ಹಾಸನ: ಹೇಮಾವತಿ ಜಲಾಶಯ ನೀರಿನ ಮಟ್ಟ ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿತ
ಬೇಸಗೆ ಆರಂಭಕ್ಕೂ ಮುನ್ನವೇ ಹಾಸನದ ಹೇಮಾವತಿ ಜಲಾಶಯದ ನೀರಿನ ಮಟ್ಟ ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಗರಿಷ್ಠ 2922 ಅಡಿ 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2888 ಅಡಿ ನೀರು ಮಾತ್ರ ಲಭ್ಯವಿದೆ. ಪರಿಣಾಮವಾಗಿ ಹಾಸನ ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಆತಂಕ ಎದುರಾಗಿದೆ.
ಹಾಸನ, ಮಾರ್ಚ್ 1: ಬರದ (Drought) ಬೇಗೆಗೆ ರಾಜ್ಯ ಜಲಾಶಯಗಳು ಬರಿದಾಗುತ್ತಿದ್ದು, ಮುಂಗಾರು ಕೊರತೆಯಿಂದಾಗಿ ಬೇಸಿಗೆಗೆ ಮೊದಲೇ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ (Hemavati Dam) ಒಡಲು ಬರಿದಾಗುತ್ತಿದೆ. ಹೇಮಾವತಿ ಜಲಾಶದ ನೀರಿನ ಮಟ್ಟ ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಮಾರ್ಚ್ ವೇಳೆಗೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ಗರಿಷ್ಠ 2922 ಅಡಿ 37 ಟಿಎಂಸಿ ಸಾಮರ್ಥ್ಯದ ಜಲಾಶಯವಾಗಿದ್ದು, ಶುಕ್ರವಾರ (ಮಾರ್ಚ್ 1) ಜಲಾಶಯದಲ್ಲಿ 2888 ಅಡಿ ಮಾತ್ರ ನೀರಿದೆ.
ಕಳೆದ ವರ್ಷ ಇದೆ ದಿನ ಜಲಾಶಯದಲ್ಲಿ 21 ಟಿಎಂಸಿ ನೀರು ಸಂಗ್ರವಿತ್ತು. ಇಂದು 13 ಟಿಎಂಸಿ ನೀರು ಮಾತ್ರ ಬಾಕಿ ಇದೆ. ಕಳೆದ ವರ್ಷ 17 ಟಿಎಂಸಿ ಬಳಕೆಗೆ ಲಭ್ಯವಿದ್ದ ನೀರು, ಈಬಾರಿ ಕೇವಲ 9 ಟಿಎಂಸಿ ಮಾತ್ರ ಲಭ್ಯವಿದೆ. ಇದರಿಂದಾಗಿ ಜಲಾಶಯದ ನೀರನ್ನೇ ನಂಬಿರುವ ಜಿಲ್ಲೆಯ ಬಹುತೇಕ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಕುಡಿಯವ ನೀರಿಗೆ ಹಾಹಾಕಾರದ ಆತಂಕ ಈಗಲೇ ಎದುರಾಗಿದೆ. ನಿತ್ಯ ಜಿಲ್ಲಾ ಕೇಂದ್ರ ಹಾಸನಕ್ಕೆ ನಿತ್ಯ 30 ಎಂಎಲ್ಡಿ ನೀರು ಅವಶ್ಯಕತೆ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕುಡಿಯುವ ನೀರಿಗೆ ದೊಡ್ಡ ಸಮಸ್ಯೆ ಎದುರಾಗು ಸಾಧ್ಯತೆ ಇದೆ.
ಬರ ಪರಿಸ್ಥಿತಿಯ ಕಾರಣ ರಾಜ್ಯದ ಇತರ ಜಲಾಶಯಗಳ ಪರಿಸ್ಥಿತಿ ಕೂಡ ಇದೇ ರೀತಿಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಾದ ಕಬಿನಿ, ಕೆ.ಆರ್ಎಸ್ಗಳಲ್ಲಿಯೂ ಈ ಬಾರಿ ನೀರಿನ ಸಂಗ್ರಹ ಕಡಿಮೆ ಇದೆ. ಉತ್ತರ ಕರ್ನಾಟಕದ ಕೃಷ್ಣಾ, ತುಂಗಭದ್ರಾ ನದಿಗಳಲ್ಲಿಯೂ ನೀರು ಬತ್ತಿ ಹೋಗಿದೆ. ಪರಿಣಾಮವಾಗಿ ಬಹುತೇಕ ಜಲಾಶಯಗಳು ತುಂಬಾ ಕಡಿಮೆ ನೀರಿನ ಸಂಗ್ರಹ ಹೊಂದಿವೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ಈಗಾಗಲೇ ಜನ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಬೆಂಗಳೂರಿನ ಕೆಂಗೇರಿ, ಯಶವಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ನೀರು ಪೂರೈಕೆ ಸಮಸ್ಯೆಯಾಗಿದ್ದರೆ, ಟ್ಯಾಂಕರ್ ಮಾಫಿಯಾದವರ ಕಾಟದಿಂದ ಜನ ಹೈರಾಣಾಗಿದ್ದಾರೆ. ಇತರ ಜಿಲ್ಲೆಗಳಲ್ಲಿಯೂ ಅನೇಕ ಕಡೆ ಸಮಸ್ಯೆ ಎದುರಾಗಿದೆ.
ಇದನ್ನು ಓದಿ: ಯಶವಂತಪುರದಲ್ಲಿ ಕುಡಿಯುವ ನೀರಿಗೆ ತತ್ವಾರ: ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಾಹಾಕಾರ
ಕೋಲಾರ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಜಲಮೂಲಗಳು ಬತ್ತಿಹೋಗಿವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೇಸಿಗೆ ಆರಂಭಕ್ಕೂ ಮುನ್ನವೇ ಚಿಕ್ಕಮಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ