Baba Budan Giri: ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ, ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಸೂಚನೆ

ರಾಜ್ಯ ಸರ್ಕಾರದ ವಾದ ಆಲಿಸಿದ ನಂತರ ಹೈಕೋರ್ಟ್​ ಯಥಾಸ್ಥಿತಿ ಮುಂದುವರಿಸಲು ಸೂಚಿಸಿ, ವಿಚಾರಣೆಯನ್ನು ಸೆ 5ಕ್ಕೆ ಮುಂದೂಡಿತು.

Baba Budan Giri: ಬಾಬಾಬುಡನ್​ಗಿರಿ ದತ್ತಪೀಠ ಪೂಜಾ ವಿಧಾನ, ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಸೂಚನೆ
ಚಿಕ್ಕಮಗಳೂರಿನ ಬಾಬಾಬುಡನ್​ಗಿರಿಯಲ್ಲಿರುವ ಇನಾಂ ದತ್ತಾತ್ರೇಯ ಪೀಠ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 22, 2022 | 2:44 PM

ಬೆಂಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಸೆ.5ರವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್​ ಆದೇಶ ಮಾಡಿದೆ. ಪೂಜಾ ಪದ್ಧತಿ ಕುರಿತು ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದಗಳನ್ನು ಆಲಿಸಿತು. ಈ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿ ಅಡ್ವೊಕೇಟ್ ಜನರಲ್, ಪ್ರಭುಲಿಂಗ್ ಕೆ.ನಾವದಗಿ, ‘ಈ ಸಂಬಂಧ ಸರ್ಕಾರವು ಜುಲೈ 19ರಂದು ಸಂಪುಟದ ಉಪಸಮಿತಿ ಶಿಫಾರಸಿನಂತೆ ಕ್ರಮ ಕೈಗೊಂಡಿದೆ. ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು ಮುಜಾವರ್ ಹಾಗೂ ಅರ್ಚಕರಿಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು. ಸಚಿವ ಸಂಪುಟದ ನಿರ್ಧಾರ ಮತ್ತು ನಡಾವಳಿಗಳನ್ನು ಹೈಕೋರ್ಟ್​ಗೆ ಸಲ್ಲಿಸಲಾಯಿತು. ವಾದ ಆಲಿಸಿದ ನಂತರ ಹೈಕೋರ್ಟ್​ ಯಥಾಸ್ಥಿತಿ ಮುಂದುವರಿಸಲು ಸೂಚಿಸಿತು. ಸರ್ಕಾರದ ನಿರ್ಧಾರದ ಪ್ರತಿಯನ್ನು ಅರ್ಜಿದಾರರಿಗೂ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಸೆ 5ಕ್ಕೆ ಮುಂದೂಡಿತು.

ಸರ್ಕಾರದ ಸೂಚನೆ ಏನು?

ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಮುಜಾವರ್‌ ಜತೆ ಆಗಮ ಗೊತ್ತಿರುವ ಹಿಂದೂ ಅರ್ಚಕರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿತ್ತು. ಈ ಸಂಬಂಧ ಕಳೆದ ಆಗಸ್ಟ್ 19ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರವು, ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರತಿನಿಧಿಗಳು ಇರುವ ವ್ಯವಸ್ಥಾಪನಾ ಸಮಿತಿ ರಚಿಸಬೇಕು. ಅರ್ಚಕ ಮತ್ತು ಮುಜಾವರ್‌ ಅವರನ್ನು ಈ ವ್ಯವಸ್ಥಾಪನಾ ಸಮಿತಿಯಿಂದಲೇ ನೇಮಿಸಬೇಕು ಎಂದು ಹೇಳಿತ್ತು.

ಇನಾಂ ದತ್ತಪೀಠದ ಗುಹೆಯ ಒಳಗೆ ನಂದಾದೀಪ ಬೆಳಗಿಸುವುದು. ದತ್ತಾತ್ರೇಯ ಪೀಠ, ಪಾದುಕೆಗಳಿಗೆ ಹೂ ಸಮರ್ಪಿಸಿ ನಿತ್ಯದ ಧಾರ್ಮಿಕ ವಿಧಿವಿಧಾನ ನಿರ್ವಹಿಸಬೇಕು. ಇದಕ್ಕಾಗಿ ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕರನ್ನು ವ್ಯವಸ್ಥಾಪನಾ ಸಮಿತಿ ನೇಮಿಸಬೇಕು ಎಂದು ಹೇಳಿತ್ತು. ಇದೇ ಸಮಿತಿಯು ಮುಸ್ಲಿಂ ಧಾರ್ಮಿಕ ವಿಧಿಗಳನ್ನು ಬಲ್ಲ ಮುಜಾವರ್ ಅವರನ್ನೂ ಪೀಠದ ಕೈಂಕರ್ಯಕ್ಕೆ ನೇಮಿಸಬೇಕು. ಮುಜಾವರ್ ಅವರು ಪ್ರತಿ ಸೋಮವಾರ ಮತ್ತು ಗುರುವಾರದ ನಮಾಜ್‌ ನಂತರ ಹಾಗೂ ಪ್ರತಿದಿನ ಸಂಜೆ ದರ್ಗಾದಲ್ಲಿ ಲೋಬಾನ ಹಾಕಿ, ಫಾತೇಹ್ ಅರ್ಪಿಸಬೇಕು ಎಂದು ಸರ್ಕಾರದ ಸುತ್ತೋಲೆಯು ಸೂಚಿಸಿತ್ತು.

ದತ್ತ ಮಾಲಾ, ದತ್ತ ಜಯಂತಿ ಮತ್ತು ಇತರ ವಿಶೇಷ ಹಿಂದೂ ಧಾರ್ಮಿಕ ಆಚರಣೆಗಳನ್ನು ಸುಗಮವಾಗಿ ನೆರವೇರಿಸಲು ವ್ಯವಸ್ಥಾಪನಾ ಸಮಿತಿಯು ಕ್ರಮ ಕೈಗೊಳ್ಳಬೇಕು. ಅರ್ಚಕರು, ಮಠಗಳ ಪೀಠಾಧಿಪತಿಗಳು ಅಥವಾ ಗುರುಗಳನ್ನು ಗುಹೆಯ ಒಳಗೆ ಕರೆದೊಯ್ದು ಪಾದುಕೆಗಳಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮರುದಿನದಿಂದ ಮೂರು ದಿನಗಳ ಕಾಲ ಉರುಸ್‌ ನಡೆಸುವ ಜವಾಬ್ದಾರಿಯನ್ನೂ ವ್ಯವಸ್ಥಾಪನಾ ಸಮಿತಿಯೇ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಬಾಬಾಬುಡನ್​ಗಿರಿ ಮತ್ತು ರಾಜಕಾರಣ

ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್​ಗಿರಿಯ ಗುಹೆಯಲ್ಲಿರುವ ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಮರ ಪ್ರಭಾವ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದರು.

ಇದು ಸಂಪೂರ್ಣವಾಗಿ ದತ್ತಪೀಠ ಎಂದು ಹಿಂದುತ್ವಪರ ಸಂಘಟನೆಗಳು, ಇದು ಬಾಬಾಬುಡನ್​ರ ದರ್ಗಾ ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿಯುವುದರೊಂದಿಗೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ವೈದಿಕ ವಿಧಾನಗಳ ಮೂಲಕ ಪೂಜೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಬಿಜೆಪಿ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಪ್ರಸ್ತುತ ಕ್ಷೇತ್ರದಲ್ಲಿ ಹಿಂದೂ ಮತ್ತು ಮುಸ್ಲಿಂ ಪದ್ಧತಿಗಳ ಪ್ರಕಾರ ಪೂಜೆ ನಡೆಸಲು ಅರ್ಚಕ ಮತ್ತು ಮುಜಾವರ್ ಇಬ್ಬರನ್ನೂ ಸೇಮಿಸಲು ಸರ್ಕಾರ ಮುಂದಾಗಿದೆ.

Published On - 2:44 pm, Mon, 22 August 22