ಚಿತ್ರದುರ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದಿಗೂ ಗುಣಮಟ್ಟದ ಶಿಕ್ಷಣ ಗಗನಕುಸುಮವೇ ಸರಿ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಅದೊಂದು ಗ್ರಾಮದಲ್ಲಿ ಮಾತ್ರ ಶಿಕ್ಷಣ ಮತ್ತು ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಮಕ್ಕಳು ಶಾಲೆ ಕಡೆಗೆ ಈಗ ಹೋಗುವುದು ಸಾಧ್ಯವಿಲ್ಲ. ಆದರೆ ಇಲ್ಲಿ ನಿರ್ಮಾಣವಾದ ಡಿಜಿಟಲ್ ಗ್ರಂಥಾಲಯ (Digital Library) ಮಕ್ಕಳ ಓದುವ ಹವ್ಯಾಸಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ನಗರ ಪ್ರದೇಶದ ಗ್ರಂಥಾಲಯ ಮೀರಿಸುವಂತಹ ಡಿಜಿಟಲ್ ಗ್ರಂಥಾಲಯ ಇದಾಗಿದ್ದು, ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.
ಚಿತ್ರದುರ್ಗ ತಾಲೂಕಿನ ಮಾಳಪ್ಪನಹಟ್ಟಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಡಿಜಿಟಲ್ ಗ್ರಂಥಾಲಯ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ಶಿಕ್ಷಣ ಮತ್ತು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಗ್ರಾಮ ಪಂಚಾಯತಿ ಅಧೀನದ ಕಟ್ಟಡದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಆ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಕನಸಿನ ಹೆಜ್ಜೆಯಿಟ್ಟಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಆಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಸುಮಾರು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ನೂರಾರು ಉಪಯುಕ್ತ ಪುಸ್ತಕಗಳು, ಟ್ಯಾಬ್, ಕಂಪ್ಯೂಟರ್ ಹಾಗೂ ಇಂಟರ್ ನೆಟ್ ಸೌಲಭ್ಯ ಇಲ್ಲಿ ಲಭ್ಯವಿದೆ. ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಲ್ಲಿ ಇಂಟರ್ನೆಟ್ ಮೂಲಕ ಓದಬಹುದು. ಮಕ್ಕಳನ್ನು ಓದಿನತ್ತ ಸೆಳೆಯುವ ನಿಟ್ಟಿನಲ್ಲಿ ಆಕರ್ಷಕ ಪೇಂಟಿಂಗ್, ಸಾಹಿತಿ ಮತ್ತು ಸಾಧಕರ ಚಿತ್ರ ಹಾಕಲಾಗಿದೆ. ವಿವಿಧ ನುಡಿ ಬರಹಗಳನ್ನು ಹಾಕಲಾಗಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಇಲ್ಲಿ ಸಿಗಲಿದೆ ಎಂದು ಪಿಡಿಓ ರೂಪಾ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ತಾಲೂಕಿನ ಮಾಳಪ್ಪನಹಟ್ಟಿ ಗ್ರಾಮದಲ್ಲಿ ಜಿಲ್ಲೆಯಲ್ಲೇ ಮೊದಲ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಆಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಮಕ್ಕಳ ಪಾಲಿಗೆ ಈ ಕೇಂದ್ರ ಅಧ್ಯಯನಕ್ಕೆ ಸದ್ಬಳಕೆ ಆಗಲಿ ಎಂಬ ಆಶಯ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಅಧಿಕಾರಿಗಳದ್ದಾಗಿದೆ. ಶಿಕ್ಷಣ ಮತ್ತು ಅಧ್ಯಯನಕ್ಕೆ ಆದ್ಯತೆ ನೀಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ:
ವಿದ್ಯಾರ್ಜನೆಗಾಗಿ ಗ್ರಂಥಾಲಯ ನಿರ್ಮಾಣ; ಯಾದಗಿರಿ ಜಿಲ್ಲೆಯ ಮಕ್ಕಳ ಶಿಕ್ಷಣಕ್ಕೆ ಬೆಳಕಾದ ಯುವಕರ ತಂಡ
ಅಟ್ಲಾಂಟಾ ಸಂಸ್ಥೆಯಿಂದ ಬೆಂಗಳೂರು ನಗರ ಕೇಂದ್ರ ಗ್ರಂಥಾಲಯಕ್ಕೆ 15 ಸಾವಿರ ಪುಸ್ತಕಗಳ ಕೊಡುಗೆ: ಸುರೇಶ್ ಕುಮಾರ್
Published On - 9:30 am, Tue, 13 July 21