ರೈತರಿಗೆ ಕಂಟಕವಾದ ಗಜಪಡೆ; ಹಿಂಡು ಹಿಂಡಾಗಿ ಬಂದು ಕಷ್ಟಪಟ್ಟು ಬೆಳೆದ ಬೆಳೆ ತಿನ್ನುತ್ತಿರೋ ಆನೆಗಳ ಹಿಂಡು
ಈ ವರ್ಷ ಮಲೆನಾಡು ಭಾಗದ ರೈತರನ್ನ ಕಾಡಾನೆಗಳು ಅಕ್ಷರಶಃ ಕಣ್ಣೀರಿಡುವಂತೆ ಮಾಡುತ್ತಿವೆ. 40 ರಿಂದ 50 ಸಂಖ್ಯೆಯಲ್ಲಿ ಹಿಂಡು ಹಿಂಡಾಗಿ ಅಡ್ಡಾಡುತ್ತಾ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿರುವ ಗಜಪಡೆಯಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ಹಾಸನ, ಸೆ.25: ಈ ಬಾರಿ ಹಾಸನ(Hassan) ಜಿಲ್ಲೆಯ ಮಲೆನಾಡಿನ ಜನರು ಅಕ್ಷರಶಃ ಕಾಡಾನೆಗಳ(wild elephants) ಹಾವಳಿಯಿಂದ ಕಣ್ಣಿರಿಡುವಂತಾಗಿದೆ. ಕಾಫಿ, ಬಾಳೆ, ಅಡಿಕೆ, ತೆಂಗು ಬೆಳೆ ಮಾತ್ರವಲ್ಲ, ತುತ್ತಿನ ಬೆಳೆ ಭತ್ತ, ವಾಣಿಜ್ಯ ಬೆಳೆ ಜೋಳವನ್ನು ಅರಸಿ ಬಂದು ತಿಂದು ತೇಗುತ್ತಿರುವ ಆನೆಗಳ ಅಟ್ಟಹಾಸಕ್ಕೆ ಅನ್ನದಾತರು ಕಂಗೆಟ್ಟು ಹೋಗಿದ್ದಾರೆ. ಆನೆಗಳಿಂದ ಬೆಳೆ ಉಳಿಸಿಕೊಳ್ಳಲು ಸಂಜೆಯಾಗುತ್ತಲೆ ಭತ್ತದ ಗದ್ದೆಗಳ ಬಳಿ ಬೆಂಕಿ ಹಾಕಿ ಕಾದರೂ ಕೂಡ ಬೇರೊಂದು ಮಾರ್ಗದಿಂದ ಬಂದು ಬೆಳೆಯನ್ನ ತಿಂದು ಪರಾರಿ ಆಗುತ್ತಿದೆ. ಇತ್ತ ರೈತರು ತಮ್ಮ ಹೊಟ್ಟೆಪಾಡಿಗಾಗಿ ಬೆಳೆದುಕೊಂಡಿದ್ದ ಬೆಳೆಯ್ನನೇ ಸರ್ವನಾಶ ಮಾಡುತ್ತಿವೆ.
ಹಗಲೆಲ್ಲವೂ ಕಾಫಿ ತೋಟದಲ್ಲಿ ವಿಶ್ರಮಿಸಿಕೊಳ್ಳುವ ಗಜಪಡೆ, ರಾತ್ರಿಯಾಗುತ್ತಲೆ ಊರೂರು ಅಲೆಯುತ್ತಾ ಸಿಕ್ಕ ಸಿಕ್ಕ ಭತ್ತದ ಪೈರು ತಿಂದು ನಾಶಮಾಡುತ್ತಿವೆ. ಎಕರೆಗೆ 30ರಿಂದ 35 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದ ಬೆಳೆ ಆನೆ ಹೊಟ್ಟೆ ಸೇರುತ್ತಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡು, ಇಂಟಿತೊಳಲು, ಮಚ್ಚಿನಮನೆ ಸೇರಿ ಹತ್ತಾರು ಗ್ರಾಮಗಳ ಸುತ್ತಾ ಆನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಬೆಳೆ ರಕ್ಷಣೆಗೆ ಹೆಣಗಾಡುತ್ತಿದ್ದಾರೆ.
ಇದನ್ನೂ ಓದಿ:ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು, ವಿಡಿಯೋ ನೋಡಿ
ಹಾಸನ ಜಿಲ್ಲೆಯ ಆಲೂರು, ಬೇಲೂರು, ಸಕಲೇಶಫುರ ಭಾಗದಲ್ಲಿ ಕಾಡಾನೆ ಮಾನವ ಸಂಘರ್ಷ ಮಿತಿ ಮೀರಿದೆ. ಈ ವರ್ಷವಂತೂ ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿರುವ ಆನೆಗಳ ಸಂಖ್ಯೆಯಿಂದ ರೈತರು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ ದೊಡ್ಡ ಕಾಫಿ ಎಸ್ಟೇಟ್ ಮಾಲೀಕರು ಸೋಲಾರ್ ಬೇಲಿ, ಆನೆ ಕಂದಕ ಮಾಡಿಕೊಂಡ ಪರಿಣಾಮ ಸಣ್ಣಪುಟ್ಟ ರೈತರ ಕಾಫಿ, ಬಾಳೆ, ಅಡಿಕೆ ಭತ್ತದ ಗದ್ದೆಗಳನ್ನ ಸರ್ವ ನಾಶ ಮಾಡುತ್ತಿವೆ. ಸಮಸ್ಯೆಗೆ ಪರಿಹಾರ ನೀಡಬೇಕಾದ ಅರಣ್ಯ ಇಲಾಖೆ ಕೈ ಚೆಲ್ಲಿ ಕೂತಿರುವುದು ರೈತರ ಆಕ್ರೊಶಕ್ಕೆ ಕಾರಣವಾಗಿದೆ. ನಾವು ಅರಣ್ಯಕ್ಕೆ ಎಂಟ್ರಿಯಾದರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ. ಈಗ ಅವರ ಆನೆ ನಮ್ಮ ಜಮೀನಿಗೆ ಬರ್ತಿದ್ದು, ಬೆಳೆ ನಾಶ ಮಾಡ್ತಿವೆ. ನಾವು ಯಾರ ಮೇಲೆ ಕೇಸ್ ಹಾಕಬೇಕು.
ಅಧಿಕಾರಿಗಳನ್ನ ಕೇಳಿದ್ರೆ ಭತ್ತ ಬೆಳಿಬೇಡಿ, ಜೋಳ ಬೆಳಿಬೇಡಿ ಎನ್ನುತ್ತಾರೆ. ನಾವು ಹಾಗಾದರೆ ಏನು ತಿನ್ನಬೇಕು. ಬೆಳೆ ಹಾನಿಯಾದರೆ ಪುಡಿಗಾಸಿನ ಪರಿಹಾರ ಕೊಡುತ್ತಾರೆ. ನಿಮ್ಮ ಪರಿಹಾರ ನಮಗೆ ಬೇಡ, ಸಮಸ್ಯೆಗೆ ಮುಕ್ತಿ ನೀಡಿ. ನಿಮ್ಮ ಆನೆಗಳನ್ನ ಸರಿಯಾದ ಸ್ಥಳದಲ್ಲಿ ಕಾಪಾಡಿಕೊಳ್ಳಿ. ಆನೆಗಳಿಗೆ ಅಹಾರ ಬೇಕಾದರೆ ನಾವು ಬೆಳೆದ ಬೆಳೆಯನ್ನೇ ಕೊಂಡು ಆನೆಗಳಿಗೆ ನೀಡಿ, ಅದು ಬಿಟ್ಟು ಹೀಗೆ ಬೆಳೆ ನಾಶ ಯಾಕೆ ಮಾಡ್ತೀರಿ ಎಂದು ಜನರು ನೋವು ಹೊರ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಎರಡು ದಶಕಗಳಿಂದ ಹಂತ ಹಂತವಾಗಿ ಬಿಗಡಾಯಿಸಿದ ಕಾಡಾನೆ ಸಮಸ್ಯೆ, ಈಗ ಹೆಮ್ಮರವಾಗಿ ಬದಲಾಗಿದೆ. ವರ್ಷಕ್ಕೆ ಒಂದು ಬಾರಿಯೋ ಅಥವಾ ಎರಡು ಬಾರಿಯೋ ಬಂದು ಹೋಗುತ್ತಿದ್ದ ಆನೆಗಳು, ಈಗ ನಾಡಿನಲ್ಲೇ ನೆಲೆ ಕಂಡುಕೊಂಡಿದ್ದು, ರೈತರ ಜಮೀನೇ ಆನೆಗಳ ಆವಾಸ ಸ್ಥಾನವಾಗಿರುವುದು ಸಮಸ್ಯೆಯ ತಿವೃತೆ ಹೆಚ್ಚಾಗುವಂತೆ ಮಾಡಿದೆ. ಸರ್ಕಾರ ಇನ್ನಾದರೂ ಕಾಡಾನೆ ಸಮಸ್ಯೆಯ ಮೂಲ ಅರಿತು ಜನರ ನೋವು ದೂರ ಮಾಡುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ