ಹಾಸನ ಸಭೆಯೊಳಗೆ ಸಂಧಾನದ ಸೂತ್ರ ಜಪಿಸಿ, ಹೊರಗೆ ರೇವಣ್ಣ ವಿರುದ್ಧ ಬೈಗುಳಗಳ ಮಂತ್ರ ಪಠಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

HD Revanna: ಜಿಲ್ಲಾ ಪರಿಶೀಲನೆ ಸಭೆ ವೇಳೆ ಹಿರಿಯ ಶಾಸಕ ಅನ್ನೋ ಕಾರಣಕ್ಕೆ ರೇವಣ್ಣ ಅವರನ್ನು ವೇದಿಕೆ ಮೇಲೆ ಕರೆಸಿದ ಸಿಎಂ ಯಡಿಯೂರಪ್ಪ ಶಿಷ್ಟಾಚಾರ ಪಕ್ಕಕ್ಕಿಟ್ಟು ರೇವಣ್ಣಗೆ ಗೌರವ ನೀಡಿದ್ದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವಾಗ ಹಾಸನ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ. ರೇವಣ್ಣರ ಜೊತೆ ಚರ್ಚೆ ಮಾಡಿ ಎಲ್ಲಾ ಕೆಲಸವನ್ನು ಮಾಡುತ್ತೇವೆ ಎಂದೂ ಹೇಳಿದ್ದರು.

ಹಾಸನ ಸಭೆಯೊಳಗೆ ಸಂಧಾನದ ಸೂತ್ರ ಜಪಿಸಿ, ಹೊರಗೆ ರೇವಣ್ಣ ವಿರುದ್ಧ ಬೈಗುಳಗಳ ಮಂತ್ರ ಪಠಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
ಹಾಸನ ಸಭೆಯೊಳಗೆ ಸಂಧಾನದ ಸೂತ್ರ ಜಪಿಸಿ, ಹೊರಗೆ ಬರುತ್ತಿದ್ದಂತೆ ರೇವಣ್ಣ ವಿರುದ್ಧ ಬೈಗುಳಗಳ ಮಂತ್ರ ಪಠಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಹಾಸನದ ಜಿಲ್ಲಾ ಪಂ‌ಚಾಯತ್​ ಸಭಾಂಗಣದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಮಾಜಿ ಸಚಿವ, ಸ್ಥಳೀಯ ಪ್ರಭಾವೀ ನಾಯಕ ಹೆಚ್ ಡಿ​ ರೇವಣ್ಣರನ್ನ ಜೊತೆಯಲ್ಲಿ ಕೂರಿಸಿಕೊಂಡು ಮೀಟಿಂಗ್​ ನಡೆಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ರಾಜ್ಯದ ಮುಖ್ಯಮಂತ್ರಿ ಎಂಬ ಶಿಷ್ಟಾಚಾರವನ್ನೂ ಲೆಕ್ಕಿಸದೆ ಜೆಡಿಎಸ್ ನಾಯಕನನ್ನು ಜೊತೆಯಲ್ಲಿಯೇ ಕೂರಿಸಿಕೊಂಡು ಮೃದು ಧೋರಣೆ ತೋರಿದಾಗ.. ಯಡಿಯೂರಪ್ಪ ಚರ್ಚೆಗೆ ಗ್ರಾಸವೊದಗಿಸಿದ್ದರು. ಆದರೆ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ರೇವಣ್ಣ ವಿಷಯದಲ್ಲಿ ಸಂಪೂರ್ಣವಾಗಿ ಬದಲಾಗಿದ್ದರು. ಅಷ್ಟೇ ಅಲ್ಲ; ರೇವಣ್ಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯಾವ ಸೀನಿಯಾರಿಟಿ ಮೇಲೆ ಅವರನ್ನು ಪಕ್ಕಕ್ಕೆ ಕೂಡಿಸಿಕೊಂಡಿದ್ದರೋ, ಅದೇ ಸೀನಿಯಾರಿಟಿಯನ್ನು ಬೊಟ್ಟು ಮಾಡಿ ತೋರಿಸಿ, ಹಿರಿಯ ನಾಯಕರಾಗಿ ರೇವಣ್ಣ ಅವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಝಾಡಿಸಿದರು!

ಜಿಪಂ ಸಭಾಂಗಣದಲ್ಲಿ ಸಂಪುಟದ ಸಹೋದ್ಯೋಗಿಗಳು, ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆದಾಗ ಪ್ರತಿಪಕ್ಷದ ಹಿರಿಯ ನಾಯಕ ರೇವಣ್ಣ ಜೊತೆ ಸಹಜವಾಗಿಯೇ ಸಂಧಾನ ಮಾಡಿಕೊಂಡಂತೆ ಕಂಡುಬಂದ ಸಿಎಂ​ ಯಡಿಯೂರಪ್ಪ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಶಾಸಕ ರೇವಣ್ಣ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊರೊನಾ ವಿಷಯದಲ್ಲಿ ಅಂಕಿ ಸಂಖ್ಯೆಗಳನ್ನು ಮರೆಮಾಚಿ, ಸರ್ಕಾರ ತಪ್ಪು ಲೆಕ್ಕ ಕೊಡುತ್ತಿದೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದೇ ತಡ ಕೋಪಗೊಂಡ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಯಾರು ರೀ ಸರ್ಕಾರ ತಪ್ಪು ಲೆಕ್ಕ ಕೊಡುತ್ತಿದೆ ಅಂದಿದ್ದು? ಎಂದು ಏರು ದನಿಯಲ್ಲಿ ಪ್ರಶ್ನಿಸಿದರು. ಅಂತಹ ಆರೋಪ ಮಾಡಿರುವುದು ರೇವಣ್ಣ ಎಂಬುದನ್ನು ತಿಳಿದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ನಾಯಕರಾಗಿ ಅವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಗುಡುಗಿದರು.

ಸಭೆಯೊಳಗೆ ಸಂಧಾನದ ಸೂತ್ರ ಜಪಿಸಿ, ಹೊರಗೆ ಬರುತ್ತಿದ್ದಂತೆ ಬೈಗುಳಗಳ ಮಂತ್ರ ಪಠಿಸಿದ ಯಡಿಯೂರಪ್ಪ

ಗಮನಾರ್ಹವೆಂದರೆ ಹಿರಿಯ ಶಾಸಕ, ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ ಅವರು ಇತ್ತೀಚೆಗೆ ನಿರಂತರವಾಗಿ ಸುದ್ದಿಗೋಷ್ಠಿಗಳನ್ನು ನಡೆಸಿ, ಬಿ ಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವನ್ನು ಹಿಯಾಳಿಸುತ್ತಿದ್ದರು. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದರು. ಒಮ್ಮೆಯಂತೂ ಮುಖ್ಯಮಂತ್ರಿ ಯಡಿಯೂರಪ್ಪ ಎ1 ಆರೋಪಿ ಎಂದೂ, ರಾಜ್ಯ ಸರ್ಕಾರ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದೂ ಆಪಾದಿಸಿದ್ದರು. ಬಹುಶಃ ಇದೆಲ್ಲದರ ಮಾಹಿತಿ ಪಡೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಭೆಯಲ್ಲಿ ರೇವಣ್ಣ ಕಡೆಯಿಂದ ತಮ್ಮ ಮೇಲೆ ಅನಗತ್ಯ ದಾಳಿ ಎದುರಾಗುವುದು ಬೇಡವೆಂದು ಲೆಕ್ಕ ಹಾಕಿರಬಹುದು. ಹಾಗೆಂದೇ ಯಡಿಯೂರಪ್ಪ ಅವರು ಸಭೆಯ ಒಳಗೆ ಸಂಧಾನದ ಸೂತ್ರ ಜಪಿಸಿ, ಹೊರಗೆ ಬರುತ್ತಿದ್ದಂತೆ ರೇವಣ್ಣ ಅವ್ರನ್ನು ಸರಿಯಾಗಿ ವಿಚಾರಿಸಿಕೊಂಡರು ಅನ್ನಿಸುತ್ತದೆ.

ಯಡಿಯೂರಪ್ಪ ಎಣಿಕೆಯಂತೆ ಸಭೆ ಶಾಂತವಾಗಿತ್ತು, ಮತ್ತು ರೇವಣ್ಣ ಮೌನವಾಗಿ ಉಳಿದುಬಿಟ್ಟರು!
ಸಭೆಯ ಆರಂಭದಲ್ಲಿಯೇ ಯಡಿಯೂರಪ್ಪ ಅವರು ಸ್ವತಃ ರೇವಣ್ಣ ಕೈಹಿಡಿದು, ಅವರನ್ನು ವೇದಿಕೆಗೆ ಕರೆತಂದರು. ಆದರೆ, ಸಭೆಯಲ್ಲಿ ಗದ್ದಲ ತಣಿಸಲು ಮಾಸ್ಟರ್​ ಪ್ಲಾನ್​ ಹಾಕಿದ್ದವರಂತೆ ಯಡಿಯೂರಪ್ಪ ಕೊನೆಯಲ್ಲಿ ಕಂಡರು. ರೇವಣ್ಣ ಅವರನ್ನು ಉದ್ದೇಶಿಸಿ, ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಬೇಜವಾಬ್ದಾರಿಯುತ ಹೇಳಿಕೆಗಳ ಕೊಡುವುದನ್ನು ನಿಲ್ಲಿಸಬೇಕು ಎಂದರು. ಏಕೆಂದರೆ ಅವರ ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್​ ಮಾಡಬೇಕಿರುವುದು ಶಾಸಕರಾಗಿ ಅವರ ಜವಾಬ್ದಾರಿ. ಆ ಕೆಲಸವನ್ನು ನಿರ್ವಹಿಸದೇನೆ ಬೇರೆಯವರತ್ತ ಬೊಟ್ಟು ಮಾಡುವುದು ಅವರಿಗೆ (ರೇವಣ್ಣ) ಶೋಭೆ ತರುವಂತಹುದಲ್ಲ ಎಂದು ಗುಡುಗಿದರು. ಕುತೂಹಲಕಾರಿ ಸಂಗತಿಯೆಂದ್ರೆ ಹಿರಿಯ ನಾಯಕ ಯಡಿಯೂರಪ್ಪ ಅವರು ಲೆಕ್ಕಾಚಾರ ಹಾಕಿದ್ದಂತೆ ಸಭೆ ಶಾಂತಪೂರ್ಣವಾಗಿ ನಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ರೇವಣ್ಣ ಅವರು ಯಡಿಯೂರಪ್ಪ ಮಾಸ್ಟರ್ ಪ್ಲಾನ್​ ಅರಿಯದೇ… ಮೌನವಾಗಿ ಉಳಿದಿದ್ದು ಗಮನಾರ್ಹವಾಗಿತ್ತು!

ಜಿಲ್ಲಾ ಪರಿಶೀಲನೆ ಸಭೆ ವೇಳೆ ಹಿರಿಯ ಶಾಸಕ ಅನ್ನೋ ಕಾರಣಕ್ಕೆ ರೇವಣ್ಣ ಅವರನ್ನು ವೇದಿಕೆ ಮೇಲೆ ಕರೆಸಿದ ಸಿಎಂ ಯಡಿಯೂರಪ್ಪ ಅವರು ಶಿಷ್ಟಾಚಾರ ಪಕ್ಕಕ್ಕಿಟ್ಟು ರೇವಣ್ಣಗೆ ಗೌರವ ನೀಡಿದ್ದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ, ಅರೋಗ್ಯ ಸಚಿವ ಸುಧಾಕರ್‌ ಜೊತೆಗೆ ಮಾಜಿ ಸಚಿವ ರೇವಣ್ಣಗೂ ವೇದಿಕೆಯಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವಾಗ ಆರಂಭದಲ್ಲಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಹಾಸನ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ. ರೇವಣ್ಣರ ಜೊತೆ ಚರ್ಚೆ ಮಾಡಿ ಹಂತ ಹಂತವಾಗಿ ಎಲ್ಲಾ ಕೆಲಸವನ್ನು ಮಾಡುತ್ತೇವೆ ಎಂದೂ ಹೇಳಿದ್ದರು.

(CM BS Yediyurappa criticises HD Revanna during his hassan visit)

ಯಡಿಯೂರಪ್ಪ ಎ1 ಆರೋಪಿ; ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ: ಮಾಜಿ ಸಚಿವ ಹೆಚ್‌.ಡಿ.ರೇವಣ್ಣ

ಹಾಸನದಲ್ಲಿ ಶಿಷ್ಟಾಚಾರ ಪಕ್ಕಕ್ಕಿಟ್ಟು ಹೆಚ್ ಡಿ ರೇವಣ್ಣಗೆ ಪಕ್ಕ ಕೂಡಿಸಿಕೊಂಡು, ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ