ಬೆಂಗಳೂರು: ಎರಡ್ಮೂರು ದಿನಗಳಿಂದ ರಾಜಧಾನಿಯ ಜನರಿಗೆ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ತಡರಾತ್ರಿ ಅಬ್ಬರಿಸಿದ್ದಾನೆ. ಮಳೆಯ ಆರ್ಭಟಕ್ಕೆ ರಾತ್ರಿ 12 ರವರೆಗೂ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಒಂದು ಹೊತ್ತು ಮಳೆ ಬಂದು ಹೋದ್ರೆ ಸಾಕು ಅವಾಂತರಗಳೇ ಸೃಷ್ಟಿಯಾಗುತ್ತೆ. ರಾಜಧಾನಿಯಲ್ಲಿ ತಡರಾತ್ರಿ 9 ಗಂಟೆಯ ನಂತ್ರ ಮಳೆ ಅಬ್ಬರಿಸಿ ಬೊಬ್ಬಿರಿದಿತ್ತು. ಮಲ್ಲೇಶ್ವರಂ, ವೈಯಾಲಿಕಾವಲ್, ಶೇಷಾದ್ರಿಪುರಂ, ರಾಜಾಜಿನಗರ, ಬಸವೇಶ್ವರ ನಗರ, ಮೆಜೆಸ್ಟಿಕ್ ಸೇರಿ ನಗರದ ಹಲವು ಭಾಗಗಳಲ್ಲಿ ಮಳೆ ಏಟಿಗೆ ರಸ್ತೆಗಳು ಕೆರೆಯಂತಾಗಿದ್ವು.
ಗಾಳಿ ಆಂಜನೇಯನಿಗೆ ಜಲದಿಗ್ಬಂಧನ!
ಬಿಟ್ಟು ಬಿಡದೆ ಸುರಿದ ಮಳೆಯಿಂದ ಮೈಸೂರು ರಸ್ತೆಯಲ್ಲಿರೋ ಗಾಳಿ ಆಂಜನೇಯ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿತ್ತು. ಅಲ್ಲದೇ ದೇಗುಲದ ಗರ್ಭಗುಡಿಗೆ ನೀರು ನುಗ್ಗಿದ್ದು, ಹೂವು, ಹಣ್ಣು ಅಂಗಡಿ ಸಾಮಗ್ರಿಗಳು ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ರಸ್ತೆ ತುಂಬೆಲ್ಲಾ ಕೆಸರು ತುಂಬಿತ್ತು.
ಊರು, ಟೂರು ತೆರಳೋರಿಗೆ ಟ್ರಾಫಿಕ್ ಬಿಸಿ!
ಮಳೆಯ ಆರ್ಭಟದಿಂದಾಗಿ ಮೊಣಕಾಲುದ್ದ ನೀರು ನಿಂತಿದ್ರಿಂದ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಕಂಡು ಬಂತು. ಅದ್ರಲ್ಲೂ ವೀಕೆಂಡ್ ಆಗಿದ್ರಿಂದ ತಮ್ಮ ತಮ್ಮ ಊರಿಗೆ, ಪ್ರವಾಸಕ್ಕೆ ತೆರಳೋರಿಗೆ ಟ್ರಾಫಿಕ್ ಬಿಸಿ ಸರಿಯಾಗೇ ತಟ್ತು. ಅದ್ರಲ್ಲೂ , ಮೆಜೆಸ್ಟಿಕ್ ಸುತ್ತಮುತ್ತ ಅಂತೂ ವಾಹನ ಸವಾರರು ಸಾಕಪ್ಪಾ ಸಾಕು ಅಂತ ಹೈರಾಣಾದ್ರು.