ಇಲ್ಲಿ ನಡೆಯುತ್ತದೆ ಸತ್ತವರಿಗೂ ಮದುವೆ; ಇದು ತುಳುನಾಡಿನ ಪ್ರೇತ ಕಲ್ಯಾಣ

18 ವರ್ಷಕ್ಕಿಂತ ಮುನ್ನ ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರಿಗೆ ಅವರದ್ದೇ ಜಾತಿಯಲ್ಲಿ ಮೃತ ವರ ಅಥವಾ ವಧುವನ್ನು ಹುಡುಕಿ ಮದುವೆ ಮಾಡಿಸುವ ಸಂಪ್ರದಾ ದಕ್ಷಿಣ ಕನ್ನಡ ಮತ್ತು ಕೇರಳದ ಉತ್ತರ ಜಿಲ್ಲೆಯಾದ ಕಾಸರಗೋಡಿನ ತುಳುಭಾಷಿಗರಲ್ಲಿ ಇದೆ. ಇಲ್ಲಿನ ಕೆಲವು ಜಾತಿಯ ಜನರು ಈ ಸಂಪ್ರದಾಯವನ್ನು ಆಚರಿಸುತ್ತಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲು ಪ್ರೇತ ಮದುವೆಯನ್ನು ನೆರವೇರಿಸುತ್ತಾರೆ. ಈ ವಿಶಿಷ್ಟ ಆಚರಣೆ ಬಗ್ಗೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ.

ಇಲ್ಲಿ ನಡೆಯುತ್ತದೆ ಸತ್ತವರಿಗೂ ಮದುವೆ; ಇದು ತುಳುನಾಡಿನ ಪ್ರೇತ ಕಲ್ಯಾಣ
Image Credit source: X/@anny_arun
Follow us
ರಶ್ಮಿ ಕಲ್ಲಕಟ್ಟ
|

Updated on:Apr 22, 2024 | 11:28 AM

ಮದುವೆ- ಪ್ರತಿಯೊಂದು ಜಾತಿ, ಸಮುದಾಯ, ವರ್ಗದಲ್ಲಿ ವಿಭಿನ್ನ ಸಂಪ್ರದಾಯಗಳೊಂದಿಗೆ ನಡೆಯುತ್ತದೆ. ಸಾಮಾನ್ಯವಾಗಿ ಶುಭ ಕಾರ್ಯಗಳು ಆಷಾಢ ಮಾಸದಲ್ಲಿ ನಡೆಯುವುದಿಲ್ಲ. ಆದರೆ ದಕ್ಷಿಣ ಕನ್ನಡದ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಆಟಿ ತಿಂಗಳು (ಆಷಾಢ ಮಾಸ)ದಲ್ಲಿ ಮದುವೆ ನಡೆಯುತ್ತದೆ. ಅದು ಅಂತಿಂಥ ಮದುವೆಯಲ್ಲ ಪ್ರೇತಗಳ ಮದುವೆ! . ಅಚ್ಚರಿ ಎಂದೆನಿಸಿದರೂ ಇದು ಸತ್ಯ. ಇಲ್ಲಿ ಸಾಮಾನ್ಯ ಜನರ ಮದುವೆಯಂತೆಯೇ ಇಹಲೋಕ ತ್ಯಜಿಸಿದ ಗಂಡು ಮತ್ತು ಹೆಣ್ಣಿನ ಮದುವೆ ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಗುತ್ತದೆ. ಮದುವೆ ನಿಶ್ಚಿತಾರ್ಥದಿಂದ ಹಿಡಿದು ಕನ್ಯಾದಾನ, ಮಾಂಗಲ್ಯ ಧಾರಣೆ, ಹೆಣ್ಣಿನ ಗೃಹ ಪ್ರವೇಶ ಎಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ ಮಾಡಲಾಗುತ್ತದೆ. ಇತ್ತೀಚಿಗೆ ಇಂಥಾ ಪ್ರೇತ ಮದುವೆಗಳ ಸಂಖ್ಯೆ ಕಡಿಮೆ ಆಗಿದ್ದರೂ, ಗ್ರಾಮ ಪ್ರದೇಶದ ಜನರ ನಂಬಿಕೆಯಂತೆ ಅಲ್ಲೊಂದು ಇಲ್ಲೊಂದು ಮದುವೆಗಳು ನಡೆಯುತ್ತಿವೆ. ಈ ನಂಬಿಕೆ, ವಿಶಿಷ್ಟ ಆಚರಣೆ ಬಗ್ಗೆ ಮತ್ತಷ್ಟು ತಿಳಿಯೋಣ…

ಈ ಮೊದಲೇ ಹೇಳಿದಂತೆ ಕೇರಳದ  ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ತುಳು ಭಾಷಿಗರಾಗಿರುವ  ನಲ್ಕೆದಾಯೆ, ಮೊಗೇರ, ಮಾವಿಲನ್ ಜಾತಿಯವರಲ್ಲಿ ಈ ಮದುವೆ ನಡೆಯುತ್ತದೆ. ಮದುವೆ ಆದರೆ ಮಾತ್ರ ಬದುಕು ಪರಿಪೂರ್ಣ. ಅವಿವಾಹಿತರ ಆತ್ಮ ಮೋಕ್ಷ ಸಿಗದೆ ಅಲೆದಾಡುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಹಾಗಾಗಿ ತಮ್ಮ ಕುಟುಂಬದಲ್ಲಿ ಯಾರಾದರೂ 18 ವರ್ಷಕ್ಕಿಂತ ಮೊದಲು ಸತ್ತಿದ್ದರೆ, ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬ ಉದ್ದೇಶದಿಂದ ಈ ಮದುವೆ ಮಾಡಲಾಗುತ್ತದೆ.

ಮನೆಯಲ್ಲಿ ಯಾವುದಾದರೂ ಸಮಸ್ಯೆ ಎದುರಾದರೆ ಇಲ್ಲಿನ ಜನರು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಮನೆಯಲ್ಲಿ ಕಂಕಣ ಭಾಗ್ಯ ಕೂಡಿ ಬರದಿದ್ದರೆ, ಮಕ್ಕಳಾಗದಿದ್ದರೆ ಹೀಗೆ ಏನಾದರೂ ಸಮಸ್ಯೆ ಇದ್ದಾಗ ಮೃತರ ಆತ್ಮಕ್ಕೆ ಶಾಂತಿ ಮಾಡಿಸಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುವುದುಂಟು. ಹಾಗಾಗಿ ಕುಟುಂಬದಲ್ಲಿನ ನೆಮ್ಮದಿಗಾಗಿ ಅಲೆಯುವ ಆತ್ಮಗಳಿಗೆ ಮೋಕ್ಷ ಕಲ್ಪಿಸುವ ಉದ್ದೇಶವೂ ಈ ಪ್ರೇತಗಳ ಮದುವೆಯಲ್ಲಿ ಇದೆ. ಅತೃಪ್ತ ಆತ್ಮಗಳು ಅಲ್ಲೇ ಸುತ್ತುತ್ತಿರುತ್ತವೆ, ಅವುಗಳು ಶುಭ ಕಾರ್ಯಗಳಿಗೆ ಅಡ್ಡಿಯುಂಟು ಮಾಡುತ್ತವೆ ಎಂಬ ನಂಬಿಕೆಯೂ ಇದೆ. ವಿಶೇಷ ಸಂದರ್ಭಗಳಲ್ಲಿ ಪ್ರೇತಗಳು ಮೈಮೇಲೆ ಬರುವುದೂ ಉಂಟು. ಹೀಗೆ ಕುಟುಂಬದ ಸದಸ್ಯರೊಬ್ಬರನ್ನು ಪ್ರೇತ ಆವಾಹಿಸಿಕೊಂಡರೆ ಅವರು ಮೃತರು ಹೇಗೆ ಮಾತನಾಡುತ್ತಿದ್ದರೋ ಅವರಂತೆ ಮಾತನಾಡುವುದು, ಅವರ ಆಸೆಗಳನ್ನು ಹೇಳುವುದು, ಕುಟುಂಬದ ಇತರ ಸದಸ್ಯರಲ್ಲಿ ಯೋಗ ಕ್ಷೇಮ ವಿಚಾರಿಸುವುದು ಎಲ್ಲವನ್ನೂ ಮಾಡುತ್ತಿರುತ್ತಾರೆ. ಹೀಗೆ ಪ್ರೇತ ಅಥವಾ ತುಳುವಿನಲ್ಲಿ ‘ಕುಲೆ’ ಬಂದರೆ ಮನೆಯಲ್ಲಿ ನೆಮ್ಮದಿಗಾಗಿ ಇಂಥಾ ಕಾರ್ಯಗಳನ್ನ ಮಾಡಬೇಕು ಎಂದು ಸಲಹೆ ನೀಡುವುದೂ ಉಂಟು. ಹೀಗೆ ನೀಡಿದ ಸಲಹೆಗಳನ್ನು ಕುಟುಂಬದವರು ಗಂಭೀರವಾಗಿಯೇ ತೆಗೆದುಕೊಳ್ಳುತ್ತಾರೆ. ಹಾಗಾಗಿ ಮರಣಾನಂತರವೂ ಕುಟುಂಬದ ವ್ಯಕ್ತಿಗೆ ಸಲ್ಲಬೇಕಾದ ಎಲ್ಲ ಕಾರ್ಯಗಳನ್ನು ಇವರು ಮಾಡುತ್ತಿರುತ್ತಾರೆ.

ಹೀಗಿರುತ್ತದೆ ಮದುವೆ

ತಮ್ಮ ಕುಟುಂಬದದಲ್ಲಿ ನಿಧನರಾದವರಿಗೆ ಸೂಕ್ತ ವಧು ಅಥವಾ ವರನ ಹುಡುಕಾಟದೊಂದಿಗೆ ಪ್ರೇತ ಕಲ್ಯಾಣಕ್ಕೆ ಸಿದ್ಧತೆ ಪ್ರಾರಂಭವಾಗುತ್ತದೆ. ಜ್ಯೋತಿಷ್ಯ ನಂಬುವವರಾಗಿದ್ದರೆ ಈ ಜೋಡಿ ಜಾತಕ ಹೊಂದಿಕೆಯಾಗುತ್ತದೆಯೇ ಎಂಬುದನ್ನು ನೋಡಲಾಗುತ್ತದೆ. ಇವರಿಬ್ಬರ ಜಾತಕ ಹೊಂದಿಕೆಯಾಗಿ ಎರಡೂ ಕುಟುಂಬಗಳು ಒಪ್ಪಿದರೆ ಮಾತ್ರ ನಿಶ್ಚಿತಾರ್ಥ ಮಾಡಲಾಗುತ್ತದೆ. ನಿಶ್ಚಿತಾರ್ಥ ಮಾಡಿಕೊಳ್ಳಲು ವರನು ವಧುಗಿಂತ ಹಿರಿಯವ ಆಗಿರಲೇಬೇಕು. ನಿಶ್ಚಿತಾರ್ಥ ಆದ ನಂತರ ಮದುವೆ. ಈ ಮದುವೆ ನಡೆಯುವುದು ರಾತ್ರಿ ಹೊತ್ತಲ್ಲಿ ಮಾತ್ರ. ಸಾಮಾನ್ಯವಾಗಿ ಅಮವಾಸ್ಯೆಯ ಸಮಯದಲ್ಲಿ ಮದುವೆ ನಡೆಯುತ್ತದೆ. ಮದುವೆಯ ದಿನದಂದು ವರನ ಕುಟುಂಬವು ಉಡುಗೊರೆಗಳೊಂದಿಗೆ ವಧುವಿನ ಮನೆಗೆ ಬರುತ್ತದೆ. ಇಲ್ಲಿ ದಂಪತಿಗಳನ್ನು ಕೋಲು ಮತ್ತು ಹುಲ್ಲಿನಿಂದ ಮಾಡಿದ ಪ್ರತಿಕೃತಿಯಿಂದ ಪ್ರತಿನಿಧಿಸಲಾಗುತ್ತದೆ. ಅವರ ವಿವಾಹ ಸಮಾರಂಭವು ಮರದ ಕೆಳಗೆ ನಡೆಯುತ್ತದೆ.

ಕನ್ಯಾದಾನ ಮತ್ತು ಮಾಂಗಲ್ಯ ಧಾರಣೆ (ಕೃಪೆ: X/@anny_arun)

ಸತ್ತವರ ಆತ್ಮಗಳನ್ನು ಪ್ರತಿನಿಧಿಸಲು ಕುಟುಂಬಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವ ಪ್ರತಿಕೃತಿ ತಂದು ಮದುವೆ ಮಾಡಿಸುತ್ತಾರೆ. ಇಲ್ಲಿ ಸಂಪ್ರದಾಯಕ್ಕೆ ತಕ್ಕಂತೆ ಮಂತ್ರಗಳನ್ನು ಪಠಿಸಲಾಗುತ್ತದೆ.ಕನ್ಯಾದಾನ ಮಾಡಲಾಗುತ್ತದೆ, ಹೂಹಾರಗಳನ್ನು ಬದಲಾಯಿಸಲಾಗುತ್ತದೆ. ವಧುವಿಗೆ ತಾಳಿ ಕಟ್ಟಲಾಗುತ್ತದೆ, ಹಣೆಗೆ ಸಿಂಧೂರವನ್ನೂ ಇರಿಸಲಾಗುತ್ತದೆ. ಇಲ್ಲಿ ಸಪ್ತಪದಿಯೂ ಇರುತ್ತದೆ. ವಧುವಿನ ಸಹೋದರ ಪ್ರತಿಕೃತಿ ಹಿಡಿದುಕೊಂಡು ಮದುವೆ ಮಂಟಪದ ಸುತ್ತಲೂ ನಡೆಯುತ್ತಾನೆ. ಮದುವೆ ಶಾಸ್ತ್ರ ನೆರವೇರಿದ ನಂತರ ಸಂಪ್ರದಾಯಕ್ಕೆ ಅನುಗುಣವಾಗಿ, ವಧು ಮತ್ತು ವರನ ಸ್ಥಾನ ಬದಲಾಯಿಸಲಾಗುತ್ತದೆ. ಅಂದರೆ ಮದುವೆ ಆದ ನಂತರ ವಧು, ವರನ ಎಡಭಾಗದಲ್ಲಿ ಕುಳ್ಳಿರಿಸಲಾಗುತ್ತದೆ. ಈ ಮದುವೆಯಲ್ಲಿ ಅವಿವಾಹಿತರು ಮತ್ತು ಮಕ್ಕಳು ಭಾಗವಹಿಸುವುದಿಲ್ಲ. ಬಂಧುಗಳು ಮತ್ತು ಅತಿಥಿಗಳಿಗೆ ಬಾಳೆ ಎಲೆಯಲ್ಲಿ ಬಡಿಸುವ ಅದ್ದೂರಿ ಊಟದೊಂದಿಗೆ ಮದುವೆ ಕಾರ್ಯ ಮುಕ್ತಾಯವಾಗುತ್ತದೆ.

ವಿವಾಹ ಭೋಜನವಿದು

ಈ ವಿವಾಹ ಭೋಜನವು ಕರಾವಳಿ ಶೈಲಿಯ ಜನಪ್ರಿಯ ಭಕ್ಷ್ಯಗಳನ್ನು ಒಳಗೊಂಡಿದೆ. ಸೇಮಿಗೆ ಅಥವಾ ಒತ್ತು ಶ್ಯಾವಿಗೆ(ಇಡಿಯಪ್ಪಂ), ಇಡ್ಲಿ, ಚಿಕನ್ ಕರಿ, ಚಿಕನ್ ಸುಕ್ಕ, ಕಡ್ಲೆ ಬಳ್ಯಾರ್, ಮಟನ್ ಗ್ರೇವಿ, ಫಿಶ್ ಫ್ರೈ ಮತ್ತು ಕುಚ್ಚಲಕ್ಕಿ ಸೇರಿದಂತೆ ಹಲವಾರು ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಊಟ ಮುಗಿಸಿ ಅತಿಥಿಗಳು ಹೋದ ನಂತರ, ವರನ ಕುಟುಂಬವು ವಧುವಿನ ಪ್ರತಿಕೃತಿಯೊಂದಿಗೆ ಅಲ್ಲಿಂದ ಹೊರಡುತ್ತದೆ. ರಾತ್ರಿಯಲ್ಲಿ, ನವವಿವಾಹಿತರ ಪ್ರತಿಕೃತಿಗಳನ್ನು ಹಾಲೆ ಮರದ ಕೆಳಗೆ ಇರಿಸಲಾಗುತ್ತದೆ. ಕೆಲವು ಕುಟುಂಬಗಳು ಒಟ್ಟಾಗಿ ಪ್ರತಿಕೃತಿಗಳನ್ನು ದಹಿಸಿ ಆಚರಣೆಯನ್ನು ಪೂರ್ಣಗೊಳಿಸುತ್ತಾರೆ.

ಮದುವೆ ಊಟ (ಕೃಪೆ: X/@anny_arun)

ಹದಿನಾರು ಎಲೆಗಳಲ್ಲಿ ಪೂರ್ವಜರಿಗೆ ಬಡಿಸುವ ಕ್ರಮ

ಆಟಿ ಅಮಾವಾಸ್ಯೆ ವೇಳೆ ಪೂರ್ವಜರಿಗೆ ಉಣ ಬಡಿಸುವ ಕ್ರಮ ತುಳುನಾಡಿನಲ್ಲಿದೆ. ಈ ಹದಿನಾರು ತುಂಡು ಬಾಳೆ ಎಲೆಗಳಲ್ಲಿ ವಿಶಿಷ್ಟ್ಯ ಭಕ್ಷ್ಯಗಳನ್ನು ಬಡಿಸಿ ಪೂರ್ವಜರನ್ನು ಪ್ರಾರ್ಥಿಸಲಾಗುತ್ತದೆ. ಇಲ್ಲಿ ಎರಡು ಎಲೆಗಳಿಗೆ ಪ್ರತ್ಯೇಕವಾಗಿ ಬಡಿಸಲಾಗುತ್ತದೆ. ಈ ಎರಡು ಎಲೆಗಳು ಪ್ರೇತ ಮದುವೆಯ ವಧೂ ವರರದ್ದು. ನವದಂಪತಿಯ ಈ ಎರಡು ಆತ್ಮಗಳು ಪೂರ್ವಜನರೊಂದಿಗೆ ಸೇರಿಸುವ ಕ್ರಮ ಇದಾಗಿದ್ದು ಅದಕ್ಕಾಗಿ ಅವರು ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆಯ ನಂತರ, ವಿವಾಹಿತ ದಂಪತಿಗಳನ್ನು ಪೂರ್ವಜರೊಂದಿಗೆ ಸಂಯೋಜಿಸುವ ಮಾರ್ಗವಾಗಿ ಎರಡು ಎಲೆಗಳನ್ನು ಹದಿನಾರು ಎಲೆಗಳ ಜೊತೆಗೆ ಇರಿಸಲಾಗುತ್ತದೆ.ಇಲ್ಲಿಗೆ ವಿವಾಹ ಕಾರ್ಯಕ್ರಮ ಸಂಪನ್ನವಾಗುತ್ತದೆ.

ಈ ಹಿಂದೆ ಇಡೀ ನೆರೆಹೊರೆಯವರ ಸಹಕಾರದೊಂದಿಗೆ ವಿವಾಹ ನಡೆಸುತ್ತಿದ್ದರೂ, ಹಲವಾರು ಸಮುದಾಯದವರು ಈಗ ಈ ಸಂಪ್ರದಾಯವನ್ನು ಬಿಟ್ಟಿದ್ದಾರೆ. ಇಂತಹ ಆಚರಣೆಗಳ ಕಡೆಗೆ ಜನರ ಬದಲಾಗುತ್ತಿರುವ ಮನಸ್ಥಿತಿಯೇ ಕಾರಣ. ಯುವ ಪೀಳಿಗೆ ಈ ಆಚರಣೆಯನ್ನು ಮೂಢನಂಬಿಕೆ ಎಂದು ಕರೆಯುತ್ತಿದ್ದಾರೆ. ಹಾಗೆಯೇ ಸಮುದಾಯದ ಅನೇಕರು ಇಂತಹ ಆಚರಣೆಗಳನ್ನು ಒಪ್ಪುವುದಿಲ್ಲ. ಹಾಗಾಗಿ ಈ ಆಚರಣೆಗಳು ಕಾಲ ಕ್ರಮೇಣ ಮರೆಯಾಗುತ್ತಾ ಬಂದಿವೆ.

ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇದೆ ಈ ಸಂಪ್ರದಾಯ

ಪ್ರೇತ ಕಲ್ಯಾಣದ ಪರಿಕಲ್ಪನೆಯು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಚೀನಾ, ಸುಡಾನ್ ಮತ್ತು ಫ್ರಾನ್ಸ್‌ನಲ್ಲಿಯೂ ಪ್ರೇತ ವಿವಾಹಗಳು ನಡೆಯುತ್ತವೆ. ಆದಾಗ್ಯೂ, ವಿಭಿನ್ನ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಕಾನೂನು ಕಾರ್ಯವಿಧಾನಗಳು ಅಸ್ತಿತ್ವದಲ್ಲಿವೆ. ಉದಾಹರಣೆಗೆ, ಚೀನಾದಲ್ಲಿ ಪ್ರೇತ ವಿವಾಹ ಸುಮಾರು 3,000 ವರ್ಷಗಳ ಹಿಂದೆ ಪ್ರಾರಂಭವಾಯಿತು. ಇಲ್ಲಿನ ಜನರು ಶವವನ್ನೂ ಮದುವೆಯಾಗುತ್ತಾರೆ. ಶಾಂಕ್ಸಿಯಲ್ಲಿ ಇಂಥಾ ಮದುವೆಗಳು  ಪ್ರಾಚೀನ ಪದ್ಧತಿಯಾಗಿದೆ. ಆದಾಗ್ಯೂ, ಈ ಆಚರಣೆಯೂ ಸಂಪ್ರದಾಯದೊಂದಿಗೆ ನಂಟು ಹೊಂದಿದೆ. ಕುಟುಂಬದ ಸದಸ್ಯರಲ್ಲಿ ಒಬ್ಬರು ಅವಿವಾಹಿತರಾಗಿ ಸತ್ತರೆ, ಕುಟುಂಬಕ್ಕೆ ಶಾಪವಿರುತ್ತದೆ ಎಂಬ ನಂಬಿಕೆ ಇಲ್ಲಿ ಜನಜನಿತವಾಗಿದೆ. ಹಾಗಾಗಿ ಮಗನನ್ನು ಕಳೆದುಕೊಂಡ ಪೋಷಕರು “ಪ್ರೇತ ಸೊಸೆ” ಯನ್ನು ಹುಡುಕಲು ಬಹಳ ಪ್ರಯತ್ನ ಮಾಡುತ್ತಾರೆ. ಚೀನೀ ಕಮ್ಯುನಿಸ್ಟ್ ಸರ್ಕಾರವು 1949 ರಲ್ಲಿ ಈ ಆಚರಣೆಯನ್ನು ನಿಷೇಧಿಸಿತು. ಆದರೆ ಇದು ಇನ್ನೂ ದೇಶದ ದೂರದ ಹಳ್ಳಿಗಳಲ್ಲಿ ನಡೆದುಬರುತ್ತದೆ. ಮೃತ ಬ್ಯಾಚುಲರ್‌ಗಳನ್ನು ಮಹಿಳೆಯರ ಶವಗಳೊಂದಿಗೆ ಮದುವೆ ಮಾಡಿಸುವುದಕ್ಕಾಗಿ ಕುಟುಂಬಗಳಿಗೆ ಮ್ಯಾಚ್‌ಮೇಕಿಂಗ್ ಸೇವೆಗಳನ್ನು ಸಹ ಸ್ಥಾಪಿಸಲಾಗಿದೆ. ಇದಕ್ಕಾಗಿ ಶವಗಳನ್ನು ಕಾನೂನುಬಾಹಿರವಾಗಿ ಗೋರಿಯಿಂದ ಹೊರತೆಗೆಯುವುದು ಮತ್ತು ಮೃತ ಕುಟುಂಬಗಳಿಗೆ ಶವಗಳನ್ನು ಮಾರಾಟ ಮಾಡುವಂತಹ ಅಪರಾಧ ಚಟುವಟಿಕೆಗಳು ಸಂಭವಿಸಿವೆ.

ಫ್ರಾನ್ಸ್ ದೇಶದಲ್ಲಿ, ಜೀವಂತ ವ್ಯಕ್ತಿ ಮತ್ತು ಸತ್ತ ಜನರ ನಡುವಿನ  ವಿವಾಹಗಳು ಕಾನೂನುಬದ್ಧವಾಗಿವೆ. ಆದರೂ, ಅವು ಅಸಾಮಾನ್ಯವಾಗಿರುತ್ತವೆ. ಕಠಿಣವಾದ ಅರ್ಜಿ ಪ್ರಕ್ರಿಯೆ ಮತ್ತು ಫ್ರೆಂಚ್ ಅಧ್ಯಕ್ಷರ ವಿವೇಚನೆಯಿಂದ ಮಾತ್ರ ಅನುಮತಿ ನೀಡಲಾಗುತ್ತದೆ.

ದಕ್ಷಿಣ ಸುಡಾನ್‌ನ ನ್ಯೂರ್ ಬುಡಕಟ್ಟಿನಲ್ಲಿ, ಮದುವೆ ಸಮಾರಂಭದಲ್ಲಿ ವರನ ಸಹೋದರನನ್ನು ಸಾಮಾನ್ಯವಾಗಿ ನಿಶ್ಚಿತ ವರನಿಗೆ ಸ್ಟ್ಯಾಂಡ್-ಇನ್ ಆಗಿ ಬಳಸಲಾಗುತ್ತಿತ್ತು. ಹೀಗೆ ಸಹೋದರ ಸಾವಿಗೀಡಾದರೆ  ಇನ್ನೊಬ್ಬ ಸಹೋದರ ” ಸಹೋದರನ ಹೆಂಡತಿ” ಯೊಂದಿಗೆ ಸಂಸಾರ ಮಾಡಬೇಕಾಗುತ್ತದ. ಸತ್ತ ವರನ ಸಹೋದರ ಮತ್ತು ಹೆಂಡತಿಯ ಸಂಯೋಗದಿಂದ ಜನಿಸಿದ ಮಕ್ಕಳನ್ನು ಜೀವಂತ ಸಹೋದರನಿಗಿಂತ ಸತ್ತ ಮನುಷ್ಯನ ಸಂತತಿ ಎಂದು ಪರಿಗಣಿಸಲಾಗುತ್ತದೆ. ಅನೇಕ ಸುಡಾನ್ ಮಹಿಳೆಯರಿಗೆ, ಪ್ರೇತ ವಿವಾಹಗಳು ತಮ್ಮ ಸಂಪತ್ತನ್ನು ಪುರುಷನೊಂದಿಗೆ ಹಂಚಿಕೊಳ್ಳುವ ಬದಲು ಅಥವಾ ಅದನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಬದಲು ಉಳಿಸಿಕೊಳ್ಳುವ ಒಂದು ಮಾರ್ಗವಾಗಿದೆ.

Published On - 10:17 am, Mon, 22 April 24