ಅಭಿಮಾನಿಯ ಹರಕೆಯಿಂದ ಸಚಿವ ಬಿ.ಸಿ. ಪಾಟೀಲ್​ ಈಗ 105 ಕೆ.ಜಿ. ಸಕ್ಕರೆ ತೂಕದಷ್ಟಿದ್ದಾರೆ!

ಬಿ.ಸಿ.ಪಾಟೀಲ್​ರು ಈಗ ಒಂದು ಕ್ವಿಂಟಲ್ ಐದು ಕೆ.ಜಿ ತೂಕವಿದ್ದಾರೆ. ಹೀಗಾಗಿ ಅವರ ತೂಕಕ್ಕೆ ಸಮನಾಗಿ ಒಂದು ಕ್ವಿಂಟಲ್ ಐದು ಕೆ.ಜಿ ಸಕ್ಕರೆಯಿಟ್ಟು ತುಲಾಭಾರ ಮಾಡಿದ್ದು, ಸಚಿವರು ಮನೆಗೆ ಬರುತ್ತಿದ್ದಂತೆ ಕುಟುಂಬದ ಮುಸ್ಲಿಂ ಸಂಪ್ರದಾಯದಂತೆ ಮಹಿಳೆಯರು ಆರತಿ ಬೆಳಗಿದ್ದಾರೆ.

  • ಪ್ರಭುಗೌಡ.ಎನ್‌.ಪಾಟೀಲ
  • Published On - 14:22 PM, 27 Feb 2021
ಅಭಿಮಾನಿಯ ಹರಕೆಯಿಂದ ಸಚಿವ ಬಿ.ಸಿ. ಪಾಟೀಲ್​ ಈಗ 105 ಕೆ.ಜಿ. ಸಕ್ಕರೆ ತೂಕದಷ್ಟಿದ್ದಾರೆ!
ಬಿ.ಸಿ ಪಾಟೀಲ್​ರಿಗೆ ಸಕ್ಕರೆ ತುಲಾಭಾರ ಮಾಡಿದ ಅಭಿಮಾನಿ

ಹಾವೇರಿ: ಸಾಮಾನ್ಯವಾಗಿ ರಾಜಕಾರಣಿಗಳ ಬೆಂಬಲಿಗರು ತಮ್ಮ ನಾಯಕರು ಶಾಸಕರಾಗಲಿ, ಸಚಿವರಾಗಲಿ ಎಂದು ಹರಕೆ ಹೊರುತ್ತಾರೆ. ಹಾಗೆಯೇ ಇಲ್ಲೊಬ್ಬ ರಾಜಕೀಯ ನಾಯಕನ ಅಭಿಮಾನಿ ಕೂಡ ತನ್ನ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದು, ಸಚಿವ ಸ್ಥಾನ ಸಿಕ್ಕರೆ ಆ ನಾಯಕನ ದೈಹಿಕ ತೂಕದಷ್ಟು ಸಕ್ಕರೆಯಿಂದ ತುಲಾಭಾರ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಸಚಿವರು ನಾಯಕರಾಗಿದ್ದು, ಈ ನಾಯಕನನ್ನ ಮನೆಗೆ ಕರೆಸಿ ಸಕ್ಕರೆಯಿಂದ ತುಲಾಭಾರ ಮಾಡಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಮುಸ್ತಫಾ ಪ್ಯಾಟಿ ಕೌರವ ಸಿನಿಮಾ ಖ್ಯಾತಿಯ ಬಿ.ಸಿ.ಪಾಟೀಲ್​ರ ಅಪ್ಪಟ ಅಭಿಮಾನಿಯಾಗಿದ್ದು, ಬಿ.ಸಿ.ಪಾಟೀಲ್​ರಿಗೆ ಸಚಿವ ಸ್ಥಾನ ಸಿಗಲಿ ಎಂದು ಗ್ರಾಮದಲ್ಲಿರುವ ಉಸ್ಮಾನ್ ಚಾವಲಿ ದರ್ಗಾಗೆ ಹರಕೆ ಹೊತ್ತಿದ್ದರು. ಹರಕೆ ತೀರಿದರೆ ಸಚಿವರಿಗೆ ಸಕ್ಕರೆಯಿಂದ ತುಲಾಭಾರ ಮಾಡುವುದಾಗಿ ಉಸ್ಮಾನ ಚಾವಲಿ ದರ್ಗಾದಲ್ಲಿ ಬೇಡಿಕೊಂಡಿದ್ದು, ಅದರಂತೆ ಬಿ‌.ಸಿ.ಪಾಟೀಲ್​ರಿಗೆ ಸಚಿವ ಸ್ಥಾನ ಸಿಕ್ಕಿದೆ. ಕೃಷಿ ಖಾತೆ ಅಲಂಕರಿಸಿರುವ ಬಿ.ಸಿ ಪಾಟೀಲ್​ರಿಗೆ ಆರತಿ ಬೆಳಗಿ, ತಲೆಗೆ ಪೇಟ ಹಾಕಿದ್ದು, ಮನೆಗೆ ಕರೆಸಿಕೊಂಡ ಅಭಿಮಾನಿ ಮುಸ್ತಫಾ ದೊಡ್ಡದಾದ ತಕ್ಕಡಿಯಲ್ಲಿ ಒಂದೆಡೆ ಸಕ್ಕರೆ ಚೀಲವಿಟ್ಟು, ಮತ್ತೊಂದೆಡೆ ಸಚಿವರನ್ನ ಕೂರಿಸಿ ತುಲಾಭಾರ ಮಾಡಿ ಹರಕೆ ತೀರಿಸಿದ್ದಾರೆ.

sugar vow

ಅಭಿಮಾನಿ ಮುಸ್ತಫಾ ಪ್ಯಾಟಿ ,ಬಿ.ಸಿ ಪಾಟೀಲ್​ರ ಜೊತೆಗಿನ ಚಿತ್ರಣ

ಹಿರೇಕೆರೂರು ಕ್ಷೇತ್ರದಲ್ಲಿ ಒಮ್ಮೆಯೂ ನಿರಂತರವಾಗಿ ಎರಡು ಬಾರಿ ಶಾಸಕರಾದ ಉದಾಹರಣೆಗಳು ಇರಲಿಲ್ಲ. ಆದರೆ ಬಿ.ಸಿ.ಪಾಟೀಲ್​ರು ಸತತವಾಗಿ ಎರಡು ಬಾರಿ ಶಾಸಕರಾದರೆ ಸಕ್ಕರೆ ತುಲಾಭಾರ ಮಾಡುವ ಹರಕೆ ಹೊತ್ತಿದ್ದೆ. ಅದರಲ್ಲೂ ಪಾಟೀಲ್​ರು ಜಯ ಗಳಿಸಿದ್ದು, ಸತತ ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇನ್ನು ಹಿರೇಕೆರೂರು ಕ್ಷೇತ್ರ ಸುಮಾರು ವರ್ಷಗಳಿಂದ ಸಚಿವ ಸ್ಥಾನದಿಂದ ವಂಚಿತವಾಗಿತ್ತು. ಹೀಗಾಗಿ ಪಾಟೀಲರಿಗೆ ಸಚಿವ ಸ್ಥಾನ‌ ಸಿಕ್ಕರೆ ಸಕ್ಕರೆಯಿಂದ ತುಲಾಭಾರ ಮಾಡುವುದಾಗಿ ದರ್ಗಾದಲ್ಲಿ ಹರಕೆ ಹೊತ್ತಿದ್ದೆ ಎಂದು ಪಾಟೀಲ್​ರ ಅಭಿಮಾನಿ ಮುಸ್ತಫಾ ಪ್ಯಾಟಿ ಹೇಳಿದ್ದಾರೆ.

sugar vow

ಸಕ್ಕರೆ ತುಲಾಭಾರ

ಬಿ.ಸಿ.ಪಾಟೀಲ್​ ಈಗ ಒಂದು ಕ್ವಿಂಟಲ್ ಐದು ಕೆ.ಜಿ. ಸಕ್ಕರೆ ತೂಕದಷ್ಟಿದ್ದಾರೆ!

ಬಿ.ಸಿ.ಪಾಟೀಲ್​ರು ಈಗ ಒಂದು ಕ್ವಿಂಟಲ್ ಐದು ಕೆ.ಜಿ ತೂಕವಿದ್ದಾರೆ (105 KG). ಹೀಗಾಗಿ ಅವರ ತೂಕಕ್ಕೆ ಸಮನಾಗಿ ಒಂದು ಕ್ವಿಂಟಲ್ ಐದು ಕೆ.ಜಿ ಸಕ್ಕರೆಯಿಟ್ಟು ತುಲಾಭಾರ ಮಾಡಿದ್ದು, ಸಚಿವರು ಮನೆಗೆ ಬರುತ್ತಿದ್ದಂತೆ ಕುಟುಂಬದ ಮುಸ್ಲಿಂ ಸಂಪ್ರದಾಯದಂತೆ ಮಹಿಳೆಯರು ಆರತಿ ಬೆಳಗಿದ್ದಾರೆ. ನಂತರ ತಲೆಗೆ ಪೇಠ ತೊಡಿಸಿ, ಮಾಲೆ ಹಾಕಿ ತುಲಾಭಾರ ನೆರವೇರಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಬಿ.ಸಿ. ಪಾಟೀಲ್​ರು ಅಭಿಮಾನಿ ತೋರಿಸಿದ ಪ್ರೀತಿಗೆ ನಾನು ಋಣಿ, ಜನರ ಪ್ರೀತಿ ಹೆಚ್ಚಾಗಿದೆ. ಇದರಿಂದ ಮೊದಲಿಗಿಂತ ಈಗ ತೂಕ ಹೆಚ್ಚಾಗಿದೆ ಎಂದು ಹೇಳಿದರು.

ರಾಜಕೀಯ ನಾಯಕರಿಗಾಗಿ ಅವರವರ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಹರಕೆ ಹೊತ್ತು, ಹರಕೆ ತೀರಿಸಿದರೆ ಸಚಿವ ಬಿ.ಸಿ.ಪಾಟೀಲ್​ರ ಅಭಿಮಾನಿ ಸಕ್ಕರೆಯಿಂದ ತುಲಾಭಾರ ಮಾಡಿ ಹರಕೆ ತೀರಿಸಿದ್ದಾರೆ. ಸಕ್ಕರೆಗೆ ಸಮನಾಗಿ ತಕ್ಕಡಿಯಲ್ಲಿ ಕುಳಿತು ತುಲಾಭಾರ ಮಾಡಿಸಿಕೊಂಡ ಸಚಿವ ಪಾಟೀಲ್ ಅಭಿಮಾನಿಯ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದು, ಅಭಿಮಾನಿಯ ಕುಟುಂಬದವರು ಸಹ ತಮ್ಮ ನಾಯಕನಿಗೆ ಸಕ್ಕರೆ ತುಲಾಭಾರ ಮಾಡಿ ಖುಷಿ ಅನುಭವಿಸಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳಲ್ಲದೇ ಮತ್ತಿನ್ನೇನು? BC ಪಾಟೀಲ್ ಪರ ಮಗಳ ಬ್ಯಾಟಿಂಗ್