AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬ ದೇಗುಲದ ಇತಿಹಾಸ ಮತ್ತು ಸಪ್ತ ಮಾತೃಕೆಯರು ಇಲ್ಲಿ ನೆಲೆಸಿದ್ದು ಹೇಗೆ? ಇಲ್ಲಿದೆ ಮಾಹಿತಿ

ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24 ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬ ದೇಗುಲದ ಇತಿಹಾಸ ಮತ್ತು ದೇವಿ ಪವಾಡದ ಬಗ್ಗೆ ಮಾಹಿತಿ ಇಲ್ಲಿದೆ.

ಹಾಸನಾಂಬ ದೇಗುಲದ ಇತಿಹಾಸ ಮತ್ತು ಸಪ್ತ ಮಾತೃಕೆಯರು ಇಲ್ಲಿ ನೆಲೆಸಿದ್ದು ಹೇಗೆ? ಇಲ್ಲಿದೆ ಮಾಹಿತಿ
ಹಾಸನಾಂಬ
ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ|

Updated on:Oct 31, 2024 | 10:03 AM

Share

ಹಾಸನ, ಅಕ್ಟೋಬರ್​ 31: ಹಾಸನದ (Hassan) ಅಧಿದೇವತೆ, ನಾಡಿನ ಶಕ್ತಿದೇವತೆ, ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ (Hasanamba). ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇಗುಲದ ಬಾಗಿಲ ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ತೆರೆಯಲಾಗುತ್ತದೆ. ಹಾಸನಾಂಬೆ ದರ್ಶನಕ್ಕೆ ಕೆಲವೇ ದಿನಗಳು ಮಾತ್ರ ಅವಕಾಶವಿರುತ್ತದೆ. ಹೀಗಾಗಿ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ಆಶೀರ್ವಾದ ಪಡೆದು ಪುನೀತರಾಗುತ್ತಾರೆ. ಗಣ್ಯಾತಿ ಗಣ್ಯರು. ಸಿನಿಮಾ ಸ್ಟಾರ್​ಗಳು, ರಾಜಕಾರಣಿಗಳು ಕೂಡ ಶಕ್ತಿ ದೇವಿಗೆ ಶಿರಬಾಗಿ ನಮಿಸಿ ಸುಖ ಸಮೃದ್ದಿಗಾಗಿ ಮೊರೆ ಇಡುತ್ತಾರೆ.

ಈ ವರ್ಷ ಹಾಸನಾಂಬೆ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಈಗಾಗಲೆ ಲಕ್ಷಾಂತರ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಅಕ್ಟೋಬರ್ 24 ರಂದು ಮಧ್ಯಾಹ್ನ 12 ಗಂಟೆ 10 ನಿಮಿಷಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯಾತಿ ಗಣ್ಯರು, ಸಿನಿ ತಾರೆಯರು ದೇವಿಯ ದರ್ಶನ ಮಾಡಿದ್ದಾರೆ.

ತಮ್ಮ ಇಷ್ಟಾರ್ಥ ಸಿದ್ದಿಸುವ ದೇವಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಗಂಟೆಗಟ್ಟಲೆ ಸರತಿ ಸಾಲುಗಳಲ್ಲಿ ನಿಂತು ಬಸವಳಿದರೂ ದಣಿಯದೆ ಖುಷಿಯಿಂದಲೇ ದೇವಿಯನ್ನು ಕಣ್ತುಂಬಿಕೊಂಡು ಆರದ ಜ್ಯೋತಿಯನ್ನ ಕಂಡು ಪುಳಕಗೊಂಡು ಆಶೀರ್ವಾದ ಪಡೆಯುತ್ತಿದ್ದಾರೆ.

ಹಾಸನಾಂಬ ದೇವಸ್ಥಾನ ಇತಿಹಾಸ

ಹಾಸನದ ಅಧಿದೇವತೆ, ಹಾಸನದ ಗ್ರಾಮದೇವತೆ ಹಾಸನಾಂಬ ದೇವಾಲಯ 12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕರೆಂಬ ಪಾಳೆಗಾರರ ಕಾಲದಲ್ಲಿ ನಿರ್ಮಾಣವಾಗಿದೆ.

ಹುತ್ತದ ರೂಪದಲ್ಲಿ ನೆಲೆಸಿರುವ ಹಾಸನಾಂಬೆ

ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ವಾರಣಾಸಿಯಿಂದ ವಾಯು ವಿಹಾರದ ಸಲುವಾಗಿ ದಕ್ಷಿಣದ ಕಡೆಗೆ ಬಂದರು. ಪ್ರಕೃತಿ ಸೊಬಗಿನ ನಾಡು ಹಾಸನಕ್ಕೆ ಮಾರುಹೋಗಿ ಇಲ್ಲೇ ನೆಲಸಿದರು. ಹಾಸನಾಂಬೆಯು ಹಾಸನದಲ್ಲಿ ನೆಲೆಸಿದ್ದರಿಂದ ಇಲ್ಲಿಗೆ ಹಾಸನ ಎಂದು ಹೆಸರು ಬಂತು ಅಂತ ಹೇಳಲಾಗುತ್ತಿದೆ.

ಸಪ್ತ ಮಾತೃಕೆಯರಲ್ಲಿ ವೈಷ್ಣವಿ ಮಹೇಶ್ವರಿ, ಕೌಮಾರಿ ದೇವರಿಯರು ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದರೇ, ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಬ್ರಾಹ್ಮಿ ದೇವಿ ನೆಲಸಿದ್ದಾಳೆ. ಚಾಮುಂಡಿ, ವಾರಾಹಿ, ಇಂದ್ರಾಣಿಯರು ಹಾಸನ ನಗರದಲ್ಲಿ ದೇವಿಗೆರೆಯಲ್ಲಿ ನೆಲೆಸಿದ್ದಾರೆ.

ವರ್ಷಕ್ಕೊಮ್ಮೆ ಅಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ದೇಗುಲದ ಬಾಗಿಲು ತೆರೆದರೆ ಬಲಿಪಾಡ್ಯಮಿಯ ಮಾರನೆ ದಿನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲು ಬಂದ್ ಮಾಡಲಾಗುತ್ತೆ. ಮತ್ತೆ ದೇವಿ ದರ್ಶನ ಸಿಗುವದು ವರ್ಷ ಕಳೆದ ಬಳಿಕ. ಈ ವರ್ಷ ಅಕ್ಟೋಬರ್ 24ಕ್ಕೆ ಬಾಗಿಲು ತೆರೆಯಲಾಗಿದ್ದು ನವೆಂಬರ್ 3ಕ್ಕೆಬಾಗಿಲು ಮುಚ್ಚಲಿದೆ. ಒಟ್ಟು 11 ದಿನಗಳು ಹಾಸನಾಂಬೆ ದೇಗುಲದ ಬಾಗಿಲು ತೆರೆದಿರಲಿದ್ದು ಭಕ್ತರಿಗೆ ಮೊದಲ ಹಾಗು ಕೊನೆಯ ದಿನ ಹೊರತು ಪಡಿಸಿ ಉಳಿದ 9 ದಿನಗಳು ದೇವಿ ದರ್ಶನಕ್ಕೆ ಮುಕ್ತ ಅವಕಾಶ ಸಿಗಲಿದೆ.

ಪವಾಡಗಳಿಂದಲೇ ಪ್ರಖ್ಯಾತಿಯಾದ ಹಾಸನಾಂಬೆ

ಪವಾಡಗಳೂ ಕೂಡ ಹಾಸನಾಂಬೆಯ ಮಹಿಮೆಯನ್ನು ಹೆಚ್ಚಿಸಿದೆ. ಬಲಿಪಾಡ್ಯಮಿಯ ಮಾರನೇ ದಿನ ಪೂಜೆ ಸಲ್ಲಿಸಿ ದೀಪ ಹಚ್ಚಿ ಬಾಗಿಲು ಮುಚ್ಚಿದರೆ ಮತ್ತೆ ದೇಗುಲ ತೆರೆಯುವುದು ವರ್ಷದ ಬಳಿಕ. ಆದರೆ ವರ್ಷದ ಬಳಿಕ ಬಾಗಿಲು ತೆರೆದರೂ ಹಿಂದಿನ ವರ್ಷ ಹಚ್ಚಿಟ್ಟ ದೀಪ ಆರಿರುವುದಿಲ್ಲ. ದೇವರ ಮುಡಿಗಿಟ್ಟ ಹೂ ಬಾಡಿರುವುದಿಲ್ಲ. ಇದನ್ನು ಕಂಡ ಅದೆಷ್ಟೋ ಭಕ್ತರು ದೇವಿಯ ಮಹಿಮೆಯನ್ನು ಕೊಂಡಾಡಿದ್ದಾರೆ. ಶಕ್ತಿದೇವತೆ ಹಾಸನಾಂಬೆ ನಮ್ಮ ಕಷ್ಟ ನಿವಾರಿಸುತ್ತಾಳೆ ಎಂಬ ನಂಬಿಕೆಯಿಂದಲೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ನಮಿಸಿ ಪೂಜಿಸುತ್ತಾರೆ.

ಹಾಸನಾಂಬೆ ದರ್ಶನೋತ್ಸವ ಸಂಭ್ರಮ

ಈ ವರ್ಷ ಒಟ್ಟು 11 ದಿನಗಳ ಕಾಲ ಶಕ್ತಿದೇವತೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಮೊದಲ ಹಾಗೂ ಕೊನೆಯ ದಿನ ಮಾತ್ರ ಹೊರತುಪಡಿಸಿ ಉಳಿದ 9 ದಿನಗಳು ದಿನದ 24 ಗಂಟೆಗಯೂ ಭಕ್ತರು ನೇರವಾಗಿ ಹಾಸನಾಂಬೆಯನ್ನ ದರ್ಶನ ಪಡೆಯುತ್ತಿದ್ದಾರೆ. ನಡುವೆ ಮಧ್ಯಾಹ್ನದ ಅವಧಿಯಲ್ಲಿ ಹಾಗೂ ಮುಂಜಾನೆ ವೇಳೆಯಲ್ಲಿ ನೈವೇದ್ಯಕ್ಕಾಗಿ ಪೂಜೆ ವೇಳೆ ಒಂದು ಗಂಟೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಡಿಸಿ ಸಿ ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ ಹಾಗು ಆಡಳಿತಾದಿಕಾರಿಯಾಗಿರೊ ಉಪವಿಭಾಗ ಅದಿಕಾರಿ ಮಾರುತಿ ಅವರ ನೇತೃತ್ವದಲ್ಲಿ ದೊಡ್ಡಮಟ್ಟದ ತಯಾರಿ ಮಾಡಿ ಉತ್ಸವ ನಡೆಸಲಾಗುತ್ತಿದೆ. ಮೊದಲ ಬಾರಿಗೆ ಹಾಸನದಲ್ಲಿ ಡಬಲ್ ಡೆಕ್ಕರ್ ಬಸ್ ಮೂಲಕ ಹಾಸನ ನಗರದ ಲೈಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇಸ್ಕಾನ್ ಮೂಲಕ ವಿತರಣೆ ಮಾಡಲಾಗುತ್ತಿರುವ ಶುಚಿ ರುಚಿಯಾದ ಪ್ರಸಾದ ಭಕ್ತರಿಗೆ ಖುಷಿ ನೀಡಿದೆ. ವರ್ಷದಿಂದ ವರ್ಷಕ್ಕೆ ತನ್ನ ಹಿರಿಮೆ ಹೆಚ್ಚಿಸಿಕೊಂಡು ದೊಡ್ಡಮಟ್ಟದಲ್ಲಿ ಹೆಸರು ಗಳಿಸುತ್ತಿರುವ ಪುಣ್ಯಕ್ಷೇತ್ರ ಹಾಸನ ಮಾತ್ರವಲ್ಲ ದೇಶದ ಮೂಲೆ ಮೂಲೆಗಳ ಭಕ್ತರ ಜೊತೆಗೆ ವಿದೇಶಗಳಿಂದಲೂ ಕೂಡ ಭಕ್ತರು ಬಂದು ದರ್ಶನ ಪಡೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:09 am, Thu, 31 October 24