ಕೋಲಾರ: ತೋಟಗಾರಿಕೆ ಬೆಳೆಗಳಲ್ಲಿ ಅತ್ಯಂತ ಪ್ರಮುಖವಾದ ಹಾಗೂ ಆದಾಯ ತರುವ ಬೆಳೆಗಳಲ್ಲಿ ಹುಣಸೆ ಕೂಡಾ ಒಂದು. ಹಿರಿಯ ತಲೆಮಾರುಗಳಿಂದ ಆಯಾಸವಿಲ್ಲದೆ, ನಿರಾಯಾಸವಾಗಿ ಆದಾಯಗಳಿಸುವ ಮಾರ್ಗ ಅಂದರೆ ಹುಣಸೆ. ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಅಡಕೆ ಬೆಳೆಯನ್ನು ಬೆಳೆದು ಆದಾಯ ಮಾಡಿದರೆ, ಬಯಲು ಸೀಮೆ ಪ್ರದೇಶದಲ್ಲಿ ಅದರಲ್ಲೂ ಗುಡ್ಡಗಾಡು, ಬೆಟ್ಟ ಪ್ರದೇಶ ಮತ್ತು ಕೃಷಿ ಮಾಡಲಾಗದ ಭೂಮಿ ಮುಂತಾದೆಡೆ ಹುಣಸೆ ಬೆಳೆ ಬೆಳೆದು ಅದರಿಂದ ವರ್ಷಕ್ಕೊಮ್ಮೆ ಉತ್ತಮ ಆದಾಯ ಗಳಿಸಬಹುದು ಎಂದು ಕೋಲಾರ ಭಾಗದ ಜನರು ನಿರೂಪಿಸಿದ್ದಾರೆ.
ಹುಣಸೆ ಹಣ್ಣಿಗೆ ಅಡುಗೆ ಮನೆಯಿಂದ ಹಿಡಿದು, ದೊಡ್ಡ ದೊಡ್ಡ ಔಷಧ ಕಾರ್ಖಾನೆಗಳವರೆಗೆ ಉತ್ತಮ ಬೇಡಿಕೆ ಇದೆ. ಆದರೆ ಈ ಬೆಳೆ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದೊಂದು ರೀತಿಯಲ್ಲಿ ಸದ್ದಿಲ್ಲದೆ ಆದಾಯ ಮಾಡುವ ವಿಧಾನ. ಹಿಂದಿನ ಕಾಲದಲ್ಲಿ ಊರ ಹೊರಗಿನ ಅಥವಾ ವ್ಯವಸಾಯ ಮಾಡಲಾಗದ ಪ್ರದೇಶಗಳಲ್ಲಿ ಹುಣಸೆ ಮರಗಳನ್ನು ಬೆಳೆಸಲಾಗುತ್ತಿತ್ತು, ರಾಜ- ಮಹಾರಾಜರು, ಜಮೀನ್ದಾರರು, ಪಾಳೇಗಾರರು ಹತ್ತಾರು ಹುಣಸೆ ತೋಪುಗಳನ್ನು ಹೊಂದಿರುತ್ತಿದ್ದರು. ಏಕೆಂದರೆ ಯಾವುದೇ ಗೊಬ್ಬರ ಅಥವಾ ಇನ್ನೀತರ ಖರ್ಚು ಇಲ್ಲದೆ ಸ್ವಾಭಾವಿಕವಾಗಿ ಈ ಬೆಳೆಯನ್ನು ಬೆಳೆಯಲಾಗುತ್ತದೆ.
ನಿರ್ಲಕ್ಷಿತ ಪ್ರದೇಶದಲ್ಲಷ್ಟೇ ಬೆಳೆಯುತ್ತಾರೆ ಹುಣಸೆ
ಸ್ವಾಭಾವಿಕವಾಗಿ ಬೆಳೆಯುವ ಹುಣಸೆ ಮರಗಳನ್ನು ಮೊದಲೆಲ್ಲಾ ರಸ್ತೆ ಬದಿಗಳಲ್ಲಿ, ಕೆರೆ ಕಟ್ಟೆಗಳ ಬಳಿ, ಇಲ್ಲಾ ಸ್ಮಶಾನಗಳ ಬಳಿ, ಪಾಳು ಭೂಮಿಗಳಲ್ಲಿ, ಗೋಮಾಳ, ಕರಾಬುಗುಟ್ಟೆಯಂತಹ ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು.
ಫೆಬ್ರವರಿಯಿಂದ ಏಪ್ರಿಲ್ವರೆಗೆ ಹುಣಸೆ ದರ್ಬಾರ್
ಸಾಮಾನ್ಯವಾಗಿ ಫೆಬ್ರವರಿಯಿಂದ ಹುಣಸೆ ಫಲಸು ಆರಂಭವಾಗುತ್ತದೆ. ಈ ವೇಳೆ ಎಲ್ಲೆಡೆ ಹುಣಸೆ ಕಟಾವು ಆರಂಭವಾಗಿ ಏಪ್ರಿಲ್ವರೆಗೆ ಕಟಾವು ಕೆಲಸ ನಡೆಯುತ್ತದೆ. ಏಪ್ರಿಲ್ ನಂತರ ಮರದಲ್ಲಿರುವ ಎಲೆ ಎಲ್ಲಾ ಹಣ್ಣಾಗಿ ಉದುರುತ್ತವೆ ನಂತರ ಹೊಸ ಚಿಗುರು ಸಮೇತ ಹೂ ಬಿಟ್ಟು ಜೂನ್-ಜುಲೈ ತಿಂಗಳಲ್ಲಿ ಹುಣಸೆ ಕಾಯಿಗಳು ಸಣ್ಣ ಗಾತ್ರದಲ್ಲಿ ಕಾಣಿಸುತ್ತದೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ದಿನಕ್ರಮೇಣ ಕಾಯಿ ಬೆಳೆದು ದೊಡ್ಡ ಗಾತ್ರದಲ್ಲಿ ಕಾಣಿಸತೊಡಗುತ್ತವೆ. ಈ ವೇಳೆ ಹಳ್ಳಿಗಳಲ್ಲಿ ಹುಣಸೆ ಚಿಗುರು ಹಾಗೂ ಹುಣಸೆ ಹೂವಿನಿಂದ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ.
ರಾಜ್ಯ ಹೊರ ರಾಜ್ಯಗಳ ವ್ಯಾಪಾರಿಗಳಿಂದ ಭರ್ಜರಿ ಬೇಡಿಕೆ
ಹುಣಸೆ ಫಸಲು ಬಿಡುವ ಕಾಲಕ್ಕೆ ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಬಂದು ಸ್ಥಳೀಯ ರೈತರ ಸಂಪರ್ಕ ಮಾಡಿ ದಲ್ಲಾಳಿಗಳ ಸಮೇತ ವ್ಯಾಪಾರಸ್ಥರು ವ್ಯಾಪಾರಕ್ಕೆ ಇಳಿಯುತ್ತಾರೆ. ಹೊರ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತಮಿಳುನಾಡು, ಕೇರಳ, ರಾಜ್ಯಗಳಿಂದ ವ್ಯಾಪಾರಸ್ಥರು ಬಂದು ಬೇಡಿಕೆಗೆ ತಕ್ಕಂತೆ ವ್ಯಾಪಾರ ಮಾಡಿ ಮುಂಗಡ ಹಣ ಪಾವತಿಸಿ ಹೋಗುತ್ತಾರೆ. ನಂತರ ಕಟಾವು ಮಾಡುವ ಸಮಯದಲ್ಲಿ ಬಂದು ರೈತರಿಗೆ ಬಾಕಿ ಹಣ ಪಾವತಿ ಮಾಡಿ ಹೋಗುತ್ತಾರೆ.
ಹುಣಸೆ ಕಟಾವು ವೇಳೆಯಲ್ಲಿ ನೂರಾರು ಜನರಿಗೆ ಕೂಲಿ ಕೆಲಸ ಸಿಗುತ್ತದೆ !
ರೈತರ ಕೃಷಿ ಚಟುವಟಿಕೆಗಳು ಮುಗಿದ ನಂತರ ಬರುವ ಹುಣಸೆ ಫಸಲು, ರೈತರು ಖಾಲಿಯಾಗಿರುವ ಸಮಯದಲ್ಲಿ ರೈತರಿಗೆ ಮತ್ತೆ ಕೆಲಸ ಕೊಡುತ್ತದೆ. ಹುಣಸೆ ಫಸಲು ಕಟಾವು ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಬಂದು, ಅಲ್ಲೇ ಟೆಂಟ್ಗಳನ್ನು ಹಾಕಿಕೊಂಡು ಹುಣಸೆ ಫಸಲು ಕಟಾವು ಮಾಡಿ ಅದನ್ನು ಬೇರ್ಪಡಿಸಿ, ಹಸನು ಮಾಡುತ್ತಾರೆ. ಎರಡು ತಿಂಗಳ ಕಾಲ ಇದು ನೂರಾರು ಜನರ ರೈತರಿಗೆ ಕೆಲಸ ನೀಡುತ್ತದೆ.
ಅಡುಗೆ ಮನೆಯಿಂದ ಸಮುದ್ರದಾಚೆಗೆ ಬೇಡಿಕೆ ಇರುವ ಹುಣಸೆ!
ಹುಣಸೆ ಹಣ್ಣನ್ನು ಹೆಚ್ಚಾಗಿ ಮೀನುಗಳನ್ನು ಸ್ವಚ್ಛ ಮಾಡಲು, ಮೀನುಗಳು ಕೆಡದಂತೆ ಶೇಖರಣೆ ಮಾಡಲು ಬಳಸುತ್ತಾರೆ. ಹುಣಸೆ ಹಣ್ಣನ್ನು ತಂಪು ಪಾನೀಯಗಳಿಗೆ, ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಜೊತೆಗೆ ಮನೆಗಳಲ್ಲಿ ಪ್ರತಿದಿನ ಅಡುಗೆ ಮನೆಯಲ್ಲಿ ಹುಣಸೆ ಹುಳಿ ಇಲ್ಲದೆ ರುಚಿಯಾದ ಊಟವೇ ತಯಾರೋಗಲ್ಲ. ರಸಂ, ಸಾಂಬಾರುಗಳಿಗೆ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಿನ್ನುವ ಪದಾರ್ಥವಾದಂತಹ ಚಾಕೊಲೇಟ್ ತಯಾರಿಕೆಯಲ್ಲಿ ಬಳಸುತ್ತಾರೆ.
ಅಷ್ಟೇ ಅಲ್ಲದೆ ಹುಣಸೆ ಹಣ್ಣನ್ನು ದೇವಾಲಯಗಳಲ್ಲಿರುವ ಮೆರವಣಿಗೆ ವಿಗ್ರಹಗಳನ್ನು ತೊಳೆಯಲು ಹಾಗೂ ಮನೆಗಳಲ್ಲಿ ಇರುವಂತಹ ಕಂಚು, ಹಿತ್ತಾಳೆ ವಸ್ತುಗಳನ್ನು ತೊಳೆಯಲು ಬಳಸುತ್ತಾರೆ. ಇನ್ನು ಹುಣಸೆ ಹಣ್ಣಿನಿಂದ ಬೇರ್ಪಟ್ಟ ಹೊಟ್ಟನ್ನು ಇಟ್ಟಿಗೆ ಕಾರ್ಖಾನೆಗಳಲ್ಲಿ ಬೆಂಕಿ ಉರಿಸಲು ಬಳಸಲುತ್ತಾರೆ. ಹುಣಸೆ ಬೀಜಗಳನ್ನು ಹಂದಿಗಳಿಗೆ ಉತ್ತಮ ಆಹಾರವಾಗಿ ಬಳಸುತ್ತಾರೆ. ಜೊತೆಗೆ ಹುಣಸೆ ಬೀಜದ ಪುಡಿಯನ್ನು ಅಂಟು ದ್ರವ್ಯವಾಗಿ ಬಳಸುತ್ತಾರೆ. ಇಷ್ಟೆಲ್ಲಾ ಉಪಯೋಗ ಹೊಂದಿರುವ ಹುಣಸೆ ಹಣ್ಣಿನ ತಳಿಗಳ ಬಗ್ಗೆ ಸಂಶೋಧನೆಗಳು ಕೂಡ ನಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹುಣಸೆ ಹೊಸ ತಳಿಗಳಿಗೆ ಬೇಡಿಕೆ ಇದ್ದು ಅವುಗಳೆಂದರೆ ಪಿಕೆಎಂ1, ಸ್ವಿಟ್ಕಾಮರ್ಡ್, ಭದ್ರಾಚಲಂ, ಪಿಕೆಎಂ3, ಸ್ವಿಟ್ಕಾಮರ್ಡ್ ಪ್ರೊ ತಳಿಗಳು ಪ್ರಚಲಿತದಲ್ಲಿವೆ.
ಇದನ್ನೂ ಓದಿ: ಕೊರೊನಾ ಸೋಂಕಿನ ಎರಡನೇ ಅಲೆ: ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿಲ್ಲ ಹುಣಸೆ
(Good demand across the state for a tamarind crop that generate income without fatigue in Kolar)