ಜಂಗಿ ನಿಕಾಲಿ ಕುಸ್ತಿಯಲ್ಲಿ ಭರ್ಜರಿ ಕಾದಾಡಿದ ಗಟ್ಟಿ ಕಲಿಗಳು!

ಗೆಲುವು ನನ್ನದೇ ಆಗಿರಬೇಕು ಎನ್ನುತ್ತಾ ಸೆಣಸಾಡುತ್ತಿರುವ ಪೈಲ್ವಾನ್​ಗಳು. ಇನ್ನೊಂದು ಕಡೆ ಕೇಕೆ, ಸಿಳ್ಳೆಗಳ ಮೂಲಕ ಅವರನ್ನ ಹುರಿದುಂಬಿಸ್ತಿರೋ ಪ್ರೇಕ್ಷಕರು. ಗ್ರಾಮದ ರಾಮಲಿಂಗೇಶ್ವರ ಜಾತ್ರೆ ಪ್ರಯುಕ್ತ ಜಾತ್ರಾ ಕಮಿಟಿಯವರು ಜಂಗಿ ನಿಕಾಲಿ ಕುಸ್ತಿ ಆಯೋಜಿಸಲಾಗಿತ್ತು.

  • ಪ್ರಭುಗೌಡ.ಎನ್.ಪಾಟೀಲ
  • Published On - 16:47 PM, 20 Jan 2021
ಜಂಗಿ ನಿಕಾಲಿ ಕುಸ್ತಿಯಲ್ಲಿ ಭರ್ಜರಿ ಕಾದಾಡಿದ ಗಟ್ಟಿ ಕಲಿಗಳು!
ಪೈಲ್ವಾನರ ಕುಸ್ತಿ ಸ್ಪರ್ಧೆ

ಹಾವೇರಿ: ದೇಶೀಯ ಕ್ರೀಡೆ ಕುಸ್ತಿ ಅಂದ್ರೆ ಸಾಕು ಅದರ ಖದರೇ ಬೇರೆ. ಕುಸ್ತಿಯಲ್ಲಿ ಪೈಲ್ವಾನರು ತೊಡೆ ತಟ್ಟಿ ಅಖಾಡ ಪ್ರವೇಶಿಸುತ್ತಿದ್ದರೆ, ನೋಡುಗರು ಕೇಕೆ, ಸಿಳ್ಳೆಗಳನ್ನ ಹಾಕುತ್ತಿರುತ್ತಾರೆ. ಪೈಲ್ವಾನರಂತೂ ಗೆಲುವು ನಂದೇ ಎಂದು ಎದುರಾಳಿ ವಿರುದ್ಧ ಭರ್ಜರಿ ಫೈಟಿಂಗ್ ಮಾಡುತ್ತಿದ್ದರು. ಪೈಲ್ವಾನರು ಅಖಾಡದ ಮಣ್ಣನ್ನು ಮೈಗೆ ಹಚ್ಚಿಕೊಂಡು, ಎದುರಾಳಿಗೂ ಮಣ್ಣು ಮುಕ್ಕಿಸಿ ಭರ್ಜರಿ ಸೆಣಸಾಟ ಮಾಡುತ್ತಿದ್ದರು. ಈ ದೃಶ್ಯ ಕಂಡು ಬಂದಿದ್ದು, ಹಾನಗಲ್ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಅಖಾಡದಲ್ಲಿ.

ಅಖಾಡಕ್ಕೆ ಪ್ರವೇಶಿಸಿದ ಪೈಲ್ವಾನರು:

ಗೆಲುವು ನನ್ನದೇ ಆಗಿರಬೇಕು ಎನ್ನುತ್ತಾ ಸೆಣಸಾಡುತ್ತಿರುವ, ಫೈಟ್ ಮಾಡುತ್ತಿರೋ ಜಟ್ಟಿಗಳು. ಇನ್ನೊಂದು ಕಡೆ ಕೇಕೆ, ಸಿಳ್ಳೆಗಳ ಮೂಲಕ ಅವರನ್ನ ಹುರಿದುಂಬಿಸ್ತಿರೋ ಪ್ರೇಕ್ಷಕರು. ಗ್ರಾಮದ ರಾಮಲಿಂಗೇಶ್ವರ ಜಾತ್ರೆ ಪ್ರಯುಕ್ತ ಜಾತ್ರಾ ಕಮಿಟಿಯವರು ಜಂಗಿ ನಿಕಾಲಿ ಕುಸ್ತಿ ಆಯೋಜಿಸಿದ್ದು, ಹಾವೇರಿ, ಧಾರವಾಡ, ದಾವಣಗೆರೆ, ಕಲಬುರಗಿ, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 200ಕ್ಕೂ ಅಧಿಕ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಕೇವಲ ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರದಿಂದಲೂ ಪೈಲ್ವಾನರು ಪಂದ್ಯಾವಳಿಗೆ ಆಗಮಿಸಿದ್ದರು.

ಅಖಾಡದಲ್ಲಿ ತೊಡೆತಟ್ಟಿ ನಿಂತ ಪೈಲ್ವಾನರು:

ಪಂದ್ಯ ಆರಂಭಕ್ಕೂ ಮುನ್ನ ಪೈಲ್ವಾನರನ್ನ ಸಂಘಟಕರು ತೂಕದ ಆಧಾರದ ಮೇಲೆ ಜೋಡಿಗಳನ್ನಾಗಿ ಮಾಡಿದ್ದರು. ನಂತರ ಜೋಡಿಗಳನ್ನ ಕೂಗುತ್ತಿದ್ದಂತೆ ತೊಡೆ ತಟ್ಟಿ ಅಖಾಡ‌ಕ್ಕೆ ನುಗ್ಗಿ ಬಿಟ್ಟಿದ್ದರು ಈ ಗಟ್ಟಿ ಕಲಿಗಳು. ಹೀಗೆ ಅಖಾಡ ಪ್ರವೇಶಿಸುತ್ತಿದ್ದ ಪೈಲ್ವಾನರು ಬದ್ಧ ವೈರಿಗಳಂತೆ ಕಾದಾಡಿದ್ದರು. ಇನ್ನು, ಈ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಪೈಲ್ವಾನರಿಗೆ ಮೂರು ಬೆಳ್ಳಿ ಕಡಗಗಳು ಮತ್ತು ಒಂದು ಬೆಳ್ಳಿ ಗದೆಯನ್ನು ಬಹುಮಾನವಾಗಿ ನೀಡಲಾಯಿತು.

ಸ್ಪರ್ಧೆಗೆ ಕುಸ್ತಿ ಪೈಲ್ವಾನರ ಸಿದ್ಧತೆ:

ಕುಸ್ತಿಯ ತಯಾರಿಗೆಂದು ಪೈಲ್ವಾನರು ದಿನನಿತ್ಯ ಭರ್ಜರಿ ತಾಲೀಮು ಮಾಡಿ ತಮ್ಮ ದೇಹ ಹುರಿ ಮಾಡಿಕೊಂಡಿರುತ್ತಾರೆ. ಹಾಲು,‌ ಮೊಟ್ಟೆ, ಚಿಕನ್, ಮಟನ್ ಹೀಗೆ ಪೌಷ್ಠಿಕಾಂಶಭರಿತ ಆಹಾರ ಪದಾರ್ಥಗಳನ್ನ ಸೇವನೆ ಮಾಡಿ ಮಸ್ತಾದ ದೇಹ ಬೆಳೆಸಿ, ಅಖಾಡಕ್ಕೆ ರೆಡಿಯಾಗುತ್ತಾರೆ ಎಂದು ಸ್ಪರ್ಧೆಯ ಸಂಘಟಕ ಬಸವರಾಜ್ ತಿಳಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕುಸ್ತಿಯಂಥ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಹಾಗಾಗಿ ಸುಮಾರು ವರ್ಷಗಳಿಂದ ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ ದೇಶೀಯ ಕ್ರೀಡೆ ಕುಸ್ತಿಯ ದಂಗಲ್ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೇ ಅಖಾಡದಲ್ಲಿ ಯಾವುದೇ ತೊಂದರೆಗಳು ಆಗದಂತೆ ಅಖಾಡವನ್ನ ಸಿದ್ಧಪಡಿಸಲಾಗಿತ್ತು. ಯಾವುದೇ ಗಲಾಟೆಗಳು ಆಗದಂತೆ ಸಂಘಟಕರು ಕುಸ್ತಿ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಈ ಜಂಗಿ ಕುಸ್ತಿ ನೋಡಲು ಗ್ರಾಮ ಮಾತ್ರವಲ್ಲ ಸುತ್ತ ಮುತ್ತಲಿನ ಜಿಲ್ಲೆ, ರಾಜ್ಯಗಳಿಂದ ಜನರು ಆಗಮಿಸುತ್ತಾರೆ ಎಂದು ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಪೈಲ್ವಾನ್ ಕಾರ್ತಿಕ ತಿಳಿಸಿದ್ದಾರೆ.

ಜಾನಪದ ಜಾತ್ರೆಯಲ್ಲಿ ಕಿಕ್ಕೇರಿಸೋ ದಂಗಲ್, ಗೆದ್ದು ಬೀಗಿದ ಕುಸ್ತಿಪಟುಗಳು!