Ticking Plastic Bomb: ಬ್ರಹ್ಮ ರಾಕ್ಷಸನಾಗಿ ಬೆಳೆದಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಾಶಪಡಿಸುವುದು ಸಾಧ್ಯವೇ ಇಲ್ಲ! ಹಾಗಾದ್ರೆ ಮುಂದೇನು?
ಅರ್ಥ್ ಆಕ್ಷನ್ ಅಂದಾಜಿನ ಪ್ರಕಾರ, ಜಗತ್ತಿನ ಎಲ್ಲ ರಾಷ್ಟ್ರಗಳು ನಾಳೆಯೇ ಒಗ್ಗೂಡಿ ಜಂಟಿ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ನಾಶಪಡಿಸುತ್ತೇವೆ ಅಂದರೂ ಸದ್ಯಕ್ಕೆ ಅದಕ್ಕೆ ಸಮಯ ಸಾಕಾಗುವುದಿಲ್ಲ. ಏಕೆಂದರೆ ಈಗಿರುವ ಪಾಲಿಥಿನ್ ಉತ್ಪನ್ನ/ ತ್ಯಾಜ್ಯಗಳನ್ನು ನಾಶ ಮಾಡುವುದಕ್ಕೆ ಸಾವಿರಾರು ವರ್ಷಗಳೇ ಹಿಡಿಸುತ್ತವೆ. ಇನ್ನು ಅವುಗಳಿಂದ ಅಡ್ಡ ಪರಿಣಾಮಗಳ ಅಪಾಯ ಬೆಟ್ಟದಂತೆ ಬೆಳೆಯುತ್ತಲೇ ಇರುತ್ತದೆ ಎಂಬುದು ಆತಂಕದ ವಿಷಯ.

ಅದು ಕ್ಯಾರಿ ಬ್ಯಾಗ್ ಅಲ್ಲ.. ಟೈಮ್ ಬಾಂಬ್, ಕ್ಷಣಗಣನೆ ಶುರುವಾಗಿದೆ! (Plastic time bomb) ಪ್ಲಾಸ್ಟಿಕ್.. ಈ ಒಂದು ಪದ ಬ್ರಹ್ಮ ರಾಕ್ಷಸನಾಗಿ ಇಡೀ ಭೂಗೋಲವನ್ನು ಸುತ್ತವರಿದುಬಿಟ್ಟಿದೆ; ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಕ್ಷಿಪ್ರವಾಗಿ ಬದಲಾಗಿರುವ ಜೀವನಶೈಲಿಯಲ್ಲಿ ದಿನನಿತ್ಯ ಪ್ಲಾಸ್ಟಿಕ್ ನಂಜನ್ನು ನಮ್ಮ ಆಹಾರದಲ್ಲಿ ನಂಜಿಕೊಂಡು ತಿನ್ನುತ್ತಿದ್ದೇವೆ ಎಂದರೆ ಅತಿಶಯೋಕ್ತಿಯಲ್ಲ. ಫೆವಿಕಾಲ್ ನಂತೆ ಮನುಷ್ಯನ ಜೀವನಕ್ಕೆ ಪ್ಲಾಸ್ಟಿಕ್ ಅಂಟಿಕೊಂಡಿದೆ. ವಿವೇಚನಾರಹಿತವಾಗಿ ಪ್ಲಾಸ್ಟಿಕ್ ಬಳಕೆಯಿಂದ ಭೂಮಿ, ಆಕಾಶ, ಗಾಳಿ, ನೀರು, ಅಗ್ನಿ ಮಾಲಿನ್ಯದ ಸುಳಿಯಲ್ಲಿ ಸಿಲುಕಿ ಉಸಿರುಗಟ್ಟಿಸುತ್ತಿವೆ. ಪ್ಲಾಸ್ಟಿಕ್ ಎಂಬ ಪೆಡಂಭೂತ ಭೂಮಿಯನ್ನು ಮಾತ್ರವಲ್ಲದೆ ಸಮುದ್ರವನ್ನೂ ನುಂಗಿ ಹಾಕುತ್ತಿದ್ದು, ಸ್ಫೋಟಗೊಳ್ಳಲು ಸಿದ್ಧವಾಗಿರುವ ಬಾಂಬ್‌ನಂತ ಪರಿಸರ ನಿರ್ಮಾಣವಾಗಿದೆ. ಸಣ್ಣ ದೊಡ್ಡ ಕಾಲುವೆಗಳು, ನದಿಗಳ ಮೂಲಕ ಪ್ರತಿ ವರ್ಷ ಒಂದೂವರೆ ಮಿಲಿಯನ್ ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿದೆ ಎಂದರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬಹುದು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ 2040ರ ವೇಳೆಗೆ ಸಮುದ್ರದಲ್ಲಿ ಸುಮಾರು 2.9 ಕೋಟಿ ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗುವ ಅಪಾಯವಿದೆ. ಮಾನವನ ಎಡಬಿಡಂಗಿ ತಪ್ಪುಗಳಿಂದ ಪರಿಸರ ಮತ್ತು ಜೀವಗೋಳಕ್ಕೆ ಇದು ಸವಾಲಾಗುತ್ತಿದೆ. ಸಾಗರಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ಮತ್ತು ಜೀವವೈವಿಧ್ಯತೆಯ ಸಮಸ್ಯೆಯಾಗುತ್ತಿದೆ. ಸಾಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಸಕಲ ಜೀವ ರೂಪಗಳ ಮೇಲೆ ಮಾರಕ ಪರಿಣಾಮ ಬೀರುವ ಅಪಾಯವನ್ನುಂಟುಮಾಡುತ್ತಿದೆ. ಭೂಮಿಯಲ್ಲಿ ಅಥವಾ ನೀರಿನಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಅನ್ನು ಒಡೆಯಲು ಮುಂದೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ. ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 40 ರಿಂದ 50 ಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಅರ್ಧಕ್ಕರ್ಧ ಪ್ಲಾಸ್ಟಿಕ್ ವಸ್ತುಗಳು...