈ ವೇಳೆ ಕೆಂಚಪ್ಪನನ್ನು ಊರಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆಗ ಹೋಟೆಲ್ ಮಾಲೀಕ ಅಡ್ಡಿ ಮಾಡಲು ಮುಂದಾಗಿದ್ದ. ಈ ವೇಳೆ ಯೋಧ ಶರಣಬಸವ ನಾನು ITBP ಯೋಧ. ಈತ ಕನ್ನಡಿಗ, ಕರ್ನಾಟಕಕ್ಕೆ ಕರೆದ್ಯೊಯ್ಯುವುದಾಗಿ ಹೇಳಿದ್ದಾರೆ. ಆಗ ಆತ ಥಂಡಾ ಹೊಡೆದು ಗಪ್ ಚುಪ್ ಆಗಿದ್ದಾನೆ. ಬಳಿಕ ಶರಣಬಸವನವರು ಕೆಂಚಪ್ಪನನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.

Soldiers rescued man

ಕೆಂಚಪ್ಪನ ಕುಟುಂಬಸ್ಥರು ಯೋಧರಿಗೆ ಅಭಿನಂದನೆ ಸಲ್ಲಿಸಿದ ಪರಿ

25 ವರ್ಷಗಳಿಂದ ನಾಪತ್ತೆಯಾಗಿದ್ದ ಕನ್ನಡಿಗನ ರಕ್ಷಣೆ
ದೆಹಲಿಯಲ್ಲಿ ಅಜ್ಜ ಕೆಂಚಪ್ಪನಿಗೆ ಕಟಿಂಗ್, ಶೇವಿಂಗ್ ಮಾಡಿಸಿ ಹೊಸ ಬಟ್ಟೆ ಹಾಕಿಸಿದ್ದಾರೆ. ಬಳಿಕ ಕೆಂಚಪ್ಪನ ಫೋಟೋ ತೆಗೆದು ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಸಂಬಂಧಿಕರಿಗೆ ವಿಷಯ ತಿಳಿಯುವಂತೆ ಮಾಡಿದ್ದಾರೆ. ದೆಹಲಿಯಿಂದ ಗದಗದ ಬೆಟಗೇರಿಯ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ 25 ವರ್ಷಗಳಿಂದ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳು ತಂದೆ ಕೆಂಚಪ್ಪನನ್ನು ನೋಡಲು ಯೋಧನ ಮನೆಗೆ ಓಡೋಡಿ ಬಂದಿದ್ದಾರೆ. ತಂದೆಯನ್ನ ನೋಡಿ ಖುಷಿ ಪಟ್ಟಿದ್ದಾರೆ. 25 ವರ್ಷದ ಬಳಿಕ ತಂದೆ ಸಿಕ್ಕಿದ್ದಕ್ಕೆ ಯೋಧನ ಮನೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇಬ್ಬರು ಯೋಧರಿಗೆ ಸನ್ಮಾನ ಮಾಡಿ‌, ಕಾಲಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು ಹೋಟೆಲ್ ಮಾಲೀಕ ಕೆಂಚಪ್ಪರ ಕಾಲು, ಕೈ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದ ಎಂದು ಕನ್ನಡಿಗ ಕೆಂಚಪ್ಪ ಆರೋಪಿಸಿದ್ದಾರೆ. ಈ ಕೃತ್ಯದಿಂದ ನನ್ನನ್ನು ರಕ್ಷಣೆ ಮಾಡಿ ಯೋಧರು ಮಾನವೀಯತೆ ಮೆರೆದಿದ್ದಾರೆ ಎಂದು ಭಾವುಕರಾಗಿದ್ದಾರೆ. ಪುಟ್ಟ ಪುಟ್ಟ ಮಕ್ಕಳನ್ನು ಬಿಟ್ಟು ಹೋಗಿದ್ದ ಕೆಂಚಪ್ಪ ಸದ್ಯ ಈಗ ಕುಟುಂಬದ ಮಡಿಲು ಸೇರಿದ್ದಾರೆ.

Soldier Sharanabasava

ಯೋಧ ಶರಣಬಸವ ರಾಗಾಪೂರ

 

Soldier Riyaz

ಯೋಧ ರಿಯಾಜ್

 

Kenchappa

ಬೆಟಗೇರಿಯ ಕೆಂಚಪ್ಪ