Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಣಸೆ ಹಣ್ಣಿಗೆ ಬಂಪರ್ ಬೆಲೆ; ಕೊರೊನಾದಿಂದ ಕಂಗೆಟ್ಟ ರೈತರ ಮೊಗದಲ್ಲಿ ಮಂದಹಾಸ

ದೈನಂದಿನ ಅಡುಗೆಯಲ್ಲಿ ಇರಲೇ ಬೇಕಾದ ಹುಣಸೆ ಹಣ್ಣಿಗೆ ಇದೇ ಮೊದಲ ಬಾರಿಗೆ ಬಂಪರ್ ಬೆಲೆ ಬಂದಿದೆ. ಈ ಹುಣಸೆ ಈ ಬಾರಿ ರೈತರ ಜೇಬು ತುಂಬಿಸುತ್ತಿದೆ.

ಹುಣಸೆ ಹಣ್ಣಿಗೆ ಬಂಪರ್ ಬೆಲೆ; ಕೊರೊನಾದಿಂದ ಕಂಗೆಟ್ಟ ರೈತರ ಮೊಗದಲ್ಲಿ ಮಂದಹಾಸ
ಹುಣಸೆ ಹಣ್ಣು
Follow us
ಆಯೇಷಾ ಬಾನು
|

Updated on: Apr 23, 2021 | 3:05 PM

ಧಾರವಾಡ: ಹೆಚ್ಚು ಒಣ ಬೇಸಾಯದಲ್ಲಿ ಬೆಳೆಯುವ ಹಾಗೂ ದೈನಂದಿನ ಅಡುಗೆಯಲ್ಲಿ ಇರಲೇ ಬೇಕಾದ ಹುಣಸೆ ಹಣ್ಣಿಗೆ ಇದೇ ಮೊದಲ ಬಾರಿಗೆ ಬಂಪರ್ ಬೆಲೆ ಬಂದಿದೆ. ಈ ಹುಣಸೆ ಈ ಬಾರಿ ರೈತರ ಜೇಬು ತುಂಬಿಸುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಹುಣಸೆಯನ್ನು ಪ್ರಧಾನ ಬೆಳೆ ಅಂತಾ ಬೆಳೆಯದಿದ್ದರೂ ರೈತರು ತಮ್ಮ ಜಮೀನಿನ ಬದುಗಳಲ್ಲಿ ನೆಟ್ಟ ಗಿಡಗಳು ಈ ಬಾರಿ ಸಾಕಷ್ಟು ಲಾಭ ತರುತ್ತಿವೆ.

ಕೊರೊನಾ ಸಂಕಷ್ಟದ ನಡುವೆ ಲಾಭ ತಂದು ಕೊಟ್ಟ ಹುಣಸೆ ಧಾರವಾಡ ಜಿಲ್ಲೆಯಲ್ಲಿ ರೈತರು ಈ ಬೆಳೆಯನ್ನು ಪ್ರತ್ಯೇಕವಾಗಿ ಬೆಳೆಯದೇ ತಮ್ಮ ತೋಟ, ಹೊಲದ ಬದು ಹಾಗೂ ರಸ್ತೆ ಪಕ್ಕದಲ್ಲಿ ಮರಗಳನ್ನು ಬೆಳೆಸುತ್ತಾರೆ. ಪ್ರಸ್ತುತ ಮಾರುಟ್ಟೆಯಲ್ಲಿ ಹುಣಸೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಹುಣಸೆ ಬೆಳೆಯದ ರೈತರು ಈ ಬಾರಿಯ ದರ ಕೇಳಿ ಕೈ ಹಿಸುಕಿಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಕಡಿಮೆ ಹುಣಸೆ ಬೆಳೆಯುವುದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತದೆ. ಹೀಗಾಗಿ ವ್ಯಾಪಾರಸ್ಥರು ಗ್ರಾಮೀಣ ಪ್ರದೇಶಕ್ಕೆ ಹಾಗೂ ಹುಣಸೆ ಬೆಳೆದ ರೈತರನ್ನು ತಾವೇ ಸಂಪರ್ಕಿಸಿ ಖರೀದಿ ಮಾಡುತ್ತಾರೆ. ಹೀಗೆ ಖರೀದಿ ಮಾಡಿದ ಹುಣಸೆಯನ್ನು ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಹಾಗೂ ಹೊರ ಜಿಲ್ಲೆಗಳಿಗೆ ರಫ್ತಾಗುತ್ತಿದ್ದು, ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ.

ಮಾರುಕಟ್ಟೆಯಲ್ಲಿ ಮೂರು ರೂಪದಲ್ಲಿ ಹುಣಸೆ ಗುರುತು ಮಾರುಕಟ್ಟೆಗೆ ಬರುವ ಹುಣಿಸೆ ಹಣ್ಣನ್ನು ಮೂರು ರೂಪದಲ್ಲಿ ಗುರುತಿಸಿ ಬೆಲೆ ನಿಗದಿ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಕರಿಪುಳಿ, ಹೂವು ಹಣ್ಣು (ಪ್ಲವರ್) ಹಾಗೂ ಬೋಟು (ಬೀಜ ತೆಗೆಯದ ಹುಣಿಸೆ ಹಣ್ಣು) ಎಂದು ವಿಂಗಡಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕರಿಪುಳಿ ಹುಣಿಸೆ ಹಣ್ಣಿಗೆ ಕ್ವಿಂಟಲ್‌ಗೆ 15 ಸಾವಿರದಿಂದ 20 ಸಾವಿರ ರೂಪಾಯಿವರೆಗೂ ಬೆಲೆ ಇದೆ. ಕ್ವಿಂಟಾಲ್ ಹೂ ಹಣ್ಣು ಹುಣಿಸೆಗೆ 10 ರಿಂದ 12 ಸಾವಿರ ರೂಪಾಯಿ ಮತ್ತು ಬೋಟು ಹುಣಸೆಗೆ ಕ್ವಿಂಟಾಲ್ 5 ರಿಂದ 7 ಸಾವಿರ ರೂಪಾಯಿ ಬೆಲೆ ದೊರೆಯುತ್ತಿದೆ.

ಹುಣಸೆ ಹಣ್ಣು ಮಾತ್ರವಲ್ಲದೇ ಹುಣಿಸೆ ಬೀಜಕ್ಕೂ ಬೇಡಿಕೆ ಹುಣಸೆ ಹಣ್ಣು ಮಾತ್ರವಲ್ಲದೆ, ಹುಣಿಸೆ ಬೀಜಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಒಂದು ಕ್ವಿಂಟಾಲ್ ಹುಣಸೆ ಬೀಜಕ್ಕೆ 1,600 ರಿಂದ 1,800 ರೂಪಾಯಿವರೆಗೆ ದರ ದೊರೆಯುತ್ತದೆ. ಹುಣಸೆ ಬೀಜವು ಗಮ್ ತಯಾರಿಕೆ, ಔಷಧ ಉತ್ನನ್ನಗಳಿಗೆ ಬಳಕೆಯಾಗುತ್ತದೆ. ಹುಣಸೆ ಮರ ತೊಗಟೆಯಿಂದ ಎಲೆಯವರೆಗೂ ಬಳಕೆಯಾಗುವ ಕಲ್ಪವೃಕ್ಷದಂತಹ ಲಾಭದಾಯಕ ಬೆಳೆಯಾಗಿದೆ.

ನಿರ್ವಹಣೆಯ ಸಮಸ್ಯೆಯೇ ಇಲ್ಲದ ಬೆಳೆ ಬಯಲು ಸೀಮೆ ಪ್ರದೇಶದಲ್ಲಿ ಹುಣಸೆ ಆರ್ಥಿಕ ಬೆಳೆ. ಮರವಾಗಿ ಫಸಲು ಶುರುವಾದ ನಂತರ ಯಾವುದೇ ನಿರ್ವಹಣೆಯ ಖರ್ಚಿಲ್ಲದೆ ಹುಣಸೆ ಲಾಭ ತಂದುಕೊಡುವ ವಾರ್ಷಿಕ ಬೆಳೆ. ರೈತರು ತಮ್ಮ ಜಮೀನಿನ ಖಾಲಿ ಜಾಗದಲ್ಲಿ, ಬದುಗಳಲ್ಲಿ ಹುಣಿಸೆ ಮರ ಬೆಳೆಸಿದರೆ ಬೇಸಾಯದ ಖರ್ಚಿಲ್ಲದೆ ನಿರಂತರ ಆದಾಯ ಗಳಿಸಬಹುದು. ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಆದರೂ ಬಹುತೇಕ ರೈತರು ಇಂಥ ಬೆಳೆಯನ್ನು ಬೆಳೆಯಲು ಮನಸ್ಸು ಮಾಡುವುದಿಲ್ಲ ಅನ್ನುವುದೇ ವಿಪರ್ಯಾಸ.

tamarind

ಹುಣಸೆ ಹಣ್ಣು

ಹುಣಸೆ ಬೆಳೆದ ರೈತರು ಫುಲ್‌ ಖುಷ್ ಹುಣಸೆ ಹಣ್ಣಿನ ಬೆಲೆ ಕಳೆದ ಮೂರು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. 2019 ರಲ್ಲಿ ಕ್ವಿಂಟಲ್‌ಗೆ 8-10 ಸಾವಿರ ರೂಪಾಯಿ ಇದ್ದ ಬೆಲೆ 2020 ರಲ್ಲಿ 10-12 ಸಾವಿರ ರೂಪಾಯಿ ಹಾಗೂ 2021 ರಲ್ಲಿ 15-20 ಸಾವಿರ ರೂಪಾಯಿಗೆ ಏರಿಕೆ ಕಂಡಿದೆ. ಕೊವಿಡ್ ಹಿನ್ನೆಲೆಯಲ್ಲಿ ರಫ್ತು ನಿಲ್ಲಿಸಿದ ಕಾರಣ ಬೆಲೆ ನಿಯಂತ್ರಣದಲ್ಲಿದೆ. ರಫ್ತಿಗೆ ಅವಕಾಶ ಇದ್ದಿದ್ದರೆ, ಈ ವರ್ಷ ದಾಖಲೆಯ ಬೆಲೆ ಇರುತ್ತಿತ್ತು ಎನ್ನುತ್ತಾರೆ ಹುಣಸೆ ಹಣ್ಣಿನ ವ್ಯಾಪಾರಿ ಧಾರವಾಡದ ಮಹಾದೇವ ಪಾಟೀಲ್.

ಇನ್ನು ಟಿವಿ-9 ಡಿಜಿಟಲ್‌ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಧಾರವಾಡ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ್, ಹುಣಸೆ ಬೆಳೆಯ ನಿರ್ವಹಣೆ ಹಾಗೂ ರೋಗ ಬಾಧೆ ಕಡಿಮೆ. ನೀರಾವರಿ ಸಮಸ್ಯೆ ಇರುವ ಎಲ್ಲಾ ರೈತರು ಹುಣಸೆ ಬೆಳಯಬಹುದು. ಧಾರವಾಡ ಜಿಲ್ಲೆಯಲ್ಲಿ ಹುಣಸೆ ಬೆಳೆ ಸಾಕಷ್ಟು ಕಡಿಮೆ ಇದ್ದು, ಆಸಕ್ತ ರೈತರು ಬೆಳೆಯಲು ಮುಂದಾದರೆ ಇಲಾಖೆಯಿಂದ ಎಲ್ಲಾ ಸಹಕಾರ ನೀಡಲಾಗುತ್ತದೆ ಅನ್ನುತ್ತಾರೆ.

ಬಯಲು ಸೀಮೆ ಜಿಲ್ಲೆಗಳಲ್ಲಿ ಹುಣಸೆ ಪ್ರಮುಖ ಬೆಳೆ ಮಳೆ ಕಡಿಮೆ ಬೀಳುವ ಹೈದರಾಬಾದ್ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಹುಣಸೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಸಸಿ ನೆಟ್ಟು, ಒಂದೆರಡು ವರ್ಷ ನೀರು ಕೊಟ್ಟು ಪೋಷಿಸಿದರೆ ಸಾಕು ಮುಂದಿನ ದಿನಗಳಲ್ಲಿ ನಿರ್ವಹಣೆ ಸಮಸ್ಯೆ ಇರುವುದೇ ಇಲ್ಲ. ವರ್ಷಕ್ಕೊಮ್ಮೆ ವ್ಯಾಪಾರಿಗಳೇ ಬಂದು ಹೂವಿನ ಪ್ರಮಾಣ ಮತ್ತು ಹವಾಮಾನ ನೋಡಿ ಇಡೀ ಹೊಲವನ್ನೇ ಗುತ್ತಿಗೆ ಪಡೆದುಬಿಡುತ್ತಾರೆ. ಅಲ್ಲಿಗೆ ಆ ವರ್ಷ ರೈತರ ಜವಾಬ್ದಾರಿ ಮುಗಿದಂತೆ. ಹೀಗಾಗಿ ಎಷ್ಟೋ ರೈತರು ಹೆಚ್ಚುವರಿ ಜಮೀನಿನಲ್ಲಿ ಹುಣಸೆ ಬೆಳೆಯಲು ಬಿಟ್ಟು ಬಿಡುತ್ತಾರೆ. ನಾಲ್ಕಾರು ವರ್ಷಗಳಲ್ಲಿ ಹುಣಸೆ ಲಾಭ ತರೋದಕ್ಕೆ ಶುರು ಮಾಡುತ್ತದೆ.

ಇದನ್ನೂ ಓದಿ: ಆಯಾಸವಿಲ್ಲದೆ ಆದಾಯ ತರುವ ಹುಣಸೆ ಬೆಳೆಗೆ ರಾಜ್ಯದಾದ್ಯಂತ ಉತ್ತಮ ಬೇಡಿಕೆ