ಡಾ. ಮಂಜುನಾಥ್ ದಿಟ್ಟ ಹೆಜ್ಜೆ: ಕರ್ನಾಟಕದಲ್ಲಿನ ಹೃದಯಾಘಾತ ಕೇಸ್ ಪ್ರಧಾನಿ ಮೋದಿ ಅಂಗಳಕ್ಕೆ
ಇತ್ತೀಚೆಗೆ ಹೆಚ್ಚಿನ ಯುವಕರು ಹೃದಯಾಘಾತ ಸಾವಿಗೀಡಾಗುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ 39 ದಿನಗಳಲ್ಲಿ 18 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಸಮಸ್ಯೆಯ ಬಗ್ಗೆ ಸಂಸದ ಡಾ. ಸಿಎನ್ ಮಂಜುನಾಥ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಲಿದ್ದಾರೆ. ಹಾಸನ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆಯನ್ನು ಜಾರಿಗೆ ತರಲು ಆರೋಗ್ಯ ಇಲಾಖೆಗೆ ಡಿಹೆಚ್ಒ ಮನವಿ ಮಾಡಿದ್ದಾರೆ.

ಬೆಂಗಳೂರು, ಜೂನ್ 29: ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಹಾಸನ ಜಿಲ್ಲೆಯೊಂದರಲ್ಲೇ ಕಳೆದ 39 ದಿನಗಳಲ್ಲಿ 18 ಮಂದಿ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಹೆಚ್ಚುತ್ತಿರುವ ಹೃದಯಘಾತಗಳ ಬಗ್ಗೆ ಸಂಸದ, ಹೃದಯ ತಜ್ಞ ಡಾ. ಸಿಎನ್ ಮಂಜುನಾಥ್ (CN Manjunath) ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (Narendra Modi) ಚರ್ಚಿಸಲಿದ್ದಾರೆ. ಹೃದಯಘಾತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿ.ಎನ್ ಮಂಜುನಾಥ್ ಅವರು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡ ಮತ್ತು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆಯೂ ಚರ್ಚೆ ಮಾಡಿದ್ದಾರೆ.
ಸ್ಟೆಮಿ ಯೋಜನೆ ಜಾರಿಗೆ ಪ್ರಸ್ತಾವನೆ
ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಆಲೂರು, ಅರಕಲಗೂಡು ಹಾಗು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿ ಮಾಡುವಂತೆ ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಅನಿಲ್ ಕುಮಾರ್ ಅವರು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಎದೆ ನೋವಿನಿಂದ ಬಳಲಿ ಬಂದವರಿಗೆ ಜಯದೇವ ಆಸ್ಪತ್ರೆ ಸಹಯೋಗ ದೊಂದಿಗೆ ಚಿಕಿತ್ಸೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಎದೆ ನೋವು ಎಂದು ಬಂದ ರೋಗಿಗಳ ಇಸಿಜಿ ರಿಪೋರ್ಟ್ ಜಯದೇವ ಆಸ್ಪತ್ರೆಗೆ ಅಪ್ಲೋಡ್ ಮಾಡಲಾಗುತ್ತದೆ. ಜಯದೇವ ಆಸ್ಪತ್ರೆಯ ವೈದ್ಯರು ವರದಿ ನೋಡಿ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಸದ್ಯ ಹಾಸನ ಜಿಲ್ಲೆಯ
ಜಿಲ್ಲಾ ಆಸ್ಪತ್ರೆ, ಹೊಳೆನರಸೀಪುರ ಹಾಗೂ ಅರಸೀಕೆರೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಲ್ಲಿದೆ. ಇದೀಗ ಹೃದಯಾಘಾತದಿಂದ ಸಾವಿಗೀಡಾಗುವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಉಳಿದ ಐದು ತಾಲ್ಲೂಕಿನ ಆಸ್ಪತ್ರೆಗಳಲ್ಲೂ ಸ್ಟೆಮಿ ಯೋಜನೆ ಜಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ ಮುಂದುವರೆದ ಹೃದಯಾಘಾತ ಸರಣಿ ಸಾವು: ಮತ್ತೋರ್ವ ಬಲಿ
ಏನಿದು ಸ್ಟೆಮಿ ಯೋಜನೆ?
ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿ ಹಬ್ ಅ್ಯಂಡ್ ಸ್ಪೋಕ್ ಮಾಡಲ್ ಇದೆ. ಹಬ್ ಅ್ಯಂಡ್ ಸ್ಪೋಕ್ ಮಾಡಲ್ ನಲ್ಲಿ ಸ್ಟೆಮಿ ಯೋಜನೆ ಜಾರಿ ಮಾಡಲಾಗಿದೆ. ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಯೋಜನೆ ಇದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಡಿ ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿ ಸರ್ಕಾರ ಸ್ಟೆಮಿ ಯೋಜನೆಯನ್ನು ಜಾರಿಗೆ ತಂದಿದೆ.
ತುರ್ತು ಚಿಕಿತ್ಸಾ ವಿಭಾಗದಲ್ಲಿ ಹೃದಯಾಘಾತಕ್ಕೆ ತ್ವರಿತ ಚಿಕಿತ್ಸೆಗೆ ಸ್ಟೆಮಿ ಸಹಾಯಕವಾಗಲಿದೆ. ರೋಗಿಗಳು ಎದೆನೋವು ಎಂದು ಆಸ್ಪತ್ರೆಗೆ ಬಂದಾಗ ಅವರಿಗೆ ಮೊದಲು ಇಸಿಜಿ ಮಾಡಿ ಮಾಹಿತಿಯನ್ನು ಜಯದೇವ ಹೃದ್ರೋಗ ಹಬ್‌ಗೆ ರವಾನಿಸಲಾಗುತ್ತದೆ. ಅಲ್ಲಿನ ನುರಿತ ವೈದ್ಯರು ಕಾಯಿಲೆ ಗುರುತಿಸಿ ಚಿಕಿತ್ಸೆ ಕುರಿತು ತಾಲೂಕು ಆಸ್ಪತ್ರೆ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಹೃದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.