ಹುಬ್ಬಳಿ: ಪೊಲೀಸ್ ಆಯುಕ್ತ ಲಾಬೂರಾಮ್ ಯೋಜನೆ ರೂಪಿಸುವುದರ ಜೊತೆಜೊತೆಗೆ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಆ ಮೂಲಕ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ರಾಜ್ಯದ ಇತರೇ ಕಮೀಷನರೇಟ್ ಗಳಿಗೆ ಮಾದರಿಯಾಗಿದ್ದಾರೆ.
ಹೌದು.. ಇತ್ತೀಚೆಗೆ ಅವಳಿ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಗೆ ವಾರದ ರಜೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿದ್ದು, ಆ ಮೂಲಕ ಸಿಬ್ಬಂದಿಗಳಿಗೆ ಹೊಸ ವರ್ಷದ ಗಿಫ್ಟ್ ನೀಡಿದ್ದರು. ಈಗ ಕಮಿಷನರ್ ಲಾಬೂರಾಮ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಪದೋನ್ನತಿ ಹೊಂದಿದಂತಹ ಸಿಬ್ಬಂದಿಗೆ ಕೌನ್ಸಲಿಂಗ್ ನೀಡಿ ಆ ಮುಖಾಂತರ ಅವರ ಕೋರಿಕೆಯಂತೆ ಪೊಲೀಸ್ ಠಾಣೆ ಹಂಚಿಕೆ ಮಾಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇನ್ನು ಮುಂದೆಯೂ ಕೂಡಾ ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸಿಕೊಂಡು ಹೋಗುವಂತೆ ಸೂಚಿಸಿದ್ದು, ಇದು ಪೊಲೀಸರ ಉತ್ಸಾಹವನ್ನು ಇಮ್ಮಡಿ ಮಾಡಿದೆ.
ಈ ಹಿಂದೆ ಅವಳಿ ನಗರದ ವ್ಯಾಪ್ತಿಯಲ್ಲಿ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಸಿಬ್ಬಂದಿ ವರ್ಗಾವಣೆಗೆ ಸಾಕಷ್ಟು ಪರದಾಟ ನಡೆಸಬೇಕಾಗಿತ್ತು. ಕೆಲವರು ರಾಜಕೀಯ ಒತ್ತಡ ತಂದು ತಮಗೆ ಇಷ್ಟದ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಯೇ ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳುವ ಆರೋಪಗಳು ಕೇಳಿ ಬಂದಿದ್ದವು. ಆದರೆ ಸದ್ಯ ಇದೆಲ್ಲದಕ್ಕೆ ಬ್ರೇಕ್ ಬಿದ್ದಂತೆ ಆಗಿದೆ.
ನೂತನ ಯೋಜನರ ಬಗ್ಗೆ ಚರ್ಚಿಸಿದ ಪೊಲೀಸ್ ಕಮೀಷನರ್
ಕೌನ್ಸಲಿಂಗ್ ಹಿಂದೆ ಕಮೀಷನರ್ ಮಾಸ್ಟರ್ ಗೇಮ್! ಎಲ್ಲಾ ಸಿಬ್ಬಂದಿಗಳಿಗೂ ಕೌನ್ಸಲಿಂಗ್ ನಡೆಸಿಯೇ ಠಾಣೆ ನಿಯೋಜನೆ ಮಾಡುವ ಮೂಲಕ ಕಮಿಷನರ್ ಲಾಬೂರಾಮ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಿದ್ದಾರೆ. ಏಕೆಂದರೆ ಹುಬ್ಬಳ್ಳಿಯ ಕೆಲ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳೇ ಇನ್ಸ್ಪೆಕ್ಟರ್ ರೀತಿ ವರ್ತಿಸುತ್ತಿದ್ದಾರೆ ಎನ್ನುವುದು ಕಮಿಷನರ್ಗೆ ಗೊತ್ತಾಗಿದ್ದು, ಕಳೆದ ಹತ್ತಾರು ವರ್ಷಗಳಿಂದ ಒಂದೇ ಕಡೆ ಬೇರೂರಿರುವ ಎಲ್ಲಾ ನೆಟ್ವರ್ಕ್ಗಳನ್ನು ತಮ್ಮ ಕಂಟ್ರೋಲ್ನಲ್ಲಿಯೇ ಇಟ್ಟುಕೊಂಡಿದ್ದಾರೆ.
ಪೊಲೀಸ್ ಕಮೀಷನರ್ ಲಾಬೂರಾಮ್ ಸಭೆಯಲ್ಲಿ ಕಂಡುಬಂದ ದೃಶ್ಯ
ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ಹಾಗೂ ಇನ್ನಿತರ ದಂಧೆಗಳಿಗೆ ಕೆಲ ಸಿಬ್ಬಂದಿಯೇ ಬೆಂಗಾವಲಾಗಿ ನಿಂತಿದ್ದು, ಇಂತಹವರನ್ನು ಮಟ್ಟ ಹಾಕುವುದರ ಜೊತೆಗೆ ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರುವುದು ಇದರ ಹಿಂದಿನ ಉದ್ದೇಶವಾಗಿದೆ. ಇದರ ಜೊತೆಗೆ ಕಮೀಷನರ್ ತಮ್ಮ ಸಿಬ್ಬಂದಿಗೂ ಅನೂಕೂಲ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ.
ಆದರೆ ಒಂದೇ ಕಡೆ ಇದ್ದು ಕೆಲ ದಂಧೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕೆಳ ಹಂತದ ಸಿಬ್ಬಂದಿಗೆ ಸದ್ಯ ಆಯುಕ್ತರ ನಿರ್ಧಾರ ನುಂಗಲಾರದ ಬಿಸಿ ತುಪ್ಪವಾಗಿದೆ. ಇಷ್ಟು ದಿನ ಯಾರೆ ಕಮಿಷನರ್ ಆಗಿ ಬಂದರೂ ಸ್ಥಳೀಯ ರಾಜಕೀಯ ನಾಯಕರ ಮೂಲಕ ಒತ್ತಡ ತಂದು ತಮಗೆ ಬೇಕಾದ ಠಾಣೆಗಳಲ್ಲಿಯೇ ಪೊಸ್ಟಿಂಗ್ ಹಾಕಿಕೊಳ್ಳುವವರಿಗೆ ಕೊನೆಗೂ ಶಾಕ್ ತಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.