ಹೆಂಡತಿ – ಮಗಳ ರಕ್ಷಣೆಗಾಗಿ ಚಿರತೆಯ ಹತ್ಯೆಗೈದ ಅಪ್ಪ, 15 ನಿಮಿಷ ಕಾದಾಡಿ ಆಸ್ಪತ್ರೆ ಸೇರಿದರು!

ಛಲದಿಂದ ಧೈರ್ಯಮಾಡಿ ಚಿರತೆಯ ಕುತ್ತಿಗೆಯನ್ನ ತನ್ನ ತೋಳಲ್ಲಿ ಬಂದಿಸಿ ಹಿಡಿದ ರಾಜಗೋಪಾಲ್ ,ಅಂದಾಜು 18 ತಿಂಗಳ ಹೆಣ್ಣು ಚಿರತೆಯನ್ನು ಹಾಸನದಲ್ಲಿ ಹತ್ಯೆ ಮಾಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಡಾ.ಬಸವರಾಜ್ ಹೇಳಿದ್ದಾರೆ.

  • ಮಂಜುನಾಥ್.ಕೆ.ಬಿ.
  • Published On - 12:00 PM, 24 Feb 2021
ಹೆಂಡತಿ - ಮಗಳ ರಕ್ಷಣೆಗಾಗಿ ಚಿರತೆಯ ಹತ್ಯೆಗೈದ ಅಪ್ಪ, 15 ನಿಮಿಷ ಕಾದಾಡಿ ಆಸ್ಪತ್ರೆ ಸೇರಿದರು!
ಸಾವನ್ನಪ್ಪಿದ ಚಿರತೆ

ಹಾಸನ: ಸಂಬಂಧಿಕರ ಮದುವೆ ಮುಗಿಸಿ ಮಡದಿ ಹಾಗೂ ಮಗಳ ಜೊತೆ ಬೈಕ್ ಏರಿ ಮನೆ ಕಡೆ ಹೊರಟಿದ್ದ ವ್ಯಕ್ತಿಗೆ ದಾರಿ ಮಧ್ಯೆ ಚಿರತೆ ಏಕಾಏಕಿ ಅಡ್ಡ ಬಂದಿದ್ದು, ಬೈಕ್ ಮೇಲೆ ನೇರವಾಗಿ ಎಗರಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ತಾಂಡ್ಯದ ಸಮೀಪ ನಡೆದಿದೆ. ಹಿಂಬದಿ ಕೂತಿದ್ದ ಹೆಂಡತಿ ಮೇಲೆ ಮುಗಿಬಿದ್ದ ಚಿರತೆಯಿಂದ ಮಡದಿ ಮಗಳನ್ನ ರಕ್ಷಣೆ ಮಾಡಬೇಕು ಎನ್ನುವ ಜಿದ್ದಾಜಿದ್ದಿಯಲ್ಲಿ ತನ್ನ ಪ್ರಾಣದ ಬಗ್ಗೆ ಚಿಂತೆ ಮಾಡದೇ ಹಠಕ್ಕೆ ಬಿದ್ದು ಚಿರತೆ ಜೊತೆ ಸೆಣಸಾಡಿದ ವೀರ ಕಡೆಗೂ ಚಿರತೆಯನ್ನ ಕೊಂದುಬಿಟ್ಟಿದ್ದಾರೆ.

ಈ ಚಿರತೆ ಬೆಳಗ್ಗೆಯಿಂದ ನಾಲ್ಕು ಜನರ ಮೇಲೆ ದಾಳಿ ಮಾಡಿ, ಸೆರೆ ಹಿಡಿಯಲು ಬಂದಿದ್ದ ವೈದ್ಯರಿಗೂ ಗಾಯಗೊಳಿಸಿ ಮೆರೆಯುತ್ತಿತ್ತು. ಆದರೆ ತನ್ನ ಕುಟುಂಬದವರ ರಕ್ಷಣೆಗಾಗಿ ಚಿರತೆಯನ್ನು ಏಕಾಂಗಿಯಾಗಿ ಕೊಂದು, ತಾನೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯ ಜಿಲ್ಲೆಯ ಜನರು ಕಡೆಗೂ ಚಿರತೆ ಆತಂಕ ದೂರವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಘಟನೆ ಬಗ್ಗೆ ತನಿಖೆ ಕೈಗೊಂಡಿದೆ.

ನಿನ್ನೆ ಬೆಳಗ್ಗೆ 7 ಗಂಟೆ ವೇಳೆಯಲ್ಲಿ ಬೈರಗೊಂಡನಹಳ್ಳಿ ಸಮೀಪ ಹೊಲದತ್ತ ಹೊರಟಿದ್ದ ತಾಯಿ ಮಗನ ಮೇಲೆ ದಾಳಿ ಮಾಡಿದ್ದ ಚಿರತೆ ಇಬ್ಬರನ್ನ ತೀವ್ರವಾಗಿ ಗಾಯಗೊಳಿಸಿತ್ತು, ದಾಳಿಕೋರ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಸಂಜೆ ವೇಳೆಯಲ್ಲಿ ತನ್ನ ಸಂಬಂಧಿಕರ ಮದುವೆಯೊಂದನ್ನ ಮುಗಿಸಿ ಬೈಕ್​ನಲ್ಲಿ ಮಗಳು ಹಾಗೂ ಮಡದಿ ಜೊತೆಗೆ ಹೊರಟಿದ್ದ ಬೆಂಡೆಕೆರೆಯ ರಾಜಗೋಪಾಲ್ ಬೈಕ್ ಮೇಲೆ ಎರಗಿದ ಚಿರತೆ ಅವರನ್ನ ಕೊಲ್ಲುವುದಕ್ಕೆ ಮುಂದಾಗಿದೆ.

ಛಲದಿಂದ ಧೈರ್ಯ ಮಾಡಿ ಚಿರತೆಯ ಕುತ್ತಿಗೆಯನ್ನ ತನ್ನ ತೋಳಲ್ಲಿ ಬಂದಿಸಿ ಹಿಡಿದ ರಾಜಗೋಪಾಲ್ ಇಬ್ಬರನ್ನು ಅಲ್ಲಿಂದ ಓಡುವಂತೆ ಹೇಳಿದ್ದಾರೆ. ಸತತ 15 ನಿಮಿಷ ಚಿರತೆ ಜೊತೆ ಸೆಣಸಾಡಿದ ರಾಜಗೋಪಾಲ್ ಕಡೆಗೂ ಚಿರತೆಯನ್ನ ಬಿಡಿದು ಹಿಡಿದು ಉಸಿರು ನಿಲ್ಲಿಸಿದ್ದಾರೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ನೂರಾರು ಜನರು ಚಿರತೆಯನ್ನ ಬಡಿದು ಕೊಂದಿದ್ದು, ಚಿರತೆ ಜೊತೆ ವೀರಾವೇಶದಿಂದ ಹೋರಾಡಿ ಚಿರತೆಯನ್ನ ಕೊಂದ ವೀರನನ್ನ ಕೊಂಡಾಡಿದ್ದಾರೆ. ಚಿರತೆ ಜೊತೆಗಿನ ಕಾಳಗದಲ್ಲಿ ತಾನೂ ತೀವ್ರವಾಗಿ ಗಾಯಗೊಂಡ ರಾಜಗೋಪಾಲ್ ಈಗ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಸಿಕ್ಕ ಸಿಕ್ಕಲ್ಲಿ ಓಡಾಡುತ್ತಿದ್ದ ಚಿರತೆಯನ್ನ ಸೆರೆ ಹಿಡಿಯಲೆಂದು ತೀರ್ಮಾನ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ವನ್ಯಜೀವಿ ವೈದ್ಯರನ್ನ ಕಳುಹಿಸಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ ಚಿರತೆ ಸೆರೆಗೆಂದು ಅರಿವಳಿಕೆ ಮದ್ದು ನೀಡಿದ್ದಾರೆ. ಆದರೆ ಸರಿಯಾಗಿ ಇಂಜೆಕ್ಷನ್ ತಗುಲದ ಕಾರಣ ಅಲ್ಲಿಂದ ತಪ್ಪಿಸಿಕೊಂಡು ಓಡಿದೆ. ಕೂಡಲೆ ಚಿರತೆಯನ್ನ ಸೆರೆ ಹಿಡಿಯಲೇ ಬೇಕು ಎಂದು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಚಿರತೆ ಹಿಂಬಾಲಿಸಿ ಹೊರಟ ವೇಳೆ ಏಕಾಏಕಿ ವನ್ಯಜೀವಿ ವೈದ್ಯ ಡಾ. ಮುರುಳಿ ಮೇಲೆಯೇ ದಾಳಿ ಮಾಡಿದ ಚಿರತೆ ಅವರನ್ನು ಗಾಯಗೊಳಿಸಿ ಅಲ್ಲಿಂದ ಓಡಿದೆ.

ಇಷ್ಟು ಸಮಸ್ಯಾತ್ಮಕ ಚಿರತೆಯನ್ನ ಸೆರೆ ಹಿಡಿಯಲೇಬೇಕೆಂದು ಚಿಕ್ಕಮಗಳೂರು ಜಿಲ್ಲೆಯಿಂದ ಪಶುವೈದ್ಯರನ್ನ ಕರೆಸಿ ಕಾರ್ಯಾಚರಣೆ ಮುಂದುವರೆಸಲು ತಯಾರಿ ಮಾಡಿಕೊಂಡಿರುವಾಗಲೇ ಬೆಂಡೆಕೆರೆ ಸಮೀಪ ಬೈಕ್ ಸವಾರರ ಮೇಲೆ ದಾಳಿ ಮಾಡಿದ ಚಿರತೆ ಅವರನ್ನು ಗಾಯಗೊಳಿಸಿದೆ. ರಾಜಗೋಪಾಲ್ ಮತ್ತು ಕುಟುಂಬ ಸದಸ್ಯರು ಬೈಕ್ ನಲ್ಲಿ ತೆರಳುವಾಗ ನಡೆದ ದಾಳಿಯಲ್ಲಿ ಚಿರತೆಯನ್ನ ಬಿಗಿಯಾಗಿ ಹಿಡಿದುಕೊಂಡಿದ್ದ ರಾಜಗೋಪಾಲ್ ಸಹಾಯಕ್ಕಾಗಿ ಕೂಗಾಡಿದ್ದಾರೆ. ತಕ್ಷಣ ಅಲ್ಲೇ ಸಮೀಪ ಇದ್ದ ನೂರಾರು ಜನರು ಸೇರಿ ಚಿರತೆಯ ಮೇಲೆ ಹಲ್ಲೆ ಮಾಡಿದ್ದು ಚಿರತೆ ಅಲ್ಲಿಯೇ ಪ್ರಾಣ ಬಿಟ್ಟಿದೆ. ಅಂದಾಜು 18 ತಿಂಗಳ ಹೆಣ್ಣು ಚಿರತೆ ಜನರ ದಾಳಿಗೆ ತುತ್ತಾಗಿ ಮೃತಪಟ್ಟಿದ್ದು ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಡಾ.ಬಸವರಾಜ್ ಹೇಳಿದ್ದಾರೆ.

ಒಟ್ಟಿನಲ್ಲಿ ಬೈರಗೊಂಡನಹಳ್ಳಿ ಹಾಗೂ ಬೆಂಡೆಕೆರೆ ಭಾಗದಲ್ಲಿ ಐದು ಜನರ ಮೇಲೆ ಹಾಗೂ ಜಾನುವಾರುಗಳ ಮೇಲೂ ದಾಳಿ ಮಾಡಿದ್ದ ಚಿರತೆಯ ಎದುರು ಏಕಾಂಗಿಯಾಗಿ ಹೋರಾಡಿದ ರಾಜಗೋಪಾಲ್ ತಾನೇ ತನ್ನ ಮಡದಿ ಮಗಳ ಪ್ರಾಣ ರಕ್ಷಣೆಗಾಗಿ ಕೊಂದಿದ್ದು, ಜನರು ನಡೆಸಿದ ಸಮೂಹ ದಾಳಿಯಲ್ಲಿ ಚಿರತೆ ಸತ್ತಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕಳೆದ ವಾರದಿಂದ ಜನರಲ್ಲಿ ಭೀತಿ ಹುಟ್ಟು ಹಾಕಿದ್ದ ಚಿರತೆ ಸಾವಿನೊಂದಿಗೆ ಅಂತ್ಯವಾಗಿದೆ.

ಡಿಕೆಶಿ ಸೂಚನೆ ಮೇರೆಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಸನ್ಮಾನ
25 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ರಾಜಗೋಪಾಲ್​ಗೆ ಸನ್ಮಾನ ಚಿರತೆಯೊಂದಿಗೆ ಸೆಣಸಾಡಿ ತನ್ನ ಪತ್ನಿ ಪುತ್ರಿಯ ಜೀವ ಉಳಿಸಿದ ರಾಜಗೋಪಾಲ್​ಗೆ ಹಾಸನ ಜಿಲ್ಲಾ ಘಟಕದ ಕಾಂಗ್ರೆಸ್​​ ಮುಖಂಡರು ಸನ್ಮಾನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಸನ್ಮಾನ ಮಾಡಿದ್ದಾರೆ. ಡಿಕೆಶಿ ನಿರ್ದೆಶನದಂತೆ ಆಸ್ಪತ್ರೆಗೆ ಕೈ ನಾಯಕರು ಆಗಮಿಸಿದರು. ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಕಾಂಗ್ರೆಸ್ ಜಿಲ್ಲಾದ್ಯಕ್ಷ ಜಾವಗಲ್ ಮಂಜುನಾಥ್ ನೇತೃತ್ವದಲ್ಲಿ ಸನ್ಮಾನ ಮಾಡಿದರು.

ಇದನ್ನೂ ಓದಿ: ವನ್ಯ ಜೀವಿ-ಮಾನವ ಸಂಘರ್ಷ; ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಹುಲಿ, ಚಿರತೆ ದಾಳಿ