ಮೆಕ್ಕೆಜೋಳದ ಕಣಕ್ಕೆ ಬೆಂಕಿ: ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಹಾವೇರಿ ರೈತರಿಗೆ ಶಾಕ್

ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕ್ವಿಂಟಲ್​ಗೆ 1000ರೂಪಾಯಿಯಿಂದ 1400ರೂಪಾಯಿವರೆಗೆ ಮಾತ್ರ ಸಿಗುತ್ತಿದೆ.

  • ಪ್ರಭುಗೌಡ.ಎನ್.ಪಾಟೀಲ
  • Published On - 11:22 AM, 22 Feb 2021
ಮೆಕ್ಕೆಜೋಳದ ಕಣಕ್ಕೆ ಬೆಂಕಿ: ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಹಾವೇರಿ ರೈತರಿಗೆ ಶಾಕ್
ಮೆಕ್ಕೆಜೋಳ ಬೆಳೆ ಬೆಂಕಿಗೆ ಆಹುತಿ

ಹಾವೇರಿ : ಏಲಕ್ಕಿ ಕಂಪಿನ ನಾಡು ಎಂತಲೆ ಹೆಸರಾಗಿರುವ ಹಾವೇರಿ ಜಿಲ್ಲೆಗೆ ಮೆಕ್ಕೆಜೋಳದ ಕಣಜ ಎಂತಲೂ ಕರೆಯುತ್ತಾರೆ. ಏಕೆಂದರೆ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕಜೋಳ ಬೆಳೆಯಲಾಗುತ್ತದೆ. ರೈತರು ಮೆಕ್ಕೆಜೋಳ ಬೆಳೆಯುವುದಕ್ಕೆ ಆರಂಭ ಮಾಡಿದ ಸಮಯದಲ್ಲಿ ಮೆಕ್ಕೆಜೋಳ ರೈತರಿಗೆ ಲಾಭದಾಯಕವಾದ ಬೆಳೆಯಾಗಿತ್ತು. ಆದರೆ ಕೆಲವು ವರ್ಷಗಳಿಂದ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಮೆಕ್ಕೆಜೋಳ ಬೆಳೆದ ರೈತರಿಗೆ ಈ ಕೃಷಿಗಾಗಿ ಮಾಡಿದ ಖರ್ಚು ಬಾರದಂತಹ ಪರಿಸ್ಥಿತಿ ಎದುರಾಗಿದೆ.

ಸುಟ್ಟು ಹಾಳಾಗುತ್ತಿರುವ ಮೆಕ್ಕೆಜೋಳ:
ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರು, ಇಂದಲ್ಲ ನಾಳೆ‌ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಗಬಹುದು ಎಂದು ಮೆಕ್ಕೆಜೋಳದ ತೆನೆಗಳನ್ನು ಕಟಾವು ಮಾಡಿ ಜಮೀನು ಹಾಗೂ ಕಣಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಇನ್ನು 5ರಿಂದ 30 ಎಕರೆಗಳಲ್ಲಿ ಮೆಕ್ಕೆಜೋಳ ಬೆಳೆದ ರೈತರು ಸಹ ಉತ್ತಮ ದರದ ನಿರೀಕ್ಷೆಯಿಂದ ಮೆಕ್ಕೆಜೋಳದ ತೆನೆಗಳನ್ನು ಸಂಗ್ರಹ ಮಾಡಿಟ್ಟಿದ್ದಾರೆ. ಆದರೆ ಹೀಗೆ ಸಂಗ್ರಹಿಸಿಟ್ಟಿರುವ ಮೆಕ್ಕೆಜೋಳಕ್ಕೆ ಪದೇ ಪದೇ ಬೆಂಕಿ ಬಿದ್ದು, ಮೆಕ್ಕೆಜೋಳದ ತೆನೆಗಳು ಸುಟ್ಟು ಹಾಳಾಗುತ್ತಿವೆ. ಕೆಲವೆಡೆ ಬೀಡಿ, ಸಿಗರೇಟು ಸೇದಿ ಒಗೆದ ಬೆಂಕಿಯಿಂದ ಮೆಕ್ಕೆಜೋಳ ಸುಟ್ಟು ಹಾಳಾಗುತ್ತಿವೆ. ಮತ್ತೆ ಕೆಲವು ಕಡೆಗಳಲ್ಲಿ ಆಕಸ್ಮಿಕ ಬೆಂಕಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿಕೊಂಡರೆ ಇನ್ನು ಕಿಡಿಗೇಡಿಗಳಿಂದ ಬೆಂಕಿ ಬಿದ್ದು ಮೆಕ್ಕೆಜೋಳ ಸುಟ್ಟು ಕರಕಲಾಗುತ್ತಿದೆ.

ಹುಸಿಯಾದ ಸರ್ಕಾರದ ಭರವಸೆ:
ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಸರ್ಕಾರ ಮೆಕ್ಕೆಜೋಳಕ್ಕೆ ಎಂಎಸ್​ಪಿ (ಕನಿಷ್ಠ ಬೆಂಬಲ ಬೆಲೆಯಾಗಿ) ಕ್ವಿಂಟಲ್​ಗೆ 1860 ರೂಪಾಯಿ ಘೋಷಣೆ ಮಾಡಿದೆ. ಕಳೆದ ಕೆಲವು ತಿಂಗಳುಗಳ ಹಿಂದೆಯೇ ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಆಗಿದ್ದರೂ ಸರ್ಕಾರ ಘೋಷಿಸಿದ ದರ ಈವರೆಗೂ ರೈತರಿಗೆ ಸಿಗುತ್ತಿಲ್ಲ. ಮೆಕ್ಕಜೋಳ ಖರೀದಿ ಕೇಂದ್ರ ಆರಂಭವಾಗದೆ ಇರುವುದರಿಂದ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ರೈತರಿಗೆ ಸಿಗುತ್ತಿಲ್ಲ. ಇನ್ನು ಸರ್ಕಾರದ ಘೋಷಣೆಯನ್ನು ನಂಬಿದ ರೈತರು ಇಂದಲ್ಲ, ನಾಳೆ ಘೋಷಿಸಿದ ದರದಲ್ಲಿ ಮೆಕ್ಕೆಜೋಳ ಖರೀದಿ ಮಾಡಬಹುದು ಎಂದು ಕಾದಿದ್ದರು. ಆದರೆ ಇಷ್ಟು ದಿನಗಳು ಕಳೆದರೂ ಸರ್ಕಾರದ ಘೋಷಣೆ ಹುಸಿ ಭರವಸೆಯಾಗಿದೆ.

maize crop fire

ರೈತರ ಜಮೀನಿನಲ್ಲಿ ಬೆಂಕಿ

ಎಲ್ಲೆಂದರಲ್ಲಿ ಕಾಣುವ ಮೆಕ್ಕೆಜೋಳ:
ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕ್ವಿಂಟಲ್​ಗೆ 1000 ರೂಪಾಯಿಯಿಂದ 1400 ರೂಪಾಯಿವರೆಗೆ ಮಾತ್ರ ಸಿಗುತ್ತಿದೆ. ಇದರಿಂದ ರೈತರು ಉತ್ತಮ ದರಕ್ಕಾಗಿ ಮೆಕ್ಕೆಜೋಳವನ್ನು ಕಣ, ಸರ್ವೀಸ್ ರಸ್ತೆಗಳು, ಜಮೀನು, ಮನೆಯ ಅಂಗಳ, ಹಿತ್ತಿಲು ಹೀಗೆ ಎಲ್ಲೆಂದರಲ್ಲಿ ಗುಡ್ಡೆ ಹಾಕಿಕೊಂಡು ಕುಳಿತಿದ್ದಾರೆ.

maize crop fire

ಮೆಕ್ಕೆಜೋಳ ಬೆಳೆದ ರೈತರಲ್ಲಿ ಆತಂಕ

ಇನ್ನು ಈ ಜೋಳಗಳಿಗೆ ಇಲಿ, ಹೆಗ್ಗಣಗಳ ಕಾಟ ಶುರುವಾಗಿ ಮೆಕ್ಕೆಜೋಳ ಹಾಳಾಗಿ ಹೋಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಎಲ್ಲಿ ನೋಡಿದರಲ್ಲಿ ಮೆಕ್ಕೆಜೋಳದ ಗುಡ್ಡೆಗಳೇ ಕಾಣಿಸುತ್ತಿವೆ. ಮೆಕ್ಕೆಜೋಳ ಬೆಳೆಯಲು ರೈತರು ಖರ್ಚು ಮಾಡಿರುವ ಹಣವೂ ಬಾರದಂತಹ ಬೆಲೆ ಮಾರುಕಟ್ಟೆಯಲ್ಲಿ ಇರುವುದರಿಂದ ರೈತರು ಎಲ್ಲೆಂದರಲ್ಲಿ ಈ ರೀತಿ ಜೋಳದ ತೆನೆಗಳನ್ನು ಗುಡ್ಡೆ ಹಾಕಿಕೊಂಡಿದ್ದಾರೆ.

maize crop fire

ರೈತರ ನಿರೀಕ್ಷೆ ಹುಸಿ

ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಸರ್ಕಾರ ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆಯಾಗಿ ಕ್ವಿಂಟಲ್​ಗೆ 1860 ರೂಪಾಯಿ ಘೋಷಿಸಿದೆ. ಆದರೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗದೆ ಇರುವುದರಿಂದ ಸರ್ಕಾರದ ಘೋಷಣೆ ಹಾಗೆಯೇ ಉಳಿದಿದೆ. ಕೂಡಲೇ ಸರ್ಕಾರ ಮೆಕ್ಕಜೋಳ ಖರೀದಿ ಕೇಂದ್ರ ಆರಂಭಿಸಬೇಕು ಇಲ್ಲವೆ ಮೆಕ್ಕೆಜೋಳಕ್ಕೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಪಸ್ ಪಡೆಯಬೇಕು. ಜಿಲ್ಲೆಯಿಂದ ಆಯ್ಕೆಯಾಗಿರುವ ಕೃಷಿ ಸಚಿವರು ಮೆಕ್ಕೆಜೋಳ ಬೆಳೆದ ರೈತರ ಬಗ್ಗೆ ಗಮನ ಹರಿಸಬೇಕು ಎಂದು ಮೆಕ್ಕೆಜೋಳ ಬೆಳೆದ ರೈತ ಕಿರಣ ಗಡಿಗೋಳ ಹೇಳಿದ್ದಾರೆ.

maize crop fire

ಕಣದಲ್ಲಿ ಮೆಕ್ಕೆಜೋಳ ಸಂಗ್ರಹ

ಮೆಕ್ಕೆಜೋಳ‌ ಖರೀದಿ ಕೇಂದ್ರ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿದ್ದೇವೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಹತ್ತಾರು ಬಾರಿ ಪ್ರತಿಭಟನೆ ಮಾಡಿದ್ದೇವೆ. ಆದರೂ ಸರಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಗೋಜಿಗೆ ಹೋಗುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೆ ಕೃಷಿ ಸಚಿವ ಬಿ.ಸಿ.ಪಾಟೀಲರು ಖರೀದಿ ಕೇಂದ್ರ ಆರಂಭಿಸುವ ಪ್ರಸ್ತಾವನೆ ಇಲ್ಲವೆಂದಿದ್ದಾರೆ. ಹೀಗಾಗಿ ದೆಹಲಿ ಮಾದರಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಹೋರಾಟ ರೂಪಿಸುತ್ತೇವೆ. ಖರೀದಿ ಕೇಂದ್ರ ಆರಂಭ ಆಗುವವರೆಗೆ ಸತ್ಯಾಗ್ರಹ ಕೂರುತ್ತೇವೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಹೇಳಿದ್ದಾರೆ.

maize crop fire

ಮೆಕ್ಕೆಜೋಳದ ಮೂಟೆಗಳ ಸಂಗ್ರಹ

ಇದನ್ನೂ ಓದಿ: ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಮೆಕ್ಕೆಜೋಳ ನಾಶ