ನಾನು ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗಲ್ಲ, ಏಕೆಂದರೆ ದೇವರು ನನ್ನಲ್ಲೇ ಇದ್ದಾನೆ: ಸಿದ್ದರಾಮಯ್ಯ

ದೇವರು ಒಬ್ಬನೇ ಇರೋದು. ಬಹಳ ದೇವರಿರೋಕೆ ಸಾಧ್ಯವಿಲ್ಲ. ದೇಶದಲ್ಲಿ ಐದು ಲಕ್ಷ ಹಳ್ಳಿಗಳಿವೆ ಅಷ್ಟು ದೇವರಿರೋಕೆ ಸಾಧ್ಯವೇ ಎಂದು ಕುಟುಕಿದ ಸಿದ್ದರಾಮಯ್ಯ, ದೇವರೊಬ್ಬ ನಾಮ ಹಲವು ಎಂದು ಸ್ಮರಿಸಿದರು. ದೇವರು ಎಲ್ಲೆಲ್ಲೂ ಇದ್ದಾನೆ, ಗುಡಿಯಲ್ಲೂ ಇದ್ದಾನೆ, ನಿಮ್ಮಲ್ಲೂ ಇದ್ದಾನೆ ಎಂದು ಹೇಳಿದರು.

  • TV9 Web Team
  • Published On - 15:42 PM, 3 Apr 2021
ನಾನು ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗಲ್ಲ, ಏಕೆಂದರೆ ದೇವರು ನನ್ನಲ್ಲೇ ಇದ್ದಾನೆ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹುಲ್ಲೇನಹಳ್ಳಿ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವರು ಧರ್ಮದ ಬಗ್ಗೆ ಭಾಷಣ ಮಾಡಿದ್ದಾರೆ. ತಮ್ಮ ಮಾತಿಗೂ ಮುನ್ನ ವೇದಿಕೆಯಲ್ಲಿ ನಿಂತಿದ್ದವರಿಗೆ ಏಯ್​ ನಿಮಗೆ ಇಲ್ಲೇನ್ರೀ ಕೆಲಸ ಎಂದು ಗದರಿಸಿ ಕೆಳಗಿಳಿಸಿದ ಸಿದ್ದರಾಮಯ್ಯ, ಆತ್ಮಶುದ್ದಿಯಿಂದ ದೇವರಿಗೆ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡುತ್ತಾನೆ. ಧರ್ಮ ಎಂದರೆ ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ, ಒಳ್ಳಯದನ್ನೇ ಬಯಸುವುದು. ವೈರಿಗೂ ಒಳ್ಳೆಯದಾಗಲಿ ಎಂದು ಬಯಸೋದೆ ಮಾನವ ಧರ್ಮ ಎಂದು ಧರ್ಮದ ಬಗ್ಗೆ ವ್ಯಾಖ್ಯಾನಿಸಿದರು.

ದೇವರು ಒಬ್ಬನೇ ಇರೋದು. ಬಹಳ ದೇವರಿರೋಕೆ ಸಾಧ್ಯವಿಲ್ಲ. ದೇಶದಲ್ಲಿ ಐದು ಲಕ್ಷ ಹಳ್ಳಿಗಳಿವೆ ಅಷ್ಟು ದೇವರಿರೋಕೆ ಸಾಧ್ಯವೇ ಎಂದು ಕುಟುಕಿದ ಸಿದ್ದರಾಮಯ್ಯ, ದೇವರೊಬ್ಬ ನಾಮ ಹಲವು ಎಂದು ಸ್ಮರಿಸಿದರು. ದೇವರು ಎಲ್ಲೆಲ್ಲೂ ಇದ್ದಾನೆ, ಗುಡಿಯಲ್ಲೂ ಇದ್ದಾನೆ, ನಿಮ್ಮಲ್ಲೂ ಇದ್ದಾನೆ. ಹಾಗಾಗಿಯೇ ಬಸವಾದಿ ಶರಣರು, ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ.. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂದಿದ್ದಾರೆ. ದೇವರು ನಾವು ಮಾಡೋ ಪ್ರತಿ ಕೆಲಸವನ್ನೂ ನೋಡುತ್ತಾನೆ. ದೇವರ ಕಣ್ಣು ತಪ್ಪಿಸಿ ಏನೂ ಮಾಡೋಕೆ ಆಗಲ್ಲ. ನಾನು ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗಲ್ಲ, ಏಕೆಂದರೆ ದೇವರು ನನ್ನಲ್ಲೇ ಇದ್ದಾನೆ. ನಾನು ಮಾಡೋ ಕಾಯಕವನ್ನ ಪ್ರಾಮಾಣಿಕವಾಗಿ ಮಾಡಿದರೆ ದೇವರು ಮೆಚ್ಚುತ್ತಾನೆ ಎಂದು ಹೇಳಿದರು.

ಇನ್ನು ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಸರ್ಕಾರದಲ್ಲಿ ಯಾವ ಕೆಲಸ ಆಗಲ್ಲ ಬಿಡಿ. ಅವರು ಇನ್ನೂ ಎಷ್ಟು ದಿನ ಇರ್ತಾರೋ ಏನೋ ಪಾಪ. ಯಡಿಯೂರಪ್ಪ ಅವರ ಮಗ ಸರ್ವಾಧಿಕಾರಿತನದಿಂದ ವರ್ತಿಸುತ್ತಾರೆ. ಪಾಪ ಸಚಿವ ಕೆ.ಎಸ್​.ಈಶ್ವರಪ್ಪ ಹಿರಿಯ ನಾಯಕ ಆದರೂ ಅವರ ಇಲಾಖೆಯಲ್ಲಿ ಏನೂ ನಡೆಯದಂತೆ ಮಾಡಿದ್ದಾರೆ. ನಾನಾಗಿದ್ದರೆ ಒಂದು ಸೆಕೆಂಡ್ ಸಚಿವನಾಗಿ ಇರ್ತಿರಲಿಲ್ಲ. ಮಾನ, ಮರ್ಯಾದೆ, ಸ್ವಾಭಿಮಾನ ಬಿಟ್ಟು ಇರೋಕಾಗುತ್ತಾ. ನನ್ನ ಜೀವನದಲ್ಲಿ ಯಾರಿಗೂ ಗೊಡ್ಡು ಸಲಾಮ್ ಹೊಡೆದಿಲ್ಲ. ನಾನು ಯಾರಿಗೂ ಜಗ್ಗುವುದಿಲ್ಲ, ಯಾವುದಕ್ಕೂ ಬಗ್ಗುವುದಿಲ್ಲ. ನಿಮ್ಮ ಆಶೀರ್ವಾದ ಇರೋವರೆಗೆ ಯಾರೇನೂ ಮಾಡಲಾಗಲ್ಲ ಎಂದು ಮಾತನಾಡಿದ್ದಾರೆ.

ಇದನ್ನೂ ಓದಿ:
ಶಾಸಕರು-ಸಚಿವರ ವಿಶ್ವಾಸ ಕಳೆದುಕೊಂಡ ಸರ್ಕಾರ ಏಕಿರಬೇಕು: ರಾಷ್ಟ್ರಪತಿ ಆಳ್ವಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ 

ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ಹಣಕೊಡದ ಸರ್ಕಾರ: ಸಿದ್ದರಾಮಯ್ಯ ಟೀಕೆ