ಸಾಲುಮರದ ತಿಮ್ಮಕ್ಕಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಸಾಲುಮರದ ತಿಮ್ಮಕ್ಕಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ವೃಕ್ಷಮಾತೆಗೆ ಅಂತರಾಷ್ಟ್ರೀಯ ಪ್ರಶಸ್ತಿ

80 ವರ್ಷಗಳಲ್ಲಿ ಪರಿಸರ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿರುವ ಮಹಿಳೆ, 80 ವರ್ಷದಲ್ಲಿ 8 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಅವರು ನೆಟ್ಟ ಸಸಿಗಳು ಈಗ ಫಲನೀಡುತ್ತಾ ಸಮಾಜಕ್ಕೆ ಆಸ್ತಿಯಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿರುವ ಸಂಸ್ಥೆ ರಾಜ್ಯಪಾಲರ ಮೂಲಕ ಗೌರವಪೂರ್ವಕವಾಗಿ ಪ್ರಶಸ್ತಿ ನೀಡಿದೆ.

TV9kannada Web Team

| Edited By: preethi shettigar

Sep 20, 2021 | 8:05 AM

ಹಾಸನ: ತಮ್ಮ ನಿಶ್ವಾರ್ಥ ಪರಿಸರ ಸೇವೆ ಮೂಲಕ ಬದುಕನ್ನೇ ಪರಿಸರಕ್ಕಾಗಿ ಮುಡಿಪಿಟ್ಟ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ ಅಂತರಾಷ್ಟ್ರೀಯ ಸಂಸ್ಥೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ (world book of records) ಪ್ರಶಸ್ತಿ ನೀಡಿ ಗೌರವಿಸಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಫಲಕ ನೀಡಿ ಗೌರವಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ಪದ್ಮಶ್ರೀ, ನ್ಯಾಷನಲ್ ಸಿಟಿಜನ್ ಅವಾರ್ಡ್, ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ, ಗುಲ್ಬರ್ಗದ ಕೇಂದ್ರಿಯ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದ 111 ವರ್ಷದ ಶತಾಯುಷಿ ಸಾಲುಮರದ ತಿಮ್ಮಕ್ಕರಿಗೆ ಇದೀಗ ಅಂತಾಷ್ಟ್ರೀಯ ಮಟ್ಟದ ಸಂಸ್ಥೆಯೊಂದು ಅವರ ಸಾಧನೆ ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿದೆ.

80 ವರ್ಷಗಳಲ್ಲಿ ಪರಿಸರ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿರುವ ಮಹಿಳೆ, 80 ವರ್ಷದಲ್ಲಿ 8 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಅವರು ನೆಟ್ಟ ಸಸಿಗಳು ಈಗ ಫಲನೀಡುತ್ತಾ ಸಮಾಜಕ್ಕೆ ಆಸ್ತಿಯಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿರುವ ಸಂಸ್ಥೆ ರಾಜ್ಯಪಾಲರ ಮೂಲಕ ಗೌರವಪೂರ್ವಕವಾಗಿ ಪ್ರಶಸ್ತಿ ನೀಡಿದೆ. ಇನ್ನೊಂದು ವಿಶೇಷ ಅಂದರೆ ವೃಕ್ಷಮಾತೆ ಜೊತೆಗೆ ಅವರ ದತ್ತು ಪುತ್ರ ಉಮೇಶ್ ರವರಿಗೂ ಕೂಡ ತಾಯಿ ಜೊತೆಗೆ ಅಂತರಾಷ್ಟ್ಟೀಯಮಟ್ಟದ ಪ್ರಶಸ್ತಿ ಲಭಿಸಿದೆ.

ತಾಯಿ ಜೊತೆಗೆ ಪರಿಸರ ಪ್ರೇಮಿಯಾಗಿ ಪರಿಸರ ಉಳಿವಿಗೆ ಶ್ರಮಿಸುತ್ತಿರುವ ಉಮೇಶ್ ಅವರ ಕಾರ್ಯವನ್ನು ಪ್ರಶಂಸಿಸಿ ಅವರಿಗೂ ಪ್ರಶಸ್ತಿ ನೀಡಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಗೌರವಿಸಿದೆ. ಸಾಲುಮರದ ತಿಮ್ಮಕ್ಕರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆಮಾಡಿದ ಸಂಸ್ಥೆ ರಾಜ್ಯಪಾಲರ ಮೂಲಕ ಗೌರವಾರ್ಪಣೆ ಮಾಡಿಸಿದೆ. ಸಂಸ್ಥೆಯ ಅಧ್ಯಕ್ಷರು ಸುಪ್ರಿಂಕೋರ್ಟ್ ವಕೀಲರು ಆಗಿರುವ ಸಂತೋಷ್ ಶುಕ್ಲಾ, ಸಮ್ಮುಖದಲ್ಲಿ ಸಂಸ್ಥೆಯ ಪ್ರಮುಖರು ಹಾಜರಿದ್ದ ವೃಕ್ಷಮಾತೆಯ ಸಾಧನೆ ಕೊಂಡಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ವ್ಹೀಲ್ ಚೇರ್ ಮೇಲೆ ಬಂದ ಶತಾಯುಷಿ ಸಾಲುಮರದ ತಿಮ್ಮಕ್ಕರಿಗೆ ಪ್ರೀತಿಯಿಂದ ನಮಸ್ಕರಿಸಿದ ರಾಜ್ಯಪಾಲರು ಅವರಿಂದ ಆಶಿರ್ವಾದ ಪಡೆದ ಬಳಿಕ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಸಾಲುಮರದ ತಿಮ್ಮಕ್ಕರ ಸೇವೆಗೆ ಅಂತರಾಷ್ಟ್ರೀಯ ಮನ್ನಣೆ ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕಿನ ಕಕ್ಕೆನಹಳ್ಳಿ ಗ್ರಾಮದಲ್ಲಿ ಜನಿಸಿ, ಅಲ್ಲೇ ಬದುಕು ಕಟ್ಟಿಕೊಂಡು ಮರಗಳನ್ನೇ ತನ್ನ ಮಕ್ಕಳೆಂದು ಸಾಕಿ ಸಲಹುತ್ತಾ, ಪರಿಸರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟ ತಿಮ್ಮಕ್ಕ ಮತ್ತೆ ಎಂದೂ ಹಿಂದೆ ತಿರುಗಿ ನೋಡಿಲ್ಲ. ಓದು ಬರಹ ಗೊತ್ತಿಲ್ಲದಿದ್ದರೂ, ಮನುಕಲ ಉಳಿಯಬೇಕಾದರೆ ಪರಿಸರ ಉಳಿಯಬೇಕು. ಪರಿಸರ ಉಳಿಯಲು ಗಿಡಮರ ಬೇಕು ಎನ್ನುವ ಜ್ಞಾನ ಸಂಪಾದಿಸಿಕೊಂಡಿದ್ದ ವೃಕ್ಷಮಾತೆ ವರ್ಷದಿಂದ ವರ್ಷಕ್ಕೆ ಗಿಡ ಮರ ಬೆಳೆಸುತ್ತಾ ಎಲೆಮರೆಕಾಯಾಗಿ ತಮ್ಮಷ್ಟಕ್ಕೆ ಕಾಯಕ ಮಾಡುವುದಕ್ಕೆ ಶುರುಮಾಡಿದ್ದರು.

salumarada thimmakka

ಸಾಲುಮರದ ತಿಮ್ಮಕ್ಕಗೆ ವರ್ಲ್​ ಬುಕ್ ಆಫ್ ರೆಕಾರ್ಡ್ಸ್ ​ಗೌರವ ಪ್ರದಾನ

ಮಹಿಳೆಯೊಬ್ಬರ ನಿಶ್ವಾರ್ಥ ಸೇವೆ ಜಗತ್ತಿನೆಲ್ಲೆಡೆ ಪಸರಿಸಿದಾಗ ಪ್ರಶಸ್ತಿಗಳು, ಬಿರುದು-ಬಾವಲಿಗಳು ಅವರನ್ನು ಹುಡುಕಿ ಬಂದವು. ಅವರ ಅನನ್ಯ ಸೇವೆಯನ್ನು ಗುರುತಿಸಿ, ರಾಜ್ಯ, ಕೇಂದ್ರ ಸರ್ಕಾರಗಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಗೌರವ ಡಾಕ್ಟರೇಟ್ ಕೂಡ ಈ ಹಿರಿಯ ಜೀವದ ಮುಕುಟಕ್ಕೆ ಸೇರಿಕೊಂಡಿತ್ತು. ಆದ್ರೆ ಪ್ರಶಸ್ತಿ ಬಂದಿದೆ ಎಂದೂ ಹಿಗ್ಗದೆ ತಮ್ಮಷ್ಟಕ್ಕೆ ಹಳ್ಳಿಯಲ್ಲಿ ತಮ್ಮ ಕಾಯಕ ಮಾಡುತ್ತಾ ಸಾಗುತ್ತಿರುವ ಈ ಸಾಧಕಿಗೆ ಇದೀಗ ಅಂತರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ಕರುನಾಡಿಗೆ ಹೆಮ್ಮೆಯ ವಿಷಯವಾಗಿದೆ.

80 ವರ್ಷ 8 ಸಾವಿರ ಗಿಡಗಳು, ಸಾಧನೆಯ ಹಾದಿಯಲ್ಲಿ ತಿರುಗಿ ನೋಡದ ತಿಮ್ಮಕ್ಕ ಒಂದು ಮರಕ್ಕಾಗಿ ಬಡಿದಾಡೋರನ್ನು ನೋಡಿದ್ದೇವೆ. ಆಸ್ತಿ, ಭೂಮಿಗಾಗಿ ದ್ವೇಷ ಕಟ್ಟಿಕೊಳ್ಳೋರನ್ನೂ ನೋಡಿದ್ದೇವೆ. ಆದರೆ ತಾನು ಹುಟ್ಟಿದ್ದೇ ಪರಿಸರದ ಸೇವೆಮಾಡಲು ಎಂದು ಭಾವಿಸಿ ಇಡೀ ಬದುಕನ್ನೇ ಈ ನಿಸರ್ಗಕ್ಕಾಗಿ ಮುಡಿಪಿಟ್ಟ ನಿಶ್ವಾರ್ಥಿ ಮಹಿಳೆ ತಿಮ್ಮಕ್ಕ. ಊರಿನಲ್ಲಿ ಗಿಡನೆಟ್ಟು ಬೆಳೆಸೋಕೆ ಶುರುಮಾಡಿದ ತಿಮ್ಮಕ್ಕ ಅದನ್ನೇ ಕಾಯಕವಾಗಿಸಿಕೊಂಡರು. ನೋಡ ನೋಡುತ್ತಾ ಸಾವಿರ ಸಾವಿರ ಗಿಡಗಳು ನಳನಳಿಸೋಕೆ ಶುರುವಾದವು.

ತಿಮ್ಮಕ್ಕ ಇದುವರೆಗೆ 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸಿದ್ದರೆ. 385 ಆಲದ ಮರಗಳನ್ನು ಹೆದ್ದಾರಿ ಬದಿಗಳಲ್ಲಿ ನೆಟ್ಟು, ನೀರೆರೆದು ಬೆಳೆಸಿ ಆಲದ ಮರದ ತಿಮ್ಮಕ್ಕ ಎಂದೇ ಕರೆಸಿಕೊಂಡ ಸಾಧಕಿ. ಗಿಡಮರ ನೆಟ್ಟು, ನೀರೆರೆದು ಮಕ್ಕಳಂತೆ ಸಾಕಿ ಸಲಹಿದ ತಿಮ್ಮಕ್ಕರಿಗೆ ವೃಕ್ಷಮಾತೆ ಎನ್ನುವ ಬಿರುದು ಅವರ ಸಾಧನೆಗೆ ಸಿಕ್ಕ ಗರಿ ಎಂದೇ ಹೇಳಬಹುದು. ಇದೀಗ ಇಂಗ್ಲೇಂಡಿನ ಸಂಸ್ಥೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅವರ ಸಾಧನೆ ಗುರುತಿಸಿ ಸನ್ಮಾನಿಸಿದರೆ, ಅವರ ಮಗನಿಗೂ ತಾಯಿ ಜೊತೆಗೆ ಸನ್ಮಾನಿಸಿ ಉಮೇಶ್ ಅವರ ಸಾಧನೆಯನ್ನೂ ಶ್ಲಾಘಿಸಿದ್ದಾರೆ.

ಬದುಕಿನುದ್ದಕ್ಕೂ ಗಿಡಮರಕ್ಕಾಗಿ ಬದುಕಿದ ಈ ಹಿರಿಯ ಜೀವ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದ ಉಮೇಶ್ ರನ್ನ ದತ್ತುಮಗನಾಗಿ ಸ್ವೀಕರಿಸಿ ಮಗನ ಮನೆಯಲ್ಲಿ ನೆಲೆಸಿದ್ದಾರೆ. ವಯಸ್ಸು 111 ಆದರೂ ತಮ್ಮ ಪರಿಸರ ಕಾಳಜಿ ಮರೆಯದ ತಿಮ್ಮಕ್ಕ ಈಗಲೂ ಸಾವಿರಾರು ಗಿಡನೆಡೋದು, ಪರಿಸರ ಜಾಗೃತಿ ಮಾಡೋದು, ಆ ಮೂಲಕ ಭೂಮಿಯ ಉಳಿವಿಗೆ ತಮ್ಮ ಸೇವೆ ಮುಂದುವರೆಸಿದ್ದಾರೆ. ಅವರ ಈ ಅಭೂತಪೂರ್ವ ಸೇವೆಯ ಫಲವೇ ಈಗ ಅವರಿಗೆ ಅಂತರಾಷ್ಟ್ರೀಯ ಮನ್ನಣೆ ಲಭಿಸುವಂತೆ ಮಾಡಿದೆ.

ವರದಿ: ಮಂಜುನಾಥ್ ಕೆ.ಬಿ ಇದನ್ನೂ ಓದಿ: Megha Rajagopalan: ಮೇಘಾ ರಾಜಗೋಪಾಲನ್​ ಗ್ರಂಥಿಗೆ ಈ ಬಾರಿಯ ಪುಲಿಟ್ಜರ್​ ಪ್ರಶಸ್ತಿ ಗೌರವ

Teachers’ Day: 44 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್

Follow us on

Related Stories

Most Read Stories

Click on your DTH Provider to Add TV9 Kannada